ಹವ್ಯಕ ಮದುವೆ ಸಂಪ್ರದಾಯಗಳು

ನಮ್ಮ ಹಿಂದೂ ವಿವಾಹ ಪದ್ಧತಿಯಲ್ಲಿ ನಾವು ಹಲವಾರು ವಿಧಿ ವಿಧಾನಗಳನ್ನು ಅನುಸರಿಸುತ್ತೇವೆ. ಯಾವುದೇ ಧರ್ಮ ಜಾತಿಯೇ ಇರಲಿ ಒಂದೊಂದು ಪಂಗಡದವರು ಒಂದೊಂದು ವಿಧವಾದ ವೈವಾಹಿಕ ವಿಧಾನಗಳನ್ನು ಅನುಸರಿಸುತ್ತಾರೆ. ಮದುವೆಯ ಈ ಪವಿತ್ರ ಬಂಧನದಲ್ಲಿ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಗಳಿಗೂ ಅದರದ್ದೇ ಆದ ಮೌಲ್ಯವಿದ್ದು ಈ ಮೌಲ್ಯವು ವಿವಾಹದ ಪ್ರಮುಖ ಸೂತ್ರವಾಗಿದೆ. ಆಧುನಿಕ ಯುಗದಲ್ಲಿಯೂ ಹಿಂದೂ ಧರ್ಮವು ಪವಿತ್ರವಾದ ಪುರಾಣಗಳಲ್ಲಿ ಉಲ್ಲೇಖಿತವಾದಂತೆ ದೇವರುಗಳ ಪೂಜಾ ಪದ್ಧತಿಗಳ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಹಿಂದೂ ಧರ್ಮದಲ್ಲಿನ ವಿವಾಹಪದ್ಧತಿಯಲ್ಲಿ ವೇದದ ಒಳಗಿರುವ ಯಜ್ಞದ ಪ್ರಕಾರವು ಅಗ್ರಸ್ಥಾನದಲ್ಲಿದೆ. ಈ ಅಗ್ನಿಪೂಜೆಯೊಂದಿಗೆ ಇಂಡೊಆರ್ಯನ್ ಪದ್ಧತಿಯಲ್ಲಿ ಆರ್ಯರ ದೇವತೆಗಳನ್ನು ಪ್ರಾರ್ಥನೆ ಮೂಲಕ ಆಹ್ವಾನಿಸಲಾಗುತ್ತದೆ. ಇದು ಮೂಲದಲ್ಲಿ ಪುರಾತನವಾದ ಈ ಸಮಾರಂಭಗಳು ಸ್ನೇಹ/ಸಂಬಂಧಗಳನ್ನು ಗಹನವಾಗಿ ಬಂಧಿಸಿಡುವಲ್ಲಿ ಸಫಲವಾಗಿವೆ. ಇಂದೂ ಕೂಡಾ ಈ ಸಾಂಪ್ರದಾಯಿಕತೆಯ ಗಾಢತೆಯು ಮದುವೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಹಿಂದೂ ಮದುವೆಗಳ ಪ್ರಮುಖ ಸಾಕ್ಷಿ ಎಂದರೆ ಜಲ ಮತ್ತು ಅಗ್ನಿ ದೇವ. ಯಾವುದೇ ಕಾನೂನು ಮತ್ತು ಸಂಪ್ರದಾಯಗಳನ್ನು ಅನುಸರಿಸಿದರೂ ಈ ಪವಿತ್ರ ಜಲ ಹಾಗೂ ಅಗ್ನಿಸಾಕ್ಷಿ ಇಲ್ಲದೇ ಮದುವೆಯ ಪ್ರಕ್ರಿಯೆ ಪೂರ್ಣವಾಗದು. ವಿವಾಹವೆಂದರೆ ಬರಿಯ ಗಂಡು ಹೆಣ್ಣಿನ ಪವಿತ್ರ ಬಂಧನ ಮಾತ್ರವಲ್ಲ ಎರಡು ಕುಟುಂಬಗಳ ಮಿಲನವಾಗಿದೆ. ವಿವಾಹದಿಂದಾಗಿ ಪರಸ್ಪರ ಕುಟುಂಬಗಳು ಒಂದಾಗುತ್ತವೆ ಮತ್ತು ಎರಡೂ ಕುಟುಂಬಗಳಲ್ಲಿ ಸಾಮರಸ್ಯ ಉಂಟಾಗುತ್ತದೆ. ಮದುವೆ ಏಳೇಳು ಜನ್ಮಗಳ ಅನುಬಂಧ, ವಧು ಮತ್ತು ವರನ ಸಂಬಂಧವನ್ನು ದೇವರೇ ನಿರ್ಧರಿಸುತ್ತಾನೆ ಎನ್ನುವ ನಂಬಿಕೆ ಕೂಡ ಇದೆ. ನಮ್ಮ ಬ್ರಾಹ್ಮಣ ಸಂಪ್ರದಾಯದಲ್ಲಿ ವರ ಮತ್ತು ವಧುವಿನ ಕುಂಡಲಿ(ಜಾತಕ) ಯನ್ನು ನೋಡಿ ಇಬ್ಬರ ಕುಂಡಲಿ ಕೂಡಿ ಬಂದಲ್ಲಿ ಇವರಿಬ್ಬರೂ ಸಂಪೂರ್ಣವಾಗಿ ಒಪ್ಪಿಗೆ ಸೂಚಿಸಿದ ಬಳಿಕವೇ ಮದುವೆ ಕಾರ್ಯಗಳು ನಡೆಯುತ್ತದೆ.(ಹಳೆಯ ಕಾಲದಲ್ಲಿ ಮನೆಯ ಹಿರಿಯರೇ ವಧುವನ್ನು ಅನ್ವೇಷಣೆ ಮಾಡುತ್ತಿದ್ದರು. ವಧು ವರರು ಪರಸ್ಪರ ಮದುವೆ ಮಂಟಪದಲ್ಲಿಯೇ ನೋಡಬೇಕಿತ್ತು ಅಂತ ಹಿರಿಯವರಿಂದ ಕೇಳಿದ್ದೇವೆ. ಆ ಮಾತು ಬೇರೆ) ಮದುವೆಯು ಮುಗಿದು ಗ್ರಹಸ್ಥಾಶ್ರಮಕ್ಕೆ ಕಾಲಿಡುವ ವರ ಮತ್ತು ಮಧುವಿಗೆ ಹೊಸ ಜೀವನ ಆರಂಭಿಸುವ ತವಕ. ಅದರಲ್ಲೂ ವಧು ಮಾತ್ರ ಹುಟ್ಟಿನಿಂದ ಬೆಳೆದು ಬಂದ ಮನೆ, ತಂದೆತಾಯಿ, ಸೋದರಸೋದರಿಯನ್ನು ಬಿಟ್ಟು ಬಂದು, ಗಂಡನ ಮನೆಯಲ್ಲಿ ಹೊಸ ಜೀವನವನ್ನು ಆರಂಭಿಸುತ್ತಾಳೆ. ಇನ್ನು ಮದುವೆಯಾಗುವ ಗಂಡು ತನ್ನ ಮನೆ ಮನವನ್ನು ತುಂಬುವ ಒಡತಿಯ ಬಗ್ಗೆ ಸಾಕಷ್ಟು ಕನಸು ಕಾಣುತ್ತಾನೆ. ಇಲ್ಲಿ ನಾನು ನಮ್ಮ ಹವ್ಯಕ ಮದುವೆಯ ಸಂಪ್ರದಾಯ ಹಾಗೂ ಪದ್ಧತಿಗಳ ಕುರಿತಾಗಿ ಬರೆಯುತ್ತಿದ್ದೇನೆ. ಹವ್ಯಕ ಮದುವೆ ಎಂದರೆ ಅತ್ಯಂತ ಸರಳ, ಆಡಂಬರ ರಹಿತ, ವೈದಿಕ ಸಾಂಪ್ರದಾಯಿಕ ಶ್ರೀಮಂತಿಕೆಯಿಂದ ಕೂಡಿದ ಪದ್ಧತಿ ಎಂದು ಹೇಳಬಹುದು.

ಮದುವೆಯ ಪೂರ್ವದ ಕಾರ್ಯಕ್ರಮ

ನಿಶ್ಚಿತಾರ್ಥಈ ದಿನ ವರ, ವರನ ತಂದೆ ತಾಯಿ ತಮ್ಮ ಬಂಧು ಮಿತ್ರರೊಂದಿಗೆ ವಧುವಿನ ಮನೆಗೆ ಹೋಗುತ್ತಾರೆ. ಮೊದಲು ವರ ನಿಶ್ಚಿತಾರ್ಥದ ದಿನ ವಧುವಿನ ಮನೆಗೆ ಹೋಗುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ ವರನೂ ಜೊತೆಯಲ್ಲಿ ಹೋಗುತ್ತಾನೆ. ಇಲ್ಲಿ ಎರಡೂ ಮನೆಯ ಹೆಂಗಳೆಯರು ಸೇರಿ ಸಾಂಪ್ರದಾಯಿಕ ಹಾಡುಗಳನ್ನು ಹೇಳುತ್ತ ಅಕ್ಷತೆ ಕಲಸಲಾಗುತ್ತದೆ. ಮುಂದೆ ಮದುವೆಗೆ ಆಮಂತ್ರಣ ಮಾಡಲು ಆಮಂತ್ರಣ ಪತ್ರಿಕೆಯೊಂದಿಗೆ ಈ ಅಕ್ಷತೆಯನ್ನೇ ಉಪಯೋಗಿಸಲಾಗುತ್ತದೆ.

ಮದುವೆಯ ಸಿದ್ಧತೆಯನ್ನು ಉಂಗುರ ಬದಲಾವಣೆ, ನಿಶ್ಚಿತಾರ್ಥದ ಮೂಲಕ ನಡೆಸಲಾಗುತ್ತದೆ. ಪುರೋಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಮದುವೆಯ ಕೆಲವು ದಿನಗಳ ಮುನ್ನ ಈ ಕಾರ್ಯಕ್ರಮವನ್ನು ನಡೆಸುತ್ತಾರೆ. ಅಂತೆಯೇ ವಿವಾಹದ ದಿನಾಂಕವನ್ನು ಈ ಸಂದರ್ಭದಲ್ಲಿಯೇ ನಿಗದಿ ಪಡಿಸಲಾಗುತ್ತದೆ.

ಎರಡೂ ಮನೆಯವರು ಫಲ ತಾಂಬೂಲ,ಸಿಹಿ ಮತ್ತು ಬಟ್ಟೆ ಹಾಗೂ ಆಭರಣಗಳನ್ನು ಇಲ್ಲಿ ವಿನಿಮಯ ಮಾಡುತ್ತಾರೆ. ಮತ್ತು ಹಿರಿಯರು ಹುಡುಗ ಹುಡುಗಿಯನ್ನು ಆಶೀರ್ವದಿಸುತ್ತಾರೆ.

ಮದುವೆಯ ಮೊದಲ ದಿನ ನಡೆಯುವ ಕಾರ್ಯಕ್ರಮ. ನಾಂದಿಯ ಮೊದಲ ದಿನ ವಧು ವರರ ತಂದೆ ತಾಯಂದಿರು ಷಾಣ್ಮಾಸ ಪ್ರಾಯಶ್ಚಿತ ಹಾಗೂ ಔಪಾಸನೆ ಮಾಡುವುದು.

ಇದು ವರ ಹಾಗೂ ವಧು ಇಬ್ಬರ ಮನೆಯಲ್ಲೂ ನಡೆಯುವ ಕಾರ್ಯಕ್ರಮ.

ಅಂದು ಬೆಳಿಗ್ಗೆ ವರ /ವಧು ಹಾಗೂ ಅವರ ತಂದೆ ತಾಯಿಯನ್ನು ದೇವರ ಮುಂದೆ ಕುಳ್ಳಿರಿಸಿ ಸುಹಾಸಿನಿಯರು ಅವರ ಹಣೆಗೆ ಅರಿಸಿನ ಕುಂಕುಮ ಇರಿಸಿ, ತಲೆಗೆ ಎಣ್ಣೆ ಹಾಕಿ, ಆರತಿ ಬೆಳಗುತ್ತಾರೆ. ಆಮೇಲೆ ಅಕ್ಕಿ ತೊಳಿಸಿ ಅಕ್ಷತ ಕಲಸಿ ಊರನ್ನು ಕರೆಯುವ ಕಾರ್ಯಕ್ರಮ. ನಂತರ ಮಂಗಳ ಸ್ನಾನ ಮಾಡಿ ಮುಂದಿನ ಪೂಜೆಗೆ ಅಣಿಯಾಗುವುದು.

ಗಣೇಶ ಪೂಜೆ ಹಾಗೂ ಕುಲದೇವತಾ ಸ್ಥಾಪನೆಯಾವುದೇ ಧಾರ್ಮಿಕ ಕಾರ್ಯದ ಪ್ರಾರಂಭ ಗಣೇಶ ಪೂಜೆಯಿಂದ ನಡೆಸಲಾಗುವುದು. ವಿವಾಹದ ಮುನ್ನ ದೇವರ ಆಶೀರ್ವಾದವನ್ನು ಪಡೆಯಲು ಈ ಪೂಜೆಯನ್ನು ಮಾಡುತ್ತಾರೆ. ಯಾವುದೇ ವಿಘ್ನಗಳು ಸಂಭವಿಸದೇ ಇರಲಿ ಹಾಗೂ ಕುಲದೇವರ ಅನುಗ್ರಹ ಇರಲಿ ಎಂಬುದು ಈ ಪೂಜೆಯ ಹಿಂದಿರುವ ಉದ್ದೇಶವಾಗಿದೆ. ದಂಪತಿಗಳ ಹೊಸ ಜೀವನಕ್ಕೆ ಈ ಪೂಜೆಯು ಅವರನ್ನು ಸಿದ್ಧ ಪಡಿಸುತ್ತದೆ. ಗಣೇಶ ಪೂಜೆ ಇಲ್ಲದೆಯೇ ವಿವಾಹ ಸಂಪನ್ನವಾಗುವುದಿಲ್ಲ.

ಪುಣ್ಯಾಹ ವಾಚನಇದು ಶಾಂತಿ, ಪುಷ್ಟಿ ಮತ್ತು ಶಕ್ತಿ ಗೋಸ್ಕರ ಮಾಡುವ ವಿಧಿಯಾಗಿದೆ.

ನಾಂದಿಮುಂದೆ ನಡೆಯಲಿರುವ ಮಂಗಲ ಕಾರ್ಯಕ್ಕೆ ಅಶೌಚವಾಗದಿರುವ ಸಲುವಾಗಿ ನಡೆಸುವ ವಿಧಿಯೇ ನಾಂದಿ ಕಾರ್ಯವಾಗಿದೆ.ಇಲ್ಲಿ ಗಮನಿಸಬಹುದಾದ ಸಂಗತಿ ಎಂದರೆ ಚೌಲ ಹಾಗೂ ಉಪನಯನಕ್ಕೆ ನಾಂದಿಯ ದಿನದಿಂದ ಮೂರು ದಿನಗಳ ಕಾಲವೂ, ಮದುವೆಗೆ ಹತ್ತು ದಿನಗಳ ಕಾಲವೂ ಹಾಗೂ ಯಜ್ಞ ಯಾಗಾದಿಗಳಲ್ಲಿ 21 ದಿನಗಳ ಕಾಲವೂ ಅಶೌಚವಿಲ್ಲ ಎಂದು ಹೇಳಲಾಗಿದೆ.

ಸಮಾವರ್ತನೆಇದು ವರನ ಮನೆಯಲ್ಲಿ ನಡೆಯುವ ಕಾರ್ಯಕ್ರಮ. ಸ್ನಾತಕತ್ವ ಪ್ರಾಪ್ತಿ ಹಾಗೂ ಗೃಹಸ್ಥಾಶ್ರಮ ಸಿದ್ಧಿಗಾಗಿ ಮಾಡುವ ವಿಧಿ. ಇಲ್ಲಿ ಮೊದಲು ಕುಡಿ ಬಾಳೆಯಲ್ಲಿ ಅಕ್ಕಿ, ಕಾಯಿ, ದುಡ್ಡು, ಬಟ್ಟೆ ಇತ್ಯಾದಿ ಇಟ್ಟು ನಾಪಿಕನಿಗೆ ಮರ್ಯಾದೆ ಕೊಟ್ಟು. ವರನ ವಪನ (ಕೂದಲು ಕತ್ತರಿಸುವುದು) ಕಾರ್ಯ ಮಾಡುತ್ತಾರೆ. ಇದಕ್ಕೆ ಪನ್ನೆ ಮಾಡುವುದು ಎಂತಲೂ ಕರೆಯಲಾಗುತ್ತದೆ. ವರ ಮತ್ತೊಮ್ಮೆ ಸ್ನಾನ ಮಾಡಿ ಹೊಸ ವಸ್ತ್ರ( ಮಡಿಯುಟ್ಟು) ಧರಿಸಿ ತೋರಣದ ಬಾಗಿಲಿನಲ್ಲಿ ಬಂದು ನಿಂತುಕೊಳ್ಳುತ್ತಾನೆ. ವರನ ತಾಯಿ ಅವನಿಗೆ ಹಾನ ಸುಳಿದು (ಕೆಟ್ಟ ದೃಷ್ಟಿ ತಗಲದಿರಲು) ಕಾಲು ತೊಳೆದು ಇದಿರುಗೊಳ್ಳುತ್ತಾಳೆ.

ಕಾಶಿಯಾತ್ರೆಇದು ಒಂದು ವಿನೋದದಿಂದ ಕೂಡಿದ ಕಾರ್ಯಕ್ರಮ. ಕಾಶೀಯಾತ್ರೆಗೆ ಮದುಮಗ ಹೊರಡುವ ಮೊದಲು, ವರನ ತಾಯಿ ವರನಿಗೆ ಬಾಸಿಂಗವನ್ನು ಕಟ್ಟಿ, ಕಣ್ಣಿಗೆ ಕಪ್ಪು ಹಚ್ಚಿ, ಹಣೆಗೆ ಕುಂಕುಮ ಇರಿಸಿ, ಕನ್ನಡಿ ತೋರಿಸಿ ಅಕ್ಷತೆ ಇಡಿಸುತ್ತಾಳೆ.

ಕಾಶಿ ಯಾತ್ರೆಗೆ ಹೋಗುವಾಗ ಕಾಶಿ ಗಂಟಿನಲ್ಲಿ ಅಕ್ಕಿ, ಕಾಯಿ, ಬೇಳೆ, ತರಕಾರಿ ಇತ್ಯಾದಿ ಹಾಕಿ, ಹೊಸ ಪಾಣಿಪಂಚೆಯಲ್ಲಿ ಗಂಟು ಕಟ್ಟಿರಬೇಕು. ವರ ಒಂದು ಜೊತೆ ಹೊಸ ಅಡಿಕೆ ಹಾಳೆಯ ಚಪ್ಪಲಿ ಹಾಕಬೇಕು. ಒಂದು ಛತ್ರಿಯನ್ನು ಇಟ್ಟುಕೊಳ್ಳಬೇಕು; ವರನು ಏಳು ಹೆಜ್ಜೆ ನಡೆಯಬೇಕು.

ವರನು ಇಲ್ಲಿಯ ವಿದ್ಯಾಭ್ಯಾಸ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾಶಿಗೆ ಹೊರಡುವ ಶಾಸ್ತ್ರ.

ಕಾಶಿ ಈಗಲೇ ಹೋಗುವುದು ಬೇಡ, ವಿವಾಹ ಮಾಡಿಕೊಂಡು ನಂತರ ಗೃಹಸ್ಥ ನಾಗಿ ಹೋಗಬಹುದು, ನಾನು ನಿನಗೆ ಹೆಣ್ಣನ್ನು ಕೊಡುತ್ತೇನೆ. ನನ್ನ ಸೋದರಿ ಮದುವೆಗೆ ಸಿದ್ಧಳಾಗಿದ್ದಾಳೆ, ಎಂದು ವಧುವಿನ ಅಣ್ಣ ಅಥವಾ ತಮ್ಮ ವರನನ್ನು ತಡೆಯುತ್ತಾನೆ. ವಧುವಿನ ಕಡೆಯವರು ಬರುವಾಗ ಮಂಗಳಾಕ್ಷತೆ, ಕನ್ಯಾರ್ಥನೆಯ ತೆಂಗಿನ ಕಾಯಿ, ಉಡುಗೊರೆ ತರಬೇಕು. ವರನ ಗಂಟನ್ನು ಇಳಿಸಿದ ನಂತರ ವರನಿಗೆ ಅವನ್ನು ಕೊಡುತ್ತಾನೆ. ಈ ಕಾಶಿ ಗಂಟನ್ನು ಇಳಿಸಿದ ವಧುವಿನ ಕಡೆಯವರಿಗೆ ವರನ ಕಡೆಯವರು ದಕ್ಷಿಣೆ ಮತ್ತು ಬಟ್ಟೆಯ ಉಡುಗೊರೆ ಮಾಡುತ್ತಾರೆ. ಆಮೇಲೆ ವರನಿಗೆ ಆರತಿ ಬೆಳಗುತ್ತಾರೆ. ವರನು ಹಿರಿಯರೆಲ್ಲರಿಗೂ ನಮಸ್ಕಾರ ಮಾಡುತ್ತಾನೆ.

ನಾಂದಿಯ ದಿನವೇ ಮನೆಯ ಮುಂದೆ ಮಾವಿನ ತೋರಣ ಕಟ್ಟಲಾಗುವುದು. ತೋರಣ ಕಟ್ಟಿದವನಿಗೆ ಬಾಳೆಲೆಯಲ್ಲಿ ಅಕ್ಕಿ, ಕಾಯಿ, ಹಣ, ಹೊಸ ವಸ್ತ್ರ ಇತ್ಯಾದಿ ಇಟ್ಟು ಉಡುಗೊರೆ ನೀಡಲಾಗುತ್ತದೆ.

ಗ್ರಹಶಾಂತಿ ಗ್ರಹಗಳ ಪ್ರತಿಕೂಲ ಪರಿಣಾಮದ ನಿವಾರಣೆಗಾಗಿ ನಡೆಸುವ ವಿಧಿ. ಇಲ್ಲಿ ನವಗ್ರಹ ಪೂಜೆ ಹಾಗೂ ಹೋಮ ಮಾಡುತ್ತಾರೆ. ಇದು ವರ ಹಾಗೂ ವಧು ಇಬ್ಬರ ಮನೆಯಲ್ಲೂ ನಡೆಯುವ ಕಾರ್ಯಕ್ರಮ. ವರ ಬ್ರಹ್ಮಚರ್ಯದಿಂದ ಗೃಹಸ್ಥಾಶ್ರಮಕ್ಕೆ ಕಾಲಿಡುವ ಸಮಯ. ಈ ಸಮಯದಲ್ಲಿ ಎರಡನೇ ಯಜ್ಞೋಪವಿತ ಧರಿಸುತ್ತಾನೆ.

ಕನ್ಯಾ ಸಂಸ್ಕಾರ/ ಸ್ತ್ರೀ ಸಂಸ್ಕಾರ

ವಧುವಿಗೆ ಈ ಮೊದಲು ಯಾವುದೇ ಧಾರ್ಮಿಕ ಸಂಸ್ಕಾರವನ್ನು ಮಾಡದಿರುವ ಕಾರಣ ಈಗ ಕನ್ಯಾ ಸಂಸ್ಕಾರವನ್ನು ಮಾಡಲಾಗುವುದು. ಇಲ್ಲಿ ಗರ್ಭಾದಾನ, ಪುಂಸವನ, ಸೀಮಂತ, ವಿಷ್ಣುಬಲಿ, ಜಾತಕರ್ಮ, ನಾಮಕರಣ, ಉಪಶಿಷ್ಕ್ರಮಣ, ಅನ್ನಪ್ರಾಶನ, ಕರ್ಣಛೇದನ, ಚೌಲ ಕಾರ್ಯಕ್ರಮ ಇವೆಲ್ಲವೂ ಸ್ತ್ರೀ ಸಂಸ್ಕಾರದ ಅಂಗವಾಗಿದೆ.

ವರನಂತೆ ವಧು ಕೂಡ ಗೃಹಸ್ಥಾಶ್ರಮಕ್ಕೆ ಕಾಲಿಡುವ ಸಾಂಕೇತಿಕವಾಗಿ ವಧುವಿನ ಸೋದರತ್ತೆ ವಧುವಿಗೆ ಕಾಲುಂಗುರ ತೊಡಿಸುತ್ತಾಳೆ. ನಂತರ ವಧು ಮತ್ತು ಅವಳ ತಂದೆ ತಾಯಿಗೆ ಆರತಿ ಬೆಳಗಲಾಗುತ್ತದೆ. ವಧು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾಳೆ.

ಉದಕಶಾಂತಿ ಪ್ರದೋಷ ಕಾಲದಲ್ಲಿ ಮುಂದೆ ಮಾಡುವ ಶುಭ ಕಾರ್ಯದಲ್ಲಿ ಅಮಂಗಲ ನಿವಾರಣೆಗಾಗಿ ಹಾಗೂ ಮಂಗಲ ಪ್ರಾಪ್ತಿಗಾಗಿ ಮಾಡುವ ವಿಧಿ. ಈ ಕಾರ್ಯವನ್ನು ವಧು ಹಾಗೂ ವರ ಇಬ್ಬರ ಮನೆಯಲ್ಲೂ ಮಾಡಲಾಗುತ್ತದೆ. ಇಲ್ಲಿ ಷಡಂಗ ಸಹಿತ ವೇದಪುರುಷ ಚತುರ್ಮುಖ ಬ್ರಹ್ಮನ ಆವಾಹನೆ ಮಾಡಲಾಗುತ್ತದೆ. ವರ ಹಾಗೂ ವಧುವಿನ ರಕ್ಷಣೆಗೋಸ್ಕರ ಪ್ರತಿಸರ ಬಂಧವನ್ನು ಮಾಡಲಾಗುತ್ತದೆ. ಅಂದರೆ ಪಟ್ಟೆನೂಲಿಗೆ ಅರಿಸಿನಕೊಂಬು ಕಟ್ಟಿ ಅದನ್ನು ಭಸ್ಮದಲ್ಲಿ ಇಟ್ಟು ಅಭಿಮಂತ್ರಿಸಿ ಕೈಗೆ ಕಟ್ಟುವುದು. ಇಲ್ಲಿಗೆ ಮದುವೆಯ ಮೊದಲ ದಿನದ ಕಾರ್ಯಕ್ರಮ ಮುಗಿಯುತ್ತದೆ.

ವೈದಿಕ ಹಿಂದೂ ಸಂಪ್ರದಾಯಗಳ ಅಡಿಯಲ್ಲಿ ಮದುವೆಯನ್ನು ಸಂಸ್ಕಾರಗಳ ಪೈಕಿ ಒಂದೆಂದು ಕಾಣಲಾಗುತ್ತದೆ, ಮತ್ತು ಇದು ಒಬ್ಬ ಹೆಂಡತಿ ಮತ್ತು ಒಬ್ಬ ಗಂಡನ ಜೀವಮಾನದ ಬದ್ಧತೆ ಕೂಡ ಹೌದು.

ಮದುವೆ ಸಾಮಾನ್ಯವಾಗಿ ವಧುವಿನ ಮನೆಯಲ್ಲಿ ನಡೆಯುತ್ತದೆ. ಯಾವುದೇ ಅನಾನುಕೂಲತೆ ಇದ್ದಲ್ಲಿ ಕಲ್ಯಾಣ ಮಂಟಪ ಅಥವಾ ದೇವಸ್ಥಾನದಲ್ಲಿ ಮಾಡಲಾಗುತ್ತದೆ. ಕೆಲವು ಸಂದರ್ಭದಲ್ಲಿ ವಧುವನ್ನು ವರನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿಯೇ ಮದುವೆ ಕಾರ್ಯಕ್ರಮ ಮಾಡುವ ಪದ್ಧತಿ ಕೂಡ ಇದೆ. ಇಲ್ಲಿ ನಾವು ವಧುವಿನ ಮನೆಯಲ್ಲಿ ನಡೆಯುವ ಮದುವೆಯ ಕುರಿತು ನೋಡೋಣ.

ಮದುವೆ : ಅಂದು ವಧುವಿನ ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗುತ್ತದೆ. ತೋರಣದ ಎದುರು ಸಾರಿಸಿ ರಂಗೋಲಿ ಹಾಕಲಾಗುತ್ತದೆ. ಮನೆಯಂಗಳದಲ್ಲಿ ಚಪ್ಪರ ಕಟ್ಟಿ ( ಈಗ ಶಾಮೀಯಾನಾ ಹಾಕುತ್ತಾರೆ) ಮದುವೆ ಮಂಟಪವನ್ನು ಕಟ್ಟಲಾಗುತ್ತದೆ. ಮದುವೆ ಸಾಮಾನ್ಯವಾಗಿ ಹಗಲಿನ ವೇಳೆಯಲ್ಲಿಯೇ ನಡೆಯುತ್ತದೆ. ವರ ವಧುವಿನ ಮನೆಗೆ ಬರುವ ಮುನ್ನ ಅವನ ಮನೆಯಲ್ಲಿ ಗಣಪತಿ ಪೂಜೆ ಮಾಡಿ, ಹಿರಿಯರಿಗೆ ನಮಸ್ಕರಿಸಿ, ಮನೆಯವರು, ಬಂಧು ಬಾಂಧವರ ಜೊತೆ ವಧುವಿನ ಮನೆಗೆ ಬರುತ್ತಾನೆ. ಇದಕ್ಕೆ ದಿಬ್ಬಣ ಬರುವುದು ಎಂದು ಕರೆಯಲಾಗುತ್ತದೆ. ವರನ ಉಡುಪಿನ ಕುರಿತು ಹೇಳಬೇಕೆಂದರೆ ಬಿಳಿ ಪಂಚೆ, ಬಿಳಿ ಅಂಗಿ, ಕೋಟು ಧರಿಸಿ, ಮೇಲಿನಿಂದ ಬಿಳಿ ಬಣ್ಣದ ಅಥವಾ ರೇಷ್ಮೆಯ ವೇಷ್ಟಿಯನ್ನು ಸೊಂಟದ ಸುತ್ತಲೂ ಸುತ್ತಿ ಎರಡೂ ಭುಜದ ಮೇಲೆ ಬರುವಂತೆ ಹಾಕಿಕೊಳ್ಳುತ್ತಾನೆ. ಕೈಯಲ್ಲಿ ಒಂದು ತೆಂಗಿನಕಾಯಿ (ವರಗಾಯಿ) ಹಿಡಿದಿರುತ್ತಾನೆ. ವಧುವಿನ ಮನೆಗೆ ಬಂದು ಅಲ್ಲಿ ಅವನ ತಾಯಿ, ವರನಿನೆ ಬಾಸಿಂಗ ಕಟ್ಟುತ್ತಾಳೆ. ವರನನ್ನು, ವರನ ಕಡೆಯವರನ್ನು ವಧುವಿನ ತಾಯಿ ಹಾಗೂ ಬಂಧುಗಳು ಇದಿರುಗೊಳ್ಳುತ್ತಾರೆ. ವರ ಹಾಗೂ ವಧುವಿನ ಸಹೋದರಿಯರು ಅಕ್ಕಿ, ಕಾಯಿ, ಎಲೆಪಟ್ಟಿ, ಅರಿಸಿನ, ಕುಂಕುಮ,, ಕನ್ನಡಿ ಹಾಕಿರುವ ಬಿತ್ತಕ್ಕಿ ಬಟ್ಟಲನ್ನು ಹಿಡಿದಿರುತ್ತಾರೆ. ವರನ ಕಡೆಯವರು ಒಂದು ಬುಟ್ಟಿಯಲ್ಲಿ ಅಕ್ಕಿ, ಕಾಯಿ, ಎಲೆಪಟ್ಟಿ, ಗೋವೆಕಾಯಿ ಹಾಕಿ ಜೊತೆಯಲ್ಲಿ ತರುತ್ತಾರೆ.

ವಿಷ್ಣುವಿನ ಪ್ರತಿರೂಪನಾದ ವರನ ಪಾದ ತೊಳೆದು, ಹಾನ ಸುಳಿದು, ಹಣೆಗೆ ತಿಲಕವಿಟ್ಟು, ಕೊರಳಿಗೆ ಮಾಲೆ ಹಾಕಿ ವರನನ್ನು ಸ್ವಾಗತಿಸಲಾಗುತ್ತದೆ. ಇಲ್ಲಿ ಸುಹಾಸಿನಿಯರು ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾರೆ. ಪ್ರತಿಯೊದು ವಿಧಿಗೂ ಬೇರೆ ಬೇರೆ ಹಾಡುಗಳನ್ನು ಕೇಳುವುದೇ ಬಲು ಚೆಂದ. ಇದಕ್ಕೆ ಎದುರುಗೊಳ್ಳುವುದು ಎಂದು ಕರೆಯುತ್ತಾರೆ. ನಂತರ ವಧುವಿನ ತಂದೆ ಅಥವಾ ಮನೆಯ ಹಿರಿಯ ಯಜಮಾನ ಪುರೋಹಿತರನ್ನೊಡಗೂಡಿ ವರನ ಕೈ ಹಿಡಿದು ಬರಮಾಡಿಕೊಂಡು ಮದುವೆ ಮಂಟಪದ ಇದಿರು ತಂದು ಕುಳ್ಳಿರಿಸುತ್ತಾರೆ. ಪುರೋಹಿತರು ಸಭಾ ಪೂಜೆ ಮಾಡುತ್ತಾರೆ, ವಧುವಿನ ತಂದೆ ವರನ ಕಡೆಯವರನ್ನು ಸ್ವಾಗತಿಸಿದ ನಂತರ ವಧುವಿನ ಕಡೆಯ ಹೆಣ್ಣುಮಕ್ಕಳು ಸ್ವಾಗತ ಗೀತೆ ಹಾಡುತ್ತಾರೆ. ವರನನ್ನೂ ವರನ ಕಡೆಯವರನ್ನೂ ಉಪಚರಿಸಲಾಗುತ್ತದೆ. ನಂತರ ಸುಹಾಸಿನಿಯರಿಂದ ಆರತಿ ಮಾಡಲಾಗುತ್ತದೆ. ವರನು ಕನ್ಯೆಯಮನೆಗೆ ಬಂದಾಗ ಅವನಿಗೆ ಉಪಚಾರಾರ್ಥವಾಗಿ ಸೇವಿಸಲು ಹಾಲು, ಹಣ್ಣು ನೀಡಲಾಗುತ್ತದೆ.

ವರಪೂಜೆ: ವರನನ್ನು ಮಂಟಪದಲ್ಲಿ ಕುಳ್ಳಿರಿಸಿ, ವಧುವಿನ ತಂದೆ ತಾಯಿ, ವರನ ಪಾದ ತೊಳೆದು ಹೂವು ಅಕ್ಷತೆ ಹಾಕಿ ಪೂಜೆ ಮಾಡಿ, ಸೇವಿಸಲು ಜೇನು ಮಿಶ್ರಿತ ಮೊಸರನ್ನು ಕೊಡಲಾಗುತ್ತದೆ. ಇದೇ ಮಧುಪರ್ಕ. ಹೊಸ ಬಟ್ಟೆ ಉಡುಗೊರೆ ಕೊಡುತ್ತಾರೆ. ವಾಗ್ದಾನ- ವಧು ಈಗಾಗಲೇ ರೇಷ್ಮೆ ಸೀರೆ ಉಟ್ಟು, ಸರ್ವಾಲಂಕಾರಳಾಗಿ ದೇವರ ಮುಂದೆ ಕುಳಿತಿರುತ್ತಾಳೆ. ಮುಂದೆ ನಡೆಯುವ ಕಾರ್ಯಕ್ಕೆ ಯಾವುದೇ ವಿಘ್ನ ಬಾರದಿರಲೆಂದು ಪ್ರಾರ್ಥಿಸಿ ಗೌರಿ ಪೂಜೆ ಮಾಡುತ್ತಾಳೆ. ವರನ ತಂದೆ ತಾಯಿ ವಧುವಿಗೆ ಫಲ ತಾಂಬೂಲ, ತೊಂಡಿಲು, ಸೀರೆ ಉಡುಗೊರೆ ಕೊಡುತ್ತಾರೆ. ವಧು, ವರನ ತಾಯಿಗೆ ಹಾಗೂ ವಧುವಿನ ಸೋದರತ್ತೆಗೆ ಕುಡಿಬಾಳೆಯಲ್ಲಿ ಅಕ್ಕಿ, ಕಾಯಿ, ಅರಿಸಿನ, ಕುಂಕುಮ, ಬಳೆ, ಪಟ್ಟೆನೂಲು, ಕನ್ನಡಿ, ದಕ್ಷಿಣೆ ಹಾಗೂ ವಾರು ಇಟ್ಟಿರುವ ಬಾಯಿನ ಕೊಟ್ಟು ನಮಸ್ಕಾರ ಮಾಡುತ್ತಾಳೆ. ವಧುವಿಗೆ ಆರತಿ ಬೆಳಗಲಾಗುತ್ತದೆ. ವಧು ಈಗ ಮದುವೆ ಮಂಟಪಕ್ಕೆ ಹೋಗಲು ತಾಯಾರಾಗುತ್ತಾಳೆ.

ವಧು ಕೂಡ ಸೀರೆಯ ಮೇಲ್ಗಡೆ ವೇಷ್ಠಿಯನ್ನು(ಮೇಲು ಹೊದಿಕೆ) ಸೊಂಟಕ್ಕೆ ಸುತ್ತಿ ಎರಡೂ ಭುಜಗಳ ಮೇಲೆ ಬರುವಂತೆ ಧರಿಸುತ್ತಾಳೆ. ವಧುವಿನ ತಾಯಿ ತಲೆಗೆ ತೊಂಡಿಲು ಕಟ್ಟುತ್ತಾಳೆ. ವಧು, ದೇವರಿಗೆ ಮತ್ತು ಹಿರಿಯರಿಗೆ ನಮಸ್ಕರಿಸಿ, ಕೈಯಲ್ಲಿ ಹೂವಿನ ಮಾಲೆ ಹಿಡಿದುಕೊಂಡಿರುತ್ತಾಳೆ. ವಧುವಿನ ಸೋದರಮಾವ,ವಧುವನ್ನು ಕೈಯಲ್ಲಿ ಹೊತ್ತುಕೊಂಡು ಮಂಟಪಕ್ಕೆ ಕರೆತರುತ್ತಾನೆ. ಪುರೋಹಿತರು,ವಧುವಿನ ತಂದೆ ತಾಯಿ ಹಾಗೂ ಬಂಧುಗಳು ಜೊತೆಯಲ್ಲಿ ಇರುತ್ತಾರೆ.

ನಿರೀಕ್ಷೆ: 

ವಧುವಿನ ಸಹೋದರ ಕೊಟ್ಟ ಹೊಸ ಬಟ್ಟೆಯನ್ನು ಧರಿಸಿ ಕೈಯಲ್ಲಿ ಹೂಮಾಲೆ ಹಿಡಿದು ಮಂಟಪದಲ್ಲಿ ವಧುವಿನ ನಿರೀಕ್ಷೆಯಲ್ಲಿ ನಿಂತಿರುತ್ತಾನೆ.

ವಧು ಪೂರ್ವಾಭಿಮುಖವಾಗಿಯೂ, ವರ ಪಶ್ಚಿಮಾಭಿಮುಖವಾಗಿಯೂ ಪರಸ್ಪರ ಅಭಿಮುಖವಾಗಿ ನಿಂತಿರುತ್ತಾರೆ. ಇಬ್ಬರ ನಡುವೆ ಬಿಳಿ ಬಣ್ಣದ ಅಂತಃಪಟ ಹಿಡಿದಿರಲಾಗುತ್ತದೆ.

ಪುರೋಹಿತರು ಸುಮೂರ್ತದಲ್ಲಿ ಗೋತ್ರಪ್ರವರ ಹಾಗೂ ಮಂಗಳಾಷ್ಠಕ ಮಂತ್ರ ಪಠನ ಮಾಡಿದ ಮೇಲೆ ಆ ಅಂತಃಪಟ ತೆಗೆಯಲಾಗುತ್ತದೆ. ವಧು ವರರು ಪರಸ್ಪರ ಒಬ್ಬರನ್ನೊಬ್ಬರು ನೋಡಿ, ವಧು ಮೊದಲು ವರನಿಗೆ ಮಾಲೆ ಹಾಕುತ್ತಾಳೆ. ನಂತರ ವರ ವಧುವಿಗೆ ಮಾಲೆ ಹಾಕುತ್ತಾನೆ. ಎರಡೂ ಕಡೆಯ ಪುರೋಹಿತರು ಹಾಗೂ ಬಂಧು ಮಿತ್ರರು ವಧು ವರರಿಗೆ ಆಶೀರ್ವಾದ ಮಾಡಿ ಅಕ್ಷತೆ ಹಾಕುತ್ತಾರೆ.

ಕನ್ಯಾದಾನ: ದಾನಗಳಲ್ಲಿಯೇ ಶ್ರೇಷ್ಠವಾದ ದಾನ ಕನ್ಯಾದಾನ ಎಂದು ಹೇಳಲಾಗುತ್ತದೆ. ಕನ್ಯಾದಾನಕ್ಕೆ ತಂದೆಯು ಮುಖ್ಯ ಕರ್ತೃವು ಆಗಿರುತ್ತಾನೆ. ಅವನಿಲ್ಲದಿದ್ದರೆ ಕನ್ಯೆಯ ಹತ್ತಿರದ ಸಂಬಂಧಿ ತಂದೆಯ ದಾಯಾದಿ ಹಿರಿಯರು. ಅವರಿಲ್ಲದಿದ್ದರೆ ತಾಯಿಯ ತಂದೆ ಅಥವಾ ಸೋದರಮಾವ ಕನ್ಯಾದಾನ ಮಾಡಬೇಕು ಎಂದು ಹೇಳಲಾಗುತ್ತದೆ. ವಧು ವರರನ್ನು ಮಂಟಪದಲ್ಲಿ ಅಭಿಮುಖವಾಗಿ ಕುಳ್ಳಿರಿಸಿ ವಿಷ್ಣು ರೂಪನಾದ ವರ ಹಾಗೂ ಲಕ್ಷ್ಮಿ ರೂಪಳಾದ ವಧುವಿನ ಪಾದ ತೊಳೆದು ಹೂವು ಅಕ್ಷತೆಯಿಂದ ಪೂಜಿಸಲಾಗುತ್ತದೆ. ವರನ ಕೈ ಮೇಲೆ ವಧುವಿನ ಕೈ ಇರಿಸಿ ಅಂಗೈಯಲ್ಲಿ ಅಕ್ಕಿ, ಕಾಯಿ ಇರಿಸಲಾಗುತ್ತದೆ.

ವಧುವಿನ ತಾಯಿ ತಂದೆ ಅವರ ಕೈ ಮೇಲೆ ಕಲಶದಿಂದ ಮೂರು ಬಾರಿ ಧಾರೆ ನೀರನ್ನು ಬಿಡುತ್ತಾರೆ. ಕರ್ತೃ ಒಂದೊದು ಬಾರಿಗೂ ನಿಂತಲ್ಲೇ ಒಂದು ಪ್ರದಕ್ಷಿಣೆ ಹಾಕುತ್ತಾನೆ. ಪ್ರತಿ ಬಾರಿಗೂ ಆ ಅಕ್ಕಿಯನ್ನು ಪರಸ್ಪರ ಇಬ್ಬರ ತಲೆ ಮೇಲೆ ಹಾಕಲಾಗುತ್ತದೆ. ನಂತರ ವರನು ವಧುವಿನ ಭ್ರೂಮಧ್ಯದಲ್ಲಿ “ಓಂ ಭೂರ್ಭುವಃಸುವಃ” ಎಂದು ದರ್ಭೆಯ ತುದಿಯನ್ನು ವರೆಸಿ ಚೆಲ್ಲಿ ಜಲಸ್ಪರ್ಶಮಾಡುವನು. ಇದು “ಅಕ್ಷತಾರೋಪಣ.” ತಂದೆಯು ನಾನು ಗೌರಿಯಂತಿರುವ ಮಗಳನ್ನು/ಕನ್ಯೆಯನ್ನು ಪ್ರೀತಿಯಿಂದ ಸಾಕಿದ್ದೇನೆ . ಈ ಸಭಾಸದರ ಎದುರಿನಲ್ಲಿ ಕೊಟ್ಟಿದ್ದೇನೆ, ಅನೇಕ ಸಂವತ್ಸರಗಳ ಕಾಲ ಪಾಲಿಸು, ಇವಳಿಂದ ಮಕ್ಕಳು ಮೊಮ್ಮಕ್ಕಳನ್ನು ಪಡೆ,

“ಧರ್ಮೇಚಾರ್ಥೇಚ ಕಾಮೇಚ ನಾತಿ ಚರಿತವ್ಯಾತ್ವಯೇಯಂ” “ಧರ್ಮ ಅರ್ಥ ಕಾಮ(ಬಯಕೆಗಳು) ಇವುಗಳಲ್ಲಿ ಇವಳಿಂದ ಅಗಲಬೇಡ” ಎನ್ನುತ್ತಾನೆ (ವಚನ ಪಡೆಯುವುದು) ಆಗ ವರನು “ನಾತಿ ಚರಾಮಿ” (ಈ ವಿಚಾರಗಳಲ್ಲಿ ಬಿಟ್ಟು ಹೋಗುವುದಿಲ್ಲ) ಎಂದು ಹೇಳುತ್ತಾನೆ. ಕನ್ಯಾದಾನ ಸಿದ್ಧಿಸುವುದಕ್ಕಾಗಿ ಸಾಂಕೇತಿಕವಾಗಿ ಹಣವನ್ನು ಕೊಡುವುದು. ವರನು “ಓಂ ಸ್ವಸ್ತಿ” (ಒಳಿತಾಗಲಿ) ಎನ್ನುತ್ತಾನೆ. ನಂತರ ಕನ್ಯೆಯ ಜೊತೆಗೆ ಭೊಜನಪಾತ್ರೆ, ತರಕಾರಿ, ತೆಂಗಿನ ಗಿಡ, ಹಾಗೂ ಇತರೆ ದಾನಗಳನ್ನು ಕೊಡುವುದು.(ಬಳುವಳಿ) ಅದು ಸ್ತ್ರೀ ಧನ ಅಥವಾ ಸಂಪತ್ತು ಆಗಿರುತ್ತದೆ. ಹೀಗೆ ಕನ್ಯೆಯನ್ನು ದೇವ ಸಾಕ್ಷಿ (ದೈವ ಸಾಕ್ಷಿ), ಅಗ್ನಿಸಾಕಿ (ಹೋಮ ಪೂರ್ವಕ), ಸಭಾ ಸಾಕ್ಷಿಯಾಗಿ ವರನಿಗೆ ಕನ್ಯಾದಾನ ಮಾಡಲಾಗುವುದು.

ಮಂಗಲಸೂತ್ರ ಧಾರಣೆ: ಹರಿವಾಣದಲ್ಲಿ ಎರಡು ಕಾಯಿ, ಎಲೆ ಅಡಿಕೆ,ಅರಿಸಿನ ಕುಂಕುಮ ಮಂಗಲ ಸೂತ್ರ ಇಟ್ಟು ಪೂಜಿಸಿ, ಹಿರಿಯರ ಆಶೀರ್ವಾದ ಪಡೆಯಲು ಮಂಗಲ ಸೂತ್ರ ಮುಟ್ಟಿಸಲಾಗುತ್ತದೆ ವರ, ವಧುವಿನ ಕೊರಳಿಗೆ ಸುಮುಹೂರ್ತದಲ್ಲಿ ಸಮಸ್ತರ ಎದುರಿನಲ್ಲಿ ಮಂಗಲಸೂತ್ರವನ್ನು ಕಟ್ಟುತ್ತಾ ಹೀಗೆ ಹೇಳುತ್ತಾನೆ “ಮಾಂಗಲ್ಯಂತಂತು ನಾನೇನ ಮಮ ಜೀವನ ಹೇತುನ, ಕಂಠೇ ಬದ್ನಾಮಿ ಸುಭಗೇ ತ್ವಂ ಜೀವ ಶರದಾ ಶತಂ”. ನನ್ನ ಜೀವನಕ್ಕೆ ಕಾರಣವಾದ ಈ ಮಂಗಲ ಸೂತ್ರವನ್ನು ನಿನ್ನ ಕುತ್ತಿಗೆಗೆ ಕಟ್ಟುತ್ತೇನೆ. ನೀನು ನೂರು ವರ್ಷ ಬಾಳು. (ಪತಿಯ ಆಶೀರ್ವಾದ ಸೂತ್ರ) ಹಣೆಗೆ ಸಿಂಧೂರ ವಿಡಿಸುತ್ತಾನೆ. ಇಲ್ಲಿ ಈಗ ವಧು ವರರ ವಸ್ತ್ರಗಂಥಿ ಬಂಧನ ಮಾಡಲಾಗುತ್ತದೆ. ವಧು ವರರು ಪರಸ್ಪರ ಮದುವೆಯ ಬಂಧನಕ್ಕೆ ಒಳಗಾದ ಸಂಕೇತ ಎಂದು ಇದರ ಅರ್ಥ. ಇಲ್ಲಿ ವಧುವಿನ ಎಡಗಡೆಯ ಮೇಲು ಹೊದಿಕೆಯ ತುದಿ ಹಾಗೂ ವರನ ಬಲಗಡೆಯ ಮೇಲು ಹೊದಿಕೆಯ ತುದಿ ಸೇರಿಸಿ ಗಂಟು ಹಾಕಲಾಗುತ್ತದೆ. ಹಾಗೆ ವರ ವಧುವಿನ ಬಲಗೈಯನ್ನು ತನ್ನ ಬಲಗೈಯಲ್ಲಿ ಹಿಡಿದುಕೊಳ್ಳುವಂತೆ ಹೇಳಲಾಗುತ್ತದೆ. ಇದು ಪಾಣಿಗ್ರಹಣ. ಪಾಣಿ ಅಂದರೆ ಕೈ ಗ್ರಹಣ ಅಂದರೆ ಪಡೆದುಕೊಳ್ಳುವುದು. ಇಲ್ಲಿ ವರನಿಗೆ ವಧುವನ್ನು ಪಡೆ ಎಂದು ಹೇಳಿ ಕೈ ಜೋಡಿಸುವುದು.

ಸಪ್ತಪದಿ: ಇದು ಮದುವೆಯ ಅತ್ಯಂತ ಮಹತ್ವದ ವಿಧಿಗಳಲ್ಲಿ ಒಂದು. ವಧುವಿನ ಕಾಲಿನಿಂದ ಏಳು ಹೆಜ್ಜೆ ಇಡಿಸುವುದು (ವರನ ಕೈ ಹಿಡಿದು ಏಳುಹೆಜ್ಜೆ ನಡೆಸುವ ವಿಧಿ. ಪ್ರತಿಸಾರಿ ಬಲಗಾಲನ್ನು ಮುಂದಿಡಬೇಕು.)

1.ಏಕಮಿಷೇ ವಿಷ್ಣುಸ್ತ್ವಾ ನ್ವೇತು|| ಮೊದಲ ಹೆಜ್ಜೆ ಅನ್ನಕ್ಕಾಗಿ

2.ದ್ವೇಊರ್ಜೇ ವಿಷ್ಣುಸ್ತ್ವಾ ನ್ವೇತು|| ಎರಡನಯದು ಬಲ/ಶಕ್ತಿಗಾಗಿ

3.ತ್ರೀಣಿ ವೃತಾಯ ವಿಷ್ಣುಸ್ತ್ವಾ ನ್ವೇತು||

ಮೂರನೆಯದು ವ್ರತಕ್ಕಾಗಿ

4.ಚತ್ವಾರಿ ಮಯೋಭವಾಯ ವಿಷ್ಣುಸ್ತ್ವಾ ನ್ವೇತು|| ನಾಲ್ಕನೆಯದು ಸುಖಕ್ಕಾಗಿ

5. ಆರನೆಯದುಪಶುಭ್ಯೋ ವಿಷ್ಣುಸ್ತ್ವಾ ನ್ವೇತು|| ಐದನೆಯದು ಪಶುಸಂಪತ್ತಿಗಾಗಿ

6. ಷಡೃತುಭ್ಯೋ ವಿಷ್ಣುಸ್ತ್ವಾ ನ್ವೇತು|| ಆರನೆಯದು ಋತುಗಳಿಗಾಗಿ (ಆಯುಷ್ಯ)

7.ಸಪ್ತ ಸಪ್ತಭ್ಯೋ ಹೋತ್ರಾಭ್ಯೋ ವಿಷ್ಣುಸ್ತ್ವಾ ನ್ವೇತು|| ಏಳನೆಯ ಹೆಜ್ಜೆ ಯಜ್ಞದ ಹೋತೃಗಳಿಗೆ -(ಋತ್ವಿಕ್ಕುಗಳು, ಋಷಿಗಳು)ವಿಷ್ಣು ನಿನ್ನನ್ನು ಅನುಸರಿಸಿ ಬರಲಿ ಎಂಬುದೇ ಆಗಿದೆ. ಏಳು ಹೆಜ್ಜೆಗಳನ್ನು ಜೊತೆಗೆ ಇಟ್ಟಿದ್ದರಿಂದ ನೀನು ಸಖಿಯಾಗು ಎಂದು ವರ, ಸಖಿಯಾದೆ ಎಂದು ವಧು ಹೇಳುತ್ತಾಳೆ. ನಾನು ನಿನ್ನಿಂದ ಅಗಲುವುದು ಬೇಡ ನೀನೂ ಅಗಲಬೇಡ ಒಟ್ಟಿಗೆ ಇರೋಣ. ನಮ್ಮಿಬ್ಬರ ಅಪೇಕ್ಷೆಗಳು ಒಂದೇ ಆಗಲಿ. ಪ್ರೀತಿಸುತ್ತಾ ಒಟ್ಟಿಗೇ ಜೀವಿಸೋಣ ಎಂದು ಒಬ್ಬರಿಗೊಬ್ಬರು ಬದ್ಧರಾಗುತ್ತಾರೆ.

ನಂತರ ವಧು ವರರಿಗೆ ಆರತಿ ಬೆಳಗಿ ದೇವರ ಮುಂದೆ ಕರೆತರಲು ಅವರು ದೇವರಿಗೆ, ಗುರು ಹಿರಿಯರಿಗೆ ನಮಸ್ಕರಿಸುತ್ತಾರೆ. ನಂತರ ಮುಂದಿನ ಕಾರ್ಯಕ್ರಮ.

ವಿವಾಹ ಹೋಮ: 

ಇಲ್ಲಿ ಅಗ್ನಿಗೆ ಮಂತ್ರ ಪೂರ್ವಕ ಆಹುತಿಗಳನ್ನು ಹಾಕುವುದು. ಪಿತೃಕುಲವನ್ನು ಬಿಟ್ಟು ಗೃಹಣಿಯಾಗಿ ಪತಿಯಡನೆ ಹೋಗಲು, ಸಂತಾನ ಪ್ರಾಪ್ತಿ ಹಾಗೂ ಇವಳು ಪುತ್ರ ಶೋಕದಿಂದ ಅಳದಿರುವಂತೆ ಮಾಡಲಿ ಎಂದು, ದೀರ್ಘಾಯುಗಳಾಗುವಂತೆ ಮಾಡಲಿ ಅದಕ್ಕೆ ವರಣನು ಅನುಮತಿಸಲಿ, ಅಗ್ನಿಯು ಇವಳನ್ನು ರಕ್ಷಿಸಿ ಇವಳ ಮಕ್ಕಳನ್ನೂ ರಕ್ಷಿಸಲಿ. ಇವಳು ಜೀವಂತ ಮಕ್ಕಳನ್ನು ಹೆರುವ ತಾಯಾಗಲಿ ಎಂದು ಪ್ರಾರ್ಥಿಸಿ ಆಹುತಿ ಹಾಕಲಾಗುತ್ತದೆ. ಕಲ್ಲಿನ ಮೇಲೆ ಒಂದು ಕಾಲಿಟ್ಟು, ಸ್ಥಿರಳಾಗು ಶತ್ರುಗಳನ್ನು ನಾಶಮಾಡು ಎಂದು ಅಶ್ಮಾಸ್ಥಾಪನೆ ಮಾಡಲಾಗುತ್ತದೆ. ಅರಳಿನಿಂದ ಹೋಮ ಮಾಡಲಾಗುತ್ತದೆ.(ಭತ್ತವನ್ನು ಹುರಿದುಮಾಡಿದ ಅರಳು) ವಧುವನ ಕೈಗೆ ಅವಳ ಸೋದರ ಅರಳು ತುಂಬಿದಾಗ ನನ್ನ ಪತಿಯು ದೀರ್ಘಾಯುಷ್ಯಹೊಂದಿ ನೂರು ಶರತ್ಕಾಲ ಬಾಳಲಿ ಎಂದು ಪ್ರಾರ್ಥನೆ ಮಾಡುತ್ತಾಳೆ.

ಪತಿಯು ಅಗ್ನಿಗೆ ಪ್ರಾರ್ಥನೆ ಮಾಡುತ್ತಾನೆ ನನಗೆ ಪತ್ನಿಯಿಂದ ಸಂತಾನ ಭಾಗ್ಯವನ್ನೂ ಕೊಡು, ದೀರ್ಘಾಯುಷ್ಯನ್ನು ಕೊಡು ಎಂದು ಪ್ರಾರ್ಥಿಸಿ ಅಗ್ನಿಗೆ ಅರಳನ್ನು ಹಾಕಲಾಗುತ್ತದೆ. ದಂಪತಿಗಳನ್ನು ನೀನು ಸಮಾನ ಮನಸ್ಕರನ್ನಾಗಿ ಮಾಡು ಎಂದು ಬೇಡಿಕೊಳ್ಳಲಾಗುತ್ತದೆ. ಇಲ್ಲಿ ವಧುವಿನಿಂದ ಐದು ಸುಮಂಗಲೆಯರಿಗೆ ಬಾಯಿನ ಕೊಡಿಸಲಾಗುತ್ತದೆ.

ಅರುಂಧತಿ ದರ್ಶನ: ವಧು ವರರಿಗೆ ಅರುಂಧತಿ ದರ್ಶನವು ಸಪ್ತ ಋಷಿ ಮಂಡಲ ಮತ್ತು ವಶಿಷ್ಠ ನಕ್ಷತ್ರದ ಕೆಳಗಿರುವ ಸಣ್ಣ ನಕ್ಷತ್ರ ಅರುಂಧತಿಯ ಪ್ರದರ್ಶನವಾಗಿದೆ. (ಕಶ್ಯಪ, ವಸಿಷ್ಠ, ಅತ್ರಿ, ವಿಶ್ವಾಮಿತ್ರ, ಜಮದಗ್ನಿ, ಭರದ್ವಾಜ ಮತ್ತು ಗೌತಮ ಮಹರ್ಷಿಗಳನ್ನು ಸಪ್ತರ್ಷಿಗಳೆಂದು ಕರೆಯಲಾಗುತ್ತದೆ.)

ಈ ಏಳು ಋಷಿಗಳು ಮತ್ತು ಅವರ ಕುಟುಂಬಗಳು ಹಿಂದೂಗಳ ವೈದಿಕ ಸಿದ್ಧಾಂತದ ಮೂಲಗಳಾಗಿವೆ. ಈ ಮಹಾನ್ ಋಷಿಗಳ ಸ್ಮರಣಾರ್ಥವಾಗಿ ನಕ್ಷತ್ರಪುಂಜದ ಏಳು ನಕ್ಷತ್ರಗಳಿಗೆ ಅವರ ಹೆಸರನ್ನು ಇಡಲಾಗಿದೆ. ದಂಪತಿಗಳು ನಿರ್ವಹಿಸಬೇಕಾದ ವಿಶ್ವಾತ್ಮಕ ಜವಾಬ್ದಾರಿಗಳನ್ನು ನೆನಪಿಸುವುದೇ ಈ ಆಚರಣೆಯ ಮಹತ್ವ. ಇದು ಗಂಡ ಮತ್ತು ಹೆಂಡತಿಯ ನಡುವಿನ ಆದರ್ಶ ಸಂಬಂಧವನ್ನು ಸಂಕೇತಿಸುತ್ತದೆ. ಧೃವ ನಕ್ಷತ್ರದ ಹಾಗೆ ದಂಪತಿಗಳ ಜೀವನ ಸ್ಥಿರವಾಗಿರಲಿ ಹಾಗೂ ಅರುಂಧತಿ ದೇವಿಯ ಹಾಗೆ ಪಾತಿವ್ರತ್ಯವನ್ನು ಕಾಪಾಡಿಕೊಂಡು ಬರಲಿ ಎಂಬುದಾಗಿದೆ. ಅರುಂಧತಿ ದರ್ಶನದ ನಂತರ ವಧು ವರರಿಗೆ ಆರತಿ ಬೆಳಗಲಾಗುತ್ತದೆ. ಇದಾದ ಮೇಲೆ ಎರಡೂ ಕಡೆಯ ಪುರೋಹಿತರಿಗೆ ಫಲ ತಾಂಬೂಲ ಕೊಡಲಾಗುತ್ತದೆ ಹಾಗೂ ಅವರಿಂದ ಆಶೀರ್ವಾದ ಪಡೆಯಲಾಗುತ್ತದೆ. ( ಈಗ ಅನುಕೂಲಕ್ಕೆ ತಕ್ಕಂತೆ ಮದುವೆ ಕಾರ್ಯಕ್ರಮ ಮುಗಿದ ಬಳಿಕವೇ ಪುರೋಹಿತರಿಗೆ ಫಲ ತಾಂಬೂಲ ಕೊಡಲಾಗುತ್ತದೆ) ಆಮೇಲೆ ಭೋಜನಕೂಟ. ಅದರ ನಂತರ ಅರಿಸಿನೆಣ್ಣೆ ಕಾರ್ಯಕ್ರಮ– ವಧುವರರನ್ನು ಮಂಟಪದಲ್ಲಿ ಕುಳ್ಳಿರಿಸಿ ವರ ಹಾಗೂ ವಧುವಿನ ಕಡೆಯ ಸುಹಾಸಿನಿಯರು ವಧು ವರರ ಕೈ ಹಾಗೂ ಕೆನ್ನೆಗೆ ಎಣ್ಣೆಯಲ್ಲಿ ಕಲಸಿದ ಅರಿಸಿನ ಹಚ್ಚುತ್ತಾರೆ. ಅವರಿಂದ ಒಗಟನ್ನು ಪತಿಯ ಹೆಸರನ್ನೂ ಹೇಳಿಸಲಾಗುತ್ತದೆ. ಇದು ವಿನೋದದಿಂದ ಕೂಡಿರುತ್ತದೆ. ಕೊನೆಯಲ್ಲಿ ವಧು, ವರನ ಕೈ ಹಾಗೂ ಕೆನ್ನೆಗೆ ಅರಿಸಿನ ಹಚ್ಚುತ್ತಾಳೆ. ಅವಳಿಂದ ಹಾಡು, ಒಗಟು ಹೇಳಿಸಿ ವರನ ಹೆಸರನ್ನೂ ಹೇಳಿಸಲಾಗುತ್ತದೆ. ನಂತರ ವರ ವಧುವಿಗೆ ಅರಿಸಿನ ಹಚ್ಚಿ ಒಗಟು ಹೇಳಿ ವಧುವಿನ ಹೆಸರನ್ನು ಹೇಳುತ್ತಾನೆ. ಆಮೇಲೆ ವಧು ವರರಿಗೆ ಆರತಿ ಬೆಳಗಲಾಗುತ್ತದೆ. ಮೊದಲು ಈ ಕಾರ್ಯಕ್ರಮವನ್ನು ಮರುದಿನ ಬೆಳಗ್ಗೆ ಸ್ನಾನದ ಮೊದಲು ಮಾಡಿಸಲಾಗುತ್ತಿತ್ತು. ಈಗ ಕಾಲಕ್ಕೆ ಅನುಗುಣವಾಗಿ ಕಾರ್ಯಕ್ರಮಗಳಲ್ಲೂ ವ್ಯತ್ಯಾಸ ಕಾಣಬಹುದಾಗಿದೆ. ಸಾಮಾನ್ಯವಾಗಿ ಇಲ್ಲಿಗೆ ಮದುವೆ ದಿನದ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

 

ಇಂದು ವರನ ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಅಂಗಳದಲ್ಲಿ ರಂಗವಲ್ಲಿ ಹಾಕಿ ನವ ವಧು ವರನ ಸ್ವಾಗತಕ್ಕೆ ಎಲ್ಲ ಸಿದ್ಧತೆ ನಡೆದಿರುತ್ತದೆ. ವಧು ವರನ ಜೊತೆ ವಧುವಿನ ತಂದೆ ತಾಯಿ ಹಾಗೂ ಸಂಬಂಧಿಗಳು ವರನ ಮನೆಗೆ ಬರುತ್ತಾರೆ. ವಧು ವರರನ್ನು ತೋರಣದ ಎದುರು ನಿಲ್ಲಿಸಿ ವರನ ತಾಯಿ ಹಾನ ಸುಳಿದು, ಪಾದ ತೊಳೆಸಿ, ವರನಿಗೆ ತಿಲಕವಿಡಿಸಿ, ವಧುವಿಗೆ ಹಳದಿ ಕುಂಕುಮ ವಿರಿಸಿ, ತಲೆಗೆ ಹೂವು ಮುಡಿಸಿ, ಉಡುಗೊರೆ ಕೊಟ್ಟು ಸ್ವಾಗತಿಸುತ್ತಾಳೆ. ಸುಹಾಸಿನಿಯರು ಎದುರುಗೊಳ್ಳುವ ಹಾಡು ಹಾಡುತ್ತ ವಧು ವರರನ್ನು ಎದುರುಗೊಳ್ಳುತ್ತಾರೆ.

ಆಮೇಲೆ ವರನ ತಂದೆ ಪುರೋಹಿತರೊಡಗೂಡಿ ವಧು ವರನ ಕೈ ಹಿಡಿದು ಕರೆದುಕೊಂಡು ಬಂದು ಕುಳ್ಳಿರಿಸಿ ಅತಿಥಿಗಳನ್ನು ಸ್ವಾಗತಿಸಿ (ಇಲ್ಲೂ ಸ್ವಾಗತಗೀತೆ ಹಾಡಲಾಗುತ್ತದೆ) ಸತ್ಕಾರ, ಉಪಚಾರ ಮಾಡುತ್ತಾರೆ. ಪುರೋಹಿತರು ಸಭಾ ಪೂಜೆ ಮಾಡಿ ವಧು ವರರನ್ನು ಹೊಸ್ತಿಲು ಪೂಜೆಗೆ ಕರೆದೊಯ್ಯುತ್ತಾರೆ.

ಗೃಹಪ್ರವೇಶ ( ವಧುಪ್ರವೇಶ )- ವಧು ವರರು ಹೊಸ್ತಿಲ ಎದುರು ಕುಳಿತು ಹೊಸ್ತಿಲು ಪೂಜೆ ಮಾಡುತ್ತಾರೆ. ವಧುವಿಗೆ ಬಳುವಳಿಯಾಗಿ ಕೊಟ್ಟ ಎಲ್ಲ ವಸ್ತುಗಳನ್ನೂ ಇಲ್ಲಿ ವರನ ಮನೆಯವರಿಗೆ ಒಪ್ಪಿಸಲಾಗುತ್ತದೆ. ವಧುವಿನ ತಾಯಿ ಹಾಗೂ ಸೋದರತ್ತೆ ವಧುವನ್ನು ಹರಸುತ್ತ ಸೀರೆಯ ಸೆರಗಿಗೆ ಕಾಯಿ, ದುಡ್ಡು, ವಾರು, ಕಡಲೆ ಹಾಕಿ ಅವಳ ಮಡಿಲು ತುಂಬುತ್ತಾರೆ. ಹೊಸ್ತಿಲ ಎದುರು ಕುಡಿ ಬಾಳೆಯ ಮೇಲೆ ಮಾವಿನ ಎಲೆಯಿಂದ ಸಿಂಗರಿಸಿದ ಸಿದ್ದೆಯಲ್ಲಿ ಅಕ್ಕಿ ತುಂಬಿ ಇಟ್ಟಿರುತ್ತಾರೆ.

ಈಗ ಸುಮೂರ್ತದಲ್ಲಿ ವಧು ಬಲಗಾಲು ಮುಂದಿಟ್ಟು ಹೊಸ್ತಿಲನ್ನು ಪ್ರವೇಶಿಸಿ ಬಲಗಾಲಿಂದ ಸಿದ್ದೆಯನ್ನು ಬೀಳಿಸಿ ಗೃಹ ಪ್ರವೇಶ ಮಾಡುತ್ತಾಳೆ. ಮಡಿಲಲ್ಲಿರುವ ಕಡಲೆ ಬೀರುತ್ತ ದೇವರ ಮುಂದೆ ಹೋಗಿ ದೇವರಿಗೆ, ಗುರುಹಿರಿಯರಿಗೆ ನಮಸ್ಕರಿಸುತ್ತಾರೆ. ಸುಹಾಸಿನಿಯರು ಇವರಿಗೆ ಆರತಿ ಬೆಳಗುತ್ತಾರೆ. ಸೊಸೆ ಮನೆಗೆ ಬಂದ ಸಂತೋಷಕ್ಕಾಗಿ ವರನ ತಾಯಿ ಹಾಗೂ ವರನ ಕಡೆಯ ಹಿರಿಯರು ವಧುವನ್ನು ತನ್ನ ಮಡಿಲಲ್ಲಿ ಕುಳ್ಳಿರಿಸಿಕೊಂಡು ವಧುವಿಗೆ ಸಿಹಿ ತಿನ್ನಿಸುತ್ತಾರೆ ಹಾಗೂ ಉಡುಗೊರೆ ನೀಡುವ ಸಂಪ್ರದಾಯ ಇದೆ. ಸೊಸೆ ಮನೆಗೆ ಬಂದ ಶುಭ ಸಂಕೇತವಾಗಿ ಚಟ್ಟು ಹೊಯ್ಯುವ ಕಾರ್ಯಕ್ರಮ ಮಾಡಿಸಲಾಗುತ್ತದೆ. ಅಂದರೆ ನೀರಿಗೆ ಶೇಡಿ ಕೆಮ್ಮಣ್ಣು ಅಥವಾ ಹಳದಿ ಕುಂಕುಮ ಹಾಕಿ ಮಾಡಿದ ಮಿಶ್ರಣದಲ್ಲಿ ವಧುವಿನ ಅಂಗೈಯನ್ನು ಅದ್ದಿ ಅಂಗೈ ಅಚ್ಚನ್ನು ದೇವರ ಮುಂದೆ ಗೋಡೆಗೆ ಒತ್ತಿಸಲಾಗುತ್ತದೆ.

ಗೃಹಪ್ರವೇಶದ ನಂತರ ಗರ್ಭದಾನ ಹೋಮ ಮಾಡಲಾಗುತ್ತದೆ. ಒಳ್ಳೆಯ ಸಂತಾನಪ್ರಾಪ್ತಿಗಾಗಿ ಮಾಡುವ ಹೋಮ.

ಅಮೇಲೆ ಆರತಕ್ಷತೆ ಮಾಡಲಾಗುತ್ತದೆ. ವಧು ವರರ ಬಂಧುಗಳು ಉಡುಗೊರೆ ನೀಡಿ ಅಕ್ಷತೆ ಹಾಕಿ ನವದಂಪತಿಯರನ್ನು ಆಶೀರ್ವದಿಸುತ್ತಾರೆ. ( ಇಲ್ಲಿ ಗಮನಿಸ ಬೇಕಾದ ವಿಷಯ ಎಂದರೆ ಮದುವೆಯ ದಿನವೇ ಗೋಧೂಳಿ ಮುಹೂರ್ತ ಅಂದರೆ ಮುಸ್ಸಂಜೆಯ ಮುಹೂರ್ತದಲ್ಲೂ ಗೃಹಪ್ರವೇಶ ಮಾಡುವ ಪದ್ಧತಿ ಕೂಡ ಇದೆ. ಕೆಲವೊಮ್ಮೆ ಅಪರಾಹ್ನದಲ್ಲೂ ಗೃಹಪ್ರವೇಶ ಮಾಡಲಾಗುತ್ತದೆ.)

ಕನ್ಯಾ ಸಮರ್ಪಣೆಮದುವೆಯ ದಿನ ಕನ್ಯಾದಾನ ಮಾಡಲಾಗಿದೆ. ಈಗ ಕನ್ಯೆ ಅಂದರೆ ವಧುವನ್ನು ಅವಳ ತಂದೆ ತಾಯಿ ಹಾಗೂ ಬಳಗದವರು ವರನಿಗೆ, ವರನ ತಂದೆ ತಾಯಿ ಹಾಗೂ ಬಂಧು ಬಳಗದವರಿಗೆ ಸಮರ್ಪಿಸುವ ಕಾರ್ಯಕ್ರಮ.

ಪುರೋಹಿತರು ಇಲ್ಲಿ ಲಕ್ಷ್ಮಿ ನಾರಾಯಣರ ಸ್ವಯಂವರದ ಕಥೆ ಹೇಳುವ ಮೂಲಕ ವಧು ವರರು ಅವರಂತೆ ಅನ್ಯೋನ್ಯವಾಗಿ ಬಾಳಿ ಎಂದು ಹರಸುತ್ತಾರೆ. ವಧುವಿನ ಅಂಗೈಯನ್ನು ವರನ ಅಂಗೈ ಮೇಲಿಟ್ಟು ವಧುವಿನ ತಂದೆ ತಾಯಿ ವರನಿಗೆ ಹಾಗೂ ವರನ ತಂದೆ ತಾಯಿಯರಲ್ಲಿ ನಮ್ಮ ಮುದ್ದಿನ ಮಗಳನ್ನು ಪ್ರೀತಿಯಿಂದ ಸಾಕಿ ಸಲಹಿದ್ದೇವೆ. ನಮ್ಮ ಮನೆಯ ಮಗಳು ನಿಮಗೆ ಸೊಸೆಯಾಗಿ ಬಂದಿದ್ದಾಳೆ. ಇವಳನ್ನು ನಿಮ್ಮ ಮಗಳಂತೆ ನೋಡಿಕೊಳ್ಳಿ. ಇವಳಿಂದ ಏನಾದರೂ ತಪ್ಪಾದಲ್ಲಿ ಕ್ಷಮಿಸಿ ಎಂದು ಹೇಳಿ ಸಭಾಸದರ ಸಮ್ಮುಖದಲ್ಲಿ ಕನ್ಯೆಯನ್ನು ಒಪ್ಪಿಸುತ್ತಾರೆ. ಇದು ತುಂಬಾ ಹೃದಯಸ್ಪರ್ಶಿ ಸನ್ನಿವೇಶ. ಈಗ ವಧು ತನ್ನ ಗೋತ್ರವನ್ನು ಬಿಟ್ಟು ಔಪಚಾರಿಕವಾಗಿ ಗಂಡನಮನೆಯ ಗೋತ್ರಕ್ಕೆ ಸೇರಿದಂತಾಗುತ್ತದೆ. ಕನ್ಯಾ ಸಮರ್ಪಣೆಯ ನಂತರ ಮತ್ತೆ ಪುರೋಹಿತರಿಗೆ ಫಲ ತಾಂಬೂಲ ಕೊಟ್ಟು ಅವರಿಂದ ಆಶೀರ್ವಾದ ಪಡೆಯುವುದು. ಆಮೇಲೆ ನವ ದಂಪತಿಗೆ ಆರತಿ ಬೆಳಗಿ. ಅವರನ್ನು ದೇವರ ಮುಂದೆ ಕರೆದೊಯ್ಯಲಾಗುತ್ತದೆ. ಅವರು ದೇವರಿಗೆ, ತಂದೆ ತಾಯಿಯರಿಗೆ, ಹಿರಿಯರಿಗೆ ಕೈ ಮುಗಿದು ಎಲ್ಲರ ಆಶೀರ್ವಾದ ಪಡೆಯುತ್ತಾರೆ. ನಂತರ ಭೋಜನಕೂಟ.

ಓಕುಳಿ ಆಟ ಇದು ಕೂಡ ವಿನೋದದಿಂದ ಕೂಡಿರುತ್ತದೆ. ಬಂಧು ಬಳಗದವರು ಸುತ್ತಲೂ ಕುಳಿತು ವಧು ವರರನ್ನು ಪರಸ್ಪರ ಅಭಿಮುಖವಾಗಿ ಕುಳ್ಳಿರಿಸಿ ಮಧ್ಯದಲ್ಲಿ ಒಂದು ಅಗಲವಾದ ಪಾತ್ರೆಯಲ್ಲಿ ಹಳದಿ ಕುಂಕುಮ ಹಾಕಿದ ನೀರನ್ನು ತುಂಬಿಡಲಾಗುತ್ತದೆ. ಅದಕ್ಕೆ ಒಂದು ಉಂಗುರ ಹಾಕಲಾಗುತ್ತದೆ. ನೀರಿನಲ್ಲಿ ಕೈ ಹಾಕಿ ಆ ಉಂಗುರವನ್ನು ಹೊರ ತೆಗೆಯಲು ವಧು ವರರಿಗೆ ಹೇಳಲಾಗುತ್ತದೆ. ಹೀಗೆ ಮೂರು ಬಾರಿ ಮಾಡಲಾಗುತ್ತದೆ. ಯಾರು ಹೆಚ್ಚು ಬಾರಿ ಹೊರ ತೆಗೆಯುತ್ತಾರೋ ಅವರು ಗೆಲ್ಲುತ್ತಾರೆ. ಇದು ಕೇವಲ ಮನೋರಂಜನೆಗಾಗಿ ಇರುವ ಕಾರ್ಯಕ್ರಮ. ಇದೇ ನೀರನ್ನು ವಧು ವರರು ಪರಸ್ಪರ ಒಬ್ಬರ ಮೇಲೊಬ್ಬರು ಹಾಕಿ ಓಕುಳಿ ಆಟ ಆಡುತ್ತಾರೆ. ಇದನ್ನು ಸಾಮಾನ್ಯವಾಗಿ ಬೆಳಗಿನ ಸಮಯದಲ್ಲಿ ಮಾಡಲಾಗುತ್ತದೆ.

ಗೃಹಪ್ರವೇಶದ ದಿನ ಸಂಜೆ ಶೋಬನ ಕಾರ್ಯಕ್ರಮ ಇರುತ್ತದೆ. ಇದು ವಧು ವರರ ಮೊದಲನೇ ರಾತ್ರಿ. ಈ ದಿನ ರಾತ್ರಿ ಊಟದ ನಂತರ ಎಲೆ ಸಾಕುವ ಕಾರ್ಯಕ್ರಮ ಮಾಡಿಸುತ್ತಾರೆ. ವಧು ವರರ ಎದುರು ವೀಳ್ಯದೆಲೆಗಳನ್ನು ಹರಡಿ ಇಟ್ಟಿರುತ್ತಾರೆ. ಅವರಿಬ್ಬರಲ್ಲಿ ಎಲೆ ಜೋಡಿಸುವ ಸ್ಪರ್ಧೆ ಮಾಡಿಸಲಾಗುತ್ತದೆ. ಮೂರು ಬಾರಿ ಜೋಡಿಸಬೇಕು. ಪ್ರತಿ ಬಾರಿ ಜೋಡಿಸಿದ ಎಲೆಗಳನ್ನು ಎಣಿಕೆ ಮಾಡಲಾಗುತ್ತದೆ. ಹೆಚ್ಚು ಎಲೆಗಳನ್ನು ಜೋಡಿಸಿದವರು ಗೆದ್ದಂತೆ. ಇದೂ ಕೂಡ ವಿನೋದಕ್ಕಾಗಿ ಮಾಡುವ ಚಡಂಗ. ಜೋಡಿಸಿದ ನಂತರ ವಧು ವರನಿಗೂ, ವರ ವಧುವಿಗೂ ಕವಳ ಮಾಡಿಕೊಡುತ್ತಾರೆ. ನಂತರ ಹಾಸಿಗೆ ತಡೆಯುವ ಚಡಂಗ. ವಧುವಿನ ಅಕ್ಕ ತಂಗಿಯರು ಅಥವಾ ವಧುವಿನ ಅತ್ತೆ, ನವ ವಧು ವರರಿಗಾಗಿ ಸಿಂಗರಿಸಿದ ಮಲಗುವ ಕೋಣೆಯನ್ನು ಪ್ರವೇಶಿಸಲು ಬಂದ ವರನನ್ನು ಬಾಗಿಲಲ್ಲೇ ನಿಂತು ಒಳಗೆ ಪ್ರವೇಶಿಸದಂತೆ ತಡೆಯುತ್ತಾರೆ. ಹಾಗೂ ವರನನ್ನು ಸುಂಕ ಕೊಟ್ಟರೆ ಒಳಗೆ ಬಿಡುವುದಾಗಿ ಹೇಳುತ್ತಾರೆ. ವರ ಅವರಿಗೆ ಉಡುಗೊರೆ ಕೊಡುತ್ತಾನೆ. ನಂತರ ಅವನಿಗೆ ಪ್ರವೇಶ. ವಧು ಹಾಲು ತುಂಬಿದ ಲೋಟದೊಡನೆ ಬಂದು ವರನಿಗೆ ಹಾಲು ಕುಡಿಯಲು ಕೊಟ್ಟು ಅರ್ಧ ಕುಡಿದು ಇನ್ನರ್ಧ ಹಾಲನ್ನು ತನಗೆ ಕೊಡುವಂತೆ ಹೇಳಿ ತಾನು ಅದನ್ನ ಕುಡಿಯುತ್ತಾಳೆ.

ವಧು ಮರುದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಮನೆ ಮುಂದೆ ಸಾರಿಸಿ ರಂಗವಲ್ಲಿ ಹಾಕುತ್ತಾಳೆ. ನಂತರ ಅವಳಿಂದ ತರಕಾರಿ ಹೆಚ್ಚಿಸಿ ಅಡುಗೆ ಮಾಡಿಸುವ ಶಾಸ್ತ್ರ ಮಾಡಿಸಲಾಗುತ್ತದೆ. ಹಾಗೂ ನವ ವಧು ವರರಿಂದ ಸತ್ಯನಾರಾಯಣ ಪೂಜೆ ಮಾಡಿಸಲಾಗುತ್ತದೆ. ಈ ಮೂಲಕ ಮಂಗಲಕಾರ್ಯ ಸಾಂಗವಾಗಿ ನೆರವೇರಿದ್ದಕ್ಕೆ ದೇವರನ್ನು ಇನ್ನೊಮ್ಮೆ ಸ್ಮರಿಸಿ ಧನ್ಯವಾದವನ್ನು ಅರ್ಪಿಸಲಾಗುತ್ತದೆ.

ಮರುದಿನ ಮದುವೆ ಮಂಟಪಕ್ಕೆ ಕಾಯಿ ಒಡೆದು ಮಂಟಪ ಉದ್ವಾಸನೆ ಮಾಡಲಾಗುತ್ತದೆ. ಇಲ್ಲಿಗೆ ಹವ್ಯಕ ಮದುವೆಯ ಕಾರ್ಯಕ್ರಮ ಸಂಪನ್ನವಾಗುತ್ತದೆ.

ದಯವಿಟ್ಟು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕೆಳಗೆ ಕಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ. ಧನ್ಯವಾದಗಳು. 🙏🙏

 

 

 

ಮಮತಾ ಹೆಗಡೆ

ನೊಯಿಡಾ

 

(ಕೇವಲ ಬಲ್ಲವರಿಂದ ಕೇಳಿ, ನೋಡಿ, ಕೆಲವನ್ನು ಮಾಡಿ ತಿಳಿದು, ನಮ್ಮ ಸಂಪ್ರದಾಯದ ಕುರಿತು ಮಾಹಿತಿ ಸಂಗ್ರಹಿಸಿ ತುಂಬಾ ಸಂಕ್ಷಿಪ್ತವಾಗಿ ಬರೆದಿದ್ದೇನೆ. ವಿವರವಾಗಿ ಬರೆದರೆ ಒಂದೊಂದು ವಿಧಿಯನ್ನೂ ಒಂದೊಂದು ಪುಸ್ತಕವಾಗುವಷ್ಟು ಬರೆಯಬಹುದೆನೋ ! ಇಲ್ಲಿ ನನ್ನ ಉದ್ದೇಶ ಇಷ್ಟೇ, ನಮ್ಮ ಹವ್ಯಕ ಮದುವೆ ಸಂಪ್ರದಾಯದ ಮೂಲಕ ಅದರ ಹಿಂದಿರುವ ಮೂಲ ಅರ್ಥದ ಕುರಿತು ಎಲ್ಲರಲ್ಲಿ ಹಂಚಿಕೊಳ್ಳುವುದೇ ಆಗಿದೆ.)

6 thoughts on “ಮದುವೆ ಸಂಪ್ರದಾಯಗಳು”

  1. ಸವಿತಾ ಎಸ್ ಹೆಗಡೆ

    ಶ್ರೀಮತಿ ಮಮತಾ ನರಸಿಂಹ ಹೆಗಡೆಯವರೇ,
    ಸನಾತನ ಹವ್ಯಕ ಸಂಪ್ರದಾಯದ
    ಮದುವೆಯ ಕುರಿತ ನಿಮ್ಮ ಲೇಖನ ಅತ್ಯಂತ ಚೆನ್ನಾಗಿ
    ಮೂಡಿಬಂದಿದೆ. ನಮ್ಮ ಹವ್ಯಕ ವಿವಾಹ ಪದ್ದತಿಯ ಹಲವಾರು ಸಂಗತಿಗಳು, ವಿವರಗಳು ಹಾಗೂ ರೀತಿ- ರಿವಾಜುಗಳನ್ನು ಒಳ್ಳೆಯ ಭಾಷೆಯಲ್ಲಿ ಚೆಂದವಾಗಿ ಬರೆದಿದ್ದೀರಿ. ಇದು ಹವ್ಯಕ ವಿವಾಹ ಪದ್ದತಿಯನ್ನು ದಾಖಲಾತಿ ಮಾಡುವ ಒಂದು ಕೈಂಕಯ೯ವಾಗಿದೆ.
    ನಿಮ್ಮಿಂದ ಇಂತಹ ಇನ್ನೂ ಹಲವು ಲೇಖನಗಳು ಬರಲಿ.
    ಅಭಿನಂದನೆಗಳು ಮಮತಾ!💐💐💐
    ಸವಿತಾ ಎಸ್ ಹೆಗಡೆ ಗೌರಿಬಣ್ಣಿಗೆ ಬೆಂಗಳೂರು

  2. Dear Mamatha ji,

    Namasthe!

    Havyaka marriage detailed description came out very well. Continue writing more on these simple rituals. Such as vadhu pravesha rituals, upanayana, etc.

    Also, remember it was only few years ego that marriage used to happen at night time, which was beautiful too, though it is very rare these days!

  3. Gayathri Hegde

    ಶ್ರೀಮತಿ ಮಮತಾ ಹೆಗಡೆಯವರ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹವ್ಯಕರ ಮದುವೆ ಸಂಪ್ರದಾಯದ ವಿಧಾನವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಮದುವೆ ಕಾರ್ಯಕ್ರಮದ ಪೂರ್ವ ತಯ್ಯಾರಿ ಮತ್ತು ನಿರ್ವಹಣೆಗೆ ಇದೊಂದು ಕೈಪಿಡಿ. ಇದರ ಮುಂದಿನ ಭಾಗವನ್ನು ನಿರೀಕ್ಷಿಸುತ್ತಿದ್ದೇನೆ. ಲೇಖಕರಿಂದ ಇನ್ನಷ್ಟು ಕೃತಿಗಳು ಮೂಡಿ ಬರಲಿ.

  4. ಹವ್ಯಕ ಮದುವೆ ಸಂಪ್ರದಾಯದ ಮೇಲೆ ಶ್ರೀಮತಿ ಮಮತಾ ಹೆಗ್ಡೆ ಅವರು ಬರೆದ ಲೇಖನ ಬಹಳ ಚೆನ್ನಾಗಿ ಬಂದಿದೆ. ಬಹುಶಃ ಎಲ್ಲಾ ಕಾರ್ಯವಿದಿಗಳನ್ನು ಸುಲಭವಾಗಿ ಆರ್ಥ ವಾಗುವರಿತಿಯಲ್ಲಿ ಬಣ್ಣಿಸಿದ್ದಾರೆ. ಒಟ್ಟಿನಲ್ಲಿ, ಲೇಖನ ಓದಿದಾಗ, ನಮ್ಮ ಮದುವೆಯ ದಿನಗಳು ನನಪಿಗೆ ಬಂದವು. — ಉಮೇಶ ಹೆಗಡೆ.

  5. Sadhana Ashoka.

    ಮಮತಾ, ಮದುವೆಯ ಸಂಪ್ರದಾಯವನ್ನು ಒಂದೊಂದಾಗಿ ಆಪ್ತವಾಗಿ ಬರೆದಿದ್ದೀಯ. ತುಂಬಾ ಚೆನ್ನಾಗಿದೆ ಲೇಖನ. ಹೀಗೆಯೇ ಇನ್ನೂ ಹಲವಾರು ಲೇಖನಗಳು ನಿನ್ನ ಲೇಖನಿಯಿಂದ ಬರಲಿ ಬರಬೇಕು.
    ಶುಭವಾಗಲಿ.

  6. Shanta Shastri

    ಮಮತಾ ಹೆಗಡೆಯವರೆ ಎರಡ ದಿವಸದ ಮದೆವೆನಾ ರಾಶಿ ಚೋಲೊ ವಿವರಿಸಿದ್ರಿ. ಮರತು ಹೋಗುತ್ತಿದ್ದ ನಮ್ಮ ಸಂಪ್ರದಾಯನ ನೆನಪಿಸಿ ಕೊಟ್ಟಿರಿ ಓದಿಕೊಂಡು ರಾಶಿ ಖುಷಿ ಆತು

Leave a Reply

Your email address will not be published. Required fields are marked *