ಅರ್ಥಶಾಸ್ತ್ರದಿಂದ ಆರ್ಥಿಕತಜ್ಞರಾಗುವವರು ಯಾರು?
ಜನರು ನನಗೆ ಎರಡು ಸರಳವಾದರೂ ಗಾಢವಾದ ಪ್ರಶ್ನೆಗಳನ್ನು ಸದಾ ಕೇಳುತ್ತಿರುತ್ತಾರೆ.
ಮೊದಲನೇಯದು: ಅರ್ಥಶಾಸ್ತ್ರದ ಅತ್ಯುತ್ತಮ ವಿವರಣೆ, ವ್ಯಾಖ್ಯಾನ ಯಾವುದು?
ಎರಡನೆಯದು: ಯಾರನ್ನು ನಿಜವಾಗಿ “ಆರ್ಥಿಕತಜ್ಞ” ಎಂದು ಕರೆಯಬಹುದು?
ಇವು ಸುಲಭದ ಪ್ರಶ್ನೆಗಳಲ್ಲ.
ಅತ್ಯಂತ ಪ್ರಸಿದ್ಧ ಆರ್ಥಿಕತಜ್ಞರೂ ಸಹ ಏಕಮತದಿಂದ ಉತ್ತರ ನೀಡಲು ಕಷ್ಟಪಡುತ್ತಾರೆ, ತೊದಲಿಸುತ್ತಾರೆ. ಸಾಮಾನ್ಯವಾಗಿ ನಾವು ಹೇಳುವುದು– ಅರ್ಥಶಾಸ್ತ್ರಕ್ಕೆ ಒಂದು ಏಕೈಕ, ವಿಶ್ವಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ವ್ಯಾಖ್ಯಾನವಿಲ್ಲ– ಎಂದು. ಈ ವಿಷಯವು ಶತಮಾನಗಳಿಂದ, ಗ್ರಾಮಗಳಿಂದ ರಾಷ್ಟ್ರದ ಮಟ್ಟದವರೆಗೆ, ವ್ಯಕ್ತಿಯಿಂದ ಜಾಗತಿಕ ಸಮಾಜಗಳವರೆಗೆ ವಿಸ್ತರಿಸುತ್ತಾ ಬಂದಿದೆ. “ಆರ್ಥಿಕತಜ್ಞ” ಎಂದು ಯಾರನ್ನು ಕರೆಯಬಹುದು ಎನ್ನುವ ಪ್ರಶ್ನೆ ಇನ್ನೂ ಜಟಿಲವಾದದ್ದು. ಶಿಸ್ತುಬದ್ಧವಾಗಿ ತರಬೇತಿ ಪಡೆದವರನ್ನೇ ಆರ್ಥಿಕತಜ್ಞರೆಂದು ಕರೆಯಬೇಕೇ? ಅಥವಾ ಸಂಪನ್ಮೂಲಗಳನ್ನು ಹೇಗೆ ಉತ್ಪಾದಿಸಲಾಗುತ್ತದೆ, ಹಂಚಲಾಗುತ್ತದೆ ಮತ್ತು ಬಳಸಲಾಗುತ್ತದೆ ಎಂಬುದನ್ನು ಅಧ್ಯಯನ ಮಾಡುವ, ’ಸಮಾಜಗಳು ಕೊರತೆಯ ನಡುವೆಯೂ ಹೇಗೆ ಆಯ್ಕೆಗಳನ್ನು ಮಾಡುತ್ತವೆ’ ಎಂಬುವದರ ಬಗ್ಗೆ ಚಿಂತಿಸುವ ಹಾಗೂ ಮಾರ್ಗದರ್ಶನ ಮಾಡುವ ಯಾರನ್ನಾದರೂ ಆರ್ಥಿಕತಜ್ಞರೆಂದು ಕರೆಯಬಹುದೇ? ಇತಿಹಾಸದ ಪ್ರಕಾರ ಹೇಳುವುದೆಂದರೆ ಎರಡನೆಯ ದೃಷ್ಟಿಕೋನವೇ ಹೆಚ್ಚು ಸರಿಹೊಂದುತ್ತದೆ.
ಆರಂಭದಿಂದಲೇ ಅರ್ಥಶಾಸ್ತ್ರವು ತತ್ತ್ವಶಾಸ್ತ್ರ, ಮನಶ್ಶಾಸ್ತ್ರ, ಸಮಾಜಶಾಸ್ತ್ರ, ರಾಜಕೀಯ ಮತ್ತು ಮಾನವಶಾಸ್ತ್ರಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. “ಯುಕ್ತಿಯುಕ್ತ ಗ್ರಾಹಕ” ಎಂಬ ಕಲ್ಪನೆ, ಉದಾಹರಣೆಗೆ, ಮೂಲತಃ ಮನಶ್ಶಾಸ್ತ್ರದ ಆಧಾರಿತವಾದದ್ದು. ಆರ್ಥಿಕತಜ್ಞರು ಬೆಲೆ ಅಥವಾ ಆದಾಯ ಬದಲಾವಣೆಗಳಿಗೆ ಪ್ರತಿಕ್ರಿಯಿಸುವ ’ಪ್ರತಿನಿಧಿ ಗ್ರಾಹಕ’ನನ್ನು ಕಲ್ಪಿಸುತ್ತಾರೆ. ಅಂಥವನ ಊಹೆಯ ಆಧಾರದ ಮೇಲೆ ನಾವು ಹೇಳಬಹುದು– ಹಾಲಿನ ಬೆಲೆ ಏರಿದರೆ ಅದರ ಬೇಡಿಕೆ ಕಡಿಮೆಯಾಗುತ್ತದೆ; ಆದಾಯ ಹೆಚ್ಚಾದರೆ ಕೆಲವು ವಸ್ತುಗಳ ಬೇಡಿಕೆ ಹೆಚ್ಚುತ್ತದೆ. ಈ ಸುಂದರ ನಿರ್ಧಾರಗಳ ಹಿಂದಿರುವುದು ಮಾನವ ವರ್ತನೆ ಮತ್ತು ಆಯ್ಕೆಗಳ ಬಗ್ಗೆ ತತ್ತ್ವಶಾಸ್ತ್ರ ಮತ್ತು ಸಮಾಜಶಾಸ್ತ್ರಗಳಿಂದ ಬಂದ ಮಾರ್ಗದರ್ಶನೆಗಳು– ಅದೂ ಒಬ್ಬ ’ಪ್ರತಿನಿಧಿ’ ಗ್ರಾಹಕನ ವರ್ತನೆಯ ಮೇಲಿಂದ. ಆದರೆ ಅದೇ ಒಂದು ನಿಶ್ಚಿತವಾಗಿ ಆಚರಿಸುವ ದಾರಿ ಎಂದು ಹೇಳಲಾಗುವದಿಲ್ಲ.
ಭಾರತದಲ್ಲಿ ಸುಮಾರು 2500 ವರ್ಷಗಳ ಹಿಂದೆ “ಆರ್ಥಶಾಸ್ತ್ರ” ಎಂಬ ಕಲ್ಪನೆ ಉದಯಿಸಿತು. ಕೌಟಿಲ್ಯ (ಚಾಣಕ್ಯ) ಅರ್ಥಶಾಸ್ತ್ರ ಎಂಬ ಗ್ರಂಥವನ್ನು ರಚಿಸಿ, ಅದನ್ನು “ಧನಶಾಸ್ತ್ರ” ಎಂದು ವಿವರಿಸಿದರು. ಇದು ಆಡಳಿತ ಮತ್ತು ರಾಜಕೀಯ ತಂತ್ರಗಳ ಕುರಿತು ಸಂಪೂರ್ಣ ಗ್ರಂಥವಾಗಿತ್ತು. ಇಂದಿನ ಅರ್ಥಶಾಸ್ತ್ರದಂತೆ ಅವರ ಬೋಧನೆಗಳು ಮನಶ್ಶಾಸ್ತ್ರ ಅಥವಾ ಯುಕ್ತಿಯುಕ್ತತೆಯನ್ನು ಆಧಾರವನ್ನಾಗಿಸಿರಲಿಲ್ಲ. ಬದಲಾಗಿ ನೀತಿ, ಧರ್ಮ, ಮತ್ತು ಸಮಾಜದ ಸ್ಥಿರತೆಯನ್ನು ಕೇಂದ್ರದ ಮುದ್ದತ್ತಿನಂತೆ ಬೋಧಿಸಿದ್ದರು. ಪ್ರಜೆಗಳಿಗೆ “ಧನ” ಎಂದರೆ ಜೀವನೋಪಾಯದ ಸಾಧನ. ಭೂಮಿ, ಪ್ರಾಣಿಗಳು ಮತ್ತು ಯುದ್ಧೋಪಕರಣಗಳು ರಾಷ್ಟ್ರದ ಸಂಪತ್ತೆಂದು ಅವರು ಪರಿಗಣಿಸಿದ್ದರು. “ಆನೆ ಕಾಡುಗಳು”ಗಳನ್ನು ಯುದ್ಧ ಪ್ರಾಣಿಗಳಿಗೆ ಮೇವು ಪೂರೈಸಲು ಮೀಸಲಾಗಿರಬೇಕು ಎಂದು ಹೇಳಿದರು; ’ಸರಿಯಾದ ಬೆಲೆ’ ಪದ್ಧತಿಯನ್ನು ರೂಪಿಸಿದ್ದರು; ಜನತೆಗೆ ಭದ್ರತೆ, ವಾಸಸ್ಥಳ ಮತ್ತು ಸೌಹಾರ್ದತೆ ಒದಗಿಸುವುದು ರಾಜನ ಕರ್ತವ್ಯವೆಂದು ಬೋಧಿಸಿದ್ದರು. ಅವರ ಆರ್ಥಿಕತೆಯು ಅಮೂರ್ತ ತತ್ತ್ವವಲ್ಲ, ಬದಲಾಗಿ ಜನಕಲ್ಯಾಣ ಮತ್ತು ಉತ್ತಮ ಆಡಳಿತದ ವ್ಯಾವಹಾರಿಕ ದೃಷ್ಟಿಕೋನ, ಅಷ್ಟೇ.
ಅದೇ ಕಾಲದಲ್ಲಿ ಗ್ರೀಕ್ ಚಿಂತಕರು ಕೂಡ ಆರ್ಥಿಕ ಚಿಂತನೆಗಳನ್ನು ರೂಪಿಸುತ್ತಿದ್ದರು (ಅದೂ ಸುಮಾರು 2300 ವರ್ಷಗಳ ಹಿಂದೆಯೇ). “ಅರ್ಥಶಾಸ್ತ್ರ” ಎಂಬ ಪದವೇ oikos (ಮನೆ, ಆಸ್ತಿ) ಮತ್ತು nomos (ನಿಯಮ, ನಿರ್ವಹಣೆ) ಎಂಬ ಗ್ರೀಕ್ ಪದಗಳಿಂದ ಹುಟ್ಟಿ ಬಂದಿದೆ. ಜೆನೋಫನ್, ಪ್ಲೇಟೋ, ಅರಿಸ್ಟಾಟಲ್ ಮುಂತಾದವರು GDP ಅಥವಾ ಮಾರುಕಟ್ಟೆಗಳನ್ನು ಅಧ್ಯಯನ ಮಾಡಿರಲಿಲ್ಲ. ಅವರ ವಿಚಾರದಂತೆ ಅರ್ಥಶಾಸ್ತ್ರ ಎಂದರೆ ಮನೆ–ಮಠ, ಆಸ್ತಿ ಮತ್ತು ರಾಜ್ಯವನ್ನು ನ್ಯಾಯ ಮತ್ತು ಸುಖದ ಬದುಕಿಗಾಗಿ ನಿರ್ವಹಿಸುವ ಒಂದು ಕಲೆ. ಪ್ಲೇಟೋ ನೀತಿ ಮತ್ತು ನ್ಯಾಯವನ್ನು ಒತ್ತಿಹೇಳಿದರೆ, ಅರಿಸ್ಟಾಟಲ್ ಸಂಪತ್ತು ಮತ್ತು ಸಂಪನ್ಮೂಲಗಳನ್ನು ನಿಯಂತ್ರಿಸುವ ನೈತಿಕ ವಿಜ್ಞಾನವೆಂದು ಬೋಧಿಸಿದ್ದರು.
ಚೀನಾದ ಕನಫ಼ೂಸಿಯಸ್ ಕೂಡ ಇಂದಿಗೆ ಸುಮಾರು 2500 ವರ್ಷಗಳ ಹಿಂದಿನ ಒಬ್ಬ ನೈತಿಕ ತತ್ತ್ವಜ್ಞನೆಂದು ಹೇಳಬಹುದು. ಆದರೆ ಅವರ ಬೋಧನೆಗಳಲ್ಲಿ ಆರ್ಥಿಕ ಅಂಶಗಳು ಸ್ವಲ್ಪ ಆಳವಾಗಿ ಬೇರು ಬಿಟ್ಟಿವೆ. ’ಜೆನ್’ (ದಯೆ, ಮಾನವೀಯತೆ) ಮತ್ತು ’ಯಿ ’(ನೀತಿಸಮ್ಮತತೆ) ಎಂಬ ತತ್ತ್ವಗಳು ಅವರ ದಾರ್ಶನಿಕ ಆರ್ಥಿಕತೆಯ ಹೃದಯ. ಅವರು ದುರಾಸೆ ಮತ್ತು ಅನ್ಯಾಯದ ಸಂಪತ್ತುಗಳ ಬಗ್ಗೆ ಎಚ್ಚರಿಸಿದ್ದರು; ದಾರಿದ್ರ್ಯ, ಅಸಮಾನತೆ, ಮತ್ತು ಕಲ್ಯಾಣದ ಬಗ್ಗೆ ಆಳವಾಗಿ ಯೋಚಿಸಿದ್ದರು. “ಅನೇಕ ಉತ್ಪಾದಕರು, ಕಡಿಮೆ ಗ್ರಾಹಕರು ಇದ್ದರೆ ಸಂಪತ್ತು ಕೊರತೆಯಾಗದು” ಎಂಬ ಅವರ ಆಲೋಚನೆ– 1776ರ ಶತಕ ದಲ್ಲಿನ ಆಡಂ ಸ್ಮಿತ್ ಅವರ ವೆಲ್ತ್ ಆಫ್ ನೇಷನ್ಸ್ ಗೆ ಬಹಳೇ ಮುಂಚಿನ ಸಂಕೇತ.
ಆಧುನಿಕ ಕಾಲಕ್ಕೆ ಬಂದಾಗ, ಆಡಂ ಸ್ಮಿತ್, ಗ್ಲಾಸ್ಗೋ ವಿಶ್ವವಿದ್ಯಾಲಯದ ನೈತಿಕ ತತ್ತ್ವ ಪ್ರಾಧ್ಯಾಪಕ, 1776ರಲ್ಲಿ ವೆಲ್ಥ ಆಫ್ ನೇಷನ್ಸ್ ಎಂಬ ಪ್ರಸಿದ್ಧ ಕೃತಿಯನ್ನು ಬರೆದರು. ಅವರು ಅರ್ಥಶಾಸ್ತ್ರವನ್ನು “ಸಮಾಜವು ಕೊರತೆಯಲ್ಲಿರುವ ಸಂಪನ್ಮೂಲಗಳನ್ನು ಅಸೀಮ ಆಸೆಗಳನ್ನು ಪೂರೈಸಲು ಹೇಗೆ ಹಂಚಿಕೊಳ್ಳುತ್ತದೆ” ಎಂದು ವ್ಯಾಖ್ಯಾನಿಸಿದರು. ವಿಶೇಷೀಕರಣ, ಕಾರ್ಮಿಕರ ವಿಭಾಗ, ಮುಕ್ತ ವಾಣಿಜ್ಯ, ತೆರಿಗೆ ಪದ್ಧತಿ—ಇವುಗಳ ಮೂಲಕ ಅವರು ಶಾಸ್ತ್ರಕ್ಕೆ ಅಡಿಗಲ್ಲು ಹಾಕಿದರು. ಆದರೆ ಅವರು ಸ್ವತಃ ಅರ್ಥಶಾಸ್ತ್ರದಲ್ಲಿ ಯಾವುದೇ ಶಿಸ್ತುಬದ್ಧ ತರಬೇತಿ ಪಡೆದಿರಲಿಲ್ಲ; ಅವರು ಒಬ್ಬ ತತ್ತ್ವ ಜ್ಞಾನಿಯಾಗಿದ್ದರು.
ಅವರ ನಂತರ ಆಲ್ಫ್ರೆಡ್ ಮಾರ್ಷಲ್ ಮತ್ತು ಲಿಒನಿಡ್ ರಾಬಿನ್ಸ್ (1932 ರಲ್ಲಿ) ಆರ್ಥಿಕ ತತ್ವವನ್ನು ಮತ್ತಷ್ಟು ವಿಸ್ತರಿಸಿದ್ದರು. ಅಲ್ಫ್ರೆಡ್ ಮಾರ್ಷಲ್ (1890) “ಸಾಮಾನ್ಯ ಜೀವನದಲ್ಲಿ ಮಾನವರ ಅಧ್ಯಯನ”ವೆಂದು ವ್ಯಾಖ್ಯಾನಿಸಿ, ಸೂಕ್ಷ್ಮ ಆರ್ಥಿಕತೆಯ ಅಡಿಪಾಯ ಹಾಕಿದ್ದರು. ಲಿಒನಿಡ್ ರಾಬಿನ್ಸ್ (1932) ಪ್ರಸಿದ್ಧ ವ್ಯಾಖ್ಯಾನ ಒಂದನ್ನು ನೀಡಿದ್ದರು: “ಅರ್ಥಶಾಸ್ತ್ರವೆಂದರೆ ಗುರಿಗಳು ಮತ್ತು ಕೊರತೆಯ ಸಂಪನ್ಮೂಲಗಳ ನಡುವಿನ ಸಂಬಂಧವನ್ನು ಅಧ್ಯಯನ ಮಾಡುವ ವಿಜ್ಞಾನ” ಎಂದು. ಅಂದಂತೆ, ಜೊನ್ ವೊನ್ ನ್ಯೂಮನ್ ಒಬ್ಬ ಅತಿ ಜಗತ್ಪ್ರಸಿದ್ಧ ಭೌತ ಶಾಸ್ತ್ರಜ್ಞರಲ್ಲವೆ (1903-1957)? ಆದರೆ ಅವರು ಬರೆದ ಸಂಶೋಧನಾ ಲೇಖನ ಅರ್ಥ ಶಾಸ್ತ್ರದಲ್ಲಿ, ಅದೂ ಒಂದು ಬೃಹತ್ ಅರ್ಥ ಶಾಸ್ತ್ರಕ್ಕೆ ಸಂಬಂಧಿಸಿದ ಅತ್ಯುತ್ತಮ ಅಭಿವೃದ್ಧಿಗೆ ಬೇಕಾಗುವ ಬಂಡವಾಳ ಹೂಡಿಕೆಯ ತತ್ವವನ್ನು ಹುಡುಕಿ ಸಿದ್ಧಾಂತವನ್ನು ರೂಪಿಸಿದ್ದರು – ’ಬಂಗಾರದಂಥ ಮೂಲ ಧನದ ವೃದ್ಧಿ’ ಎಂದೇ ಹೆಸರದ ಸಿದ್ಧಾಂತ ಅದು. ಆ ತತ್ವವನ್ನು ನಾವು ಇಂದಿಗೂ ’ಫಂಡಮೆಂಟಲ್ ಆರ್ಥಿಕ ತತ್ವ’ ಎಂದು ಗಣಿಸುತ್ತೇವೆ. ಆತನು ಅಂದಿನ ಕಾಲದಲ್ಲಿ ಹೆಸರಾದ ಒಬ್ಬ ಗಣಿತ ತಜ್ಞ ಒಸ್ಕಾರ್ ಮೊರ್ಗನ್ ಸ್ಟೈನ್ ಅವರ ಸಂಗಡ ಒಂದು ಹೆಸರಾದ ಅರ್ಥಶಾಸ್ತ್ರದ ಪುಸ್ತಕವನ್ನು ಬರೆದರು 1944ರಲ್ಲಿ.
ಆದರೆ “ಆರ್ಥಿಕತಜ್ಞ” ಯಾರು? ಎಂಬ ಪ್ರಶ್ನೆ ಇನ್ನೂ ಉಳಿದಿದೆ. ಇತಿಹಾಸವನ್ನು ಅಧ್ಯಯಿಸಿದರೆ ಅನೇಕ ಪ್ರಭಾವಶೀಲ ಆರ್ಥಿಕ ಚಿಂತಕರು ಅರ್ಥಶಾಸ್ತ್ರದಲ್ಲಿ ಪದವಿಗಳನ್ನೇ ಹೊಂದಿರಲಿಲ್ಲ. ಜೊನ್ ಲಾಕ್, ರುಸ್ಸೋ ರಂಥ ತತ್ತ್ವಜ್ಞರು; ದೇವಿಡ್ ಹ್ಯೂಮ್ ಇತಿಹಾಸಕಾರ; ಕಾರ್ಲ್ ಮಾರ್ಕ್ಸ್ ಕಾನೂನು ಮತ್ತು ತತ್ತ್ವಶಾಸ್ತ್ರ ವಿದ್ಯಾರ್ಥಿ; ರಘುರಾಮ್ ರಾಜನ್ ಎಂಜಿನಿಯರ್. ವಿಚಾರ ಮಾಡಿರಿ. ಅರ್ಥ ಶಾಸ್ತ್ರದಲ್ಲಿ ನೋಬೆಲ್ ಪುರಸ್ಕೃತರಲ್ಲಿ ಹೆರ್ಬರ್ಟ್ ಸೈಮನ್ (ಮನಶ್ಶಾಸ್ತ್ರ), ಡ್ಯಾನಿಯಲ್ ಕಹ್ನೆಮನ್ (ಮನಶ್ಶಾಸ್ತ್ರ), ಎಲಿನೋರ್ ಓಸ್ಟ್ರಮ್ (ರಾಜಕೀಯಶಾಸ್ತ್ರ), ಜಾನ್ ನ್ಯಾಶ್ (ಗಣಿತಜ್ಞ), ವರ್ನನ್ ಸ್ಮಿತ್ (ಎಂಜಿನಿಯರಿಂಗ್) ಮುಂತಾದವರ 10-15 ಹೆಸರುಗಳು ನೆನಪಿಗೆ ಬರುತ್ತದೆ. ಅವರೆಲ್ಲ ಅರ್ಥಶಾಸ್ತ್ರದಲ್ಲಿ ತರಬೇತಿ ಪಡೆದವರೇ ಅಲ್ಲ. ಆದರೂ ಅವರ ಸಂಶೋಧನೆಗಳು ಅರ್ಥಶಾಸ್ತ್ರವನ್ನು ಹೊಸ ಹೊಸ ದಿಕ್ಕುಗಳಿಗೆ ತೆಗೆದುಕೊಂಡೊಯ್ದವು.
ಇವರಲ್ಲಿ ಅನೇಕರಿಗೆ ಅರ್ಥಶಾಸ್ತ್ರದ ಡಿಗ್ರೀ ಯಾ ಡಿಪ್ಲೋಮಾ ಇರಲಿಲ್ಲ. ಆದರೆ ಆರ್ಥಿಕ ದೃಷ್ಟಿಯಿಂದ ಚಿಂತಿಸುವ ಶೈಲಿಯಲ್ಲಿ, ಉತ್ಪಾದನೆ, ಹಂಚಿಕೆ, ಬಳಕೆ, ಉಳಿಸುವಿಕೆ, ಕಲ್ಯಾಣ ಮತ್ತು ಆಡಳಿತದ ನೈಜ ಸಮಸ್ಯೆಗಳಿಗೆ ಆರ್ಥಿಕ ದೃಷ್ಟಿಕೋನವನ್ನು ಅನ್ವಯಿಸುವ ಸಾಮರ್ಥ್ಯಗಳನ್ನು ಪಡೆದಿದ್ದರು. ಪ್ಲೇಟೋ, ಕಾಂಫ್ಯೂಷಿಯಸ್, ಕೌಟಿಲ್ಯ, ಆಡಂ ಸ್ಮಿತ್, ಅಥವಾ ಕಹ್ನೆಮನ್—ಯಾರೇ ಆಗಿರಲಿ, ಅವರಲ್ಲಿ ಸಾಮಾನ್ಯ ಗುಣವೆಂದರೆ “ಮಾನವನ ಆಯ್ಕೆಗಳು ಮತ್ತು ಸಮಾಜದ ರೂಪರೇಷೆಗಳು ಕೊರತೆಯ ಸಂಪನ್ಮೂಲಗಳೊಂದಿಗೆ ಹೇಗೆ ಕಾರ್ಯ ನಿರ್ವಹಿಸುತ್ತವೆ” ಎಂಬ ಕುತೂಹಲ.
ಅಂತಿಮವಾಗಿ, ಅರ್ಥಶಾಸ್ತ್ರವನ್ನು ಇಂದು ವರ್ತನಾಶಾಸ್ತ್ರವೆಂದು ಅಥವಾ ಒಂದು ಪ್ರಾಯೋಗಿಕ ಶಾಸ್ತ್ರವೆಂದು ಕಾಣಬಹುದು. ಅಲ್ಲದೇ, ಇದು ಇತರೆ ಸಮಾಜಶಾಸ್ತ್ರಗಳೊಂದಿಗೆ ನಿಕಟವಾಗಿ ಜೋಡಿಕೊಂಡಿದೆ ಎಂಬುದೂ ಸತ್ಯ. ಅದರ ತತ್ವಗಳು ಮಾನವ ವರ್ತನೆಗೆ ಮಾರ್ಗ ದರ್ಶನೀಯವಾಗಿ ಹುಟ್ಟಿಕೊಂಡಿವೆ. ಅವು ಯಾವಾಗಲೂ ಶುದ್ಧ ನಿಖರವಾಗಿಲ್ಲ, ಆದರೆ ಮನಶ್ಶಾಸ್ತ್ರ, ತತ್ತ್ವಶಾಸ್ತ್ರ, ರಾಜಕೀಯ, ಸಮಾಜಶಾಸ್ತ್ರಗಳಿಂದ ಪೋಷಣೆ ಪಡೆಯುವಾಗ ಅವು ಹೆಚ್ಚು ಬಲಿಷ್ಠವಾಗುತ್ತವೆ. ಈ ಅರ್ಥದಲ್ಲಿ ಆರ್ಥಿಕತಜ್ಞರೆಂದರೆ ಸಮಾಜವನ್ನು ಕಲ್ಯಾಣ, ಅಭಿವೃದ್ಧಿ, ಮತ್ತು ಸ್ಥಿರತೆಯತ್ತ ಕೊಂಡೊಯ್ಯುವ ಒಬ್ಬ ತಜ್ಞ ಎಂದು ಕರೆಯ ಬಹುದು.
ಹೀಗಾಗಿ, ಇತಿಹಾಸದಲ್ಲಿ “ಮಹಾನ್ ಆರ್ಥಿಕತಜ್ಞರು” ಎಂದೆಣಿಸಲ್ಪಟ್ಟ ಅನೇಕರು ತಮ್ಮ ಕಾಲದಲ್ಲಿ ತತ್ತ್ವಜ್ಞರು, ಸುಧಾರಕರು, ವಿಜ್ಞಾನಿಗಳು, ಅಥವಾ ರಾಜ್ಯಪುರುಷರೂ ಆಗಿದ್ದರು. ಅವರ ಪರಂಪರೆ ನಮಗೆ ನೆನಪಿಸುತ್ತದೆ: ಅರ್ಥಶಾಸ್ತ್ರವೆಂದರೆ ಕೇವಲ ತಾಂತ್ರಿಕ ಶಿಸ್ತು ಅಲ್ಲ; ಅದು ಮಾನವನು ಹೇಗೆ ಬದುಕುತ್ತಾನೆ, ಸಮಾಜವನ್ನು ಹೇಗೆ ಸಂಘಟಿಸುತ್ತಾನೆ, ಮತ್ತು ಸಮೃದ್ಧಿಯನ್ನು ಹೇಗೆ ಹುಡುಕುತ್ತಾನೆ ಎಂಬುದರ ಕುರಿತಾದ ಒಂದು ವಿಶಾಲವಾದ ಮಾನವೀಯ ಪರಿಶೀಲನೆ.
ಅಂತೆಯೇ, ಇಂಥ ಪ್ರಶ್ನೆಗಳು ಇತರೇ ಜ್ಞಾನ ಮಾರ್ಗಗಳಲ್ಲಿಯೂ ಹುಟ್ಟುತ್ತವೆ. ಗಲಿಲಿಯೋ ಒಬ್ಬ ಭೌತಿಕ ಶಾಸ್ತ್ರಜ್ಞ ಎಂದು ಹೆಸರಾದರೂ, ಅವನು ಆ ಶಾಸ್ತ್ರವನ್ನು ಕಲಿತವನಲ್ಲ. ಪಾಶ್ಚಿಮಾತ್ಯದ ಸಂಗೀತದ ಮೂಲ ಭೂತ ತತ್ವಗಳನ್ನು ಹುಡುಕಿದ ಪೈಥೊಗೊರಸ್, ಸ್ವತಃ ಒಬ್ಬ ಗಣಿತಜ್ಞನಾಗಿದ್ದನೇ ಹೊರತು ಪಾಶ್ಚಿಮಾತ್ಯ ಸಂಗೀತದ ಗಂಧ ಗಾಳಿಯೂ ಅವನಿಗಿರಲಿಲ್ಲ. ಅಂತೆಯೇ ಎಲ್ಲಾ ಸಾಮಾಜಿಕ, ವೈಜ್ಞಾನಿಕ ಶಾಸ್ತ್ರಗಳು ಹುಟ್ಟಿ ಬೆಳೆದಿದ್ದೇ ಹೀಗೆ ಅಲ್ಲವೆ ?
ಗೋಪಾಲ ಕಡೇಕೋಡಿ
ಅಂತೂ ಇಂತು ಕೂಡಿದೆವು ಇಂದು
ಅರವತ್ತು ನಾಲ್ಕು ಕಳೆದಿವೆ ವರುಷಗಳು
ಎಸ್‌ಎಸ್‌ಸಿ ದಾಟಿ ಹೊರಬಂದ ದಿನಗಳು
ಸಾಧ್ಯವಾಯಿತು ಸುಮಾರು 20 ಸಹಪಾಠಿಗಳು
ನೆನಪಿಗೆ ಬಂದವು ಕಳೆದ ಸಂದರ್ಭಗಳು
ಎಷ್ಟೋ ಗೆಳೆಯರ ಮುಖದಲ್ಲೇ ಅತಿ ಮಾರ್ಪಾಟು
ಕೆಲವರ ಧ್ವನಿಯೇ ಅವರ ಹಿಂದಿನ ಗುರುತಿನ ಚೀಟಿ
ಕೆಲವರ ನಡಿಗೆಯೇ ಅವರ ಪರಿಚಯ ಪತ್ರ
ಸಂಜ್ಞೆ, ವಿಚಾರವೇ ಕೆಲವರ ಪರಿಚಯದ ಸಾಕ್ಷ್ಯಚಿತ್ರ
ಮರುಕಳಿಸಿದೆವು ಅಂದಿನ ವರ್ಷಗಳ ದಿನ ಗಂಟೆಗಳೆಲ್ಲ
ಅಂದಿನ ಕಲಿತ ಶಾಲೆಯ ಇಮಾರತೇ ಇಂದಿಲ್ಲವಲ್ಲ!
ಅಂದಿನ ಗುರುವೃಂದವೂ ನಮ್ಮನ್ನೆಲ್ಲ ಅಗಲಿದರಲ್ಲ!
ಆದರೆ ಕಲಿತ ವಿದ್ಯೆಯೊಂದೇ ಉಳಿದು ಜಡಬೇರಾಗಿದೆಯಲ್ಲ!
ಎಷ್ಟೋ ಸಹಪಾಠಿಗಳೂ ನಮ್ಮನ್ನೆಲ್ಲ ಅಗಲಿದಾರಲ್ಲವೇ?
ಅವರೆಲ್ಲರನ್ನೂ ನೆನಪಿಸುವುದೇ ನಮ್ಮ ಕರ್ತವ್ಯವಲ್ಲವೇ?
ಕುಳಿತೆಲ್ಲೋ ನಮ್ಮಂದಿರನ್ನು ನೋಡುತ್ತ ಹರಸುತ್ತಿದ್ದಾರಲ್ಲವೇ?
ಅವರೆಲ್ಲರ ಸಂಗಡ ಒಡನಾಟ ಚಿರ ಸ್ಮಾರಕಗಳಾಗಿವೆಯಲ್ಲವೇ?
ನಿರ್ಧರಿಸಿದೆವು ಇನ್ನಾದರೂ ಒಂದಾಗಿರಬೇಕು
ಸಿಹಿ-ಕಹಿ ನೆನಪುಗಳನು ಮೆಲುಕಾಡಿಸಬೇಕು
ನಾವೆಲ್ಲ ಒಂದೇ ಮಾರಿಕಾಂಬಾ ಶಾಲೆಯ ಮಕ್ಕಳು
ಕರ್ತವ್ಯದಿಂದ ಪತಾಕೆ ಸದಾ ಹಾರಿಸುತ್ತಿರಬೇಕು
ಡಾ. ಗೋಪಾಲಕೃಷ್ಣ ಕಡೇಕೋಡಿ, ಧಾರವಾಡ
1958ರಲ್ಲಿ ಶಿರಸಿಯ ಶ್ರೀ ಮಾರಿಕಾಂಬಾ ಸರ್ಕಾರಿ ಹೈಸ್ಕೂಲಿನಿಂದ ಎಸ್.ಎಸ್.ಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಇತ್ತೀಚೆಗೆ ಶಿರಸಿಯಲ್ಲಿ ಕಲೆತು ತಮ್ಮ ಗತ ದಿನಗಳನ್ನು ನೆನಪಿಸಿಕೊಂಡ ಸಂದರ್ಭದಲ್ಲಿ ರಚಿಸಿದ ಕವನ ಇದು.
ಅಂದು ಇಂದು, ಎಂದು?
ಅಂದು ಎಂದೂ ಮಾತಾಡುತ್ತಿರಲಿಲ್ಲ
’ಯಾರೊಂದಿಗೆ?’- ಎಂದು ನೆನಪಿಸಬೇಕಾಗಿಲ್ಲ
ಇಂದು ಅವಕ್ಯಾಕೋ ಅವಕಾಶವೇ ಬರುತ್ತಿಲ್ಲ
ಇಷ್ಟು ವರ್ಷ ಕಳೆದರೂ ಇದು ಯಾಕೆ ಅನಿಸಿರಲಿಲ್ಲ?
ಲವಲವಿಕೆಯೋ ಮನ ತುಂಬಾ ಇತ್ತು
ಕಣ್ ಸನ್ನೆಯಲ್ಲೇ ಸ್ನೇಹದ ಬೆಸುಗೆಯಿತ್ತು
ಎದುರು ಬಂದರೂ ಕೈ ಸನ್ನೆಯೊಂದಿಗೆ
ತಲೆಯಾಡಿಸುವುದೇ ಒಂದು ವೃತ್ತಿಯಾಗಿತ್ತು
ಹಂಚಿಕೊಳ್ಳಲಿಕ್ಕೋ, ವಿಷಯಗಳೆಷ್ಟೋ?
ನಡಿಕೆ, ನುಡಿಕೆ, ವಿಧ ವಿಧ ಜಡೆಗಳ ಮುಡಿಕೆ
ಬಣ್ಣದ ಸೀರೆ, ಹೊಸ ಹೊಸ ಪ್ಯಾಂಟಿನ ಆಡಂಬರಿಕೆ
ವಾಚೋ, ಬೂಟೋ, ಹರಟೆಯೋ, ಕೆಣಸುವ ನಡಿಕೆ
ಎರಡು ಬೆಂಚಿನ ಸಾಲು ತುಂಬಿ
ಹುಡುಗರೋ ಕಾಲು ನೀಡಿ ಹಂಚ್ಕೊಂಡಿದ್ರೆ
ಒಂದೇ ಸಾಲಿನ ಬೆಂಚಲ್ಲಿ ತುರುಕಿ
ಹುಡುಗಿಯರೆಲ್ಲಾ ಹಿಂಡಿಕೊಳ್ತಿದ್ರು
ಗುರುಗಳಿಗೆ ಮಾತ್ರ ಎಲ್ಲರೂ ಒಂದೇ
ಪ್ರಶ್ನೆ ಕೇಳಿ ಸುತ್ತೆಲ್ಲ ಕಣ್ಣರಳಿಸಿದರೆ
ಉತ್ತರ ಬರುವುದು ಹುಡುಗಿಯರಿಂದೇ
ತಲೆಯಾಡಿಸಿ ಸರಿ ಎನ್ನುವುದೇ ಹುಡುಗರ ದಂಧೆ
ವಾರ್ಷಿಕ ಉತ್ಸವ ಅದೆಂಥ ಸಂಭ್ರಮ!
ಹುಡುಗಿಯರಷ್ಟೇ ಹುಡುಗರೂ ಮುಂದೆ
ಹಂಚಿಕೊಂಡೆವು ಕೆಲಸವೆಲ್ಲ ಕರ್ತವ್ಯದಂತೇ
ತಂದೆವು ಶಾಲೆಯ ಶ್ರೇಷ್ಠ ಪ್ರಶಸ್ತಿಯ ಪದಕೆ
ಕಳೆದ ದಿನಗಳು ತಿರುಗಿ ಮತ್ತೆಂದೂ ಬರುವದಿಲ್ಲ
ಮುಂದಿನ ದಿನಗಳೋ ಇನ್ನೆಷ್ಟಿದೆಯೋ ಗೊತ್ತಿಲ್ಲ
ಬುದ್ಧನು ಅಂದಂತೆ, ’ಇಂದಿನ ದಿನಗಳಲ್ಲಿಯೇ
ಒಂದಾಗಿ ಬದುಕಲು ಕಲಿಯಬೇಕಲ್ಲವೇ’?
ನಾವೆಲ್ಲ ಒಂದೇ ಮಾರಿಕಾಂಬಾ ಶಾಲೆಯ ಮಕ್ಕಳು
ಅಂದಿನ ದಿನಗಳು ಬರದಿದ್ದರೂ ಮುಂದಾಗಬೇಕು
ಹುಡುಗ-ಹುಡುಗಿಯರ ಕಣ್ಣು-ಬೆರಳು ಸನ್ನೆಗಿಂತ
ಮಾತು ಬೆಳೆಸಿ ವಿಚಾರ ಹರಿಸಿ ಒಂದಾಗಬೇಕು
ದಿನಗಳಿವೆ, ಆ ದಿನಗಳನು ಮರುಕಳಿಸಲು
ಇನ್ನಾದರೂ ನಮ್ಮಲ್ಲಿಯ ಸ್ನೇಹ ಬೆಳೆಯಲಿ
ವಿಚಾರ, ಆಚಾರ, ಭಾವನೆಗಳ ನದಿ ಹರಿದಾಡಲಿ
ಸುಖ-ದುಃಖ ಹಂಚಿಕೊಂಡು ಸಮತೆ ಬಾಳಾಗಲಿ
ಡಾ. ಗೋಪಾಲ ಕೃಷ್ಣ ಕಡೇಕೋಡಿ
(Prelude: About six to seven decades back, in co-ed high schools, the boys as a group, as much as the girls, never used to talk to the other group. Yet, all the classroom activities- be they competitions, sports, cultural activities, or other school activities, were carried out smoothly and efficiently. Reflecting flashbacking today, back to those days from his Shri Marikamba High School, Sirsi, the author has scribbled this poem.)
Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.
