ಹಿನ್ನೆಲೆ:

ಬಹಳ ನನ್ನ ಸ್ನೇಹಿತರಿಗೆ ನನ್ನ “ಕಾರಿನ ದೂರದ ಪ್ರಯಾಣದ ಹುಚ್ಚು” ಗೊತ್ತಿದೆ. ಈ ಹವ್ಯಾಸವನ್ನು ನೀವು “ಹುಚ್ಚು” ಅಥವಾ “ವ್ಯಾಮೋಹ” ಅಂದು ಕರೆದರೂ ಪರವಾಗಿಲ್ಲ. ಒಟ್ಟಿನಲ್ಲಿ, ನನ್ನ ಪ್ರಕಾರ, ದೇಶವನ್ನು ನೋಡಿ, ಅರಿತು ಆನಂದಿಸಬೇಕಿದ್ದರೆ, ರಸ್ತೆಯ ಪ್ರಯಾಣದ ಮೂಲಕ ಮಾತ್ರ ಸಾಧ್ಯ! ನಾವು ಇದ್ದ ಸ್ಥಳದಿಂದ ಪ್ರವಾಸಿ ಸ್ಥಳ ಮುಟ್ಟುವ ತನಕದ ಜಾಗಗಳ ವೈಶಿಷ್ಟತೆ ಅಥವಾ ಅದರ ಸೌಂದರ್ಯವನ್ನು ನೋಡಿ ಆನಂದಿಸಬಹುದು.

 

ಬಹಳ ವರ್ಷಗಳಿಂದ, ಭಾರತದ ನಕ್ಷೆಯನ್ನು ನೋಡಿದಾಗಲೆಲ್ಲಾ, ನೇಪಾಳಕ್ಕೆ ರಸ್ತೆಯ ಮೂಲಕ ಯಾಕೆ ಭೇಟಿ ಮಾಡಬಾರದು ಅನ್ನುವ ಪ್ರಶ್ನೆ ಆಗಾಗ ಏಳುತ್ತಿತು. ನೇಪಾಳಕ್ಕೆ ಹೋಗಬೇಕೆಂಬ ಆಸೆ ದಿನೇ ದಿನೇ ಹೆಚ್ಚಾಗುತ್ತಿತ್ತು. ವಿಮಾನದಲ್ಲಿ ಹೋಗುವ ಇಚ್ಛೆ ಖಂಡಿತ ಇರಲಿಲ್ಲ. ಹಾಗಾಗಿ, ನನ್ನ ಸಮಾನ ಮನಸ್ಸಿನ ಮತ್ತೂ ಸಾಹಸಮಯ ಸ್ನೇಹಿತರನ್ನು ಹುಡುಕುತ್ತಿದ್ದೆ.

 

ಅದೃಷ್ಟ ನಿಮ್ಮಕಡೆ ಒಲಿದಾಗ, ಹಿರಿಯರು ಹೇಳಿದಂತೆ, ಎಲ್ಲವೂ ಜೊತೆ ಕೂಡುತ್ತೆ.    ಕಾಕತಾಳೀಯದಂತೆ, ನಮ್ಮ ಮೈಸೂರಿನ ಕಾಲೇಜು ಸ್ನೇಹಿತರು (ಸದಾಶಿವ, ಸುಮಾ, ಶ್ರೀಪಾದ), ಬಹಳದಿನಗಳ ಒತ್ತಾಯದ ಮೇರೆಗೆ, ನಾವು ದೆಹಲಿಯಲ್ಲಿ ಇರುವಾಗಲೇ ಉತ್ತರ ಭಾರತದ ಪ್ರಯಾಣದ ನಿಮಿತ್ತ, ನಮ್ಮ ಜೊತೆ ಇದ್ದು, ಹರಿದ್ವಾರಕ್ಕೆ ನಮ್ಮ ಕಾರಿನಲ್ಲೇ ಪ್ರಯಾಣ ಮಾಡಿದರು. ಕಾರಿನ ಪ್ರಯಾಣ ಅಂದರೆ, ಸುಮಾಗೆ ಸ್ವಲ್ಪ ಭಯ. ಆದರೆ, ಹರಿದ್ವಾರದ ಕಾರಿನ ಪ್ರವಾಸದ ನಂತರ, ಸುಮಾಗೆ ಸ್ವಲ್ಪ ಧೈರ್ಯ ಬಂತು. “ಈ ಕಾರಿನಲ್ಲಿ, ಈ ಚಾಲಕನ (ನನ್ನ ಚಾಲನೆ!)  ಜೊತೆ ಆರಾಮವಾಗಿ ಎಲ್ಲೂ ಪ್ರಯಾಣಿಸಬಹುದು” ಅನ್ನುವ ಸುಮಾ ಅವರ ಅಭಿಪ್ರಾಯ, ನನ್ನ ಬಹು ದಿನಗಳ “ನೇಪಾಳ ಪ್ರವಾಸ” ದ ಕನಸು ನನಸಾಗಲು ಪ್ರೇರಕವಾಯಿತು!

 

ಇನ್ನೇನು ತಡ! ಮನೆಗೆ ತಿರುಗಿ ಬಂದಮೇಲೆ, “ನೇಪಾಳಕ್ಕೆ ರಸ್ತೆ ಮೂಲಕ ಪ್ರವಾಸದ” ಕುರಿತಾಗಿ ಅವರ ಮುಂದೆ ಪ್ರಸ್ತಾಪ ಇಟ್ಟೆ. ಮಡದಿ ರೋಹಿಣಿಯಿಂದಲೂ “ನೇಪಾಳ ಒಳ್ಳೆಯ ಪ್ರವಾಸಿ ಸ್ಥಳ, ಹೋಗಿ ಬನ್ನಿ” ಅನ್ನುವ ಪ್ರೋತ್ಸಾಹದ ನುಡಿ! ಸದಾಶಿವ ಮತ್ತು ಶ್ರೀಪಾದ  ತಕ್ಷಣವೇ ಒಪ್ಪಿದರೂ, ಸುಮಾ ಅವರಿಗೆ ಸ್ವಲ್ಪ ಹಿಂದೇಟು. “ಅಷ್ಟು ದೂರ, ರಸ್ತೆ ಸುರಕ್ಷಿತವ, ಬಹಳ ಕಷ್ಟ ಅಲ್ಲವಾ” ಅನ್ನುವ ಅಭಿಪ್ರಾಯ. ರಸ್ತೆಯ ವಿವರ, ದಾರಿಯಲ್ಲಿ ಸಿಗುವ ಸ್ಥಳ – ಗೋರಖಪುರ, ಸೀತಾಪುರ, ಅಯೋಧ್ಯಾ, ಹಾಗೂ ರಸ್ತೆ ಪ್ರಯಾಣದ ಆನಂದವನ್ನು ವಿವರಿಸಿದಾಗ, ಸುಮಾ ಅವರ ಹೃತ್ಪೂರ್ವಕ ಒಪ್ಪಿಗೆ!  ಒಳ್ಳೆಯ ವಾತಾವರಣದ ಸಮಯ  ಹಾಗೂ ನಮ್ಮ ಅನುಕೂಲ ನೋಡಿ, 2023 ನವಂಬರ್ 17 ರಿಂದ 27 ರ ಪ್ರಯಾಣದ ದಿನವನ್ನು ನಿರ್ಧರಿಸಿದೆವು.  ಹೋಗುವಾಗ ನಾವು ನಾಲ್ಕು ಜನ (ಸದಾಶಿವ, ಸುಮಾ, ಶ್ರೀಪಾದ ಮತ್ತು ನಾನು), ಬರುವಾಗ ಕಾಠಮಂಡುಗೆ ಬಂದು ನಮ್ಮ ಜೊತೆ ರೋಹಿಣಿಯ ಸೇರಿಕೆ. 

 

ನಮ್ಮ ಪ್ರಯಾಣದ ತಯಾರಿ ಪ್ರಾರಂಭವಾಯಿತು. ಯಾವ ರಸ್ತೆಯ ಮೂಲಕ ಕಾಠಮಂಡು ತಲುಪ ಬೇಕು, ಭಾರತದ ಗಡಿಯನ್ನು ಧಾಟುವಾಗ ಯಾವ ಪುರಾವೆಗಳು ಬೇಕು, ಎಲ್ಲಿ ಎಲ್ಲಿ ಹೋಟೆಲಿನ ತಂಗು, ಇತ್ಯಾದಿ. ಇದಕ್ಕೂ ಹೆಚ್ಚಾಗಿ, ದೆಹಲಿಯಿಂದ ಕಾಠಮಂಡುಗೆ ಎಷ್ಟು ಗಂಟೆಗಳ ಕಾಲದ ಪ್ರಯಾಣ! ಬಹಳ ದೂರವೇನಲ್ಲ, ಕೇವಲ 1200 ಕಿಲೋಮೀಟರು. ನಮ್ಮ ದೆಹಲಿ – ಬೆಂಗಳೂರು ಪ್ರಯಾಣಕ್ಕೆ ಹೋಲಿಸಿದರೆ (2150 ಕಿಲೋಮೀಟರು- ಎರಡು ಸಲ ಪ್ರಯಾಣದ ನನ್ನ ಅನುಭವ), ಇದು ಸ್ವಲ್ಪ ಕಡಿಮೆ ಅಂತ ಹೇಳಬಹುದು! “ಗೂಗಲ್ ಪಂಡಿತ”ರ ಪ್ರಕಾರ 22 ಘಂಟೆಗಳ ಪ್ರಯಾಣ. ನಮ್ಮ ಸಂಶೋಧನೆಯ ಪ್ರಕಾರ, ಭಾರತದ ರಸ್ತೆ ಚೆನ್ನಾಗಿದ್ದರೂ, ನೇಪಾಳದ ರಸ್ತೆ ಸ್ವಲ್ಪ ಕಷ್ಟಕರ, ಅನ್ನುವ ಅಭಿಪ್ರಾಯ. ಏನೇ ಇರಲಿ, ಹೋಗುವಾಗ ಒಂದು ರಾತ್ರಿ ಗೋರಖಪುರದಲ್ಲಿ ಇದ್ದು, ಬೆಳಿಗ್ಗೆ ಗೋರಖನಾಥ ಮಂದಿರ ನೋಡಿ, ಅಲ್ಲಿಂದ ಗಡಿ ಧಾಟುವ ಯೋಜನೆ.

 

ನಮ್ಮ ಯೋಜನೆಯಂತೆ, ಸದಾಶಿವ, ಸುಮಾ ಮತ್ತು ಶ್ರೀಪಾದ, ಮೈಸೂರು ಹಾಗು ಬೆಳಗಾವಿಯಿಂದ ಹೊರಟು, ಬೆಂಗಳೂರಿನಿಂದ ದೆಹಲಿಯನ್ನು ನವೆಂಬರ 17ರ ಸಂಜೆ ನಮ್ಮಲ್ಲಿಗೆ ಬಂದು ತಲುಪಿದರು.

 

ದೆಹಲಿ – ನೇಪಾಳ ರಸ್ತೆ ಪ್ರವಾಸದ ಪ್ರಾರಂಭ:

ಬಹಳ ಬೇಗನೆ (6-6:30) ಹೊರಡುವ ಯೋಜನೆ ಮಾಡಿದ್ದರೂ, ಹಿಂದಿನ ದಿನದ ಪ್ರವಾಸದ ಆಯಾಸ ಹಾಗು ದೂರ ಪ್ರಯಾಣದ ತಯಾರಿಯ ನಡುವೆ, ಒಂದು ಗಂಟೆಗಳ ಕಾಲದ ವಿಳಂಬ, ಬೆಳಗ್ಗೆ 7:30 ಕ್ಕೆ ನಮ್ಮ ಪ್ರವಾಸದ ಪ್ರಾರಂಭ! ನಾವು ನಾಲ್ವರೇ ಪ್ರಯಾಣ ಮಾಡುವದರಿಂದ, ಕಾರಿನ ೩ನೆಯ ಸಾಲಿನ ಸೀಟುಗಳನ್ನು ಮಡಿಚಿ, ನಮ್ಮ ಪಯಣದ ಸಾಮಾನುಗಳನ್ನು ಏರಿಸಿ, ಗುರುಗ್ರಾಮದಿಂದ ಹೊರಟಾಯಿತು.

 

ಕಾರು ಹತ್ತಿದ ತಕ್ಷಣ, ಹರಿಯಾಣದ ಗುರುಗ್ರಾಮ ದಿಂದ ಗೋರಖಪುರ (ಉತ್ತರ ಪ್ರದೇಶ) ಕ್ಕೆ ಗೂಗಲ್ ಪಂಡಿತರ “ರಸ್ತೆ ನಕ್ಷೆ” ಹಾಕಿ ನೋಡಿದಾಗ, 13 ಘಂಟೆಗಳ ಪ್ರಯಾಣ ಅಂತ ತೋರಿಸ್ತು. ಮದ್ಯದಲ್ಲಿ ನಮ್ಮ ತಿಂಡಿ, ಊಟ ಮತ್ತು ಜೈವಿಕ ವಿರಾಮಗಳನ್ನು ಸೇರಿಸಿದರೆ, ರಾತ್ರಿ ಸುಮಾರು 11 ಕ್ಕೆ ಗೋರಖಪುರ ದ ಹೋಟೆಲಗೆ  ತಲುಪುವ ಲೆಕ್ಕಾಚಾರ.

 

ಹರಿಯಾಣಾದ ಗುರುಗ್ರಾಮದಿಂದ ಉತ್ತರ ಪ್ರದೇಶದ ಕಡೆ ಹೋಗಲು, ದೆಹಲಿಯ ಮೂಲಕವೇ ಹೋಗಬೇಕೆಂದಿಲ್ಲ. ಅದರಂತಯೇ, ನಾವು ಹೊಸದಾಗಿ ನಿರ್ಮಿಸಿದ ದೆಹಲಿ ಮುಂಬೈ ಹೆದ್ದಾರಿ (expressway) ಯನ್ನು ಸೇರಿ, ಅಲ್ಲಿಂದ ಸ್ವಲ್ಪ ದೂರದಲ್ಲೇ ಹೊರಳಿ, ನೊಯಿಡಾ ಆಗ್ರಾ ಹೆದ್ದಾರಿ (expressway) ಯತ್ತ ನಮ್ಮ ಪ್ರಯಾಣವನ್ನು ಪ್ರಾರಂಭಿಸಿದೆವು.   ನಮ್ಮ ಮೈಸೂರು ಸ್ನೇಹಿತರಿಗೆ, ಮುಂಬೈ ಹೆದ್ದಾರಿಯನ್ನು ನೋಡುವ ಆಸೆ ಬಹಳ ಇತ್ತು. (ನಾನು ರಾಜಸ್ಥಾನಕ್ಕೆ ಹೋಗುವಾಗ ಈ ಮೊದಲೇ ನೋಡಿದ್ದೆ)  ನಮ್ಮ ದಾರಿಯಲ್ಲಿ ಈ ಹೆದ್ದಾರಿ ಸಿಗಬಹುದೇ ಇಲ್ಲವೇ ಅಂತ ಅನುಮಾನವಿತ್ತು. ಆದರೆ, ಅವರ ಅದೃಷ್ಟ, ಈ ಬೃಹತ್ ಹೆದ್ದಾರಿಯನ್ನು ನೋಡಿ ಆನಂದಿಸುವ ಅವಕಾಶ ಸಿಕ್ಕಿತು. ಎಲ್ಲಕಿಂತ ಹೆಚ್ಚಾಗಿ ನಮ್ಮ ಕಾರಿಗೆ ಬಹಳ ಕುಶಿಯಾಗಿರಬಹುದು! ವೇಗದ ಮಿತಿ- 120 ಕಿಲೋಮೀಟರು ಪ್ರತಿ ಘಂಟೆಗೆ. ಪಕ್ಕದ ಸೇವಾ ರಸ್ತೆ ಬಿಟ್ಟರೆ, 6 ಲೇನ್ ದಾರಿ! ವಾಹ್! ಸುಂದರ ರಸ್ತೆ, ಚಾಲಕನಿಗೆ ನಿಜವಾದ ಹಬ್ಬ!

 

ನೊಯಿಡಾ ಆಗ್ರಾ ಹೆದ್ದಾರಿಗೆ ಬಂದ ನಂತರ, ಹೊಟ್ಟೆಗೆ ಏನಾದರೂ ಹಾಕುವ ಯೋಚನೆ ಬಂತು! ಹೆದ್ದಾರಿಯ ಪಕ್ಕದಲ್ಲಿ ಇದ್ದ ಒಂದು ಒಳ್ಳೆಯ ಆಹಾರ ಸಂಗಮ ಸ್ಥಳಕ್ಕೆ ಭೇಟಿ ಕೊಟ್ಟು, ಉತ್ತರ ಭಾರತದ ಸುರಕ್ಷಿತ ಹಾಗೂ ರುಚಿಕರವಾದ “ಪರಾಠಾ” ಮತ್ತು ಚಹಾ ಸ್ವೀಕರಿಸಿ, ಮತ್ತೆ ಪಯಣ ಮುಂದುವರಿಸಿದೆವು.

 

ಆಗ್ರಾ ದಾಟಿದ ಮೇಲೆ, ನಮ್ಮ ರಸ್ತೆ ಪ್ರಯಾಣ ಆಗ್ರಾ- ಲಕ್ನೋ ಹೊಸ ಹೆದ್ದಾರಿಯತ್ತ ಹೊರಳಿತು.   ಆಗ್ರಾ – ಲಕ್ನೋ ಹೆದ್ದಾರಿಯ ಉದ್ದ 302 ಕಿಲೋಮೀಟರು, 6 ಲೇನ್ ರಸ್ತೆ. ಮದ್ಯದಲ್ಲಿ ಯಾವುದೇ ಟೋಲ್ ಆಗಲಿ, ಕ್ರಾಸಿಂಗ್ ಆಗಲಿ ಇಲ್ಲಾ. ಹೊಸ ಹೆದ್ದಾರಿಯಾಗಿದ್ದರಿಂದ, ರಸ್ತೆಯ ಪಕ್ಕದಲ್ಲಿ ಢಾಬಾ ಅಥವಾ ಹೋಟೆಲಗಳು ಕಡಿಮೆ. ಪ್ರತಿ 100 ಕಿಲೋಮೀಟರಿಗೆ ಆಹಾರ ಸಂಕೀರ್ಣಗಳನ್ನು ಮಾಡುತ್ತಿದ್ದಾರೆ. ಊಟದ ಸಮಯ ಬಂದಾಗ, ಒಂದು ಆಹಾರ ಸಂಕೀರ್ಣಕ್ಕೆ ಭೇಟಿ ಕೊಟ್ಟು, ಹೊಟ್ಟೆ ತಂಪು ಮಾಡಿಕೊಂಡೆವು. ಊಟವಾದ ನಂತರ, ಸದಾಶಿವ “ನಾನು ಸ್ವಲ್ಪ ದೂರ ಚಲಾಯಿಸಿ, ನಿನಗೆ ವಿಶ್ರಾಮ ಕೊಡುತ್ತೇನೆ” ಅಂತ ಹೇಳಿದಾಗ, ಅವನಿಗೆ ಕಾರಿನ ಚಾವಿ ಕೊಟ್ಟು, ಪಕ್ಕದ ಆಸನದಲ್ಲಿ ಕುಳಿತೆ.

ಸದಾಶಿವನಿಗೆ ನನ್ನ ಕಾರನ್ನು ಚಲಾಯಿಸಲು ಏನೂ ಕಷ್ಟ ಆಗಲಿಲ್ಲ. ನನಗೆ ಸ್ವಲ್ಪ ವಿಶ್ರಾಂತಿಯೂ ಆಯಿತು. ಲಕ್ನೋ ತಲುಪುವ ವೇಳೆಗೆ, ಸಾಯಂಕಾಲದ ಚಹಾದ ವೇಳೆ ಆಯ್ತು. ಅಲ್ಲೇ ಹತ್ತಿರದ, ರಸ್ತೆಯ ಸಮೀಪದಲ್ಲಿ ಇದ್ದ ಹೋಟೆಲಗೆ ಭೇಟಿ ಕೊಟ್ಟು, ಚಹಾ ಮತ್ತು ಅಲ್ಪ ಆಹಾರದ ಸೇವನೆ ಆಯಿತು. ಇನ್ನು ಮುಂದಿನ ರಸ್ತೆಯ ಬಗ್ಗೆ ಅಷ್ಟು ಮಾಹಿತಿಗಳು ಇಲ್ಲದ್ದರಿಂದ, ಮತ್ತೆ ನಾನೇ ಕಾರನ್ನು ಚಲಾಯಿಸುವ ನಿರ್ಧಾರ ತೆಗೆದುಕೊಂಡೆ.

 

 

ಲಕ್ನೋದಿಂದ ಗೋರಖಪುರದ ಮಧ್ಯದಲ್ಲಿ, ರಾತ್ರಿ ಊಟಕ್ಕೆ ನಿಂತು, ಸುಮಾರು 11 ಘಂಟೆ ರಾತ್ರಿಗೆ ಗೋರಖಪುರದ ಪಟ್ಟಣದ ಒಳಗೆ ಇರುವ ಒಂದು ಹೋಟೆಲನಲ್ಲಿ ತಂಗಿದೆವು. ಬೆಳಿಗ್ಗೆ ಎದ್ದು, ಚಹಾ ಕುಡಿದು, ಪ್ರಖ್ಯಾತ “ಗೋರಖನಾಥ ದೇವಸ್ಥಾನ” ಕ್ಕೆ ಭೇಟೆ ಕೊಡುವ ಯೋಜನೆಯಂತೆ, ಸುಮಾರು 7:30 ಕ್ಕೆ ಹೊರಟು ದೇವಸ್ಥಾನದ ಆಂಗಣವನ್ನು ತಲುಪಿದೆವು. ನಿಮಗೆ ತಿಳಿದಂತೆ, ಈ ದೇವಸ್ಥಾನದ ಪ್ರಧಾನ ಅರ್ಚಕರು ಶ್ರೀ ಯೋಗಿ ಆದಿತ್ಯನಾಥ, ಉತ್ತರ ಪ್ರದೇಶದ ಮುಖ್ಯ ಮಂತ್ರಿ! ಹಲವಾರು ಬಾರಿ ಅವರನ್ನು ಇಲ್ಲೇ ನೋಡಬಹುದು, ನಿಮ್ಮ ಅದೃಷ್ಟ ಇದ್ದರೆ, ಈ ದೇವಸ್ಥಾನದಲ್ಲೇ ಭೇಟಿ ಆಗಬಹುದು. ನಾವು ಹೋದ ಹಿಂದಿನ ದಿನವಷ್ಟೇ ಅವರು ಇಲ್ಲಿಂದ ಲಕ್ನೋಕ್ಕೆ ಹೋದ ಸುದ್ದಿ ತಿಳಿಯಿತು.  ಬಹಳ ರಮಣೀಯ, ಸ್ವಚ್ಛ ಹಾಗೂ ಶಾಂತ ಸ್ಥಳ. ಶ್ರೀ ಯೋಗಿ ಅವರ ಕಾರಣದಿಂದ, ತುಂಬಾ ಪೊಲೀಸ್ ಭದ್ರತೆಯೂ ಇದೆ. ದೇವರ ದರ್ಶನ ಹಾಗೂ ದೇವಸ್ಥಾನದ ಸುತ್ತ ಮುತ್ತ ನೋಡಿ, ಅಲ್ಲಿಂದ ವಾಪಸ ಹೋಟೆಲಗೆ ಮರಳಿ, ಬೆಳಗಿನ ಉಪಹಾರವನ್ನು ಮುಗಿಸಿ, ಮುಂದಿನ ಪ್ರಯಾಣದ ತಯಾರಿ ನಡೆಸಿದೆವು.

 

ನಮ್ಮ ಧೀರ್ಘ ಸಂಶೋಧನೆಯ ಪ್ರಕಾರ, ಭಾರತದಿಂದ ನೇಪಾಳದ ಕಾಠಮಂಡುಗೆ ಗಡಿ ದಾಟಲು 4 – 5 ರಸ್ತೆಗಳಿವೆ. ರಸ್ತೆಯ ಮೂಲಕ, ಗೋರಖಪುರದ ಹತ್ತಿರದ ಸೂನೌಲಿ  ಗಡಿಯಿಂದ, ಸಿಲಿಗುರಿಯ ಮಾರ್ಗವಾಗಿ ಪಾನೀಟಂಕಿಯಿಂದ ಅಥವಾ ಸ್ವಲ್ಪ ದೂರದ ಪಾಟ್ನಾ ಮಾರ್ಗವಾಗಿ ರಕ್ಸೌಲ್‌ (Raxaul) ಅನ್ನುವ ಸ್ಥಳದಿಂದಲೂ ಗಡಿ ದಾಟಬಹುದು.  ನಮಗೆ ತಿಳಿದಂತೆ, ಸ್ವಲ್ಪ ದೂರದ ರಸ್ತೆಯಾದರೂ, ರಕ್ಸೌಲ್‌ (Raxaul) ದಿಂದ  ಹೋಗುವ ರಸ್ತೆ ಚೆನ್ನಾಗಿದೆ ಅಂತ ಕೇಳಿದ್ದೆವು. ಅದರಂತೆಯೇ, ಹೋಟೆಲಿನಿಂದ ನಮ್ಮ ಬ್ಯಾಗಗಳನ್ನು ತೆಗೆದುಕೊಂಡು, ನಮ್ಮ ಕಾರಿನ ಹತ್ತಿರ ತಲುಪಿದೆವು. ಇನ್ನೇನು, ಕಾರು ಹತ್ತಿ, ಗೂಗಲ್ ನಕ್ಷೆ ಹಾಕಿ, ಗೋರಖಪುರ ರಕ್ಸೌಲ್‌ (Raxaul) ರಸ್ತೆ ಪ್ರಾರಂಭಿಸೋಣ, ಅಂತ ಯೋಚನೆ ಮಾಡುತ್ತಿರುವಷ್ಟರಲ್ಲಿ, ಪಕ್ಕದಲ್ಲಿ ಇದ್ದ ಒಂದು ಸರದಾರಜಿ ಮತ್ತು ಅವರ ನೇಪಾಳಿ ಪತ್ನಿ, ನಮ್ಮ ಪ್ರವಾಸದ ಬಗ್ಗೆ ವಿಚಾರಿಸಿದರು.  “ನಾವು ನಿನ್ನೆ ಮಾತ್ರ ನೇಪಾಳದಿಂದ ಬರುತ್ತಿದ್ದೇವೆ, ನೀವೂ ಹೋಗಿಬನ್ನಿ” ಅಂತ ಹಾರೈಸಿದರು.

 

ಆ ನಮ್ಮ ಮಾತುಕತೆ, ಅಲ್ಲಿಗೆ ಮುಗಿದಿದ್ದರೆ, ನಮ್ಮ ಪ್ರಯಾಣ, ನಮ್ಮ ಲೆಕ್ಕಾಚಾರದಂತೆ ಆಗುತ್ತಿತೋ ಏನೋ! ಆ ನೇಪಾಳಿ ಮಹಿಳೆ, ಮಾತನ್ನು ಮುಂದುವರಿಸುತ್ತಾ, “ನನ್ನ ತವರು ಮನೆ, ನೇಪಾಳದ ಕಾಠಮಂಡು. ಊರು ಮತ್ತು ಜನ ಎಲ್ಲಾ ಒಳ್ಳೆಯವರು. ನಿಮ್ಮ ಪ್ರವಾಸ ತುಂಬಾ ಚೆನ್ನಾಗಿ ಇರುತ್ತೆ.  ನೀವು, ಸೂನೌಲಿ ಯಿಂದ ಹೋಗಿ, 100 ಕಿಲೋಮೀಟರು ಮೇಲೆ ಉಳಿಯತ್ತೆ.  ಸ್ವಲ್ಪ ದೂರ, ಹೊಸ ರಸ್ತೆ ಮಾಡುತ್ತಿದ್ದಾರೆ, ಚೆನ್ನಾಗಿಲ್ಲ. ಆದರೆ, ಆಮೇಲೆ ರಸ್ತೆ ಚೆನ್ನಾಗಿದೆ, ಬೇಗ ತಲುಪುತ್ತಿರಾ. ನೀವು ಯೋಚಿಸಿದ ರಸ್ತೆ – ಗೋರಖಪುರ ರಕ್ಸೌಲ್‌ (Raxaul) ರಸ್ತೆ, ತುಂಬಾನೇ ದೂರ. ನಾವು ನೆನ್ನೆ ಮಾತ್ರ ಸೂನೌಲಿ ಗಡಿಯಿಂದ   ಬಂದಿದ್ದೇವೆ, ಏನೂ ತೊಂದರೆ ಇಲ್ಲಾ, ಇಲ್ಲಿಂದಲೇ ಹೋಗಿ” ಅಂತ ಹೇಳಿ ಹೇಳಿ ನಮ್ಮ ಮನವೊಲಿಸಿದರು.  ಸ್ವಲ್ಪ ಹೊತ್ತು ನಮ್ಮಲ್ಲಿಯೇ ಚರ್ಚೆ ಮಾಡಿ, ಆ ಮಹಿಳೆಯ ಸಲಹೆಯಂತೆ, ಸೂನೌಲಿ ಗಡಿಯತ್ತ ಹೊರಟೆವು.

ಗೋರಖಪುರ ಪಟ್ಟಣದಿಂದ ಸೂನೌಲಿ ಗಡಿ ಬಹಳ ದೂರವಿಲ್ಲ. ಸುಮಾರು 100 ಕಿಲೋಮೀಟರು. ಕಾರಿನಲ್ಲಿ ಪ್ರಯಾಣಿಸಿದರೆ 2 :30 ಘಂಟೆಗಳ ಕಾಲದ ಪ್ರಯಾಣ. ಗಡಿಯ ದ್ವಾರದಲ್ಲಿ,  ಪ್ರವಾಸಿಗರಿಗೆ ಅನುಕೂಲವಾಗಲೆಂದು, ಹಲವಾರು ಪ್ರವಾಸಿ ಯೋಜಕರ ಅಂಗಡಿಗಳು ಇವೆ. ಗಡಿ ದಾಟಬೇಕಾದರೆ, ನಮ್ಮ ಕಾರಿಗೆ ಹಾಗೂ ನಮ್ಮೆಲ್ಲರಿಗೆ ಅನುಮತಿ ಪತ್ರದ ಅವಶ್ಯಕತೆ ಇತ್ತು. ಅದರಂತೆಯೇ, ಅಲ್ಲಿ ಒಬ್ಬ ಏಜೆಂಟನನ್ನು  ಸಂಪರ್ಕಿಸಿ, ನಮ್ಮ ನಮ್ಮ ಪರಿಚಯ ಪತ್ರವನ್ನು ಹಾಗೂ ವಾಹನದ ಕಾಗದ ಪತ್ರಗಳನ್ನು ಕೊಟ್ಟು, ಅನುಮತಿ ಪತ್ರವನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾರಂಭಿಸಿದೆವು. ಅನುಮತಿ ಪತ್ರಕ್ಕೆ ಸಿಗಲು, ಹೆಚ್ಹೂ ಕಡಿಮೆ ಒಂದು ಯಾ ಒಂದೂವರೆ ತಾಸು ಬೇಕಾಯಿತು. ಈ ಅನುಮತಿ ಪತ್ರ ಬಹಳ ಮುಖ್ಯ. ನೇಪಾಳದಲ್ಲಿ ಚಲಾಯಿಸುವಾಗ, ರಸ್ತೆ ಪೊಲೀಸರು ಈ ಪತ್ರವನ್ನು ಕೇಳಬಹುದು. ಎಲ್ಲಾ ಅನುಮತಿ ಕಾಗದ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಂಡು, ನಮ್ಮ ಕಾಠಮಂಡು ಪ್ರಯಾಣವನ್ನು ಮುಂದುವರಿಸಿದೆವು.

 

ನಾವು ಭಾರತ – ನೇಪಾಳ ಗಡಿಯನ್ನು ಬಿಟ್ಟಾಗ, 1 ಘಂಟೆಯಾಗಿತ್ತು. ನಮ್ಮ ಪ್ರಕಾರ, ಗುಡ್ಡದ ರಸ್ತೆ ಹಾಗೂ ಸಾಧಾರಣ ಗುಣಮಟ್ಟದ ರಸ್ತೆಯಿರುವದರಿಂದ, 7-8 ತಾಸು ಬೇಕಾಗಬಹುದೇನೋ ಅಂತ ನಮ್ಮ ಲೆಕ್ಕಾಚಾರ. ಹೆಚ್ಹೂ ಕಡಿಮೆ, ರಾತ್ರಿ 10 ಗಂಟೆಗೆ ನಾವು ಕಾದಿರಿಸಿದ ಕಾಠಮಂಡು ಹೋಟೆಲ ಕೊಠಡಿಯನ್ನು ತಲುಪುವ ನಿರೀಕ್ಷೆ.

 

 

 

ಆದರೆ, ನಿಜವಾದ ಸ್ಥಿತಿ ಬೇರೆಯೇ ಇತ್ತು! ಸೊನೌಲಿ ಗಡಿಯಿಂದ ಸ್ವಲ್ಪ ದೂರ ರಸ್ತೆ ಚೆನ್ನಾಗಿಯೇ ಇತ್ತು.  ಸ್ವಲ್ಪ ದೂರ ಪ್ರಯಾಣ ಮಾಡಿ, ಮದ್ಯಾಹ್ನದ ಊಟದ ಸಮಯ ಮೀರುತ್ತಿದ್ದರಿಂದ, ಹತ್ತಿರದ ಹೋಟೆಲನಲ್ಲಿ ನಿಲ್ಲಿಸಿ, ಊಟಕ್ಕೆ ಕುಳಿತೆವು. ಅಂದ ಹಾಗೆ, ಅವತ್ತೇ ಭಾರತ ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ, ಒಂದು ದಿನದ “ವಿಶ್ವ ಕಪ್” ಕೊನೆಯ ಪಂದ್ಯ ಪ್ರಾರಂಭವಾಗಿತ್ತು. ಊಟ ಮಾಡುತ್ತಾ, ಸ್ವಲ್ಪ ಹೊತ್ತು, ಭಾರತದ ಆಟಗಾರರ ಆಟವನ್ನು ನೋಡುತ್ತಾ, “ಈ ಸಲವಾದರೂ, ಭಾರತ ಗೆಲ್ಲಲಿ” ಅಂತ ಆಶಿಸುತ್ತಾ, ಊಟ ಮುಗಿಸಿ, ಮತ್ತೆ ನಮ್ಮ ಪ್ರಯಾಣ ಮುಂದುವರಿಸಿದೆವು. 

 

ನನ್ನನ್ನು (ಚಾಲಕ) ಹೊರತು, ಎಲ್ಲರೂ ಸ್ವಲ್ಪ ವಿಶ್ರಾಂತಿಸಲು ಪ್ರಯತ್ನಿಸುತ್ತಿದ್ದರು. ಒಮ್ಮೆಲೇ ಹೆದ್ದಾರಿ ರಸ್ತೆ ದುರಸ್ತಿಯ ಕೆಲಸ ಜೋರಾಗಿ ನಡೆಯುತ್ತಿರುವುದರಿಂದ, ರಸ್ತೆಯ ತಿರುವುಗಳು ಕಾಣಲು ಪ್ರಾರಂಭವಾಯಿತು. ಸೂನೌಲಿಯಿಂದ  ಕಾಠಮಂಡು ಗೆ ಹೋಗುವ ಹೆದ್ದಾರಿಯನ್ನು, ಭಾರತ ಮತ್ತು ನೇಪಾಳ ಸರಕಾರದ ಒಪ್ಪಂದದಂತೆ, ಭಾರತದ ಹೆದ್ದಾರಿ ರಸ್ತೆ ಇಲಾಖೆಯವರು, ಹೊಸ ಹಾಗೂ ಅಗಲವಾದ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ನಮ್ಮ ದುರಾದೃಷ್ಟ. ಹೊಸ ರಸ್ತೆಯ ಕಾರ್ಯ ಜೋರಾಗಿ ನಡೆಯುತ್ತಿರುವುದರಿಂದ, ಎಲ್ಲಾ ಕಡೆ, ಬರೀ ಕಲ್ಲು, ಮಣ್ಣು ಅಥವಾ ಹೊಂಡ! ಹೋದ ಉದ್ದಕ್ಕೂ, ಇದೇ ಪರಿಸ್ಥಿತಿ! ಎಲ್ಲೂ ಟಾರ್ ರಸ್ತೆಯೇ ಇಲ್ಲಾ! ನಮ್ಮ ಕಾರಿನ ಸರಾಸರಿ ವೇಗ 15 – 20 ಕಿಲೋಮೀಟರು ಪ್ರತಿ ಗಂಟೆಗೆ ಇಳಿಯಿತು. ಸ್ವಲ ದೂರ ಹೀಗೆ ನಿಧಾನವಾಗಿ ಚಲಿಸುತ್ತಾ, ಆ ನೇಪಾಳಿ ಮಹಿಳೆಗೆ ಸಹಸ್ರ ಶಾಪ ಹಾಕುತ್ತಾ, ಹತಾಶಾ ಭಾವದಿಂದ ನಮ್ಮ ಪ್ರಯಾಣ ಮುಂದುವರಿಸಿದೆವು. ಬೇಸರ ಕಳೆಯಲು, ಸ್ನೇಹಿತ ಮೊಬೈಲ್ ನಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ಹಾಕಿದರೆ, ಅಲ್ಲೂ ಬೇಸರದ ಪ್ರಗತಿ! ಗುಡ್ಡಗಾಡಿನ ರಸ್ತೆ ಆಗಿದ್ದರಿಂದ, ವಾಹನ ಚಲಾಯಿಸುವುದೂ ಅಷ್ಟು ಸುಲಭವಾಗಿರಲಿಲ್ಲ. ಹೊರಗಡೆಯ ಧೂಳು ಹಾಗೂ ಮಣ್ಣಿಂದ, ನಮ್ಮ ಕಾರಿನ ಬಣ್ಣ “ಕಪ್ಪು” ಬಣ್ಣದಿಂದ ಪೂರ್ತಿ “ಕೆಂಪು” ಬಣ್ಣಕ್ಕೆ ಮಾರ್ಪಾಡಾಯಿತು! ಬೇಸರ ಬಂದು, ಇನ್ನೂ ಸ್ವಲ್ಪ ದೂರ ಹೋದ ಮೇಲೆ, ಜನರಿರುವ ಜಾಗದಲ್ಲಿ ಒಮ್ಮೆ ನಿಲ್ಲಿಸಿ ಮುಂದಿನ ರಸ್ತೆಯ ಬಗ್ಗೆ ವಿಚಾರಿಸಿದಾಗ  – ” ಒಟ್ಟೂ 75 ಕಿಲೋಮೋಟರು ಹೊಸ ಹೆದ್ದಾರಿಯ ಕೆಲಸ ನಡಿತಾ ಇದೆ. ಆಮೇಲೆ ನೀವು ಆರಾಮವಾಗಿ ಪ್ರಯಾಣಿಸಬಹುದು” ಎಂದು ನಮ್ಮನ್ನು ಹುರಿದುಂಬಿಸಿದರು! ಮನಸ್ಸಿನಲ್ಲೇ ನಮ್ಮ ಪ್ರಶ್ನೆ – “ಈ 75 ಕಿಲೋಮೀಟರು ಹೇಗೆ ದಾಟುವುದು!!?”

 

ನಿಮ್ಮಲ್ಲಿ ಯಾರಾದರೂ ರಸ್ತೆಯ ಮೂಲಕ ಭಾರತದಿಂದ ನೇಪಾಳಕ್ಕೆ ಪ್ರಯಾಣಿಸುವ ತಯಾರಿ ನಡೆಸಿದ್ದರೆ, ದಯವಿಟ್ಟು ರಸ್ತೆಯ ಗುಣಮಟ್ಟದ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಹೊರಡಿ. ನಮಗೆ, ಆ ಹೊಸ ಹೆದ್ದಾರಿ ಕೆಲಸ ನಡೆದ 75 ಕಿಲೋಮೀಟರು ದಾಟಲು 5 ಘಂಟೆಗಳ ಕಾಲ ಬೇಕಾಯಿತು. ಎಲ್ಲಾ ಕಡೆ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುವದರಿಂದ, ಎಲ್ಲೂ ನಿಲ್ಲಿಸಲು ಸರಿಯಾದ ಜಾಗ ಇರಲಿಲ್ಲ. ಕಾರನ್ನು ನಿಲ್ಲಿಸಿ ಸ್ವಲ್ಪ ಚಹಾ ಸೇವನೆ ಮಾಡಿ, ಶೌಚಾಲಯ ಉಪಯೋಗಿಸಬೇಕಿತ್ತು, ಅದಕ್ಕೂ ಅವಕಾಶವಿರಲಿಲ್ಲ.

ಅಂತೂ, ನಮ್ಮ ಅದೃಷ್ಟಕ್ಕೆ,  ರಸ್ತೆಯ ಪಕ್ಕದಲ್ಲೇ ಒಂದು ಸಣ್ಣ ಹಳ್ಳಿ ಕಂಡಿತು. ಅಲ್ಲಿ 2 -3 ಸಣ್ಣ ಸಣ್ಣ ಹೋಟೆಲಗಳು ಕಂಡು ಬಂದವು. ಸಂತೋಷದಿಂದ, ನಮ್ಮ ಕಾರನ್ನು ನಿಲ್ಲಿಸಿ ಅಲ್ಲಿಯ ಒಂದು ಹೋಟೆಲಗೆ ಹೋಗಿ, ನಮಗೆ ಶೌಚಾಲಯ ಅರ್ಜೆಂಟ್ ಆಗಿ ಉಪಯೋಗಿಸ ಬೇಕು ಅಂತ ವಿನಂತಿಸಿದೆವು. ಆದರೆ, ಆ ಮಾಲೀಕ, ಇಲ್ಲಾ, ಅದು ಕೇವಲ ಗ್ರಾಹಕರಿಗೆ ಮಾತ್ರ ಅನ್ನಬೇಕೆ! ನಾವು, ಗಂಡಸೆರೆಲ್ಲಾ ಏನಾದರೂ ಮಾಡಬಹುದಿತ್ತೇನೋ, ಅವನಿಗೆ “ನಮ್ಮ ಜೊತೆ ಹೆಣ್ಣು ಮಗಳಿದ್ದಾಳೆ, ದಯವಿಟ್ಟು ಸಹಕರಿಸಿ” ಅಂತ ಅಂದರೂ ಕೇಳಲಿಲ್ಲ. ಆವಾಗ, ನಮ್ಮ ಕಿಸೆಯಲ್ಲಿದ್ದ ಭಾರತದ 500  ನೋಟುಗಳನ್ನು ತೋರಿಸಿ, “ಇದನ್ನು ತಗೆದುಕೊಳ್ಳಿ, ನಮಗೆ ಎಲ್ಲರಿಗೂ ಚಹಾ ಕೊಡಿ, ಹಾಗೂ ನಿಮ್ಮ ಶೌಚಾಲಯ ಉಪಯೋಗಿಸಲು ಅವಕಾಶ ಮಾಡಿ ಕೊಡಿ” ಅಂತ ಅಂದಾಗ, “ನಿಮ್ಮ ಭಾರತದ ಈ ನೋಟಗಳು ಇಲ್ಲಿ ನಡೆಯಲ್ಲಾ, ನೇಪಾಳಿ ರೂಪಾಯಿ ಇದ್ದರೆ ಕೊಡಿ, ಆಮೇಲೆ ಉಪಯೋಗಿಸಿ” ಮತ್ತೊಂದು ಉಧ್ಧಟತನದ  ಮಾತು. ನಾವು ಗಡಿ ದಾಟುವಾಗ, ಪ್ರವಾಸಿ ಯೋಜಕರನ್ನು ಕೇಳಿದಾಗ, “ಇನ್ನೂ ತೊಂದರೆ ಇಲ್ಲಾ, ನಿಮ್ಮ 500 ರೂಪಾಯಿ ನೋಟಗಳು ನೇಪಾಳದಲ್ಲಿ ನಡೆಯತ್ತೆ, ಕಾಠಮಂಡುವಿಗೆ ಹೋದ ಮೇಲೆ, ನೇಪಾಳಿ ರೂಪಾಯಿ ಖರೀದಿಸಿ”, ಅಂತ ಹೇಳಿದ್ದಕ್ಕೆ, ನಾವು ನೇಪಾಳಿ ರೂಪಾಯಿಯನ್ನು ಖರೀದಿಸಿರಲಿಲ್ಲ. ಅದೃಷ್ಟಕ್ಕೆ, ಶ್ರೀಪಾದನ ಹತ್ತಿರ, ನಾವು ಊಟಕ್ಕೆ ನಿಂತಾಗಲೋ ಅಥವಾ ಗಡಿಯಲ್ಲಿ ಯಾವುದೋ ಸಾಮಾನು ಖರೀದಿಸಿದ್ದಾಗ, ಒಂದು ನೇಪಾಳಿ 100 ರೂಪಾಯಿಯ ಚಿಲ್ಲರೆ ಆಗಿ ಸಿಕ್ಕಿತ್ತು. ಕೊನೆಯಲ್ಲಿ, ಆ ನೇಪಾಳಿ 100 ರೂಪಾಯಿ ಕೊಟ್ಟು, ಒಂದು ಕಾಫಿ ಖರೀದಿಸಿ, ಎಲ್ಲರೂ ಶೌಚಾಲಯ ಉಪಯೋಗಿಸಿ ನಮ್ಮ ದೇಹ ಭಾರವನ್ನು ಕಡಿಮೆ ಮಾಡಿಕೊಂಡ್ವಿ!   

ಆ 75 ಕಿಲೋಮೀಟರು ಕೆಟ್ಟ ಹೆದ್ದಾರಿ ಮುಗಿದ ಮೇಲೆ, ಮುಂದಿನ ಪ್ರಯಾಣ ಅಷ್ಟೇನೂ ತ್ರಾಸದಾಯಕವಾಗಿರಲಿಲ್ಲ. ಮಧ್ಯದಲ್ಲೇ, ಒಂದು ಸಲ ನಮ್ಮ ಹೋಟೆಲಗೆ ಫೋನ ಮಾಡಿ, ನಾವು ಹೋಟೆಲ ತಲುಪುವುದು ತಡವಾಗಬಹುದು, ನಮ್ಮ ಕೊಠಡಿಗಳನ್ನು ಕಾಯ್ದಿರಿಸಿ ಅಂತ ಹೇಳಿ, ನಮ್ಮ ಪ್ರಯಾಣ ಮುಂದುವರಿಸಿದೆವು. ರಾತ್ರಿ ಸುಮಾರು 1 : 30 ಕ್ಕೆ ಕಾಠಮಂಡು ಪಟ್ಟಣ ತಲುಪಿ, ನಮ್ಮ ಹೋಟೆಲ ಹುಡುಕಿ, ಅಲ್ಲೇ ನಮ್ಮ ಕಾರನ್ನು ಪಾರ್ಕ್ ಮಾಡಿ, ಕಾರನ್ನು ಇಳಿಯುವ ಮೊದಲು ಇನ್ನೊಮ್ಮೆ “ಆ ನೇಪಾಳಿ ಮಹಿಳೆಗೆ” ನಿಂದಿಸಿ, (ನಮ್ಮ ಯೋಜನೆಯ ಪ್ರಕಾರ, ಗೋರಖಪುರ ರಕ್ಸೌಲ್‌ (Raxaul) ರಸ್ತೆಯಿಂದ  ಬಂದಿದ್ದರೆ, ರಾತ್ರಿ 10 ಘಂಟೆಗೆ ಒಳ್ಳೆಯ ರಸ್ತೆಯಲ್ಲಿ ಬಂದು ತಲುಪಿರುತ್ತಿದ್ದೆವು!) ಸುಸ್ತಾಗಿ, ನಮ್ಮ ಕೊಠಡಿಗಳಿಗೆ ತೆರಳಿದೆವು!

 

ಕಾಠಮಂಡು ಪಟ್ಟಣ ಮತ್ತು ಸುತ್ತಮುತ್ತ ಸ್ಥಳದ ಭೇಟಿ:

ರಾತ್ರಿ ಬಹಳ ತಡವಾಗಿ ಮಲಗಿದ್ದರಿಂದ, ಬೆಳಿಗ್ಗೆ ಯಾವ ಗಡಿಬಿಡಿ ಇಲ್ಲದೇ ಎದ್ದು, ನಮ್ಮ ಬೆಳಿಗ್ಗಿನ ಉಪಹಾರವನ್ನು ಮುಗಿಸಿ, ಮುಂದಿನ ಕಾರ್ಯಕ್ರಮದ ಬಗ್ಗೆ ತಯಾರಿ ನಡಿಸಿದೆವು. ಮೊದಲೇ ನಿರ್ದರಿಸಿದ್ದಂತೆ, ನೇಪಾಳದ ರಸ್ತೆಗಳು ಬಹಳ ಚಿಕ್ಕದಾಗಿರುವದರಿಂದ ಮತ್ತು ಪಟ್ಟಣದ ರಸ್ತೆಯ ಪರಿಚಯ ಇಲ್ಲದಿರುವದರಿಂದ, ನಮ್ಮ ಕಾರನ್ನು ಉಪಯೋಗಿಸದೆ, ಹೋಟೆಲ ಮೂಲಕ ಒಂದು ಸ್ಥಳೀಯ ಟ್ಯಾಕ್ಸಿಯನ್ನು ದಿನ ಬಾಡಿಗೆಗೆ ತೆಗೆದುಕೊಂಡು ಪ್ರವಾಸಿ ಸ್ಥಳಗಳನ್ನು ನೋಡಲು ಹೊರಟೆವು.

 

ನಮ್ಮ ಮೊದಲ ಪ್ರವಾಸಿ ಸ್ಥಳ- ಕಾಠಮಂಡುವಿನಿಂದ ಸುಮಾರು 20 ಕಿಲೋಮೀಟರು ದೂರದಲ್ಲಿರುವ “ಕೈಲಾಶನಾಥ್ ಮಹಾದೇವ್” ಪ್ರತಿಮೆ. ಈ ಮಹಾದೇವ ಪ್ರತಿಮೆಯ ಎತ್ತರ 143 ಅಡಿ, ಇಡೀ ಜಗತ್ತಿನಲ್ಲೇ, 2 ನೆಯ ಎತ್ತರದ “ಶಿವನ ಪ್ರತಿಮೆ” ಅನ್ನುವ ಹೆಗ್ಗಳಿಕೆ ಇದೆ. ಈ ಪ್ರತಿಮೆಯ ನಿರ್ಮಾಣವನ್ನು 2003 ರಲ್ಲಿ ಪ್ರಾರಂಭಿಸಿ 2011 ರಲ್ಲಿ ಮುಗಿಸಿದ್ದಾರೆ. ತುಂಬಾ ಸುಂದರ ಪ್ರತಿಮೆ.

ಅಲ್ಲಿಂದ ಹೊರಟು, ತಿರುಗಿ ಹಳೆಯ ಕಾಠಮಂಡುವಿನ ಕಡೆ ಪ್ರಯಾಣ ಬೆಳೆಸಿದೆವು. ಆ ಸ್ಥಳಕ್ಕೆ “ಭಕ್ತಾಪುರ್” ಅನ್ನುತ್ತಾರೆ. ಈ ಸ್ಥಳ, ಧಾರ್ಮಿಕ, ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆ ಗೆ ಪ್ರಸಿದ್ಧ. ಭಕ್ತಾಪುರದಲ್ಲಿ ನೋಡುವುದು ಬಹಳ ಇದೆ. ಈ ಸ್ಥಳ 12 ರಿಂದ 15 ನೇ ಶತಮಾನದಲ್ಲಿ ಮಲ್ಲಾ ರಾಜರ ರಾಜಧಾನಿಯಾಗಿತ್ತು.  ಅದರ ನಂತರ 18 ನೇ ಶತಮಾನದವರೆಗೂ ಇದು ಬೇರೆ ಬೇರೆ ರಾಜರ ರಾಜಧಾನಿಯಾಗಿ ಉಳಿದಿತ್ತು. ಭಕ್ತಾಪುರ್ ದರ್ಬಾರ್ ಚೌಕ, ನ್ಯಾಟೊಪೊಲಾ ದೇವಸ್ಥಾನ (ಸಿದ್ದಿ ಲಕ್ಷ್ಮಿ), 55 ಕಿಡಕಿಗಳ ಅರಮನೆ, ತಾಉಮಾದಿ ಚೌಕ, ಮುಂತಾದವಗಳನ್ನು ಇಲ್ಲಿ ನೋಡಬಹುದು. ಪ್ರತಿಯೊಂದು ಸ್ಮಾರಕಕ್ಕೂ ಅದರದೇ ಆದ ಇತಿಹಾಸ ಮತ್ತು ವೈಶಿಷ್ಟತೆಯನ್ನು ಕಾಣಬಹುದು. ಕೆಲವು ಇತಿಹಾಸಗಾರರ ಪ್ರಕಾರ, 55 ಕಿಡಕಿಗಳ ಅರಮನೆಯನ್ನು, ರಾಜಾ ಜಿತಮಿತ್ರ ಮಲ್ಲಾ, ತನ್ನ 55 ಹೆಂಡಂದಿರಿಗೆ ಇರಲು, 17 ನೇ ಶತಮಾನದಲ್ಲಿ ನಿರ್ಮಿಸಿದ, ಅಂತ ಅನ್ನುತ್ತಾರೆ! ಒಟ್ಟಾರೆ, ನೇಪಾಳದ ಭಕ್ತಾಪುರ ಯುನೆಸ್ಕೋ (UNESCO ) ದಿಂದ ಗುರುತಿಸಲ್ಪಟ್ಟ “ವಿಶ್ವ ಪರಂಪರೆ” ಸ್ಥಳ.

 

 

 

 

ನಿಮ್ಮಲ್ಲಿ, ಕೆಲವರಾದರೂ ಹಿಂದಿ ನಟ ಅಕ್ಷಯಕುಮಾರ ನಟಿಸಿರುವ “ಬೇಬಿ (baby)” ಚಿತ್ರವನ್ನು ನೋಡಿರಬಹುದು. ಆ ಚಲನಚಿತ್ರದಲ್ಲಿ, ಅಕ್ಷಯ ಕುಮಾರ “ಆತಂಕವಾದಿಯ ಸಂಪರ್ಕ” ದ ವ್ಯಕ್ತಿಯನ್ನು ಹುಡುಕುತ್ತಾ ನೇಪಾಳಕ್ಕೆ ಹೋಗುತ್ತಾನೆ. ಆ ದೃಶ್ಯದಲ್ಲಿ ನೀವು ಈ ಭಕ್ತಾಪುರ ಸ್ಥಳವನ್ನು ನೋಡಬಹುದು!

ಮರುದಿನ ಬೆಳಿಗ್ಗೆ, ಭಗವಾನ್ ಪಶುಪತಿನಾಥ ದೇವಸ್ಥಾನಕ್ಕೆ ಭೇಟಿ. ನಮ್ಮ ಅದೃಷ್ಟವಶಾತ್, ಅಲ್ಲಿಯ ಪ್ರಧಾನ ಅರ್ಚಕರಲ್ಲಿ ಒಬ್ಬರು ಪರಿಚಯದವರಾಗಿದ್ದರಿಂದ, ಮನಃಪೂರ್ವಕ ದರ್ಶನ ಹಾಗೂ ಪೂಜೆಗೆ ಅವಕಾಶ ಸಿಕ್ಕಿತು. ಅಲ್ಲಿಯ ವಿಶೇಷ ಪದ್ದತಿಯ ಪ್ರಕಾರ, ಅರ್ಚಕರು ನಮ್ಮೆಲ್ಲರಿಗೂ “ರುದ್ರಾಕ್ಷಿ” ಮಾಲೆಯನ್ನು ನಮ್ಮ ಕೊರಳಿಗೆ ಹಾಕಿ ಆಶೀರ್ವದಿಸಿದರು! ದೇವಸ್ಥಾನದ ಆವರಣದಲ್ಲಿ, ಆಕಸ್ಮಿಕವಾಗಿ, ದೇವರ ದರ್ಶನಕ್ಕೆ ಬಂದ ಕೊಪ್ಪದ ಹತ್ತಿರದ ಗೌರಿಗದ್ದೆಯ “ಅವಧೂತ ವಿನಯ ಗುರುಜಿ ” ಅವರ ಭೇಟಿಯೂ ಆಯಿತು!

 

ಪೋಖ್ರಾ ಪ್ರವಾಸ:

ದೇವಸ್ಥಾನದಿಂದ ಮರಳಿ ಹೋಟೆಲಗೆ ಬಂದು, ನಮ್ಮ ಕೊಠಡಿಗಳನ್ನು ಖಾಲಿ ಮಾಡಿ, ಪೋಖ್ರಾ ಕ್ಕೆ ಹೋಗಲು, ನಮ್ಮ ಟ್ಯಾಕ್ಸಿ ಹತ್ತಿದೆವು.  ಕಾಠಮಂಡುವಿನಿಂದ ಪೋಕ್ರಾಕ್ಕೆ 6 -7 ಗಂಟೆಗಳ ಕಾಲ ಪ್ರಯಾಣ, ಹಾಗಾಗಿ, ಮಧ್ಯಾಹ್ನ ಹೊರಟು  ರಾತ್ರಿಯ ಹೊತ್ತಿಗೆ ನಾವು ಪೋಖ್ರಾ ಹೋಟೆಲಗೆ ಬಂದು ಇಳಿದೆವು.  ನೇಪಾಳದಲ್ಲಿ ಶಾಖಾಹಾರಿಗಳಿಗೆ ಊಟ ಸಿಗುವದು ಸ್ವಲ್ಪ ಕಠಿಣ. ದಾರಿಯುದ್ದಕ್ಕೂ ಬಹಳ ಹೋಟೆಲಗಳು ಸಿಕ್ಕರೂ, ಸರಿಯಾದ ತಿಂಡಿ ತಿನಸುಗಳು ಸಿಗುವದು ಕಷ್ಟವಾಯಿತು. ಹೋಗುವ ದಾರಿಯಲ್ಲಿ, ನಮ್ಮ ಅದೃಷ್ಟಕ್ಕೆ, ಛಿತ್ವಾನ ಎಂಬ ಊರಲ್ಲಿ, ಒಂದು ಒಳ್ಳೆಯ “ಶಾಕಾಹಾರಿ ಭೋಜನಾಲಯ” ಸಿಕ್ಕಿತು!

 

 

 

 

ಬೆಳಿಗ್ಗೆ, ನಮ್ಮ ಪ್ರವಾಸದ ವೇಳಾಪಟ್ಟಿಯ ಪ್ರಕಾರ, “ದೇವಿ ಜಲಪಾತ” ನೋಡಲು ಹೋದ್ವಿ. ಸುಂದರ, ಆದರೆ ಉದ್ದದಲ್ಲಿ ಸಣ್ಣ ಜಲಪಾತ, ಸ್ವಲ್ಪವೇ ದೂರ ಕಾಣಿಸಿಗೊಂಡು ಒಮ್ಮೆಲೇ ಭೂಮಿಯಲ್ಲಿ ಲೀನ! ಮುಂದೆ ಎಲ್ಲಿ ಹೋಗುತ್ತೆ ಅನ್ನುವದು ಕಾಣಲ್ಲ. ಆ ಜಲಪಾತದ ನೀರು ಭೂಮಿಯಲ್ಲಿ ಸುರಂಗ ಮಾರ್ಗವಾಗಿ ಹೋಗಿ “ಸೇತಿ ನದಿ” ಗೆ ಸೇರುತ್ತದೆ ಅನ್ನುವ ಉಲ್ಲೇಖವಿದೆ. 

 

 

ನಂತರ, ಅಲ್ಲಿಂದ ಹತ್ತಿರದಲ್ಲೇ ಇರುವ ನೇಪಾಳದ ಪ್ರಸಿದ್ಧ “ಗುಪ್ತೆಶ್ವರ ಮಹಾದೇವ್ ಗುಹೆ” ಗೆ ಭೇಟಿ. ಇದು ಸುಮಾರು 3 ಕಿಲೋಮೀಟರು ಉದ್ದವಿದೆ, 200ಕ್ಕಿಂತಲೂ ಹೆಚ್ಚು ಹಂತಗಳಿವೆ. ಬಹಳ ಕಡೆ ಸಣ್ಣದಾದ ದಾರಿಯಲ್ಲಿಹೋಗಿ, ಸ್ವಲ್ಪ ಕಷ್ಟದ ದಾರಿಯಲ್ಲಿ ಹೋಗಬೇಕು. ಅಲ್ಲಿ ಶಿವನ ಪ್ರತಿಮೆ ಹಾಗೂ ಕೊನೆಯಲ್ಲಿ ದೇವಿ ಜಲಪಾತ ಕೆಳಗೆ ಬೀಳುವದನ್ನೂ ನೋಡಬಹುದು.

ಅಲ್ಲಿಂದ ಹೊರಟು, ನೇರವಾಗಿ ಬೆಟ್ಟದ ಮೇಲಿರುವ “ಪುಮದಿಕೋಟ್ ಶಿವ ವಿಗ್ರಹ”ದ ಹತ್ತಿರ ಹೋದೆವು. ಈ ವಿಗ್ರಹವನ್ನು ತುಂಬಾ ಸುಂದರವಾಗಿ ನಿರ್ಮಾಣ ಮಾಡಿದ್ದಾರೆ. ಈ ಗುಡ್ಡದ ಮೇಲಿಂದ, ನೀವು ಹಿಮಾಲಯದ “ಅನ್ನಪೂರ್ಣ ಪಂಕ್ತಿ” ಯನ್ನು ಕಣ್ತುಂಬಾ ನೋಡಬಹುದು.

ಹಾಗೆ ಸಾಯಂಕಾಲ, ಬಿಂದ್ಯಾಬಾಸಿಣಿ ದೇವಸ್ಥಾನದ ಭೇಟಿ ಕೊಟ್ಟು ದರ್ಶನ ಪಡೆದೆವು. ಸಂಜೆ ಆಗುತ್ತಿರುವದರಿಂದ, ಮರಳಿ ನಮ್ಮ ಹೋಟೆಲಗೆ ಹೊರೆಟೆವು. ಪಟ್ಟಣದ ಹತ್ತಿರದಲ್ಲೇ ಇದ್ದ ಫೆವಾ ಸರೋವರದ ರಮ್ಯತೆಯನ್ನು ಆನಂದಿಸಿದೆವು.

 

ಮರುದಿನ ಎದ್ದು, ಹೋಟೆಲನಲ್ಲಿ ಬೆಳಗಿನ ಉಪಹಾರವನ್ನು ಮುಗಿಸಿ, ಕೊಠಡಿಗಳನ್ನು ಖಾಲಿ ಮಾಡಿ, ತಿರುಗಿ ಕಾಠಮಂಡುವಿನತ್ತ ಪ್ರಯಾಣ ಬೆಳೆಸಿದೆವು. ದಾರಿಯ ಮದ್ಯದಲ್ಲಿ ಸಿಗುವ, ಚಿತ್ವಾನ್ ಹತ್ತಿರ,  ನಾರಾಯಣಿ ನದಿಯ ಪಕ್ಕದ ಗುಡ್ಡದ ಮೇಲಿರುವ ಕಾಳಿ ದೇವಸ್ಥಾನ (ಮೌಲಕಾಳಿಕಾ ದೇವಸ್ಥಾನ),  ಹಗ್ಗ ಮಾರ್ಗದ (cable car ) ಮೂಲಕ ಹೋಗಿ ದರ್ಶನ ಮಾಡಿ ಬಂದೆವು. ಗುಡ್ಡದ ಕೆಳಗೆ ಬಂದ ಮೇಲೆ, ಅಲ್ಲೇ ಹತ್ತಿರದಲ್ಲಿ ಇರುವ ಸುಂದರ ಮತ್ತು ಸಾಂಪ್ರದಾಯಕವಾಗಿ ನಿರ್ಮಿಸಿದ ಹೋಟೆಲನಲ್ಲಿ ಚಹಾ ಮತ್ತು ಸಲ್ಪ ಸಂಜೆಯ ತಿಂಡಿ ಸೇವಿಸಿ, ರಾತ್ರಿ ಹೊತ್ತಿಗೆ ನಮ್ಮ ಕಾಠಮಂಡು ಹೋಟೆಲಗೆ ಮರಳಿದೆವು.

ಮೊದಲೇ ನಿರ್ಧರಿಸಿದಂತೆ, ಬೆಳಿಗ್ಗೆ 5 ಗಂಟೆಗೆ ಕಾಠಮಂಡು ವಿಮಾನ ನಿಲ್ದಾಣಕ್ಕೆ “ಎವರೆಸ್ಟ್ ಪರ್ವತ ದರ್ಶನ” ದ ವಿಮಾನವನ್ನು ಏರಲು ಹೊರಟೆವು. ಹಿಮಾಲಯದ ಬೇರೆ ಬೇರೆ ಪರ್ವತ ಶ್ರೇಣಿಗಳನ್ನು ನೀವು ಈ ಒಂದು ತಾಸಿನ ವಿಮಾನ ಪ್ರಯಾಣದಲ್ಲಿ ನೋಡಿ ಆನಂದಿಸಬಹುದು. ವಿಮಾನದ ಮಾರ್ಗದರ್ಶಕ ಯಾ ಗಗನಸಖಿಯರು, ಪ್ರತಿಯೊಂದು ಪರ್ವತ ಶ್ರೇಣಿಯನ್ನು ದಾಟುವಾಗ ನಿಮಗೆ ಚೆನ್ನಾಗಿ ವಿವರಿಸುತ್ತಾರೆ. ಜಗತ್ತಿನ ಅತಿ ಎತ್ತರದ ಹಾಗೂ ಶ್ರೇಷ್ಟವಾದ, ಎವರೆಸ್ಟ್ ಪರ್ವತವನ್ನು (8849 ಮೀಟರು ಎತ್ತರ) ಹತ್ತಿರದಿಂದ ಕಣ್ತುಂಬಾ ನೋಡಿ ಆನಂದಿಸಿದೆವು.

 

ಮುಂದೆ, ಎಲ್ಲರ ಇಚ್ಚೆಯ ಪ್ರಕಾರ, ಕೇಬಲ್ ಕಾರ್ ಮೂಲಕ, ಮನಕಾಮನ ದೇವಸ್ಥಾನ (ಭಗವತಿ ದೇವಿ) ಕ್ಕೆ ಹೋಗಿ ದರ್ಶನ ಪಡೆದೆವು. ಬಹಳ ಭಕ್ತರ ಗುಂಪು ಮತ್ತು ಸಣ್ಣ ಮಳೆ ಹೊಯ್ಯಿತ್ತಿದರೂ, ಹಿಂಜರಿಯದೆ ನಮ್ಮ ಭೇಟಿ ಕೊಟ್ಟು ಹಿಂತಿರುಗಿದೆವು.

ನೇಪಾಳದಲ್ಲಿ ಇದ್ದಾಗ, ನಮ್ಮ ಮೊದಲಿನ ಸಂಕಲ್ಪದಂತೆ, ಎರಡು ಸ್ಥಳಗಳ ಭೇಟಿ ಮಾಡಲು ಕಾರಣಾಂತರದಿಂದ ಸಾಧ್ಯವಾಗಲಿಲ್ಲ. ಒಂದು, ಶ್ರೀ ಮುಕ್ತಿನಾಥ ದೇವಸ್ಥಾನದ ಭೇಟಿ ಮುತ್ತೊಂದು ಗಂಡಕಿ ನದಿಯ ಮೂಲದಲ್ಲಿ ಇಳಿದು ಸಾಲಿಗ್ರಾಮವನ್ನು ನದಿಯಲ್ಲಿ ಆರಿಸಿ ತರುವದು. ಇನ್ನೊಮ್ಮೆ ಈ ಕಾರ್ಯಕ್ಕೆ ನೇಪಾಳಕ್ಕೆ ಬರೋಣ ಅಂತ ಮಾತನಾಡಿಕೊಂಡೆವು. ಒಳ್ಳೆಯ ರುದ್ರಾಕ್ಷಿ ಮಾಲೆಗಳು ಸುಲಭವಾಗಿ ಸಿಕ್ಕಿತು.

 

ಸಾಯಂಕಾಲ ಆಗುವದರೊಳಗೆ, ರೋಹಿಣಿ ದೆಹಲಿಯಿಂದ ವಿಮಾನದಲ್ಲಿ ಕಾಠಮಂಡುವಿಗೆ ಬಂದು ನಮ್ಮ ಜೊತೆಯಾದಳು.

 

 

 

 

ಮರುದಿನ ಬೆಳಗ್ಗೆ, ಇನ್ನೊಮ್ಮೆ ಭಾರತಕ್ಕೆ ಹೋಗುವ ರಸ್ತೆಯ ಬಗ್ಗೆ ಹೋಟೆಲನಲ್ಲಿ ವಿಚಾರಿಸಿ, ನಮ್ಮ ನಮ್ಮ ಸಾಮಾನುಗಳನ್ನು ನಮ್ಮ ಕಾರಿಗೆ ಏರಿಸಿ, ಕಾಠಮಂಡುವಿನಿಂದ ಅಯೋಧ್ಯೆಗೆ,   “ಸೀತಾದೇವಿಯ” ಜನಕಪುರದ ಮೂಲಕದ ರಸ್ತೆಯನ್ನು ಹಿಡಿದೆವು. ಜನಕ ರಾಜನ ಪುತ್ರಿ “ಸೀತಾ ದೇವಿ” ಇಲ್ಲಿ ಹುಟ್ಟಿ “ಶ್ರೀ ರಾಮ” ನನ್ನು ಲಗ್ನವಾಗಿ ಅಯೋಧ್ಯಾ ನಗರಕ್ಕೆ ಬಂದಳು ಎನ್ನುವ ಪ್ರತೀತಿ ಇದೆ. ಮದ್ಯಾಹ್ನದ ಹೊತ್ತಿಗೆ “ಸೀತಾ ದೇವಿ ದೇವಸ್ಥಾನ” ದ ದರ್ಶನ ಮಾಡಿ, ಅಲ್ಲೇ ಹತ್ತಿರದ ಹೋಟೆಲಲ್ಲಿ ಊಟ ಮುಗಿಸಿ, ಶ್ರೀ ರಾಮ ಕ್ಷೇತ್ರವಾದ “ಅಯೋಧ್ಯಾ” ನಗರದ ಕಡೆ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ರಸ್ತೆ ಚೆನ್ನಾಗಿರುವದರಿಂದ, ಯಾವುದೇ ತೊಂದರೆ ಇಲ್ಲದೆ, ಮಧ್ಯ ರಾತ್ರಿಯ ಹೊತ್ತಿಗೆ ಗೋರಖಪುರವನ್ನು ಸೇರಿ, ನಮ್ಮ ಹೋಟೆಲನಲ್ಲಿ ತಂಗಿದೆವು.

 

 

ಅಯೋಧ್ಯಾ ಭೇಟಿ- ಶ್ರೀ ರಾಮ ದರ್ಶನ:

ಬೆಳಿಗ್ಗೆ, ಅಯೋಧ್ಯಾ ತಲುಪಿ,  ಶ್ರೀ ರಾಮ ಮಂದಿರದ  ಕರ ಕುಶಲ ಸೇವಕರ ಕೆಲಸವನ್ನು ನೋಡಿ (ಆವಾಗ ಇನ್ನೂ ಮಂದಿರದ ಕೆಲಸ ಕಾರ್ಯ ಜೋರಾಗಿ ನಡೆದಿತ್ತು), ಸಾಯಂಕಾಲ ಶ್ರೀ ರಾಮನ ದರ್ಶನ ಹಾಗೂ ಸರಯೂ ನದಿಯ ದಂಡೆಯಲ್ಲಿ ನಿರ್ಮಿಸಿದ “ಶ್ರೀ ರಾಮಾಯಣ ಚಿತ್ರಣ” ಮತ್ತೂ ಸುಂದರವಾಗಿ ನಿರ್ಮಿಸಿದ “ಸಂಜೆ ಕಾರಂಜಿ”ಯನ್ನು ಕಣ್ತುಂಬಾ ನೋಡಿ ಆನಂದಿಸಿ, ಶ್ರೀರಾಮ ಮಂದಿರ ಮುಗಿದ ಮೇಲೆ ಇನ್ನೊಮ್ಮೆ ಬರುವ ಸಂಕಲ್ಪ ಮಾಡಿ, ನಮ್ಮ ಹೋಟೆಲಗೆ ತೆರೆಳಿದೆವು.

 

ನಮ್ಮ ಪೂರ್ವ ಯೋಜನೆಯಂತೆ, ಬೇಗ ಹೊರಟು ಅಯೋಧ್ಯಾ ಲಕ್ನೋ ಮಾರ್ಗವಾಗಿ ಪ್ರಯಾಣಿಸಿ, ಮತ್ತೆ ಲಕ್ನೋ ಆಗ್ರಾ ಹೆದ್ದಾರಿ, ಆಗ್ರಾ ನೊಯಿಡಾ ಹೆದ್ದಾರಿಯ ಮೂಲಕ ಚಲಿಸಿ, ರಾತ್ರಿ ಹೊತ್ತಿಗೆ ಗುರುಗ್ರಾಮಕ್ಕೆ ಮರಳಿ ಬಂದೆವು. ನಮ್ಮ ನೇಪಾಳದ ರಸ್ತೆ ಪ್ರವಾಸ ಸುರಕ್ಷಿತ ಹಾಗೂ ಸಂತೋಷದಿಂದ ಮುಗಿಯಿತು.

 

 

ಈ ಪ್ರವಾಸ ಕಥನ ನಿಮಗೆ ಹೇಗನ್ನಿಸಿತು ಅಂತ ತಪ್ಪದೇ ತಿಳಿಸಿ. ನಿಮ್ಮ ಅನಿಸಿಕೆಗಳ ನಿರೀಕ್ಷೆಯಲ್ಲಿ

 

ನಿಮ್ಮ ಪ್ರವಾಸಿ ಸ್ನೇಹಿತ,

ಶ್ರೀಪಾದ ಭಟ್ಟ, ಗುರುಗ್ರಾಮ