ಅಪ್ಪೆಮಿಡಿ ಉಪ್ಪಿನಕಾಯಿ 😋😋

 

 ಹಲವು ಬಗೆಯ ಉಪ್ಪಿನಕಾಯಿಯನ್ನು ಹಲವಾರು ವಿಧದಲ್ಲಿ  ಮಾಡುತ್ತಾರೆ. ತರಕಾರಿ ಉಪ್ಪಿನಕಾಯಿ, ನಿಂಬೆ ಹಣ್ಣಿನ ಉಪ್ಪಿನಕಾಯಿ, ಅಮಟೆಕಾಯಿ, ನೆಲ್ಲಿಕಾಯಿ, ಕವಳಿಕಾಯಿ ಉಪ್ಪಿನಕಾಯಿ ಇತ್ಯಾದಿ ಇತ್ಯಾದಿ… ಆದರೆ ಮಾವಿನಕಾಯಿ ಉಪ್ಪಿನಕಾಯಿ ಅದರಲ್ಲೂ ಜೀರಿಗೆ ಮಾವಿನ ಮಿಡಿಯ ಉಪ್ಪಿನಕಾಯಿ ಎಂದರೆ ಉಪ್ಪಿನಕಾಯಿಯ ರಾಜ ಎಂದರೆ   ತಪ್ಪಾಗಲಾರದು.

ಆಹಾ!! ಅಪ್ಪೆ ಮಿಡಿ(ಮಾವಿನ ಮಿಡಿ) ಅಂದ ಕೂಡಲೆ ಎಲ್ಲರ ಬಾಯಲ್ಲಿ ನೀರು ಬರುವುದು ಸಹಜ.. ಏಪ್ರಿಲ್, ಮೇ ತಿಂಗಳು ಅಂದರೆ ಮಲೆನಾಡಿನ ಎಲ್ಲರ ಮನೆಯಲ್ಲೂ ಅಪ್ಪೆ ಮಿಡಿ ಉಪ್ಪಿನಕಾಯಿ ಮಾಡುವ ಸಂಭ್ರಮ. ಮಳೆಗಾಲ ಪ್ರಾರಂಭ ಆಗುವ ಮೊದಲು ಉಪ್ಪಿನಕಾಯಿ ತಯಾರಾಗಿ ಮನೆಯ ಮಳಿಗೆ ಸೇರಿರುತ್ತದೆ. ಅಪ್ಪೆ ಮಿಡಿಯಲ್ಲೂ ಬೇರೆ ಬೇರೆ ವಿಧದ ಸುವಾಸನೆ ಇರುವ ಮಾವಿನ ಮಿಡಿ ಇರುತ್ತದೆ. ಅದರಲ್ಲಿ ಜೀರಿಗೆ ಸುವಾಸನೆ ಇರುವ ಅಪ್ಪೆ ಮಿಡಿಯ ಉಪ್ಪಿನಕಾಯಿ ತುಂಬಾ ರುಚಿ.  ನನ್ನ ಅಜ್ಜಿ ಉಪ್ಪಿನಕಾಯಿ   ಹಾಗೂ ಕಜ್ಜಾಯ ಮಾಡುವುದರಲ್ಲಿ ಎತ್ತಿದ ಕೈ.ತುಂಬಾ ರುಚಿಯಾಗಿ ಮಾಡುತ್ತಿದ್ದರು. ಬಾಗಮ್ಮ  ಮಾಡಿದ ಉಪ್ಪಿನಕಾಯಿ ಎಂದರೆ ತುಂಬಾ ಪ್ರಸಿದ್ಧಿ. ಆಗ  ಮಾವಿನಕಾಯಿ ಖರೀದಿಸುವುದು ಕಡಿಮೆ ಆಗಿತ್ತು ಅಂತಾನೇ ಹೇಳಬಹುದು. ಸಂಬಂಧಿಕರು ಪರಸ್ಪರ ವಿನಿಮಯ ಪದ್ಧತಿಯಲ್ಲಿ ಒಬ್ಬರಿಗೊಬ್ಬರು ಹಂಚಿಕೊಳ್ಳುವ ರೂಢಿ ಸಾಮಾನ್ಯವಾಗಿತ್ತು.  ಚಿಕ್ಕ ಚಿಕ್ಕ ಮಾವಿನ ಮಿಡಿಗಳನ್ನು ತಂದು ಶುಭ್ರವಾದ ಬಟ್ಟೆಯಲ್ಲಿ ಒರೆಸಿ ಸ್ವಚ್ಛ ಮಾಡಿದ ನಂತರ ಅವುಗಳನ್ನು ಮಣ್ಣಿನ ಬರಣಿಯಲ್ಲಿ ಉಪ್ಪು ಹಾಕಿ ( ಒಂದು ಪದರ ಉಪ್ಪು, ಒಂದು ಪದರ ಮಾವಿನ ಮಿಡಿ) ಬರಣಿಯನ್ನು ಬಟ್ಟೆಯಲ್ಲಿ ಕಟ್ಟಿ  ಇರಿಸುತ್ತಿದ್ದರು. ಅಪ್ಪೆ ಮಿಡಿ ಉಪ್ಪನ್ನು ಹೀರಿ ನೀರೊಡೆದು ನೆರಿ ನೆರಿಯಾಗಿ ಚಟ್ಟಿದ ಮೇಲೆ ತೆಗೆದು ಒಣ ಬಟ್ಟೆಯಲ್ಲಿ ಒರೆಸಿ ಇಟ್ಟು, ಉಪ್ಪು ನೀರನ್ನು ಚೆನ್ನಾಗಿ  ಕುದಿಸಿ ಆರಿಸಿಕೊಂಡು, ಉಪ್ಪಿನಕಾಯಿ ಮಸಾಲೆ ತಯಾರಿಸುತ್ತಿದ್ದರು.ಜೀರಿಗೆ, ಸಾಸಿವೆ, ಮೆಂತೆ, ಸ್ವಲ್ಪ ಕಾಳುಮೆಣಸು, ಸ್ವಲ್ಪ ಲವಂಗ, ಸಣ್ಣ ಚೂರು ಜಾಯಿಕಾಯಿ, ಒಂದು ಚೂರು  ಒಣ ಅರಿಸಿನ ಕೊಂಬು,   ಸ್ವಲ್ಪ ಇಂಗು ಎಲ್ಲವನ್ನೂ ಹುರಿದು ಪುಡಿ ಮಾಡಿ ಅದಕ್ಕೆ   ಒಣಮೆಣಸಿನ ಪುಡಿಯನ್ನು ಸೇರಿಸಿ, ಕುದಿಸಿ ಆರಿಸಿಟ್ಟ  ಉಪ್ಪುನೀರನ್ನು  ಹಾಕಿ  ಕಲ್ಲಿನ ಒರಳಲ್ಲಿ ಬೀಸಲಾಗುತ್ತಿತ್ತು. ಬೀಸಿದ ಮಸಾಲೆಗೆ ಅಪ್ಪೆಮಿಡಿಗಳನ್ನು ಹಾಕಿ ಚೆನ್ನಾಗಿ ಕಲಸಿದರೆ ಘಮ ಘಮ ಅಪ್ಪೆಮಿಡಿ ಉಪ್ಪಿನಕಾಯಿ ತಯಾರು. ಅದನ್ನು ಮಣ್ಣಿನ ಭರಣಿಯಲ್ಲೇ ತುಂಬಿ ಇಡಲಾಗುತ್ತಿತ್ತು. ಅದಕ್ಕೆ ಮೇಲಿಂದ ಮಡಿ ಬಟ್ಟೆಯನ್ನೇ ಕಟ್ಟಿ ಇಡಲಾಗುತ್ತಿತ್ತು. ಹೀಗೆ    ಕಟ್ಟಿಟ್ಟ ಉಪ್ಪಿನಕಾಯಿಯನ್ನು  ಬೆರಣಿಯಿಂದ  ತೆಗೆಯುವಾಗ ಕೈಯನ್ನು  ಚೆನ್ನಾಗಿ ಒಣಗಿಸಿ ಹಾಗೂ ತೆಗೆಯುವ ಹುಟ್ಟನ್ನೂ ಒಣ ಬಟ್ಟೆಯಲ್ಲಿ ಒರೆಸಿ ಸ್ವಲ್ಪ ಒಲೆಯಲ್ಲಿ ಕಾಯಿಸಿ ಒಣಗಿಸಿದ ನಂತರವೇ ಉಪಯೋಗಿಸುತ್ತಿದ್ದರು. ಆದ್ದರಿಂದಲೇ ಈ ಉಪ್ಪಿನಕಾಯಿ ಎರಡು ವರ್ಷಗಳ ವರೆಗೂ ಹಾಳಾಗದಂತೆ ಇರುತ್ತಿತ್ತು. ಹೀಗೆ ಕಟ್ಟಿಟ್ಟ  ಉಪ್ಪಿನಕಾಯಿಭರಣಿ,  ಮನೆಯ ಕತ್ತಲು ಕೋಣೆಯ ಅಟ್ಟ ಸೇರಿತು ಎಂದರೆ ಅದರ ರುಚಿ ನೋಡಬೇಕು ಎಂದಾದರೆ ಮುಂದಿನ ವರ್ಷದ ವರೆಗೆ ಕಾಯಬೇಕಿತ್ತು. ಯಾಕೆ ಹೇಳಿ!!  ಏಕೆಂದರೆ  ಕಳೆದ ವರ್ಷ ಮಾಡಿಟ್ಟ ಉಪ್ಪಿನಕಾಯಿ ಖರ್ಚಾಗಬೇಕಲ್ಲವೇ 🙂. ಹಳೆ  ಉಪ್ಪಿನಕಾಯಿ ಖರ್ಚಾದಮೇಲೇ ಹೊಸ ಉಪ್ಪಿನಕಾಯಿ ತೆಗೆಯುವುದು.

ಈ ಉಪ್ಪಿನಕಾಯಿಯನ್ನು ಕೇವಲ ಊಟದ ಜೊತೆ ನೆಂಜಿಕೊಳ್ಳಲು ಮಾತ್ರವಲ್ಲದೆ ಇನ್ನೂ ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸುತ್ತಾರೆ. ಅವಲಕ್ಕಿಗೆ    ಈ ಅಪ್ಪೆಮಿಡಿ ಉಪ್ಪಿನಕಾಯಿರಸ, ತೆಂಗಿನ ಎಣ್ಣೆ , ಸ್ವಲ್ಪ ತೆಂಗಿನಕಾಯಿ ತುರಿ ಹಾಕಿ ಕಲಸಿ  ತಿನ್ನಲು ತುಂಬಾ ರುಚಿ.   ಅಪ್ಪೆಮಿಡಿಗೆ  ಸ್ವಲ್ಪ ತೆಂಗಿನ ತುರಿ ಹಾಕಿ ರುಬ್ಬಿ ತಂಬುಳಿ ಮಾಡಿ, ಅನ್ನದ ಜೊತೆ ಕಲಸಿ ಊಟ ಮಾಡಬಹುದು.  ಅಪ್ಪೆಮಿಡಿ ಚಟ್ನಿ ಕೂಡ ತುಂಬಾ ರುಚಿ.

♦ ಮಮತಾ ಹೆಗಡೆ

Scroll to Top