ಗುಬ್ಬಚ್ಚಿ ಗೂಡು
“ಮುಂದಿನ ವಾರ 18ನೇ ತಾರೀಖಿಗೆ ವೆಂಕಟ್ರಮಣ ತನ್ನ ಕುಟುಂಬ ಸಮೇತ ಕ್ಯಾಲಿಫೋರ್ನಿಯಾದಿಂದ ಆಗಮಿಸುತ್ತಿದ್ದಾನೆ, ಎಷ್ಟು ದಿನಗಳ ಕಾಲ ಇಲ್ಲಿ ಇರುತ್ತಾನೋ ಎಂಬುದನ್ನು ಕ್ಲಿಯರ್ ಆಗಿ ಹೇಳಿಲ್ಲ; ಮೊಮ್ಮಕ್ಕಳನ್ನು ಮುಖತಃ ನೋಡದೇ ಅವೆಷ್ಟು ವರ್ಷಗಳಾದವೋ ಏನೋ!, ಹಿರಿಯವಳು ಮೊಮ್ಮಗಳು, ಈಗಾಗಲೇ ಕಾರ್ಪೋರೇಟ್ ಜಗತ್ತನ್ನು ಪ್ರವೇಶಿಸಿಯಾಗಿದೆ, ಕಿರಿಯವ ಮೊಮ್ಮಗ, ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದಾನೆ; ಸೊಸೆ ಅದ್ಯಾವುದೋ ಹೊಸ ಕಂಪನಿ ಸೇರಿದ್ದಾಗಿ ಹೇಳಿದ್ದಳು. ಆ ಕಂಪನಿಯ ಹೆಸರೇ ನೆನಪಾಗುತ್ತಿಲ್ಲ. ಹೋಗಲಿ ನನಗೆ ಅದರಿಂದ ಏನಾಗಬೇಕಿದೆ? ಒಟ್ಟಿನಲ್ಲಿ ನನ್ನ ಒಬ್ಬನೇ ಒಬ್ಬ ಮಗ ನನ್ನನ್ನು ನೋಡಲು ಬರುತ್ತಿದ್ದಾನಲ್ಲ! ಎಷ್ಟು ಸಮಾಧಾನವೆನಿಸುತ್ತಿದೆ! ಈ ಬಾರಿ ನೊಯಿಡಾ ಮನೆಯನ್ನು ಮಾರಿಯೇ ವಾಪಸ್ ಆಗುತ್ತೇನೆಂದು ಹೇಳಿದ್ದಾನೆ. ಅವನಿಗೆ ಇಲ್ಲಿಯದು ಯಾವುದೂ ಬೇಕಾಗಿಲ್ಲವೇನೋ…!”
ಸಂಜೆಯ ಸಮಯ, ಬೆಂಗಳೂರಿನಲ್ಲಿ ನನ್ನ ಸ್ವಂತ ಅಪಾರ್ಟಮೆಂಟಿನ ಕೋಣೆಯ ಕಿಟಕಿಯ ಬಳಿ ಯೋಚಿಸುತ್ತಾ ಕುಳಿತಿದ್ದೆ. ಹೊರಗಡೆ ಕಾಣಿಸುತ್ತಿದ್ದ ಜನ ದಟ್ಟಣೆಯ ರಸ್ತೆಗಳು, ಕಾರು, ಬಸ್ಸುಗಳು ಎಂದಿನಂತೆ ಇರಲಿಲ್ಲ. ವರ್ಷದಿಂದ ವರ್ಷಕ್ಕೆ ರಸ್ತೆ, ಫೂಟ್ ಪಾತ್, ಫುಟ್ ಓವರ್ ಬ್ರಿಜ್, ಫ್ಲೈ ಓವರ್‌ಗಳ ನಿರ್ಮಾಣ ಭರ್ಜರಿಯಾಗಿ ನಡೆದಿದ್ದರೂ ಏರುತ್ತಿದ್ದ ವಾಹನಗಳ ಸಂಖ್ಯೆ ಆ ಎಲ್ಲವನ್ನೂ ನುಂಗುತ್ತ ಆಪೋಶನ ತೆಗೆದುಕೊಳ್ಳುತ್ತ ಅಭಿವೃದ್ಧಿ ಹಿಡಿದ ಜಾಡನ್ನು ಝಾಡಿಸಿ ಒದ್ದು ಗಹಗಹಿಸಿ ನಗುತ್ತಿತ್ತು.
ಬೆಂಗಳೂರಿಗೆ ನಾನು ಬಂದು ಸೇರಿ ಬರೀ ಹದಿನೆಂಟು ವರ್ಷಗಳಾಗಿದ್ದಷ್ಟೆ.
“ತಮಾ ಗಜಾನನಾ, ಈ ತೋಟ ಗದ್ದೆ ಸಂತಿಗೆ ಗುದ್ದಾಟ ಒದ್ದಾಟ ಬ್ಯಾಡದಾ, ಅಣ್ಣ ಬಾಲಚಂದ್ರ ಮನೆಲ್ಲೇ ಇದ್ಕಂಡು ಇದನ್ನೆಲ್ಲಾ ನೋಡ್ಕತ್ತಾ…ನೀನು ಚೊಲೋ ಮಾಡಿ ಓದಿ ನೌಕರಿ ಮಾಡ್ಕಂಡು ಇರು“
ಅಪ್ಪನ ಕಿವಿಮಾತು ಕೇಳಿ ಮನೆ ಬಿಟ್ಟು ಆಧುನಿಕ ಶಿಕ್ಷಣದ ನಾಗಾಲೋಟದಲ್ಲಿ ನುಗ್ಗಿದ ನಾನು ಓದನ್ನು ಜೈಸಿದೆ…ಇನ್ನು ಜೀವನವನ್ನು ಈಸಬೇಕಿತ್ತು. ಕೇಂದ್ರ ಸರ್ಕಾರದ ಉದ್ಯೋಗಿಯಾಗಿ 15 ವರ್ಷ ಕೋಲ್ಕಾತಾದಲ್ಲಿ, 5 ವರ್ಷ ಜೈಪುರದಲ್ಲಿ, ನಂತರ 10 ವರ್ಷ ದೆಹಲಿಯಲ್ಲಿ ಕಳೆದು ನಿವೃತ್ತನಾಗಿದ್ದೆ. ನಿವೃತ್ತಿಯ ನಂತರ ಉಳಿದುಕೊಳ್ಳಲು ಒಂದು ನೆಲೆ ಬೇಕಲ್ಲ ಎಂದು ನನ್ನವಳು ಒತ್ತಾಯಪಡಿಸಿದ ಕಾರಣ ಕೋಲ್ಕಾತಾದಲ್ಲಿಯೇ ಒಂದು 3 ಬೆಡ್ ರೂಮ್ ಹೌಸ್ ಖರೀದಿ ಮಾಡಿದ್ದೆ. ಸರ್ಕಾರಿ ಆವಾಸ ದೊರೆಯುತ್ತಿದ್ದ ಕಾರಣ ನಮಗೆ ಎಂದಿಗೂ ಆ ಮನೆಯಲ್ಲಿ ಉಳಿದುಕೊಳ್ಳುವ ಪ್ರಮೇಯವೇ ಬರಲಿಲ್ಲ. ಆದರೆ ಅದನ್ನು ಬಾಡಿಗೆಗೆ ಕೊಡುತ್ತಿದ್ದೆವು. ಕೋಲ್ಕಾತಾದಲ್ಲಿ ಬಿಸಿನೆಸ್ ಮಾಡುವವರ ಸಂಖ್ಯೆ ಹೆಚ್ಚು. ಪ್ರತೀ 4-5 ವರ್ಷಗಳಿಗೊಬ್ಬರಂತೆ ಬಾಡಿಗೆದಾರರು ಸಿಗುತ್ತಿದ್ದರು. ಬಾಡಿಗೆದಾರರು ಸುಲಭವಾಗಿ ಸಿಗಲು ನನಗೆ ನನ್ನ ಸಬಾರ್ಡಿನೇಟ್‌ಗಳು ತುಂಬಾ ಸಹಾಯ ಮಾಡುತ್ತಿದ್ದರು. ಅದರಲ್ಲೂ ಮುಖ್ಯವಾಗಿ ನಮ್ಮ ಡಿಪಾರ್ಟಮೆಂಟಿನ ಸ್ಟೋರ್‌ಕೀಪರ್ ನನಗೆ ಎಲ್ಲಿಲ್ಲದ ಸಹಾಯ ಮಾಡುತ್ತಿದ್ದ. ಅದಕ್ಕಾಗಿ ನನ್ನಿಂದಲೂ, ಬಾಡಿಗೆದಾರರಿಂದಲೂ ಕಮಿಷನ್ ತೆಗೆದುಕೊಳ್ಳುತ್ತಿದ್ದ. ಬಾಡಿಗೆದಾರರನ್ನು ಹುಡುಕುವ ತಲೆಬಿಸಿಯ ಎದುರು ಆ ಕಮಿಷನ್ ನನಗೆ ಏನೇನೂ ಅಲ್ಲವೆನಿಸಿತ್ತು. ಅಲ್ಲಿಂದ ಮುಂದೆ ಜೈಪುರಕ್ಕೆ ವರ್ಗವಾದ ನಂತರ ನಮ್ಮ ಮಗ ವೆಂಕಟ್ರಮಣನಿಗಾಗಿ ಒಂದು ಮನೆ ಕೊಂಡುಕೊಳ್ಳುವ ಮನಸ್ಸಾಗಿ ಅಲ್ಲೇ ತೋಡರ್‌ಮಲ್ ರೋಡ್‌ನಲ್ಲಿ ಇರುವ ಪಾಶ್ ಏರಿಯಾದಲ್ಲೇ 2 ಬಿಎಚ್ ಖರೀದಿ ಮಾಡಿದೆವು. ಜೀವನ ಒಂದು ರೀತಿಯಲ್ಲಿ ಅನಿರೀಕ್ಷಿತವಾಗಿದ್ದರಿಂದ ಮತ್ತು ಭವಿಷ್ಯದಲ್ಲಿ ಹಣದ ಅಗತ್ಯ ಎದುರಾದಾಗ ಕೋಲ್ಕಾತಾದ ಮನೆಯನ್ನು ಮಾರಿದರಾಯ್ತು ಎಂದು ನಮಗೆ ನಾವು ಸಮಾಧಾನ ಹೇಳಿಕೊಳ್ಳುತ್ತಾ ಅಲ್ಲೇ ಜೈಪುರದ ಸರ್ಕಾರಿ ಕ್ವಾಟರ್ಸ್‌ನಲ್ಲಿ ಬೆಳಗಾಗುತ್ತಿತ್ತು, ರಾತ್ರಿಯಾಗುತ್ತಿತ್ತು. ಇನ್‌ಕಂ ಟ್ಯಾಕ್ಸ್ ಉಳಿಸುವುದಕ್ಕಾಗಿ ಮಾಡಿದ ಹೋಮ್ ಲೋನ್ ಪ್ರತೀ ತಿಂಗಳೂ ಅನಾಯಾಸವಾಗಿ ಕರಗುತ್ತಿತ್ತು. ಜೈಪುರದ ಮನೆಯನ್ನು ಬಾಡಿಗೆ ಕೊಡುವುದಕ್ಕೆ ಕೋಲ್ಕಾತಾದಷ್ಟು ಕಷ್ಟವಾಗಲಿಲ್ಲ. ಜೈಪುರಕ್ಕೆ ಪ್ರವಾಸಿಗರ ಭೇಟಿ ತುಂಬಾ. ಹೀಗಾಗಿ ನಮ್ಮ ಮನೆಯನ್ನು ವಿದೇಶೀ ಪ್ರವಾಸಿಗರು ಉಳಿದುಕೊಳ್ಳುವುದಕ್ಕಾಗಿ ಲೀಸ್ ಕೊಡಲು ಒಪ್ಪಿಕೊಂಡಿದ್ದೆವು.
ಎಲ್ಲವೂ ಸರಾಗವಾಗಿ ನಡೆದರೆ ಅದಕ್ಕೆ ಜೀವನ ಎನ್ನುತ್ತಾರೆಯೇ? ಯಾರ್ಯಾರೋ ಮಾಡುವ ಪಾಲಿಟಿಕ್ಸ್‌ಗೆ ಯಾರ್ಯಾರೋ ಬಲಿಪಶುವಾಗಬೇಕಾಗುತ್ತದೆ ಎಂಬುದಕ್ಕೆ ನಾನೂ ಒಬ್ಬ ಸಾಕ್ಷಿಯಾದೆ. ಜೈಪುರಕ್ಕೆ ಬಂದು ಬರೀ ಐದೇ ವರ್ಷಕ್ಕೆ ದೆಹಲಿಗೆ ಟ್ರಾನ್ಸಪರ್ ಆಗಬೇಕೆ? ಆದರೆ ನನ್ನ ಪುಣ್ಯಕ್ಕೆ ಕೋಲ್ಕಾತಾದ ಮನೆಗೆ ಬಾಡಿಗೆದಾರರನ್ನು ಒದಗಿಸುತ್ತಿದ್ದ ನಮ್ಮ ಡಿಪಾರ್ಟಮೆಂಟಿನ ಸ್ಟೋರ್‌ಕೀಪರ್ ಈಗ ರಿಜಿಸ್ಟ್ರಾರ್ ಆಗಿ ಭಡ್ತಿ ಹೊಂದಿದ್ದ! ಅವನ ಭಡ್ತಿಯ ಹಿಂದೆ ದೊಡ್ಡ ದೊಡ್ಡ ಬಂಗಾಲೀ ರಾಜಕಾರಣಿಗಳ ಕೈವಾಡ ಇತ್ತೆಂದು ನನಗೆ ದೆಹಲಿಯ ಸಹೋದ್ಯೋಗಿಗಳು ತಿಳಿಸಿದಾಗಲೇ ನನ್ನೊಳಗೆ ಒಂದು ರೀತಿಯ ಕಸಿವಿಸಿಯಾಗಿತ್ತು. ಮುಖದಲ್ಲಿ ಮೂಡಿದ ಭೀತಿಯ ಛಾಯೆಯನ್ನು ನಾನು ಅವರ ಎದುರು ತೋರಗೊಟ್ಟಿರಲಿಲ್ಲ. ಏತನ್ಮಧ್ಯೆ ವೆಂಕಟ್ರಮಣನ ವಿದೇಶ ವ್ಯಾಸಂಗಕ್ಕಾಗಿ ಹಲವು ಅವಕಾಶಗಳು ಬರತೊಡಗಿದ್ದವು. ಓದುವುದರಲ್ಲಿ ಅವನು ನನ್ನಂತೆಯೇ ತುಂಬಾ ಜಾಣನಾಗಿದ್ದ. ಅವನ ಸಿಡುಕು, ಅವಸರದ ಗುಣಗಳೆಲ್ಲಾ ನಿನ್ನ ಬಳುವಳಿಯೆಂದು ನಾನು ನನ್ನವಳಿಗೆ ಹೇಳುತ್ತ ಕಾಲೆಳೆಯುವುದು, ಅವನಲ್ಲಿರುವ ಸದ್ಗುಣಗಳೆಲ್ಲಾ ನನ್ನ ಬಳುವಳಿಗಳೆಂದು ಕಾಲರ್ ಎಳೆದುಕೊಳ್ಳುತ್ತಿದ್ದೆ. ಅದು ತಮಾಶೆಗಾಗಿದ್ದರೂ ಕೂಡಾ ನನ್ನೊಳಗಿನ ಅಹಂಕಾರಕ್ಕೆ ಅಷ್ಟಿಷ್ಟು ಗೊಬ್ಬರ ಹಾಕುತ್ತಿದ್ದುದಂತೂ ನಿಜ! ನನ್ನಾಕೆಗೆ ಅದೆಷ್ಟು ನೋವಾಗುತ್ತಿತ್ತೋ ತಿಳಿಯದು. ಅತಿಯಾದ ಬುದ್ಧಿವಂತಿಕೆ ನಮ್ಮೊಳಗೆ ಇರುವ ಸಂವೇದನೆಗಳನ್ನು ಅಳಿಸುತ್ತದೆ ಎಂಬುದು ಆಗ ನನಗೆ ಅನುಭವಕ್ಕೆ ಬಂದಿರಲಿಲ್ಲ. ಏನು ಇದೆಯೋ ಅದನ್ನು ಕಾಲ ಕಬಳಿಸುತ್ತದೆ, ಏನು ಇಲ್ಲವೋ ಅದನ್ನು ಕಾಲವೇ ಕೊಡುತ್ತದೆ ಎಂಬುದು ಇದುವರೆಗೆ ನಾನು ಕಂಡುಕೊಂಡಿರುವ ಸತ್ಯ. ಈ ಸತ್ಯ ಅರ್ಥವಾಗಿದ್ದು ಕಾಲದ ಮಹಿಮೆಯಿಂದಲೇ! ವೆಂಕಟ್ರಮಣ, ಶಿಕಾಗೋದ ಪ್ರತಿಷ್ಠಿತ ಇಂಜಿನಿಯರಿಂಗ್ ಇನ್ಸಟಿಟ್ಯೂಟಿನಲ್ಲಿ ಮಾಸ್ಟರ್ಸ್ ಮಾಡಿ ನಂತರ ಅಲ್ಲಿಯೇ ಕೆಲ ಕಾಲ ಜಾಬ್ ಮಾಡಿ ನಂತರ ಎಂ.ಬಿ.ಎಯನ್ನೂ ಪೂರೈಸಿಕೊಂಡ. ನನ್ನ ನೆನಪಿನ ಪ್ರಕಾರ ನಾವು ದೆಹಲಿ ಸೇರಿ ಆರನೇ ವರ್ಷಕ್ಕೆ ವೆಂಕಟ್ರಮಣನ ಮದುವೆಯಾಗಿದ್ದು. ನಮ್ಮವರನ್ನೇ ಯಾರನ್ನಾದರೂ ಮದುವೆಯಾಗಲಿ ಎಂಬುದು ನಮ್ಮ ಮನದೊಳಗಿನ ಆಸೆಯಾಗಿತ್ತು, ಆದರೆ ಆತ ಮದುವೆಯಾಗಿದ್ದು ಯುಕ್ರೇನ್ ಮೂಲದ ಹುಡುಗಿ ಶ್ಲೆಕಿಸ್ಲಾವೊ ಜೆಲೆಂಸ್ಕಿ. ಅವಳ ಹೆಸರನ್ನು ನನ್ನವಳಿಗೆ ಹೇಳುವುದೇ ಕಷ್ಟವಾಗುತ್ತಿತ್ತು. ಕೊನೆಗೆ ಅವಳಿಗೆ ಶ್ಲೆಕಿ ಎಂದು ಚಿಕ್ಕದಾಗಿ ಕರೆಯಲು ಪ್ರಾರಂಭಿಸಿದೆವು. ಮದುವೆಯ ಮರುದಿನವೇ ಶ್ಲೆಕಿ ದೆಹಲಿಯ ಶೆಖೆ ತಾಳಲಾರದೇ ತನ್ನ ಪ್ರೀತಿಯ ‘ವೆಂಕೈ’ ಯನ್ನು ಯುಕ್ರೇನಿನ ತನ್ನ ಊರು ಕೀವ್‌ಗೆ ಕರೆದೊಯ್ದಳು…ಹನಿಮೂನ್ಗೆ. ನಮ್ಮ ವೆಂಕಟ್ರಮಣ ಅವಳ ಪ್ರೀತಿಯ ವೆಂಕೈ ಆಗಿ ನಮಗೆ ಕೈಕೊಡುವ ದೃಶ್ಯ ನನ್ನ ಕಣ್ಣೆದುರು ತುಸು ಮಂದವಾಗಿ ಹಾದು ಹೋಗಿತ್ತು. ಎಲ್ಲಾದರು ಇರಿ, ಎಂತಾದರು ಇರಿ, ಎಂದೆಂದಿಗೂ ನೀವ್ ಸುಖವಾಗಿರಿ ಎಂದು ಹಾರೈಸುತ್ತಾ ನಾವು ಅವರಿಬ್ಬರನ್ನೂ ಇಂದಿರಾ ಗಾಂಧಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೀಳ್ಕೊಟ್ಟಿದ್ದೆವು. ನಮ್ಮ ಗುಬ್ಬಚ್ಚಿ, ಅದರ ರೆಕ್ಕೆ ಬಲಿತು ತನ್ನ ಗೂಡಿಗೆ ಹಾರಿ ಹೋಗಿತ್ತು.
ವೆಂಕಟ್ರಮಣ ಪ್ರತೀ ವರ್ಷ ಕ್ರಿಸ್‌ಮಸ್ ರಜೆಯಲ್ಲಿ ಬಂದು ಹೋಗುತ್ತಿದ್ದ. ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಅವನು ನಮಗೆ ಎರಡು ಬಾರಿ ಅಜ್ಜ–ಅಜ್ಜಿಯರ ಭಡ್ತಿ ಕೊಟ್ಟಿದ್ದ! ಇನ್ನು ಪ್ರತೀ ವರ್ಷ ಮಗ, ಸೊಸೆ, ಮೊಮ್ಮಕ್ಕಳು ದೆಹಲಿಗೆ ಬಂದುಹೋಗುತ್ತಾರೆ, ಅವರಿಗೆ ಅಲ್ಲಿಗೆ ಬಂದಾಗ ಉಳಿದುಕೊಳ್ಳಲು ಒಂದು ಮನೆ ಬೇಕಾಗಬಹುದೆಂದು ನಾವು 3 ಬಿಎಚ್ ಫ್ಲಾಟನ್ನು ನೊಯಿಡಾದಲ್ಲಿ ಕೊಂಡುಕೊಂಡೆವು. ನನ್ನ ಡಿಪಾರ್ಟಮೆಂಟಿನಲ್ಲಿ ನನಗೆ ಪ್ರೊಮೋಶನ್ ಆದ ಕಾರಣ ಕೆಲಸದ ಒತ್ತಡ ಹೆಚ್ಚಾಗುತ್ತ ಹೋದಂತೆ ನನಗೆ ಆ ನೊಯಿಡಾ ಮನೆಯನ್ನು ಬಾಡಿಗೆಗಾಗಲಿ, ಲೀಸ್‌ಗಾಗಲೀ ಕೊಡಲು ಪುರುಸೊತ್ತೇ ಆಗಲಿಲ್ಲ. ಕೊಟ್ಟರೂ ಕೂಡಾ ಪ್ರತೀ ವರ್ಷ, ಮಗನ ಫ್ಯಾಮಿಲಿ ಅಲ್ಲಿಗೆ ಬಂದಾಗ ಉಳಿದುಕೊಳ್ಳಲು ಅದನ್ನು ಖಾಲಿ ಮಾಡಿಸುವ ಸಮಸ್ಯೆ ಎದುರಾಗುತ್ತಿತ್ತು. ಹೀಗಾಗಿ ಆ ಮನೆಗೆ ಬೀಗ ಹಾಕಿಟ್ಟಿದ್ದೆವು. ರಿಟೈರ್ಡ್ ಆಗುವ ಸಮಯವೂ ಹತ್ತಿರ ಬಂದಿತ್ತು. ಸಮಯ ಕಳೆದಿದ್ದೇ ತಿಳಿಯಲಿಲ್ಲವಲ್ಲ ಎಂದು ಅನಿಸಿತ್ತು. ಬಂಗಲೆಯಂಥ ಸರ್ಕಾರಿ ಕ್ವಾಟರ್ಸನ್ನು ಖಾಲಿ ಮಾಡಿ ನೊಯಿಡಾ ಫ್ಲಾಟಿಗೆ ಹೋದೆವು. ಗ್ರಾಚುಯಿಟಿ, ಪಿ.ಎಫ್, ಇನ್ಶುರೆನ್ಸ್ ಎಲ್ಲಾ ಸೇರಿ ಒಂದು ದೊಡ್ಡ ಗಂಟು ನನ್ನ ಬ್ಯಾಂಕ್ ಖಾತೆ ಸೇರಿತ್ತು. ಪೆನ್ಶನ್ ಹಣವೂ ಹತ್ತಿರ ಹತ್ತಿರ 85,000ರೂ ಸಿಗುತ್ತಿತ್ತು. ಅಷ್ಟು ಹಣವನ್ನು ಏನು ಮಾಡುವುದು ಎಂದು ಯೋಚಿಸಿದಾಗ ನನ್ನ ಕೋಲ್ಕಾತಾ ಗೆಳೆಯ ಬೆಂಗಳೂರಿನಲ್ಲಿ ಒಂದು ಮನೆ ಖರೀದಿ ಮಾಡುವುದು ಒಳ್ಳೆಯದೆಂದು ಸಲಹೆ ಕೊಟ್ಟ. ಅದೂ ಸರಿ ಎನಿಸಿತ್ತು ನನಗೆ. ಕೋರಮಂಗಲದಲ್ಲಿ ಹೊಸದಾಗಿ ಎದ್ದಿರುವ ಗಗನಚುಂಬಿ ಅಪಾರ್ಟ್‌ಮೆಂಟಿನ 28ನೇ ಫ್ಲೋರಿನಲ್ಲಿ ನಾಲ್ಕು ಬೆಡ್‌ರೂಮಿನ 2,500 ಸ್ಕ್ವಾರ್ ಫೀಟಿನ ಅಪಾರ್ಟ್‌ಮೆಂಟ್ ಖರೀದಿಸಿದೆ.
ತಾನೊಂದು ಬಗೆದರೆ ದೈವವೊಂದು ಬಗೆದಿತ್ತು ಎಂಬಂತೆ, ಜಾಗತಿಕ ಸಾಂಕ್ರಾಮಿಕ ರೋಗವೊಂದು ಎಲ್ಲೆಡೆ ಹರಡಲು ಪ್ರಾರಂಭವಾಗಿತ್ತು. ಕಿಟ್ಟಿ ಪಾರ್ಟಿ, ಲೇಡಿಸ್ ಕ್ಲಬ್ ಅದೂ ಇದೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ನನ್ನಾಕೆಗೆ ಒಂದು ದಿನ ಇದ್ದಕ್ಕಿದ್ದಂತೆ ಕೆಮ್ಮು, ಜ್ವರ, ನೆಗಡಿ, ಮೈಕೈ ನೋವು ಕಾಣಿಸಿಕೊಂಡಿತ್ತು. ಏನೋ ಒಂದು ಸಾಮಾನ್ಯ ಜ್ವರ ಇರಬಹುದೆಂದು ನಾವು ಅದನ್ನು ನಿರ್ಲಕ್ಷಿಸಿದ್ದೇ ತಪ್ಪಾಯಿತು. ರೆಗ್ಯುಲರ್ ಔಷಧಿಗಳು ಒಂದೂ ಪರಿಣಾಮ ಬೀರದೇ ಅವಳನ್ನು ಹತ್ತಿರದ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‌ನಲ್ಲಿ ಭರ್ತಿ ಮಾಡಬೇಕಾಯ್ತು. ಅಲ್ಲಿ ಒಟ್ಟೂ 20 ದಿನಗಳ ಕಾಲ ಐ.ಸಿ.ಯುದಲ್ಲಿ ಜೀವನ್ಮರಣದ ನಡುವೆ ಹೋರಾಡಿ ಆಕೆ ಕೊನೆಗೆ ನನ್ನಿಂದ ದೂರವಾದಳು. ನಾವು ಸರ್ವಿಸ್‌ನಲ್ಲಿ ಇದ್ದಾಗ ನಮ್ಮ ಜೊತೆ ಇರುವ ಕೈಗೊಬ್ಬ ಕಾಲಿಗೊಬ್ಬ ಸೇವಕರು, ರಿಟೈರ್ಡ್ ಆದ ನಂತರ ನಮ್ಮನ್ನು ಕಡೆಗಣಿಸುವುದು ಅತ್ಯಂತ ನೋವುದಾಯಕ. ದೊಡ್ಡ ದೊಡ್ಡ ನಗರಗಳಲ್ಲಿ ಮಾನವೀಯತೆ ಎಂಬುದು ಹಣದಿಂದ ಅಳೆಯುವ ಮಟ್ಟಕ್ಕೆ ಇಳಿದಿದೆ ಎಂಬುದು ನನಗೆ ಆ ಆಸ್ಪತ್ರೆಯಲ್ಲಿ ನಡೆದ ಘಟನೆಗಳಿಂದ ಇನ್ನಷ್ಟು ದೃಢವಾಯಿತು. ವಿದೇಶಗಳಿಂದ ವಿಮಾನ ಸಂಪರ್ಕ ಇಲ್ಲದ ಕಾರಣ ಮಗನೂ ದೆಹಲಿಗೆ ಬರುವಂತಿರಲಿಲ್ಲ. ಆ ದಿನಗಳನ್ನು ಹೇಗೆ ಕಳೆದೆನೋ ನಾನೊಬ್ಬನೇ ಬಲ್ಲೆ! ಆಸ್ಪತ್ರೆಯ ಫೀಸ್ ಬರೋಬ್ಬರಿ 25 ಲಕ್ಷ ರೂಪಾಯಿಗಳಷ್ಟಾಗಿತ್ತು. ಹಣವೇನೋ ಬರುತ್ತದೆ, ಹೋಗುತ್ತದೆ, ಆದರೆ ನಮ್ಮವರು ಹೋದರೆ? ಮರಳಿ ತರಬಹುದೇ? ಜೀವನವೆಂಬುದು ಅನಿರೀಕ್ಷಿತಗಳ ಸರಮಾಲೆ ಎಂಬುದು ನನಗೆ ಆಗ ಮನವರಿಕೆಯಾಗತೊಡಗಿತ್ತು.
ಒಬ್ಬಂಟಿಯಾದ ನನಗೆ ಇನ್ನು ಕೋಲ್ಕಾತಾದ ಮನೆ, ಜೈಪುರದ ಮನೆ, ದೆಹಲಿಯ ಮನೆಗಳು ಅಸೆಟ್ ಎನಿಸತೊಡಗಲಿಲ್ಲ…ಬದಲಿಗೆ ಲಯಾಬಿಲಿಟಿ ಎನಿಸತೊಡಗಿತ್ತು. ಕೋಲ್ಕಾತಾದ ಮನೆಯಿಂದ ಪ್ರತೀ ತಿಂಗಳೂ ನನ್ನ ಬ್ಯಾಂಕ್ ಅಕೌಂಟಿಗೆ ಬರುತ್ತಿದ್ದ ಬಾಡಿಗೆ ಹಣವು ಇತ್ತೀಚಿಗೆ ಅನಿಯಮಿತವಾಗತೊಡಗಿತ್ತು. ಏಕೆ ಹೀಗೆ ಎಂದು ವಿಚಾರಿಸಿದಾಗ ನನ್ನ ಸ್ಟೋರ್‌ಕೀಪರ್ ಉರ್ಫ್ ರಿಜಿಸ್ಟ್ರಾರ್ ಗೆಳೆಯ ಅದಕ್ಕೆ ಇತ್ತೀಚಿನ ಜಾಗತಿಕ ಸಾಂಕ್ರಾಮಿಕ ರೋಗವೇ ಕಾರಣ, ಯಾರೂ ಸರಿಯಾದ ಬಾಡಿಗೆದಾರರು ಸಿಗುತ್ತಿಲ್ಲ ಎಂದೆಲ್ಲ ಹೇಳತೊಡಗಿದ್ದ. ನಾನು ಅಲ್ಲಿಗೆ ಹೋಗಿ ನೋಡಿಬರುವುದೆಂದು, ಸಾಧ್ಯವಾದರೆ ಅದನ್ನು ಮಾರಿಯೇ ಬರುವುದೆಂದು ಯೋಚನೆ ಮಾಡಿದೆ. ಅನಿರೀಕ್ಷಿತವಾಗಿ ನಾನು ಅಲ್ಲಿಗೆ ಭೇಟಿ ಕೊಟ್ಟಾಗ ನನಗೇ ನನ್ನ ಆ ಮನೆ ಗುರುತು ಸಿಗಲಿಲ್ಲ! ಯಾವುದೋ ಕಂಪನಿಗೆ ಫ್ರಾಂಚಾಯ್ಸಿ ಕೊಟ್ಟಿರುವುದು ತಿಳಿಯಿತು. ಆದರೆ ನನಗೆ ಬರುತ್ತಿದ್ದ ಬಾಡಿಗೆ ಹಣವು ಬೇರೊಬ್ಬರ ಹೆಸರಿನಿಂದ ಬರುತ್ತಿತ್ತು. ಹೀಗಾಗಿ ನನಗೆ ಕಂಪನಿಯೊಂದು ನನ್ನ ಮನೆಯನ್ನು ಅತಿಕ್ರಮಿಸಿಕೊಂಡಿರುವುದು ಆಶ್ಚರ್ಯವೂ, ಗಾಬರಿಯೂ ಆಯಿತು. ಅಲ್ಲಿಯೇ ಹತ್ತಿರದವರನ್ನು ವಿಚಾರಿಸಿದಾಗ ಅವರು ಈ ಕೆಲಸದ ಹಿಂದೆ ರಿಜಿಸ್ಟ್ರಾರ್ ಅವರ ಕೈವಾಡವಿದೆ ಎಂದು ತಿಳಿಸಿದರು. ನಮ್ಮವರೆಂದು ತಿಳಿದುಕೊಂಡವರೇ ನಮಗೆ ಮುಳ್ಳಾದರೆ? ಎಂದು ಎನಿಸಿತು. ತಕ್ಷಣವೇ ವಕೀಲರೊಬ್ಬರನ್ನು ಹಿಡಿದು ಆ ಕಂಪನಿಗೆ ಲೀಗಲ್ ನೋಟೀಸ್ ಕೊಡಿಸಿದೆ. ಕೋರ್ಟು ಕಚೇರಿಗಳ ಓಡಾಟ, ತೊಳಲಾಟಗಳ ನಂತರ, ಮುಂದೆ ನನ್ನ ಆ ಮನೆ ನನ್ನದಾಗಲು ಐದು ವರ್ಷಗಳೇ ಹಿಡಿದವು! ಅಷ್ಟಾಗಲು ನನ್ನ ಕೈಯಿಂದ ಸುಮಾರು 2 ಕೋಟಿ ರೂಪಾಯಿ ಖಾಲಿಯಾಗಿತ್ತು. ಕೊನೆಗೆ ಅದನ್ನು ಅಷ್ಟೇ ದುಡ್ಡಿಗೆ ಮಾರಿ ನಿರಾಳವಾದೆ. ಈ ಕಹಿ ಅನುಭವದಿಂದ ನಾನು ಹೈರಾಣಾಗಿದ್ದೆ….ಜೈಪುರದ ಮನೆಯನ್ನೂ ಯಾರಾದರೂ ಹೀಗೇ ಅಕ್ಕಿಸಲು ನೋಡಿದರೆ? ನನಗೂ ಎಪ್ಪತ್ತರ ಗಡಿ ದಾಟುತ್ತಿದೆ. ಪ್ರತೀ ವರ್ಷ ಭಾರತಕ್ಕೆ ಬರುತ್ತಿದ್ದ ವೆಂಕಟ್ರಮಣ ಕಳೆದ ಐದಾರು ವರ್ಷಗಳಿಂದ ಬರುತ್ತಿಲ್ಲ. ಅವನದೇ ಆದ ಬಾಳ ಹಾದಿ ಅವನ ಎದುರು ಇದೆ. ಅವನ ಕರ್ತವ್ಯದ ಕರೆ ಅವನನ್ನು ಕರೆಯುತ್ತಿದೆ. ಹೀಗಾಗಿ ಅವನು ನನ್ನನ್ನು ನೋಡಲೆಂದೇ ಲಕ್ಷಾಂತರ ರೂಪಾಯಿ ಸುರಿದು ಇಲ್ಲಿಗೆ ಬರುವುದು ಎಷ್ಟರ ಮಟ್ಟಿಗೆ ಸೂಕ್ತ?
ಜೈಪುರದ ಮನೆಯ ಮಟ್ಟಿಗೆ ನನಗೆ ಅಷ್ಟೊಂದು ತೊಂದರೆ ಆಗಲಿಲ್ಲವಾದರೂ ಎಷ್ಟು ರಿಯಲ್ ಎಸ್ಟೇಟ್ ಕಂಪನಿಗಳ ಮುಖಾಂತರ ವ್ಯವಹಾರ ಮಾಡಿದರೂ ನನಗೆ ನನ್ನ ಅಂದಾಜಿನಷ್ಟು ಹಣ ಕೈ ಸೇರಲಿಲ್ಲ. ಬಹುಶಃ ನನ್ನ ಪರಿಸ್ಥಿತಿಯ ಅರಿವು ಆ ಕಂಪನಿಗಳಿಗೆ ಇತ್ತೆಂದು ತೋರುತ್ತದೆ. ಆದರೆ ನನ್ನ ಕೆಲವು ಆಪ್ತ ಗೆಳೆಯರ ಸಹಾಯದಿಂದ ಆ ಮನೆಯನ್ನು ಮಾರಿ ಬೆಂಗಳೂರಿನ ಕೋರಮಂಗಲದ ಈ ಅಪಾರ್ಟಮೆಂಟಿನಲ್ಲೇ ಇರುವುದೆಂದು ತೀರ್ಮಾನಿಸಿ ನೋಯಿಡಾ ಮನೆಯನ್ನು ಖಾಲಿ ಮಾಡಿದೆ.
ಬೆಂಗಳೂರಿನಲ್ಲಿ ನಾನಿರುವ ಅಪಾರ್ಟ್‌ಮೆಂಟಿನ ಜನರು ತುಂಬಾ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ. ಪಕ್ಕದಲ್ಲೇ ಇರುವ ಕೊಳೆಗೇರಿ (ಸ್ಲಂ)ಗಳ ಮಕ್ಕಳಿಗೆ ಶಾಲೆಯ ಫೀಸ್ ಕೊಡುವುದು, ಊಟ–ತಿಂಡಿ ಹಂಚುವುದು ಇತ್ಯಾದಿಗಳಲ್ಲಿ ನನ್ನ ಸಮಯ ಕಳೆಯುತ್ತಿದೆ…ಆದರೂ ಕೈ ಬಿಚ್ಚಿ ಕೊಡುವುದಕ್ಕೆ ಇನ್ನೂ ಮನಸ್ಸು ಬರುತ್ತಿಲ್ಲ. ಏನೋ ಒಂದು ರೀತಿಯ ಅಭದ್ರತೆ, ಇದುವರೆಗೆ ಮಾಡಲಾಗದ್ದು ಇನ್ನು ಮಾಡಲಾದೀತೆ ಎಂಬ ತೊಳಲಾಟ!
ಯೋಚನೆಯ ಭರದಲ್ಲಿ ಸಂಜೆಯ ವೇಳೆ ದೇವರಿಗೆ ದೀಪವನ್ನು ಹಚ್ಚುವುದೂ ಮರೆಯಿತು…ಎಲ್ಲಾ ಹಕ್ಕಿಗಳೂ ತಮ್ಮ ತಮ್ಮ ಗೂಡು ಸೇರಿಯಾಯಿತು…ನಾಳಿನ ಗೊಡವೆಯಿಲ್ಲದ ಆ ಹಕ್ಕಿಗಳೇ ಸುದೈವಿಗಳು. ನಮಗಾದರೋ ಆ ಗೂಡು, ಈ ಗೂಡು, ಕೊನೆಗೊಮ್ಮೆ ಉಳಿಯಲು ಒಂದೇ ಗೂಡು…ಅವಶ್ಯಕತೆ ಇರುವವರಿಗೆ ಗೂಡು ಕಟ್ಟಿಕೊಳ್ಳುವುದಕ್ಕೆ ಸಹಾಯ ಮಾಡಿದ್ದರಾದರೂ ಜೀವನದಲ್ಲಿ ಒಂದು ತೃಪ್ತಿ ಸಿಗುತ್ತಿತ್ತೇನೋ! ಗೂಡಿನ ಗೊಡವೆಯಲ್ಲಿ ನಮಗೆ ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ…ಜೋಡು ಹೆಂಡಿರು ಅಂಜಿ ಓಡಿ ಹೋಗುವಾಗ ಗೋಡೆ ಬಿದ್ದು ಬಯಲಾಗುವುದನ್ನು ನಿರೀಕ್ಷಿಸುವುದೊಂದೇ ಕೆಲಸ.
ಸಂತೋಷ್ ಉಪಾಧ್ಯಾಯ
ವೈಶಾಲಿ, ಗಾಜಿಯಾಬಾದ್