ಇತ್ತೀಚಿನ ವೈದ್ಯಕೀಯ ಸಂಶೋಧನೆಗಳಲ್ಲಿ ಮಾನವನ ರಕ್ತದಲ್ಲೂ ಪ್ಲಾಸ್ಟಿಕ್ ನ ಅಂಶಗಳು ಕಂಡು ಬಂದಿರುವುದು ನಿಜವಾಗಿಯೂ ನಮಗೆಲ್ಲರಿಗೂ ಒಂದು ಎಚ್ಚರಿಕೆಯಾಗಿದೆ. ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಪ್ಲಾಸ್ಟಿಕ್ ನ ಬಳಕೆ ಎಷ್ಟು ಹೊಕ್ಕಿದೆ ಎಂದು ಇದು ನಿದರ್ಶಿಸುತ್ತದೆ. ಆದ್ದರಿಂದ ನಾವು ಸಾಧ್ಯವಾಗುವಷ್ಟು ಕಡಿಮೆ ಪ್ಲಾಸ್ಟಿಕ್ ಬಳಕೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕಾದದ್ದು ಈಗ ಅತ್ಯವಶ್ಯಕವಾಗಿದೆ.
ಅದರಲ್ಲೂ ನಾವು ಸೇವಿಸುವ ಆಹಾರಕ್ಕೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳನ್ನು ನಾವು ಮಾಡಿಕೊಳ್ಳಲೇ ಬೇಕು.
ಸಾಮಾನ್ಯವಾಗಿ ನಾವು ಅಡಿಗೆಮನೆಯಲ್ಲಿ ದಿನನಿತ್ಯ ಬಳಸುವ ಸಾಮಾನು ಅಂದರೆ – ಚಹಾ ಸೋಸುವ “ಅರಿಪ್ಪೆ”. ಮೊದಲಿನ ಕಾಲದಲ್ಲಿ ಬಟ್ಟೆಯಿಂದಲೇ ಸೋಸುತ್ತಿದ್ದರು. ಆದರೆ, ಆಧುನಿಕ ಜೀವನಶೈಲಿಯನ್ನು ನಮ್ಮದಾಗಿಸಿಕೊಂಡು, ಪ್ಲಾಸ್ಟಿಕ್ ನ ಟೀ ಸೋಸುವುದನ್ನು ಬಳಸುವ ಅಭ್ಯಾಸ ಮಾಡಿಕೊಂಡೆವು. ಬಿಸಿಬಿಸಿಯಾದ ಚಹಾದ ಒಟ್ಟಿಗೆ ಪ್ಲಾಸ್ಟಿಕ್ ಕೂಡಾ ನಮ್ಮ ದೇಹ ಸೇರುತ್ತಿದೆ.
ಈಗ ಮಾರುಕಟ್ಟೆಯಲ್ಲಿ ಬಹಳ ಉತ್ತಮ ದರ್ಜೆಯ ಸ್ಟೀಲ್ ನ ಟೀ ಸೋಸುವ ಜರಡಿಗಳು ದೊರಕುತ್ತವೆ. ಇವುಗಳನ್ನು ಬಳಸುವ ಅಭ್ಯಾಸ ಮಾಡಿದರೆ, ನಮ್ಮ ಅಡಿಗೆಮನೆಯಲ್ಲಿ ಒಂದು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದಂತಾಗುತ್ತದೆ.
ಸ್ಟೀಲ್ನ ಜರಡಿಗಳು ದುಬಾರಿ ಎಂದು ಅನಿಸಿದರೂ, ಇವು ದೀರ್ಘಕಾಲ ಬಾಳಿಕೆ ಬರುತ್ತವೆ. ಜೊತೆಗೆ ಆರೋಗ್ಯಕರ ಕೂಡಾ.
ಪ್ರತಿ ದಿನ ಚಹಾ ಮಾಡುತ್ತಾ ಸೋಸುವ ಅರಿಪ್ಪೆಯ ರಂದ್ರ ಗಳು ಮುಚ್ಚಿಕೊಂಡು ಸೋಸಲು ಕಷ್ಟವಾಗುವುದು ಸಹಜ. ಇದನ್ನು ತಪ್ಪಿಸಲು ಉಪಾಯವೆಂದರೆ, ಟೀ ಸೋಸಿದ ತಕ್ಷಣ, ಟೀ ಗಸಿಯನ್ನು ಜರಡಿಯಿಂದ ಖಾಲಿ ಮಾಡಿ, ಜರಡಿ ಬಿಸಿ ಇರುವಾಗಲೇ ನಲ್ಲಿ ನೀರಿನ ಅಡಿಯಲ್ಲಿ ಹಿಡಿದು ತೊಳೆಯಬೇಕು. ಟೀ ಗಸಿಯನ್ನು ಜರಡಿಯಲ್ಲೇ ಬಿಟ್ಟರೆ, ಅದು ತಣ್ಣಗಾದಾಗ ಹಾಲಿನ ಜಿಡ್ಡು ರಂದ್ರಗಳಲ್ಲಿ ಶೇಖರಣೆಯಾಗಿ, ರಂದ್ರಗಳು ಮುಚ್ಚಿಹೋಗುತ್ತವೆ.
ಗೃಹಿಣಿಯರಿಗೆ ಅಡಿಗೆಮನೆಯ ಕೆಲಸಗಳ ತರಾತುರಿಯಲ್ಲಿ ಜರಡಿಯನ್ನು ತಕ್ಷಣ ತೊಳೆಯಲು ಸಮಯ ಸಿಗುವುದೂ ಕಷ್ಟ. ಅಂತಹ ಸಮಯಗಳಲ್ಲಿ, ಜರಡಿಯಿಂದ ಗಸಿಯನ್ನು ತಕ್ಷಣ ಖಾಲಿ ಮಾಡಿ ಬಿಡಿ. ಅದರಲ್ಲೇ ತಣ್ಣಗಾಗಲು ಬಿಡಬೇಡಿ. ವಾರಕೊಮ್ಮೆ ಸೋಸುವ ಜರಡಿಯನ್ನು ಕುದಿಯುವ ನೀರಿನಲ್ಲಿ ಅದ್ದಿ ಹಿಡಿದು, ಅದು ಬಿಸಿ ಇರುವಾಗಲೇ ಹಲ್ಲು ಉಜ್ಜುವ ಬ್ರಶ್ ನಿಂದ ತೊಳೆದರೆ ರಂದ್ರಗಳು ಮುಚ್ಚಿಕೊಳ್ಳದೆ ಜರಡಿ ಸ್ವಚ್ಛವಾಗಿರುತ್ತದೆ.
ಶಾಲಿನಿ ಪ್ರಶಾಂತ್