ಪಯಣಿಗ…
ಆರಂಕುಶವಿಟ್ಟೊಡಂ ನೆನೆವುದೆನ್ನಮನಂ ಬನವಾಸಿ ದೇಶಮಂ – ಎನ್ನುವ ಆದಿಕವಿ ಪಂಪನ ಮಾತು ಕನ್ನಡ ಸಾಹಿತ್ಯ ಸ್ವಲ್ಪ ಮಟ್ಟಿಗಾದರೂ ತಿಳಿದವರಿಗೆ ಹೊಸತೇನಲ್ಲ. ಜೀವನದಲ್ಲಿ ನಾವಿಡುವ ಪ್ರತಿ ಹೆಜ್ಜೆಯೂ ಸಹ ನಮ್ಮ ಮನಸಿನಲ್ಲಿ ಅಂಕುರಿತವಾಗುವ ಏನಾದರೊಂದು ವಿಚಾರದಿಂದ ಪ್ರೇರೇಪಿತವಾಗಿರುತ್ತದೆಯಷ್ಟೇ?
ಈ ಪಯಣಿಗನ ವಿಷಯದಲ್ಲಿಯೂ ಕೂಡ ಹಾಗೆಯೆ. ತಾನು ಓದಿಕೊಂಡ ಅಥವಾ ಸಿನಿಮಾದಲ್ಲಿ ನೋಡಿದ ಮಯೂರ ವರ್ಮ ಬನವಾಸಿ ಪ್ರದೇಶವನ್ನು ಅಳುತ್ತಿದ್ದ ವಿಚಾರ ತಿಳಿದುಕೊಂಡಿದ್ದ. ಆತನ ಇಷ್ಟದೇವತೆ ಮಧುಕೇಶ್ವರನು ಬನವಾಸಿಯ ಅಧಿದೇವತೆ ಆಗಿದ್ದ ಎಂಬ ವಿಚಾರ ಕೇಳಿದ್ದ. ಆತನ ದರ್ಶನ ಮಾಡಬೇಕೆಂಬ ಉತ್ಕಟ ಇಚ್ಛೆ ಮನದಲ್ಲಿ ಮೂಡಿದಾಗ ಪಯಣಿಗ ಮಡದಿಗೆ ಸಂದೇಶ ಕಳಿಸಿ ಕೂಡಲೇ ಹೊರಟು ನಿಂತ. ಬೆಂದಕಾಳೂರಿನಿಂದ ೪೫೦ ಕಿಲೋಮೀಟರು ದೂರದ ಶಿರಸಿಗೆ ಪಯಣ ಬೆಳೆಸಿದ. ರಾತ್ರಿ ಬಸ್ಸಿನಲ್ಲಿ ಪಯಣಿಸಿ ಮುಂಜಾವಿನಲ್ಲಿ ಅಲ್ಲಿಗೆ ತಲುಪಿದ. ಅಲ್ಲಿಂದ ಬನವಾಸಿ ಕೇವಲ ೧೬ ಕಿ ಮೀ ಮಾತ್ರ. ಮಧುಕೇಶ್ವರನ ಸನ್ನಿಧಿಯಲ್ಲಿ ಹೋಗಿ ಸೇರಿದಾಗ ಅದೆಂತಹ ಅಲೌಕಿಕ ಅನುಭವ! ಅಲ್ಲಿಯೇ ಮಂತ್ರಮುಗ್ಧನಾಗಿ ಕುಳಿತು ಕಂಠಸ್ಥವಾಗಿರುವ ರುದ್ರಪ್ರಶ್ನ ಪಠಣ ಆರಂಭಿಸಿದ. ಹೀಗೆ ಶಿವಾನುಗ್ರಹ ಹೊಂದಿ ಶಿರಸಿಗೆ ಮರಳಿದಾಗ ಮಧ್ಯಾಹ್ನವಾಗಿತ್ತು. ಶಿವ:ಶಕ್ತ್ಯಾಯುಕ್ತೋ ಎಂಬಂತೆ ಶಿವದರ್ಶನ ಮಾಡಿದ ಬಳಿಕ ಜಗನ್ಮಾತೆ ಶ್ರೀ ಮಾರಿಕಾಂಬೆಯ ಜಾತ್ರೆಯ ಸುಸಂದರ್ಭದಲ್ಲಿ ದರ್ಶನ ಪಡೆಯಿವೆ ಭಾಗ್ಯ ಸಿಕ್ಕಿದ್ದು ಆಕಸ್ಮಿಕವೇ? ಹಾಗೆ ಮಾತೆಯ ಮಂದಿರಕ್ಕೆ ತೆರಳಿ ಪ್ರಸಾದ ಭೋಜನ ಸ್ವೀಕರಿಸಿದ ಪಯಣಿಗ ಕಾಲ್ನಡುಗೆಯಲ್ಲಿಯೇ ನಗರದ ಐದು ರಸ್ತೆ ಸೇರುವ ಸ್ಥಳಕ್ಕೆ ಬಂದಾಗ ಇನ್ನು ೧ ಘಂಟೆ ಸಮಯ. ಪಯಣಿಗನಿಗೆ ಪಯಣ ಹಾಗು ಅದರ ಅನುಭವ ಮುಖ್ಯವೇ ಹೊರತು ಅದರ ಗುರಿಯಲ್ಲ. ಎದುರಿಗೆ ಸಿಕ್ಕ ಬಸ್ ಹಿಡಿದು ಕುಮಟಾ ಕಡೆಗೆ ಸಾಗಿದ. ಮಾರ್ಗದುದ್ದಕ್ಕೂ ಪ್ರಕೃತಿ ರಮಣೀಯ ದ್ರಶ್ಯಾವಳಿಗಳನ್ನು ಆಸ್ವಾದಿಸುತ್ತ ಸಾಗಿದಾಗ ಕುಮಟಾ ನಗರ ಬಂದೆ ಬಿಟ್ಟಿತು. ಚಿಕ್ಕಂದಿನಲ್ಲಿ ಗೆಳೆಯರೊಡನೆ ಓಡಾಡಿದ ಮಾರ್ಗವನ್ನು ಮೆಲುಕು ಹಾಕುತ್ತ ಹೋದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ ಶಿರಸಿಗೆ ಹೊಂಟು ನಿಂತ. ಮಾರ್ಗಮಧ್ಯೆ ಬರುವ ಊರು ಹಳ್ಳಿಗಳು ಹಿಂದೆಂದೋ ನೋಡಿದ ಕೇಳಿದ ಮಾಸು ನೆನಪು. ಹೀಗೆ ಬರುತ್ತಿರುವಾಗ ಅಮ್ಮೆನಳ್ಳಿ ಎಂಬ ಊರಲ್ಲಿ ಹತ್ತಿದ ವ್ಯಕ್ತಿಯೊಬ್ಬನೊಡನೇ ಕುಶಲೋಪರಿ ನೆಡೆಸಿ ಮೊದಲ್ಲೊಮ್ಮೆ ಈ ಊರಿಗೆ ಬಂದಿದ್ದೆ ನನ್ನ ಗೆಳೆಯನೊಬ್ಬ ಇಲ್ಲೆ ಹತ್ತಿರದ ಊರಿನವನೆಂದು ಅವನ ಹೆಸರೆತ್ತಿದಾಗ – ಓ ಅವನು ನನ್ನ ಕ್ಲಾಸ್ಮೆಟು ಮಾರಾಯ್ರೆ ಎಂದು ಉದ್ಗರಿಸಿ ಅವನ ಗುಣಗಾನ ಮುಂದೆ ಶಿರಸಿ ಮುಟ್ಟುವವರೆಗೂ ಸಾಗಿತ್ತು. ಈ ಜಗತ್ತು ಎಷ್ಟು ಕಿರದು ಹಾಗು ನಾವೆಲ್ಲರೂ ಒಬ್ಬರಿಗೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಬೆಸೆದುಕೊಂಡಿರುವ ಅರಿವಾಯಿತು.
ಮರಳಿ ಶಿರಸಿ ನಗರಕ್ಕೆ ಬಂದಾಗ ಇನ್ನೂ ೪ ಘಂಟೆ ಮಾತ್ರ. ರಾತ್ರಿ ಪಯಣಕ್ಕೆ ಬಸ್ ಹೊರಡುವದು ೧೦ ಘಂಟೆಗೆ. ಪಯಣಿಗ ಇನ್ನೊಂದು ದಿಕ್ಕಿನ್ನಲ್ಲಿ ಹೊರಡುವ ಬಸ್ ಹಿಡಿದು ಯಲ್ಲಾಪುರಕ್ಕೆ ಪ್ರಯಾಣ ಬೆಳೆಸಿದ. ಮತ್ತೆ ಅದೇ ಹಚ್ಷು ಹಸಿರಾದ ವನಸಿರಿ, ತೋಟ ಗದ್ದೆಗಳ ಮೂಲಕ ಅಂಕು ಡೊಂಕಾದ ಮಾರ್ಗ ಯಲ್ಲಾಪುರ ಸೇರಿತು. ಅಲ್ಲಿಯ ಸ್ಥಳೀಯ ಶೈಲಿಯಲ್ಲಿ ಮಾಡಿದ ಮಸಾಲೆ ಮಂಡಕ್ಕಿ ಸವಿದು ಪುನಃ ಶಿರಸಿ ದಿಕ್ಕಿಗೆ ಹೊರಟ.
ಕಾಲಹರಣ ಉದ್ದೇಶವಾದರೂ ಅದನ್ನು ನಾನಾ ರೀತಿಯಲ್ಲಿ ಮಾಡಬಹುದು. ಹಲವರು ಹಲವು ರೀತಿಯಲ್ಲಿ ಮಾಡುತ್ತಾರಷ್ಟೆ? ನಮ್ಮ ಬದುಕನ್ನು ಶ್ರೀಮಂತಗೊಳಿಸುವ ಯಾವುದೇ ಅನುಭವಗಳಾದರೂ ಸ್ವೀಕಾರ್ಯವೇ.
ನಮ್ಮ ಬದುಕೇ ಒಂದು ಪಯಣವಾಗಿರುವಗ ನಾವೆಲ್ಲ ಪಯಣಿಗರೇ ಸರಿ. ದೂರದ ತೀರ ಸೇರಬೇಕೆನ್ನುವವರಿಗೆ ಪಯಣದ ಸಾಧನಾನುಭವ ಗುರಿಗಿಂತ ಹೆಚ್ಚು ಗಮನಾರ್ಹ.
ನಮ್ಮ ಬದುಕಿನಲ್ಲಿ ಅನಿಕೇತನರಾಗಿ ಸ್ವಚ್ಛಂದವಾಗಿ ವಿಹರಿಸುವ ಇಂಥ ಘಟ್ಟಗಳು ಜೀವಾತ್ಮನ ಸಾರ್ವಭೌಮತ್ವ ಸಾರುವ ಸನ್ನಿವೇಶಗಳು. ಸಂಸಾರದ ಕೃತಕ ಕಟ್ಟುಪಾಡುಗಳನ್ನು ಮೀರಿ ನಿಲ್ಲುವ ಅವಕಾಶಗಳು. ಸ್ವಾತ್ಮಾರಾಮರಾಗಿ ತಾನೇತಾನಾಗಿ ಜಗಜ್ಜೀವೇಶ್ವರತ್ವವನ್ನು ಅನುಭವಿಸಿದ ಮಧುರ ಕ್ಷಣಗಳು!

