ಸ್ವತಃ ಧರ್ಮರಾಜನೇ ಯುದ್ಧಕ್ಕೆ ಹೊರಟಂಗೆ…!!!

 

ಮಹಾಭಾರತದ ಮುಖ್ಯ ಪಾತ್ರಧಾರಿಗಳಲ್ಲಿ ಒಬ್ಬನೆಂದರೆ ಯುಧಿಷ್ಠಿರ ಅಥವಾ ಧರ್ಮರಾಜ. ನಿಮಗೆಲ್ಲಾ “ಮಹಾಭಾರತ” ಎಂದರೆ ಧರ್ಮರಾಜ, ಭೀಷ್ಮ, ದುರ್ಯೋಧನ, ಅರ್ಜುನ, ಕೃಷ್ಣ, ಕರ್ಣ, ದ್ರೌಪದಿ, ಇತ್ಯಾದಿ ಹೆಸರುಗಳು ಯಾ ಪಾತ್ರಗಳು ನೆನಪಾಗಬಹುದು. ಕುರುಕ್ಷೇತ್ರದ ಧರ್ಮಯುದ್ಧದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಬೇರೆ ಬೇರೆ ಜವಾಬ್ದಾರಿ ಅಥವಾ ಸ್ಥಾನವನ್ನು ನಿಭಾಯಿಸಿದ್ದಾರೆ. ಯುದ್ಧದ ಷರತ್ತುಗಳನ್ನು ಆಳವಾಗಿ ಅವಲೋಚಿಸಿದರೆ, ಇದು ನಿಜವಾಗಿಯೂ “ಧರ್ಮಯುದ್ಧ” ಎಂಬುದಕ್ಕೆ ಯಾವ ಸಂದೇಹವೂ ಇಲ್ಲಾ.

ಆಗಿನ “ಧರ್ಮರಾಜನ” ನಡೆ ನುಡಿ ಮತ್ತೂ ಇಂದಿನ ದೊಡ್ಡ ದೊಡ್ಡ ಸಂಸ್ಥೆಗಳ ಯಾ ಸಂಸ್ಥೆಯ ನಾಯಕರ “ಕೆಲಸದ ತತ್ವಗಳ”ನ್ನು (working principles) ಹೋಲಿಸಿದರೆ, ಬಹಳಷ್ಟು ಹೋಲಿಕೆ ಕಾಣಿಸುತ್ತದೆ. ಇಂದಿನ ಕಾಲದಲ್ಲಿ, ಸಂಸ್ಥೆ ಒಳ್ಳೆಯ ಹೆಸರನ್ನು ಗಳಿಸಬೇಕಾದರೆ, ಸಮಗ್ರತೆ, ಪ್ರಾಮಾಣಿಕತೆ, ಪಾರದರ್ಶಕತೆ, ಸಮರ್ಥನೀಯತೆ ಹಾಗೂ ಭ್ರಷ್ಟಾಚಾರ ರಹಿತ ನಾಯಕನ ಅವಶ್ಯಕತೆ ಇದೆ.

ಧರ್ಮರಾಜ ಮೂಲತಃ ಬಹಳ ತತ್ವಬದ್ದ ವ್ಯಕ್ತಿ. ರಾಜ್ಯವನ್ನು “ಧರ್ಮಬದ್ಧವಾಗಿ” ಆಳುವ ಆಸೆ ಹೊಂದಿದವ ಹಾಗೂ ನಡೆಸಿದವ. ಯಾವುದೇ ವ್ಯವಹಾರದಲ್ಲಿ ಸುಳ್ಳು ಹೇಳಿದವನಲ್ಲ. ಸ್ವತಃ ಬಹಳ ಪರಾಕ್ರಮಿಯಾದರೂ, ತನ್ನ ಶಕ್ತಿಯನ್ನು ವಿನಾಕಾರಣ ದುರುಪಯೋಗಿಸಿದವನಲ್ಲ. ತನ್ನ ಒಳ್ಳೆಯ ನಡವಳಿಕೆಯಿಂದ, “ಅಜಾತಶತ್ರು” ಅಂತ ಬಿರುದು ಪಡೆದಂಥ ವ್ಯಕ್ತಿ. ಅದೇ ರೀತಿ, ತನ್ನ ಸಹೋದರರ ಯಾ ಮಿತ್ರರ ಶಕ್ತಿ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟಂಥ ನಾಯಕ.

ಇಡೀ ಮಹಾಭಾರತದಲ್ಲಿ, ಕೇವಲ ಕೆಲವೇ ಸಂದರ್ಭಗಳಲ್ಲಿ ಧರ್ಮರಾಜ ಸ್ವತಃ ಕಣಕ್ಕೆ ಇಳಿದು ತನ್ನ ಶೌರ್ಯದಿಂದ ಎದುರಾಳಿಯನ್ನು ಹಿಮ್ಮೆಟ್ಟಿಸುತ್ತಾನೆ. ಹೆಚ್ಚಿನ ಸಂದರ್ಭದಲ್ಲಿ ಹಿರಿಯರ, ಸಹೋದರರ ಯಾ ಸ್ನೇಹಿತರ ಸಲಹೆಗಳನ್ನು ಕೇಳಿ “ಧರ್ಮ” ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಿದ್ದಾನೆ. ಅಂದರೆ, ಉತ್ತಮ ನಾಯಕನ ಎಲ್ಲಾ ಲಕ್ಷಣಗಳೂ ನಾವು ಧರ್ಮರಾಜನಲ್ಲಿ ಕಾಣಬಹುದು. ಒಳ್ಳೆಯ ನಾಯಕತ್ವ, ಪ್ರಾಮಾಣಿಕತೆ, ಅಧಿಕಾರದ ನಿಯೋಗ, ತಮ್ಮ ಜನರಲ್ಲಿ ನಂಬಿಕೆ, ಇತ್ಯಾದಿ ಎಲ್ಲಾ ಯೋಗ್ಯ ನಾಯಕನ ಗುಣಗಳೂ ಧರ್ಮರಾಜನಲ್ಲಿ ನೋಡಬಹುದು.

ಉತ್ತಮ ನಾಯಕ ಯಾವಾಗಲೂ ತನ್ನ ಜನರ ಅಥವಾ ಸಂಪತ್ತಿನ ಸದುಪಯೋಗ ಮಾಡಿಕೊಳ್ಳಲು ಅರಿತಿರುತ್ತಾನೆ. ಎಲ್ಲದಕ್ಕೂ ನಾಯಕನೇ ಹೋಗಿ ಕೆಲಸ ಮಾಡುವಂತಾದರೆ ಅದು ಒಳ್ಳೆಯ ನಾಯಕನ ಲಕ್ಷಣವಲ್ಲ. ಅಂತೆಯೇ, ಪ್ರಾಮಾಣಿಕತೆ ಹಾಗೂ ಸಮಗ್ರತೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತವೆ. ಒಂದು ದೇಶ ಯಾ ಸಂಸ್ಥೆ ಒಳ್ಳೆಯ ದಿಶೆಯಲ್ಲಿ ಬೆಳವಣಿಗೆ ಹೊಂದಬೇಕಾದರೆ, ನಾಯಕನಲ್ಲಿ “ಧರ್ಮರಾಜ”ನ ಬಹಳಷ್ಟು ಗುಣಗಳು ಇರಬೇಕಾಗಿರುತ್ತದೆ. ನಮ್ಮ ಹಳೆ ಗಾದೆ ಮಾತು “ಧರ್ಮರಾಜ ಯುದ್ಧಕ್ಕೆ ಹೊರಟಂಗೆ” ಎಷ್ಟೊಂದು ಅರ್ಥಗರ್ಭಿತ! ಒಂದು ದೇಶದ ನಾಯಕ ಯಾ ಒಂದು ಸಂಸ್ಥೆಯ ಅಧ್ಯಕ್ಷ, ನೇರವಾಗಿ ಕಣಕ್ಕೆ ಇಳಿದಿದ್ದಾನೆ ಅಂದರೆ, ಆಗಿನ ಪರಿಸ್ಥಿತಿ ಬಹಳ ಗಂಭೀರ ಅಂತಲೇ ಅರ್ಥ.

ಇಂದಿನ ಹಲವಾರು ಉತ್ತಮ ಸಂಸ್ಥೆಯ ನಾಯಕರ ಯಾ ಸಂಸ್ಥೆಯ ಕೆಲಸದ ಶೈಲಿಯನ್ನು ನೋಡಿದರೆ, ಅವರ ಯಶಸ್ಸಿನ ಹಿಂದೆ ಕೆಲವು ಸಾಮಾನ್ಯ ಈ ನಡುವಳಿಕೆಗಳು ಕಂಡುಬರುತ್ತವೆ – ಭ್ರಷ್ಟಾಚಾರ ರಹಿತ ಆಡಳಿತ, ಪಾರದರ್ಶಕತೆ, ಅಧಿಕಾರ ನಿಯೋಗ, ತಮ್ಮ ಆಡಳಿತ ಮಂಡಳಿಯ ಮೇಲಿನ ನಂಬಿಗೆ, ಪ್ರಾಮಾಣಿಕತೆ, ಸಮಾನತೆ ಹಾಗೂ ತಮ್ಮ ಕೆಲಸಗಾರರ ಮೇಲೆ ಪೂರ್ಣ ಭರವಸೆ. ಇಲ್ಲಿ, ನಾಯಕನಿಗೆ ಅಧಿಕಾರ ವ್ಯಾಮೋಹ ಇಲ್ಲಾ, ಆದರೆ ಕೆಲಸದ ಮೇಲೆ ಉತ್ಸಾಹ, ಗುರಿಯನ್ನು ತಲುಪುವ ಹಂಬಲ! ಈಗಿನ ಹೆಸರಾಂತ ಒಳ್ಳೆಯ ನಾಯಕರು, ಎಲ್ಲರ ಜೊತೆ ಸಂಸ್ಥೆಯನ್ನು ಬೆಳೆಸಲು ಯೋಜಿಸುತ್ತಾರೆ. ಅದರ ಫಲವನ್ನು ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ. ಯಾವುದೇ ಸಮಯದಲ್ಲಿ, ಕೆಲಸದ ಒತ್ತಡ ಯಾ ಸವಾಲು ಎದುರಾದಾಗ, ಈ ನಾಯಕರು ಸಮಯೋಚಿತ ನಿರ್ಧಾರವನ್ನು ತೆಗೆದುಕೊಂಡು ತಮ್ಮ ನಂಬಿಕೆಯ ತಂಡದವರಿಗೆ ಮಾರ್ಗದರ್ಶನ ನೀಡುತ್ತಾರೆ. ಅಂದರೆ, ನಾಯಕ ಯಾವಾಗಲೂ ಎಲ್ಲರ ಕೆಲಸದ ಮೇಲೆ ನಿಗಾ ಇಟ್ಟು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ.

ಸಂಸ್ಥೆಯ ನಾಯಕ (CEO or MD) ತಮ್ಮ ಗುರಿಯನ್ನು ತಲುಪಲು ಎಲ್ಲಾ ತಂಡದವರ ಯಾ ಕಾರ್ಯಕರ್ತರ ಬೆಂಬಲದಿಂದ ಮುಂದುವರಿಯಬೇಕಾಗುತ್ತದೆ. ಸಾಮಾನ್ಯ ದಿನಗಳಲ್ಲಿ, ನಾಯಕನೇ ಕಣಕ್ಕೆ ಇಳಿಯುವ ಅವಶ್ಯಕತೆ ಬರುವುದಿಲ್ಲ. ಅವನ ನಂಬಿಕಸ್ತ ಮತ್ತು ಸಮರ್ಥ ಸೇನಾದಳ (workforce ) ಎಲ್ಲಾ ಕೆಲಸವನ್ನೂ ಪೂರೈಸುತ್ತದೆ. ನಾಯಕನೇ ಕಣಕ್ಕೆ ಇಳಿದ ಅಂತ ಅಂದರೆ, ಸಂಸ್ಥೆಯ ಸಮಸ್ಯೆ ಬಹಳ ಗಂಭೀರಕ್ಕೆ ಹೋಗಿದೆ ಅಂತಲೇ ತಿಳಿಯಬೇಕು. ಆಗ “ಧರ್ಮರಾಜ ಯುದ್ಧಕ್ಕೆ ಹೊರಟಂತೆ” ಅನ್ನುವ ಹಳೆಯ ಗಾದೆ ಅನ್ವಯವಾಗುತ್ತದೆ!!!

ಡಾ. ಶ್ರೀಪಾದ ಭಟ್ಟ

ಗುರುಗ್ರಾಮ, ಹರಿಯಾಣ

ನಮ್ಮನೆ ಮಾಣಿಯ ಗಂಭೀರ ಸಮಸ್ಯೆ…!

ಮೊನ್ನೆ ಊರಿಗೆ ಹೋಗಿ ನಮ್ಮ ಅಣ್ಣನ ಮಗನ ಮದುವೆಯ ಕಾರ್ಯಕ್ರಮದಲ್ಲಿ ಬಾಗವಹಿಸಿ, ಊರವರೆಲ್ಲರ ಜೊತೆ ಬೆರೆತು, ಹಿರಿಯವರ ಖುಷಿಗೆ ಸ್ವಲ್ಪ ಹೊತ್ತು ಇಸ್ಪೀಟಾಡಿ ಬಂದೆ. ಬಹಳ ಸಂಬಂಧಿಕರೂ ಹಾಗು ಊರವರು ಸೇರಿದ್ದರು. ಹೀಗೆ ಎಲ್ಲರ ಜೊತೆ ಮಾತನಾಡುವಾಗ ಒಂದು ವಿಷಯ ನನ್ನ ಗಮನಕ್ಕೆ ಬಂತು. ಊರಲ್ಲಿ ಮದುವೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಕಡಿಮೆ. ಇದ್ದರೂ, ಹೆಣ್ಣುಮಕ್ಕಳೆಲ್ಲಾ ಕಾಲೇಜಿಗೆ ಯಾ ಯೂನಿವರ್ಸಿಟಿಯಲ್ಲಿ ಓದುತ್ತಿರುವವರು. ಅವರೆನ್ನೆಲ್ಲಾ ಸಹಜವಾಗಿ ಮುಂದೇನೂ ಅಂತ ಕೇಳಿದರೆ, ಅವರ ತಕ್ಷಣದ ಪ್ರತಿಕ್ರಿಯೆ, “ಬೆಂಗಳೂರಿನಲ್ಲಿ ನೌಕರಿ ಮಾಡಬೇಕು” “ಪಟ್ಟಣದಲ್ಲಿ ಇರುವ ಹವ್ಯಕ ಹುಡುಗನನ್ನು ಮದುವೆ ಮಾಡಿಕೊಳ್ಳಬೇಕು“!! ಇನ್ನೂ ಆಳವಾಗಿ ಪ್ರಶ್ನಿಸಿದರೆ, “ಊರಿನ ಜೀವನ ಕಷ್ಟ, ಕೆಲಸದವರೂ ಸಿಗೋಲ್ಲ, ನಮ್ಮ ಅಮ್ಮನ ಜೀವನ ನಾವು ಕಣ್ಣಾರೆ ನೋಡಿದ್ದೇವೆ“.

ಹೀಗೆ ಪಕ್ಕದಲ್ಲಿ, ಹಲವಾರು ಗಂಡು ಹುಡುಗರು ತಮ್ಮದೇ ಆದ ಗುಂಪು ಮಾಡಿಕೊಂಡು, ಬೇರೆ ಬೇರೆ ಕೆಲಸದಲ್ಲಿ ನಿರತರಾಗಿದ್ದರು. ಕೆಲವರು ಕಾಲೇಜಿಗೆ ಹೋಗಿ ಡಿಗ್ರಿ ತಗೊಂಡು, ಅಪ್ಪನಿಗೆ ಜಮೀನು ನೋಡಲು ಯಾರೂ ಇಲ್ಲ ಅಂತ ತಿಳಿದು, ಊರಲ್ಲೇ ತಮ್ಮ ಜೀವನ ಮುಂದುವರಿಸಲು ನಿರ್ಧರಿಸಿದವರು. ಇನ್ನೂ ಕೆಲವರು, ಓದಿನಲ್ಲಿ ಅಷ್ಟು ಬುದ್ದಿವಂತರಾಗಿಲ್ಲದ್ದರಿಂದ, ಮನೆಯಲ್ಲೇ ಉಳಿದು ಅಪ್ಪನ ತೋಟದ ಕೆಲಸಕ್ಕೆ ಸಹಾಯ ಮಾಡುತ್ತಿರುವವರು. ಇನ್ನೂ ಆಳಕ್ಕೆ ನೋಡಿದರೆ, ಈ ಗಂಡು ಮಕ್ಕಳು ಮಾಡುವ ಕಾರ್ಯ ಶ್ಲಾಘನೀಯ. ಮನೆಯಲ್ಲಿ ಹುಟ್ಟಿದ ಬೇರೆ ಎಲ್ಲಾ ಅಣ್ಣ ತಂಗಿಯರು, ಬೇರೆ ಬೇರೆ ಊರಿನಲ್ಲಿ ಕೆಲಸಕ್ಕಾಗಿ ವಲಸೆ ಹೋಗಿದ್ದರಿಂದ, ವಯಸ್ಸಾದ ಅಪ್ಪ ಅಮ್ಮನಿಗೆ ಅತ್ಯಮೂಲ್ಯ ಸೇವೆ ಹಾಗೂ ತೋಟದ ಕೆಲಸ ಇವರಿಂದಲೇ!

ಈ ಯುವಕರೆಲ್ಲಾ, 26 ರಿಂದ 45 ವರ್ಷದವರು, ಇನ್ನೂ ಮದುವೆಯಾಗದವರು. ಅವರನ್ನು ಪ್ರಶ್ನಿಸಿದಾಗ, ಬರುವ ಉತ್ತರ ಅಪ್ಪಯ್ಯ ಪ್ರಯತ್ನ ಮಾಡುತ್ತಿದ್ದಾನೆ, ಎಲ್ಲೂ ಆಗ್ತಾ ಇಲ್ಲಾ“. “ಎಲ್ಲೂ ನಮ್ಮನ್ನು ಒಪ್ಪುವ ಹುಡುಗಿಯರು ಸಿಗ್ತಾ ಇಲ್ಲಾ“. ನನಗೆ ತಿಳಿದ ಹತ್ತಿರದ ಊರಿನಲ್ಲಿ 15-20 ಮನೆಗಳಿವೆ. ಅಲ್ಲಿ ಇವತ್ತು, 30-40 ಹುಡುಗರು ಮದುವೆಗಾಗಿ ಕಾಯುತ್ತಿದ್ದಾರೆ. ಹುಡುಗಿಯರೇ ಇಲ್ಲಾ. ಆಳವಾಗಿ ನಾವು ಈ ಸಮಸ್ಯೆಯನ್ನು ನೋಡಿದರೆ, ನಮಗೆ ಇದರ ಗಂಭೀರತೆ ಅರಿವಾಗುತ್ತದೆ.

 

Polish Painting by Anvita Pramod Bhat

ಊರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಎಷ್ಟು ಕಡಿಮೆಯಾಗಿದೆಯೆಂದರೆ, ಹುಡುಗನ ಮನೆಯವರು ಮದುವೆ ಖರ್ಚನ್ನು ತಾವೇ ಕೊಡಲು ತಯಾರಿ! ಅಷ್ಟೇ ಅಲ್ಲಾ, ಮೇಲಿಂದ ಹುಡುಗಿಯ ತಂದೆ ಸೊಸೈಟಿಯಲ್ಲಿ ಸಾಲ ಮಾಡಿದ್ದರೆ, ಅದನ್ನೂ ತೀರಿಸುವ ಭರವಸೆ! ನಮ್ಮಲ್ಲಿ ಯಾವಾಗಲೂ ವರ ದಕ್ಷಿಣೆಯ ಹಾವಳಿ ಇರಲಿಲ್ಲ. ಹುಡುಗಿಯ ತಂದೆ ಏನಾದರೂ ಅಲ್ಪ ಸ್ವಲ್ಪ ಬಂಗಾರ ಮಾಡಿಟ್ಟಿದ್ದರೆ, ಅದನ್ನು ಹುಡುಗಿಗೆ ಮದುವೆ ವೇಳೆಯಲ್ಲಿ ಕೊಡುವದು ಸಂಪ್ರದಾಯವಾಗಿತ್ತು. ಹುಡುಗನ ತಂದೆ ತಾಯಿ ಹುಡುಗಿಯ ಕಡೆಯಿಂದ ಏನನ್ನೂ ನಿರೀಕ್ಷಿಸುತ್ತಿರಲಿಲ್ಲ! ಆದರೆ, ಕಾಲ ಬದಲಾಗಿದೆ. ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇರುವದರಿಂದ, “ವಧು ದಕ್ಷಿಣೆಯ ಹಾವಳಿ ಪ್ರಾರಂಭವಾಗಿದೆ. ಹೋಗಲಿ, ಗಂಡಿನ ತಂದೆ ತಾಯಿ ವಧು ದಕ್ಷಿಣೆಗೆ ತಯಾರಾದರೂ, ಹುಡುಗಿಯ ಷರತ್ತುಗಳು ಹಲವಾರು! “ಅವನು ನೌಕರಿ ಮಾಡಬೇಕು, ಅಪ್ಪ,ಅಮ್ಮ ದೂರ ಇದ್ದರೆ ಇನ್ನೂ ಅನುಕೂಲ“, ಇತ್ಯಾದಿ. ಹೀಗಿದ್ದಾಗ, ನಮ್ಮನೆ ಊರಲ್ಲಿ ಇರುವ ಮಾಣಿಗೆ ಹೆಣ್ಣು ಕೊಡುವವರು ಯಾರು?

ಹೆಣ್ಣು ಮಕ್ಕಳ ಪಟ್ಟಣದ ಆಸೆ ಸಹಜ. ಇದರಲ್ಲಿ ನನಗೆ ತಪ್ಪೇನೂ ಕಾಣಿಸುತ್ತಿಲ್ಲ. ನಮ್ಮ ಹುಡುಗಿಯರು ಓದಿನಲ್ಲಿ ಬುದ್ದಿವಂತರು. ಅವರಿಗೆ ಈಗ ಸಮಾಜದಲ್ಲಿ ಒಳ್ಳೊಳ್ಳೆಯ ಕೆಲಸದ ಅವಕಾಶ ಸಿಗುತ್ತಿದೆ. ಇದು ನಮಗೆಲ್ಲಾ ಹೆಮ್ಮೆಯ ವಿಷಯ. ಆದರೆ, ಇದೇ ರೀತಿ ಮುಂದುವರಿದರೆ, ಮುಂದೆ ನಮ್ಮ ಹಳ್ಳಿಗಳಲ್ಲಿ ಜನಾಂಗ ಬೆಳವಣಿಗೆ ಹೇಗೆ ಆಗಬಹುದು? ನಮ್ಮ ಊರಿನ ತೋಟ ಗದ್ದೆ ನೋಡಿಕೊಳ್ಳಲು ಯಾರು ಇರಬಹುದು? ನಮ್ಮ ಈ ಯುವಕರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರಬಹುದು? ನಾವೇ ನೋಡುತ್ತಿರುವಂತೆ, ಸಿರ್ಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ಹಾಗು ಶಿವಮೊಗ್ಗದಲ್ಲಿ ಹವ್ಯಕರೆಲ್ಲಾ ಓದಲು ಬೇರೆ ಬೇರೆ ಪಟ್ಟಣಗಳಿಗೆ ಹೋಗಿ, ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾ ತಮ್ಮ ಸಂಸಾರವನ್ನು ನಿಭಾಯಿಸುತ್ತಿದ್ದಾರೆ. ಹೆಚ್ಚಾಗಿ ಎಲ್ಲರೂ, ಆ ಪಟ್ಟಣಗಳಲ್ಲಿ ತಮ್ಮ ಸ್ವಂತ ಮನೆಯನ್ನು ಮಾಡಿ, ಅಲ್ಲೇ ನಿವೃತ್ತ ಜೀವನವನ್ನು ಕಳೆಯುವ ಯೋಚನೆ ಮಾಡುತ್ತಿದ್ದಾರೆ.

ಅಂದರೆ, 50%ಕ್ಕೆ ಹೆಚ್ಚಿನ ಸಂಖ್ಯೆಯ ಹವ್ಯಕ ಹೆಣ್ಣುಮಕ್ಕಳು ಪಟ್ಟಣದಲ್ಲಿ ಹುಟ್ಟಿ ಬೆಳೆಯುತ್ತಿದ್ದಾರೆ. ಇನ್ನೂ ಉಳಿದ 50% ಭಾಗದವರು, ಹಳ್ಳಿಗಳಲ್ಲಿ ಹುಟ್ಟಿದರೂ ಚೆನ್ನಾಗಿ ಓದಿ ಪಟ್ಟಣ ಸೇರಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ಊರಲ್ಲಿ ಉಳಿದು ತಂದೆ ತಾಯಿ ಸೇವೆ ಮಾಡಿ, ತೋಟ ಗದ್ದೆ ನೋಡಿಕೊಂಡು ಹೋಗುತ್ತಿರುವ ಹುಡುಗರಿಗೆ ಯಾರೂ ಕೇಳುವವರೇ ಇಲ್ಲಾ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಲವಾರು ನಮ್ಮದೇ ಆದ ಪ್ರಯತ್ನವನ್ನು ಮಾಡುತ್ತಿದ್ದೇವೆ, ಇದು ತುಂಬಾ ಶ್ಲಾಘನೀಯ. ಉದಾಹರಣೆಗೆ, ನಮ್ಮದೇ ಆದ ದೊಡ್ಡ ದೊಡ್ಡ ಸಂಸ್ಥೆಗಳಾದ TSS ಯಾ TMS ಅಂಥ ಸಂಘಗಳು, ನಮ್ಮ ಯುವಕರಿಗೆ ಉದ್ಯೋಗ ಕೊಟ್ಟು, ಅವರನ್ನು ಹವ್ಯಕ ಮದುವೆ ಮಾರ್ಕೆಟ್ನಲ್ಲಿ ಬೆಂಬಲಿಸುತ್ತಿದ್ದಾರೆ. ಇನ್ನೂ ಕೆಲವರು, ತೋಟ ಗದ್ದೆ ಕೆಲಸದ ಜೊತೆಗೆ, ಹಲವು ತರಹದ ಲಘು ಉದ್ಯೋಗವನ್ನು ಪ್ರಾರಂಭಿಸಿ, ತಮ್ಮದೇ ಆದ ಹೆಸರುಗಳಿಸಿ ಒಳ್ಳೆಯ ಸಂಸಾರ ನಡೆಸುತ್ತಿದ್ದಾರೆ. ನೀವೆಲ್ಲಾ ನೋಡಿದಂತೆ, ನಮ್ಮ ಚೆಂದ ಚೆಂದದ ಹಳೆಯ ತೋಟದ ಮನೆಗಳನ್ನು “home stay ” ಯಾಗಿ ಮಾಡಿ, ಪ್ರವಾಸೋದ್ಯಮದಲ್ಲಿ ಹೆಸರು ಮಾಡುತ್ತಿದ್ದಾರೆ. ಇಲ್ಲಿ, ನಮ್ಮ ಯುವತಿಯರೂ ಕೈ ಜೋಡಿಸುತ್ತಿದ್ದಾರೆ. ಬಹಳಷ್ಟು ಯುವಕ ಯುವತಿಯರು, ಇಂತಹ ಉದ್ಯೋಗದಲ್ಲಿ ಯಶಸ್ಸು ಕಂಡು, ಪಟ್ಟಣದ ಜನಜಂಗುಳಿಯ ವಾಸಕ್ಕಿಂತ, ಸ್ವಚ್ಛ ನಿರ್ಮಲ ಹಳ್ಳಿಯ ಜೀವನವೇ ಲೇಸು ಅನ್ನುತ್ತಿದ್ದಾರೆ.

ಇನ್ನು, ಹವ್ಯಕ ಹುಡುಗಿಯರು ಕಡಿಮೆ ಇರುವುದರಿಂದ, ಬೇರೆ ಬೇರೆ ಬ್ರಾಹ್ಮಣ ಜಾತಿಯ ಹುಡುಗಿಯರನ್ನು ಅರಸುವದು ಅನಿವಾರ್ಯ ಅಂತ ನನ್ನ ಅಭಿಪ್ರಾಯ. ಈ ದಿಶೆಯಲ್ಲಿ, ನಮ್ಮ ಹವ್ಯಕ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡಿ, ನಿರ್ಧಾರ ತೆಗೆದುಕೊಂಡು ಮುಂದುವರಿಯುವ ಅವಶ್ಯಕತೆ ಕಾಣಿಸುತ್ತದೆ. ಹೇಗೆ ಇರಲಿ, ನಮ್ಮ ಹಳ್ಳಿಯಲ್ಲಿ ಜೀವನ ಮಾಡುವ ಹುಡುಗರಿಗೆ ಜೀವನ ಸಂಗಾತಿಯನ್ನು ಹುಡುಕುವದು ನಮ್ಮೆಲ್ಲರ ಜವಾಬ್ದಾರಿ ಅಂತ ಭಾವಿಸುತ್ತೇನೆ. ಏನೋ ಕಾರಣದಿಂದ ಕೆಲವು ಮಹಿಳೆಯರು ವಿಧವೆಯಾಗಿರಬಹುದು ಅಥವಾ ವಿವಾಹ ವಿಚ್ಛೇದನಕ್ಕೆ ಬಲಿಯಾಗಿರಬಹುದು. ಅಂತಹ ಮಹಿಳೆಯರಿಗೂ ಮರು ವಿವಾಹದ ಅವಕಾಶವನ್ನು ನೀಡಿ, ನಮ್ಮ ಹುಡುಗರಿಗೆ ವಿವಾಹ ಮಾಡಬಹುದು. ಇದಕ್ಕೆ, ಎಲ್ಲರಿಗೂ ದೊಡ್ಡ ಮನಸ್ಸು ಅವಶ್ಯಕ.

ಒಟ್ಟಿನಲ್ಲಿ, ಬಹಳ ಉತ್ತಮ ಕಾರ್ಯ ಯಾ ಸೇವೆ ಮಾಡುತ್ತಿರುವ, ನಮ್ಮ ಹಳ್ಳಿಯ ಯುವಕರಿಗೆ ಯೋಗ್ಯ ಜೀವನ ಸಂಗಾತಿಯನ್ನು ತರುವದು ನಮ್ಮೆಲ್ಲರ ಮುಖ್ಯ ಧ್ಯೇಯವಾಗಬೇಕು. “ನಮ್ಮನೆ ಮಾಣಿಗೆ ಒಳ್ಳೆಯ ಕೂಸು ತರುವದುನಮ್ಮ ಪ್ರಮುಖ ಕಾರ್ಯವಾಗಬೇಕು ಅಂತ ನನ್ನ ಆಶಯ.

ಡಾ. ಶ್ರೀಪಾದ ಭಟ್ಟ

ಗುರುಗ್ರಾಮ, ಹರಿಯಾಣ

Scroll to Top