ಶೀತ ಮರುಭೂಮಿಯ ಪಯಣದ ಕಥೆ


ನಾವು ದೆಹಲಿಗೆ ಬಂದು ಬಹಳ ವರ್ಷಗಳೇ ಕಳೆದವು. ಆದರೆ ನನ್ನ ಬಹುದಿನದ ಒಂದು ಆಸೆ ನೆರವೇರಿರಲಿಲ್ಲ. ನೀವು “ಆಸೆ” ಅಥವಾ “ಸ್ವಪ್ನ” ಯಾವದನ್ನೂ ಹೇಳಬಹುದು! ನನ್ನ ಬಹುದಿನದ ಸ್ವಪ್ನ ಇಷ್ಟೇ: “ಒಂದು ಸಲ ಲೇಹ್ (ಲದಾಖ್) ಪ್ರದೇಶಕ್ಕೆ ರಸ್ತೆಯ ಮೂಲಕ ನಮ್ಮ ಕಾರಿನಲ್ಲಿ ಭೇಟಿ ಮಾಡಬೇಕು”! ಇದೇನು ಮಹಾ ಯಾ ಬಹಳ ಸುಲಭದ ಪ್ರಯಾಣ ಅಂಥ ನಿಮಗನಿಸಿದರೆ, ನಮ್ಮ ಈ  “ಶೀತ ಮರುಭೂಮಿಯ ಪಯಣದ ಕಥೆ” ಓದಿ, ಆಮೇಲೆ ಹೇಳಿ!

 

ಬಹಳ ದಿನದ ತಯಾರಿಯ ನಂತರ, ನಮ್ಮ ಇನ್ನಿಬ್ಬ ಸ್ನೇಹಿತರ ಜೊತೆ ಸೇರಿ ಜೂನ್ 2023 ಕೊನೆಯ ವಾರದಲ್ಲಿ 12 ದಿನಗಳ ದೆಹಲಿ-ಮನಾಲಿ- ಲೇಹ್ (ಲದಾಖ್) ರಸ್ತೆ ಪ್ರವಾಸವನ್ನು ಪ್ರಾರಂಭಿಸಿದೆವು! ನೀವು ದೆಹಲಿ-ಮನಾಲಿ-ಲೇಹ್ ಹೆದ್ದಾರಿ ರಸ್ತೆ ಮೂಲಕ ಪ್ರಯಾಣಿಸಿದರೆ, ಬಹಳ ದೂರವಿಲ್ಲ- ಕೇವಲ 1000 ಕಿಲೋಮೀಟರು!  ದೆಹಲಿಯಿಂದ ಮನಾಲಿಗೆ ರಾತ್ರಿ ಪ್ರಯಾಣ, ಯಾಕೆಂದರೆ ಒಂದು ದಿನ ಸರಿಯಾಗಿ ಆರಾಮಿಸಿ, ಮರುದಿನ ಬೇಗ ಎದ್ದು ಹಗಲಿನಲ್ಲಿ ಮನಾಲಿಯಿಂದ ಪ್ರಯಾಣ ಮುಂದುವರಿಸುವ ಯೋಚನೆ. ಈ ಕಷ್ಟವಾದ ರಸ್ತೆಗಳಲ್ಲಿ ಬಹಳ ಕಡೆ ರಾತ್ರಿ ಪ್ರಯಾಣ ನಿಷೇದ. ಇದಕ್ಕೆ ಇನ್ನೊಂದು ಕಾರಣವೆಂದರೆ, ಕತ್ತಲೆಯಾಗುವದರೊಳಗೆ ನಮ್ಮ ಯೋಜನೆಯ ಪ್ರಕಾರ, ಮುಂದಿನ ಸ್ಥಳವನ್ನು, ಅಂದರೆ ಸರ್ಚು ಕ್ಯಾಂಪ್ (Sarchu Camp) ಸುರಕ್ಷಿತವಾಗಿ ಸೇರುವುದು.

 

ಮನಾಲಿಯಲ್ಲಿ ಸಂಜೆ ಹೊತ್ತಿನಲ್ಲಿ ಪೇಟೆ ಕಡೆ ಓಡಾಡಿ, ಕೊನೆಗೆ ರಾಕ್ಷಸಿ  “ಹಿದೆಂಬೆ ದೇವಸ್ಥಾನ” ಕ್ಕೆ ಭೇಟೆ ಕೊಟ್ಟೆವು. ಬಹುಷಃ ರಾಕ್ಷಸಿಯರ ದೇವಸ್ಥಾನ ನಮ್ಮ ದೇಶದಲ್ಲಿ ಬೇರೆಲ್ಲೂ ಇರಲಿಕ್ಕಿಲ್ಲ! ಬಹಳ ಪ್ರವಾಸಿಗರು ಈ ದೇವಸ್ಥಾನಕ್ಕೆ ಬರುತ್ತಾರೆ.  ಸುಂದರವಾದ ಸ್ಥಳ. 

  

ಮನಾಲಿಯಿಂದ ಲೇಹ್ ಗೆ ಸುಮಾರು 450 ಕಿಲೋಮೀಟರು. ಸಾದಾ ಹೆದ್ದಾರಿಯಾಗಿದ್ದರೆ ಒಂದೇ ದಿನದಲ್ಲಿ ಹೋಗಬಹುದಿತ್ತೇನೋ.  ಆದರೆ ಈ ರಸ್ತೆ ಸಾದಾ ರಸ್ತೆ ಅಲ್ಲ, ಹಲವಾರು ಗುಡ್ಡ ಭೆಟ್ಟಗಳನ್ನು ಹತ್ತಿ ಯಾ ಇಳಿದು, ಅಥವಾ ಕಷ್ಟಕರವಾದ ತಿರುವು ರಸ್ತೆಗಳಲ್ಲಿ ಪ್ರಯಾಣ ಮಾಡಿ ತಲುಪಬೇಕು. ಮನಾಲಿಯಿಂದ ಲೇಹ್ ಗೆ ತಲುಪುವದರೊಳಗೆ 4 ಪ್ರಮುಖ ಶಿಖರವನ್ನು ದಾಟಬೇಕು. ರೋಹತಾಂಗ್ ಶಿಖರ (Rohtang Pass ), ಬರಲಾಚಾ ಲಾ ಶಿಖರ (Baralacha La Pass ), ಲುಂಗಲಾಚ ಲಾ ಶಿಖರ (Lungalacha La Pass ) ಮತ್ತು ತಗಲಾಂಗ ಶಿಖರ (Tagalang La Pass ). ಇನ್ನೂ ಹಲವಾರು ಸಣ್ಣ ಪುಟ್ಟ ಶಿಖರಗಳನ್ನು ನಾವು ದಾಟಬೇಕಾಗುತ್ತದೆ. ಈ ರಸ್ತೆಗಳು ಸಮುದ್ರಮಟ್ಟದಿಂದ ಬಹಳ ಎತ್ತರದಲ್ಲಿವೆ. ಉದಾಹರಣೆಗೆ, ತಗಲಂಗಾ ಲಾ ಶಿಖರದ ರಸ್ತೆ ಸಮುದ್ರಮಟ್ಟದಿಂದ 17482 ಅಡಿಯ ಎತ್ತರದಲ್ಲಿ!  ಹಾಗಾಗಿ, ರಸ್ತೆಯ ಮೂಲಕ ಹೋಗುವ ಮನಾಲಿ ಲೇಹ್ ಪ್ರಯಾಣಿಕರು, ಒಂದು ರಾತ್ರಿ ಮದ್ಯದಲ್ಲಿ ವಿಶ್ರಾಮಿಸಿ ಮರುದಿನ ಸಾಯಂಕಾಲದೊಳಗೆ ಲೇಹ್ ತಲಪುತ್ತಾರೆ. ದಾರಿಯುದ್ದಕ್ಕೂ ಹಿಮಾಲಯದ ಸುಂದರ ಶ್ರೇಣಿಯ ಮನೋಹರ ಹಿಮಾಚ್ಚಾದಿತ ದೃಶ್ಯ!  ನಮ್ಮ ಪ್ರಯಾಣದಲ್ಲಿ, ಈ ತಿರು ತಿರುವಿನ ರಸ್ತೆ ಹಾಗೂ ಹೊರಗಿನ ದೃಶ್ಯ, ಒಂದು ನಿಮಿಷವೂ ಕಣ್ಣು ಮುಚ್ಚಲು ಕೊಡಲಿಲ್ಲ.

  

ಮನಾಲಿ ಲೇಹ್ ರಸ್ತೆಯಲ್ಲಿ ಪ್ರವಾಸಿಗರಿಗೆ ವಿಶೇಷ ಹೊಸ ಆಕರ್ಷಣೆ – ಅಟಲ್ ಸುರಂಗ ದಾರಿ (Atul Tunnel)! ಇದು ಮನಾಲಿಯಿಂದ ಕೇವಲ 29 ಕಿಲೋಮೀಟರ್  ದೂರದಲ್ಲಿದೆ. ಇತ್ತೀಚೆಗಷ್ಟೇ ನಿರ್ಮಾಣವಾದ ಈ ಹೊಸ ಸುರಂಗ ಹೆದ್ದಾರಿ, ಗುಡ್ಡದ ಒಳಗೆ 9 ಕಿಲೋಮೀಟರಿದೆ. ಹಾಗೂ, ಈ ಸುರಂಗ ದಾರಿಗೆ ವಿಶ್ವದ ಅತಿ ಉದ್ದದ ಸುರಂಗ ದಾರಿ ಎನ್ನುವ ಹೆಗ್ಗಳಿಕೆಯಿದೆ. 2020 ರಲ್ಲಿ ಪ್ರಧಾನ ಮಂತ್ರಿಯವರಿಂದ ಉದ್ಘಾಟಿಸಲ್ಪಟ್ಟ ಈ ಸುರಂಗ ದಾರಿ, ಪ್ರಯಾಣಿಕರಿಗೆ 48 ಕಿಲೋಮೀಟರಿನ ದಾರಿಯನ್ನು ಹಾಗೂ 4 – 5 ಘಂಟೆಗಳ ಪ್ರಯಾಣವನ್ನು ಉಳಿಸುತ್ತದೆ. ಮನಾಲಿಗೆ ಬಂದ ಪ್ರವಾಸಿಗರು ಇಲ್ಲಿ ಭೇಟಿ ಕೊಡದೆ ಹೋಗುವದು ಬಹಳ ವಿರಳ.

 

ನಮ್ಮ ಮೊದಲನೇ ದಿನದ ರಸ್ತೆ ಪ್ರಯಾಣದಲ್ಲಿ ಶಿಖರಗಳನ್ನು ಏರುವ ಪ್ರಯತ್ನ ಬಹಳ ಆನಂದದಾಯಕವಾಗಿತ್ತು. ಎಲ್ಲಿ ನೋಡಿದರೂ ಹಿಮಾಚ್ಚಾದಿತ ಬೃಹತ್ ಹಿಮಾಲಯ ಹಾಗೂ ಮಧ್ಯ ಮಧ್ಯದಲ್ಲಿ ಸುಂದರ ಮತ್ತು ಸ್ವಚ್ಛ ಕೆರೆ ಯಾ ನದಿಗಳು! ನಾವು ಹೋಗುವ ರಸ್ತೆಯ ಪಕ್ಕದಲ್ಲೇ ಬಹಳ ಪ್ರವಾಸಿ ವಾಹನಗಳು ನಿಂತಿದ್ದವು- ನಮಗೂ ಕುತೂಹಲ. ನಾವು ನಮ್ಮ ಕಾರನ್ನು ನಿಲ್ಲಿಸಿ ನೋಡಿದರೆ- ಅಬ್ಬಾ! ಸುಂದರವಾದ ಸಣ್ಣ ಆದರೆ ಸ್ವಚ್ಛ ಕೆರೆ – ಸುತ್ತಮುತ್ತ ಹಿಮಾಲಯ ಶಿಖರ! ನೋಡಲು ಎರಡು ಕಣ್ಣು ಸಾಲದು! ನಮಗೂ ನಾಲ್ಕು ತಾಸು ಪ್ರಯಾಣ ಮಾಡಿ ಸಾಕಾಗಿತ್ತು. ಅಲ್ಲಿಯೇ ನಮ್ಮ ಕಾರನ್ನು ನಿಲ್ಲಿಸಿ ಕೆರೆಯ ಹತ್ತಿರ ಓಡಾಡಿ, ಹತ್ತಿರ ಚಾ ಅಂಗಡಿಯಲ್ಲಿ ಬಿಸಿ ಬಿಸಿ ಚಾ ಕುಡಿದು, ಮತ್ತೆ ಪ್ರಯಾಣ ಮುಂದುವರಿಸಿದೆವು.  ನಮ್ಮ ಪ್ರಯಾಣದ ಬಹಳ ಕಡೆ ರಸ್ತೆಯ ಅಕ್ಕ ಪಕ್ಕದಲ್ಲಿ ಹಿಮದ ರಾಶಿ, ಅದೂ ಜೂನ್ ತಿಂಗಳಾದರೂ ಇತ್ತು! 

 

ಮೊದಲ ದಿನದ ನಮ್ಮ ಪಯಣ ಸಾಯಂಕಾಲ 7 ಘಂಟೆಗೆ ನಮ್ಮ ನಿರ್ಧಾರಿತ ಸ್ಥಳ ಅಂದರೆ “ಸರ್ಚು ಕ್ಯಾಂಪ್ (Sarchu Camp ) ಗೆ ಬಂದು ನಿಂತಿತು. ವಸತಿ ವ್ಯವಸ್ಥೆ ನಮ್ಮಲ್ಲಿಯ ಹೋಟೆಲ್ ತರ ಅಲ್ಲ. ಸಮತಟ್ಟಾದ ಜಾಗದಲ್ಲಿ ಹತ್ತಾರು  ಟೆಂಟ್ (tent ) ಇದೆ, ಅದರೊಳಗೆ ನಮ್ಮ ಹಾಸಿಗೆ! ವರ್ಷದಲ್ಲಿ 6 -7 ತಿಂಗಳು ಈ ಪ್ರದೇಶಗಳು ಹಿಮದಿಂದ ಮುಚ್ಚಿರುವದರಿಂದ, ಹೋಟೆಲ್ ಮಾಲೀಕರು ಟೆಂಟಿನ ಮೂಲಕ ಪ್ರವಾಸಿಗರ ತಾಣವನ್ನು ನಿರ್ಮಿಸುತ್ತಾರೆ.  ಎಲ್ಲರಿಗೂ ಸೇರಿ ಒಂದು ಕಡೆ ಊಟದ ಟೆಂಟ್. ನಾವು ಕಾರಿನಿಂದ ಹೊರಗೆ ಬಂದ ತಕ್ಷಣ, ಎಲ್ಲರೂ ತಮ್ಮ ತಮ್ಮ ದಪ್ಪದ ಸ್ವೆಟರ್ ಹುಡುಕಲು ಪ್ರಾರಂಭಿಸಿದೆವು! ಯಾಕೆಂದರೆ, ಹೊರಗಿನ ತಾಪಮಾನ -3 ಡಿಗ್ರಿ! ಹೊರತಾಗಿ, ಬಯಲು ಪ್ರದೇಶವಾಗಿದ್ದರಿಂದ ಸುಯ್ಯನೆ ಚಳಿಗಾಳಿ!

 

ಈ ಕ್ಯಾಂಪ್ ಸ್ಥಳವನ್ನು ನೋಡಿದ ತಕ್ಷಣ ನನಗೆ ಮಹಾಭಾರತದ ಕುರುಕ್ಷೇತ್ರ ಸ್ಥಳದ ನೆನಪಿಗೆ ಬಂತು!  ಈ ಜಾಗ ಹೇಗಿದೆ ಅಂದರೆ, ಸುತ್ತ ಮುತ್ತ ಹಿಮಾಚ್ಚಾದಿತ ಹಿಮಾಲಯ ಶ್ರೇಣಿ, ಮಧ್ಯೆ ಸಾವಿರಾರು ಎಕರೆಗಳಷ್ಟು ಸಪಾಟ ಜಾಗ (plain land ), ಮತ್ತೆ ಎರಡು ಕಡೆಯಿಂದ ಒಳ ಬರಲು ಅವಕಾಶ!   ಮಹಾಭಾರತದ ಯುದ್ಧ ಇಲ್ಲಿ ಆಗಿದ್ದರೆ, ನನ್ನ ಪ್ರಕಾರ ಎಲ್ಲಾ 18 ಅಕ್ಷೋಹಿಣಿ ಸೇನೆಗಳನ್ನು ಇಲ್ಲಿ ಒಂದೇ ಕಡೆ ಸೇರಿಸಬಹುದಿತ್ತೇನೋ!

 

ರಾತ್ರಿ ಮಲಗುವ ಮೊದಲು, ಒಮ್ಮೆ ಸ್ವಚ್ಛವಾಗಿ ಕಾಣುವ ನಕ್ಷತ್ರ ಹಾಗು ಚಂದ್ರ ಭರಿತ ಆಕಾಶವನ್ನು ನೋಡಿ ಆನಂದಿಸಿ, ನಮ್ಮ ನಮ್ಮ ಟೆಂಟ್ ಗಳಿಗೆ ತೆರಳಿದೆವು. ಕೆಟ್ಟ ಚಳಿಯಲ್ಲಿ ಸರಿಯಾಗಿ ರಗ್ಗು ಹೊದ್ದು ಮಲಗಿ, ಬೆಳಗ್ಗೆ ಎದ್ದು ಟೆಂಟ್ ಮಾಲೀಕ ತಯಾರಿಸಿದ ಬಿಸಿ ಬಿಸಿ ಪರಾಠಾ ತಿಂದು, ಎರಡನೇ ದಿನದ ಲೇಹ್ ಪ್ರವಾಸವನ್ನು ಪ್ರಾರಂಭಿಸಿದೆವು. ಲೇಹ್ ದಾರಿಯಲ್ಲಿ ನಕೀಲಾ ಶಿಖರ (Nakeela Pass – 155547 ft  ಎತ್ತರದಲ್ಲಿ), ಲಾಚುಂಗ್ಲಾ ಶಿಖರ (Lachungla Pass – 16661 ft ಎತ್ತರದಲ್ಲಿ) ಹಾಗೂ ನಮ್ಮ ದಾರಿಯ ಅತ್ಯಂತ ಎತ್ತರದ ತಗಲಾಂಗ ಶಿಖರ (Taglangla Pass – 17482 ft ಎತ್ತರದಲ್ಲಿ ) ವನ್ನು ದಾಟಿ ನಮ್ಮ ಕೊನೆಯ ಗುರಿ – ಲೇಹ್ ವನ್ನು ಸಾಯಂಕಾಲ ಹೊತ್ತಿಗೆ ತಲುಪಿದೆವು.  ಮನಾಲಿ ಲೇಹ್ ಹೆದ್ದಾರಿಯ 80 -90 ಕಿಲೋಮೀಟರು ರಸ್ತೆ ಬಹಳ ಹಾಳಾಗಿದ್ದರಿಂದ, ನಮ್ಮ ಒಟ್ಟಾರೆ ಪ್ರಯಾಣದಲ್ಲಿ 4-5 ತಾಸು ಹೆಚ್ಚಿನ ಸಮಯ ದಾರಿಯಲ್ಲಿ ಕಳೆಯಬೇಕಾಯಿತು.

 

ಒಮ್ಮೆ ನೀವು ಮನಾಲಿಯಿಂದ ಲೇಹ್ ಕಡೆ ಹೊರಟರೆ, ಪ್ರಕೃತಿಯ ವಿಸ್ಮಯವನ್ನು ಕಾಣಬಹುದು. ಹೆಚ್ಚಾಗಿ, ಪರ್ವತಗಳು ಅಥವಾ ಎತ್ತರದ ಪ್ರದೇಶ ಎಂದರೆ ನಮಗೆ ಯಾವಾಗಲೂ ಎತ್ತರದ ಮರಗಳು ಅಥವಾ ಹಸಿರು ತುಂಬಿದ ಗಿಡ ಮರಗಳ ನೆನಪಾಗುತ್ತದೆ. ಆದರೆ, ಲೇಹ್ ಹೋಗುವ ದಾರಿಯಲ್ಲಿ ಹಾಗೂ ಲೇಹ್ ದಲ್ಲಿ ಮರ ಗಿಡಗಳು ಬಹಳ ವಿರಳ. ಎಲ್ಲಾ ಗುಡ್ಡ ಪ್ರದೇಶಗಳು ಬೋಳು ಬೋಳು, ಹಾಗೂ ಬೇರೆ ಬೇರೆ ಬಣ್ಣದ ಕಲ್ಲು ಮಣ್ಣುಗಳು!  ಇದಕ್ಕೆ ಪೂರ್ತಿ ವಿರುದ್ಧವಾಗಿ, ನೀವು ಜಮ್ಮು, ಕಾಶ್ಮೀರ ಅಥವಾ ಊಟಿ ಅಂತಹ ಎತ್ತರದ ಪ್ರದೇಶಕ್ಕೆ ಹೋದರೆ, ಎಲ್ಲಾ ಕಡೆ ಹಸಿರು ತುಂಬಿದ ಗುಡ್ಡ ಗಾಡು ಮತ್ತು ಎತ್ತರದ ಮರಗಳನ್ನು ನೋಡಬಹುದು! 

 

ಲೇಹ್ (ಲದಾಖ್)ನಲ್ಲಿ ಮರ ಗಿಡಗಳು ಯಾಕೆ ಇಲ್ಲಾ, ಈ ಪ್ರದೇಶ ಯಾಕೆ ಹಸಿರಾಗಿಲ್ಲ ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಕಾರಣ ಇಷ್ಟೇ- ಇಲ್ಲಿ ಯಾವಾಗಲೂ ಚಳಿ, ಮಳೆ ಬಹಳ ವಿರಳ, ಪೂರ್ತಿ ಲಡಾಖ್ ಪ್ರದೇಶ ಮಳೆಯ ನೆರಳಿನ ಪ್ರದೇಶ. ಮಳೆಗಾಲದ ಮೋಡಗಳು ಇಲ್ಲಿಗೆ ಬರಲಿಕ್ಕೆ ಹಿಮಾಲಯ ಶ್ರೇಣಿ ತಡೆಯಾಗುತ್ತದೆ. ಮತ್ತೆ, ಇಡೀ ವರ್ಷ ಹಿಮಾಲಯದ ಶಿಖರಗಳು ಹಿಮಾಚ್ಛಾದಿತವಾಗಿರುತ್ತದೆ. ಗಿಡಗಳು ಇಷ್ಟು ಎತ್ತರದ ಪ್ರದೇಶದಲ್ಲಿ ಬೆಳೆಯುವದಿಲ್ಲ. ಅದಕ್ಕಾಗಿಯೇ, ಲೇಹ್ (ಲದಾಖ್) ಅನ್ನು “ಶೀತ ಮರುಭೂಮಿ” (cold desert ) ಅಂತ ಕರೆಯುತ್ತಾರೆ.  ಹಾಗಾಗಿ, ಇಲ್ಲಿ ಬಹಳ ರೀತಿಯ ಬಣ್ಣ ಬಣ್ಣದ ಗುಡ್ಡಗಳನ್ನು, ಮತ್ತೆ ತುತ್ತತುದಿಗೆ ಹಿಮಾಚ್ಚಾದಿತ ಪ್ರದೇಶಗಳನ್ನು ನೋಡಬಹುದು. ಇಲ್ಲಿಯ ಜನರು ಹೆಚ್ಚಾಗಿ ಸಿಂಧೂ ನದಿಯ (Indus River ) ಯಾ ಝನ್ಸ್ಕಾರ ನದಿಯ (Zanskar River ) ಅಕ್ಕ ಪಕ್ಕದಲ್ಲಿ ತರಕಾರಿ, ಹಣ್ಣು ಮತ್ತು ಇತರ ಗಿಡಗಳನ್ನು ಬೆಳೆಸುತ್ತಾರೆ. ಹಾಗಾಗಿ, ಅಲ್ಲಲ್ಲಿ ಹಸಿರನ್ನು ಕಾಣಬಹುದು. 

 

ಇನ್ನೊಂದು ವಿಷಯ. ಈ ರೀತಿಯ ಎತ್ತರ ಜಾಗದಲ್ಲಿ ನಮ್ಮಂಥಹ ಸಮ ಪ್ರದೇಶದಲ್ಲಿ  ವಾಸಿಸುವ ಜನ ಬಂದಾಗ, ಸ್ವಲ್ಪದಿನ ಉಸಿರಾಟದ ತೊಂದರೆ ಆಗುತ್ತದೆ. ನಾಲ್ಕು ಹೆಜ್ಜೆ ಸಮಾ ರಸ್ತೆಯಲ್ಲಿ ನಡೆದರೂ ಊರಲ್ಲಿ ದೊಡ್ಡಗುಡ್ಡ ಹತ್ತಿದ ಅನುಭವ!   ಇದನ್ನೇ – ವಾತಾವರಣಕ್ಕೆ ಒಗ್ಗಿಕೊಳ್ಳುವಿಕೆ (Acclimatization) ಯ ಸಮಯ ಅನ್ನುತ್ತಾರೆ.  ನಾವು ಹಂತ ಹಂತವಾಗಿ ರಸ್ತೆಯ ಮೂಲಕ ಪ್ರಯಾಣ ಮಾಡಿ, ಸರಿಯಾದ ಔಷಧಿಗಳನ್ನು ಪ್ರಯಾಣದ ಎರಡು ದಿನ ಮೊದಲಿಂದಲೂ ಸೇವಿಸಿದ್ದರೂ, ಸ್ವಲ್ಪ ಉಸಿರಾಟದ ಕಷ್ಟವನ್ನು 2 -3 ದಿನಗಳ ಕಾಲ ಅನುಭವಿಸಿದೆವು. ಅನಂತರ, ಅಲ್ಲಿಯ ವಾತಾವರಣಕ್ಕೆ ನಮ್ಮ ದೇಹ ಒಗ್ಗಿಕೊಂಡಿತು. ಅದಕ್ಕಾಗಿಯೇ, ನೇರವಾಗಿ ವಿಮಾನದಲ್ಲಿ ಲೇಹ್ ಕ್ಕೆ ಬಂದು ಇಳಿಯುವವರಿಗೆ, 2 ದಿನ ವಿಶ್ರಾಮ ಮಾಡಲು ಸಲಹೆ ನೀಡುತ್ತಾರೆ! 

 

ನಮ್ಮ ಲೇಹ್ ಪ್ರವಾಸ ಲೇಹ್ ಅರಮನೆಯಿಂದ (Leh Palace )  ಪ್ರಾರಂಭವಾಯಿತು. ನಮಗ್ಯಾಲ್ ರಾಜರು  (Namgyal dynasty ) ಕಟ್ಟಿದ ಈ ಅರಮನೆ ಟಿಬೆಟ್ ಕೌಶಲ್ಯದಲ್ಲಿ ಕ್ರಿ.ಶ. 1590-1635  ರ ಸಮಯದಲ್ಲಿ ಕೇವಲ 3 ವರ್ಷಗಳಲ್ಲಿ ನಿರ್ಮಾಣ ಮಾಡಲಾಯಿತು. ಒಂಬತ್ತು ಮಹಡಿಯ ಈ ಅರಮನೆ, ನೂರಕ್ಕೂ ಹೆಚ್ಚಿನ ಕೊಠಡಿಗಳನ್ನು ಹೊಂದಿದ್ದು, ನೋಡಲು ಬಹಳ ಸುಂದರವಾಗಿದೆ. 

 

ನಮ್ಮ ಮುಂದಿನ ಭೇಟಿ, ಶಾಂತಿ ಸ್ತೂಪ ಸ್ಥಳಕ್ಕೆ. ಈ ಸ್ತೂಪವನ್ನು ಜಪಾನಿನ ಬೌದ್ಧ ಧರ್ಮದ ಶ್ರೀ ಭಿಕ್ಷು ಗಯೂಮ್ಯೋ ನಕಾಮೂರ ಎನ್ನುವ ವ್ಯಕ್ತಿ 1991 ರಲ್ಲಿ ಲೇಹ್ ದ ಹತ್ತಿರ ಒಂದು ಗುಡ್ಡದ ಮೇಲೆ ಜಗತ್ತಿನ ಶಾಂತಿ, ಸೌಹಾರ್ದತೆ ಮತ್ತು ಬುದ್ಧನ ತತ್ವಗಳನ್ನು  ಪಾಲಿಸಲು ಕಟ್ಟಿಸಿದ್ದಾನೆ. ಈ ಸುಂದರವಾದ ಸ್ತೂಪ ಬಹಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನಾವು ಸೂರ್ಯಾಸ್ತದ ಸಮಯಕ್ಕೆ ಭೇಟಿ ಕೊಟ್ಟು, ಅನಂತರ ಸ್ತೂಪವನ್ನು ಬಣ್ಣ ಬಣ್ಣದ ಬೆಳಕಲ್ಲಿ ನೋಡಿ ಹಿಂದಿರುಗಿದೆವು.  

 

ಮರುದಿನ ಯುದ್ಧ ಸ್ಮಾರಕ ಕ್ಕೆ ಭೇಟಿ ಕೊಟ್ಟು, ದೇಶವನ್ನು ರಕ್ಷಿಸಲು ಹೋರಾಡಿ ಹುತಾತ್ಮರಾದ ಎಲ್ಲಾ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ, ಅಲ್ಲೇ ಸ್ಥಾಪಿಸಿದ ವಸ್ತುಸಂಗ್ರಾಹಾಲಯದಲ್ಲಿ ನಮ್ಮ ಸೈನಿಕರ ವೀರ ಕಥೆಗಳನ್ನು ಓದಿ, ನಮ್ಮ ಪ್ರಯಾಣವನ್ನು ಮುಂದುವರಿಸಿದೆವು.

 

ಲೇಹ್ – ಶ್ರೀನಗರ ಹೆದ್ದಾರಿಯಲ್ಲಿ, ಲೇಹ್ ದಿಂದ  ಸುಮಾರು 25 ಕಿಲೋಮೀಟರು ದೂರದಲ್ಲಿ ಶ್ರೀ ಪಥರ್ ಸಾಹಿಬ್ ಗುರುದ್ವಾರ ಇದೆ. ಈ ಗುರುದ್ವಾರ ದ ಕಥೆ ತುಂಬಾ ರೋಮಾಂಚಕ! ಸಿಖ್ಖರ ಗುರುಗಳಾದ ಶ್ರೀ ಗುರು ನಾನಕ್ ದೇವ್ ಅವರು ತಮ್ಮ 3 ನೆಯ ಯಾತ್ರೆಯಲ್ಲಿ (ಕ್ರಿ. ಶ.  1515-1518 ) ಬೇರೆ ಬೇರೆ ಕಡೆ ಪ್ರವಚನ ವನ್ನು ಮುಗಿಸಿ ಇಲ್ಲಿಗೆ ಕ್ರಿ. ಶ. 1517 ರಲ್ಲಿ ಒಂದು ದಿನ ಸಾಯಂಕಾಲ ಬಂದು ತಂಗಿದ್ದರು. ಅದೇ ಸಮಯದಲ್ಲಿ, ಅಲ್ಲಿಯೇ ಇರುವ ಪರ್ವತದ ಮೇಲೆ ಒಬ್ಬ ರಾಕ್ಷಸ ಹೋಗಿ ಬರುವ ಜನರಿಗೆ ಹಾಗೂ ಹತ್ತಿರದ ಹಳ್ಳಿಯ ಜನಗಳಿಗೆ ತುಂಬಾ ಕಿರುಕುಳ ನೀಡುತ್ತಿದ್ದನು.  ಶ್ರೀ ಗುರು ನಾನಕ್ ತಂಗಿದ ಸುದ್ದಿ ಕೇಳಿದ ರಾಕ್ಷಸ, ಸಿಟ್ಟಿನಿಂದ ಅವರನ್ನು ಕೊಲ್ಲುವ ತಯಾರಿ ನಡೆಸಿದನು. ಇದನ್ನೆಲ್ಲವನ್ನೂ ಅಲಕ್ಷಿಸಿ ಶ್ರೀ ಗುರು ನಾನಕ್ ಅಲ್ಲೇ ತಮ್ಮ ಪ್ರಾರ್ಥನೆಯನ್ನು ಮುಂದುವರಿಸಿದರು. ಗುಡ್ಡದ ಮೇಲಿಂದ ನೋಡುತ್ತಿದ್ದ ರಾಕ್ಷಸ ಸಿಟ್ಟಿನಿಂದ ಒಂದು ದೊಡ್ಡ ಕಲ್ಲು ಬಂಡೆಯನ್ನು ಮೇಲಿಂದ ಅವರನ್ನು ಕೊಲ್ಲಲು ತಳ್ಳಿದನು. ಆದರೆ ಆಶ್ಚರ್ಯ! ಆ ಕಲ್ಲು ಬಂಡೆ ಕೆಳಗೆ ಉರುಳಿ ಬಂದು, ಹೂವಿನಂತೆ ಮೆತ್ತಗಾಗಿ ಶ್ರೀ ಗುರು ನಾನಕರ ಬೆನ್ನಿಗೆ ಅಪ್ಪಿಕೊಂಡಿತು.  ಮೇಲಿದ್ದ ರಾಕ್ಷಸನಿಗೆ ಬಂಡೆ ಮರೆಯಾಗಿದ್ದರಿಂದ  ಅದರ ಹಿಂದೆ ಶ್ರೀ ಗುರು ನಾನಕ್ ಕಾಣಲಿಲ್ಲ. ಅವರ ಸಾವನ್ನು ಖಚಿತ ಪಡಿಸಿಕೊಳ್ಳಲು, ರಾಕ್ಷಸ ಕೆಳಗೆ ಬಂದು, ಆ ಬಂಡೆಯನ್ನು ಬಲಗಾಲಿನಲ್ಲಿ ಜೋರಾಗಿ ಒದೆದನು. ಆದರೆ, ಪೂರ್ತಿ ಕಲ್ಲು ಬಂಡೆಯೇ ಹೂವಿನಂತೆ ಮೆತ್ತಗಾಗಿದ್ದರಿಂದ, ಅವನ ಕಾಲಿನ ಹೆಜ್ಜೆ ಆ ಕಲ್ಲಿನ ಮೇಲೆ ಮೂಡಿಬಂತು. ಆಗ ರಾಕ್ಷಸನಿಗೆ ಶ್ರೀ ಗುರು ನಾನಕರು ಬೇರೆ ಯಾರೂ ಅಲ್ಲ, ಅವರು ದೇವರ ಪ್ರತಿನಿಧಿ ಅಂತ ಅರಿವಾಗಿ, ಅವರಲ್ಲಿ ಕ್ಷಮಾಪಣೆ ಕೇಳಿ, ಮುಂದೆ ಯಾರಿಗೂ ಕಷ್ಟ ಕೊಡದೆ, ಜನರ ಸೇವೆಯಲ್ಲಿ ತನ್ನ ಜೀವನವನ್ನು ಕಳೆದನು. ಇವತ್ತಿಗೂ, ಆ ಗುರುದ್ವಾರದಲ್ಲಿ,  ಪವಿತ್ರ ಕಲ್ಲಿನ ಬಂಡೆಯನ್ನು ನೀವು ನೋಡಬಹುದು.

 

ಲೇಹ್ ಕ್ಕೆ ಭೇಟಿ ಕೊಟ್ಟಾಗ ಬಹಳ ಕಡೆ ಸಿಂಧೂ  ನದಿ (Indus River) ಯನ್ನು ಕಾಣಬಹುದು.  ನಮ್ಮ ಪ್ರವಾಸ ಮುಂದುವರಿಸುತ್ತಾ ಸಿಂಧೂ ನದಿ (Indus River) ಹಾಗೂ ಝನ್ಸ್ಕಾರ್ ನದಿ (Zanskar River) ಯ  ಸಂಗಮ ಪ್ರದೇಶಕ್ಕೆ ಭೇಟಿ.  ಎಡದಿಂದ ಸಿಂಧೂ  ನದಿ ತನ್ನ ಕೆಂಪು ಮಣ್ಣಿನ ಬಣ್ಣದಲ್ಲಿ ಹಾಗೂ ಬಲದಿಂದ ಝನ್ಸ್ಕಾರ್ ನದಿ ಬೂದು ಬಣ್ಣದಿಂದ ಇಲ್ಲಿ ಸೇರಿ, ಮುಂದೆ ತನ್ನ ಪ್ರಯಾಣವನ್ನು ಮುಂದುವರಿಸಿ  ಪಾಕಿಸ್ತಾನದ ಮೂಲಕ ಅರೇಬಿಯನ್ ಸಮುದ್ರವನ್ನು ತಲುಪುತ್ತದೆ.

 

ಲೇಹ್ ದಿಂದ ಶ್ರೀನಗರದ  ಹೆದ್ದಾರಿಯಲ್ಲಿ 70 ಕಿಲೋಮೀಟರು ಪ್ರಯಾಣ ಮಾಡಿದರೆ, ಆಲ್ಚಿ ಬುದ್ಧ ಮಠ (Alchi Monastery) ವನ್ನು ಕಾಣಬಹುದು. ಈ ಫಲವತ್ತಾದ ಆಲ್ಚಿ ಹಳ್ಳಿ ಮತ್ತು ಬುದ್ಧ ಮಠ, ಸಿಂಧೂ ನದಿಯ ದಂಡೆಯಲ್ಲಿದೆ. ಇಲ್ಲಿಯ ಭೂದೃಶ್ಯ ಬಹಳ ಭಿನ್ನ- ಪರ್ವತಗಳೆಲ್ಲಾ ಈಗ ಮಾತ್ರ ಕೆರೆಯಿಂದ ಎದ್ದು ಬಂದಂತೆ ಅನಿಸುತ್ತದೆ. ಈ ಪರ್ವತಗಳನ್ನು ಅಕ್ಷರದ ಮೂಲಕ ವಿವರಿಸುವದು ಸ್ವಲ್ಪ ಕಷ್ಟ! ಆಲ್ಚಿ ಬುದ್ಧಮಠ (Alchi Monastery) ಬಹಳ ಪುರಾತನ ಮಠಗಳಲ್ಲಿ ಒಂದು. ಇದನ್ನು ಕ್ರಿ. ಶ. 11ನೇ ಶತಮಾನದಲ್ಲಿ ಪ್ರಸಿದ್ಧ ಅನುವಾದಕ ಗುರು ರಿಂಚೆನ್ ಜಾಂಗ್ಪೋ (Rinchen Zangpo) ಬೌದ್ಧ ಮತ ಪಸರಿಸಲು ಕಟ್ಟಿದ ಅನ್ನುವ ಉಲ್ಲೇಖವಿದೆ. ಈ ಬುದ್ಧ ಮಠ, ಸುಂದರವಾದ ಗೋಡೆ ಚಿತ್ರಕಲೆ ಮೂಲಕ  ಬುದ್ಧನ ಜೀವನ ಚರಿತ್ರೆಗೆ ಖ್ಯಾತ. ಮರುದಿನ ಬೆಳಿಗ್ಗೆ ಬೇಗ ಎದ್ದು, ಬುದ್ಧ ಮಠದ ಚಿಕ್ಕ ಚಿಕ್ಕ ಮಕ್ಕಳ  ಪ್ರಾರ್ಥನೆ ಹಾಗೂ ಪೂಜೆ ಕಣ್ತುಂಬ ನೋಡಿದೆವು.  . 

 

ಅದೇ ಸಂಜೆಗೆ, “ಲಢಾಕ್ ನ ಚಂದ್ರ ನಾಡು” (moonland) ಅಂತಲೇ ಹೆಸರುವಾಸಿಯಾದ ಲಾಮಾಯೂರು (Lamayuru) ಎಂಬ ಹಳ್ಳಿಗೆ ಅಂದು ರಾತ್ರಿ ವಿಶ್ರಾಂತಿಸಲು ಬಂದು ತಲುಪಿದೆವು. ಬಹಳ ಶಾಂತ ಹಾಗೂ ಸುಂದರ ಸ್ಥಳ.  ಲಾಮಾಯೂರು ಪ್ರಾಚೀನ ಬುದ್ಧ ಮಠ ಹಾಗೂ ಸುಂದರ ಚಂದ್ರನಂಥ ಸ್ಥಳಾಕೃತಿಗೆ ಪ್ರಸಿದ್ಧ.

 

ನಮ್ಮ ಮುಂದಿನ ಪ್ರವಾಸ ಸ್ಥಳ – ದಾಹ-ಹನು (Dah – Hanu) ಹಳ್ಳಿಗಳು.  ಲೇಹ್ ದಿಂದ ಸುಮಾರು 180 ಕಿಲೋಮೀಟರು ದೂರ, ಕಾರ್ಗಿಲ್ ನ ಹತ್ತಿರ. ಈ ಹಳ್ಳಿಗಳು ವಿಲಕ್ಷಣ ಸೌಂದರ್ಯದಿಂದ ತುಂಬಿವೆ. ಇಲ್ಲಿ ಆರ್ಯ ಮೂಲ ಜನಾಂಗ ಯಾ ಬುಡಕಟ್ಟಿನ ಡ್ರೋಗಪ (Drogpa tribe) ಜನರು ವಾಸಿಸುವ ಹಳ್ಳಿಗಳು. ಈ ಜನಾಂಗ ತಮ್ಮ ಕಲೆ ಮತ್ತು ಆತಿಥ್ಯಕ್ಕೆ ಹೆಸರುವಾಸಿ. ಅವರ ಉಡುಗೆ ತೊಡುಗೆ ಮತ್ತು ಅವರ ಕೇಶಾಲಂಕಾರ ಬಹಳ ಸುಂದರ.  ನಾವು ಬಂದು ಇಳಿದ ಸುದ್ದಿ ತಿಳಿದ ತಕ್ಷಣ, ಹಳ್ಳಿಯವರೆಲ್ಲಾ ಸೇರಿ, ಹಳ್ಳಿಯ ಮಧ್ಯ ಅಂಗಳದಲ್ಲಿ, ಅವರ ಜಾನಪದ ಹಾಡು ಅದರ ಜೊತೆ ಗಂಡಸರು ಮತ್ತು ಹೆಂಗಸರು ಸೇರಿ ವಿಶೇಷ ನೃತ್ಯ ಕಾರ್ಯಕ್ರಮವನ್ನು ಯೋಜಿಸಿದ್ದರು.  ನಮ್ಮನ್ನೂ ಮಧ್ಯದಲ್ಲಿ ಸೇರಿಸಿ ಅವರ ಜೊತೆ ಹೆಜ್ಜೆ ಹಾಕಲು ಪ್ರೋತ್ಸಾಹಿದರು! ಈ ಹಳ್ಳಿಗಳು ಸಿಂಧೂ ನದಿಯ ಪಕ್ಕದಲ್ಲಿರುವದರಿಂದ, ಬಹಳ ಫಲವತ್ತಾದ ಪ್ರದೇಶ – ಬೇರೆ ಬೇರೆ ರೀತಿಯ ಹಣ್ಣು, ತರಕಾರಿ ಮತ್ತು ಇತರ ಬೆಳೆಗಳನ್ನು  ಇಲ್ಲೇ ಬೆಳೆಯುತ್ತಾರೆ. ಒಟ್ಟಿನಲ್ಲಿ, ಇದು ತುಂಬಾ ಸುಂದರ ಪ್ರದೇಶ ಮತ್ತು ಪ್ರೀತಿಪಾತ್ರ ಜನಾಂಗ.  ನಾವೆಲ್ಲಾ ಅವರ ಜೊತೆ ಬೆರೆತು, ಅವರ ನೃತ್ಯದಲ್ಲಿ ಭಾಗವಹಿಸಿ, ಸುತ್ತ ಮುತ್ತ ಪ್ರದೇಶಗಳಲ್ಲಿ ಓಡಾಡಿ, ಅಂದು ರಾತ್ರಿ ಅಲ್ಲಿಯೇ ಕಳೆದು, ಮರುದಿನ ಲೇಹ್ ಗೆ ಮರು ಪ್ರಯಾಣ ಪ್ರಾರಂಭಿಸಿದೆವು.

 

ತಿರುಗಿ ಲೇಹ್ ಗೆ ಬರಲು ಕಾರಣ- ಮರುದಿನ, ಲೇಹ್ ದ ಇನ್ನೊಂದು ದಿಕ್ಕಿನಲ್ಲಿ  40 ಕಿಲೋಮೀಟರು  ದೂರದಲ್ಲಿರುವ ಹೆಮಿಸ್ ಬುದ್ಧ ಮಠ (Hemis Monastery) ದ ಸುಪ್ರಸಿದ್ದ “ಹೆಮಿಸ್ ಹಬ್ಬ” (Hemis Festival)!

 

ಲಢಾಕ್ ಪ್ರದೇಶದಲ್ಲಿ ಹಲವಾರು ವರ್ಣ ರಂಜಿತ ಹಬ್ಬಗಳನ್ನು ಆಚರಿಸಲಾಗುತ್ತದೆ. ದೇಶ ವಿದೇಶದಿಂದ ಈ ಹಬ್ಬಗಳನ್ನು ನೋಡಲು ಸಾವಿರಾರು ಸಂಖ್ಯೆಗಳಲ್ಲಿ ಸೇರುತ್ತಾರೆ. ಕೆಲವು ಹಬ್ಬಗಳು 2 -3 ದಿನ ನಡೆದರೆ, ಇನ್ನು ಕೆಲವು ಹಬ್ಬಗಳು 1 ರಿಂದ 2 ವಾರಗಳ ತನಕ ನಡೆಯುತ್ತವೆ. ನೀವು ಲೇಹ್ / ಲಢಾಕ್ ಗೆ ಭೇಟಿ ಕೊಡುವ ಯೋಚನೆ ಮಾಡಿದರೆ, ಮೊದಲು ಅಂತರ್ಜಾಲದ ಮೂಲಕ ಹಬ್ಬಗಳ ದಿನಾಂಕವನ್ನು ಗುರುತಿಸಿ, ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಅವಶ್ಯವಾಗಿ ಸೇರಿಸಿಕೊಳ್ಳಿ. ಇಲ್ಲಿ ಬೌದ್ಧ ಧರ್ಮದ ಜನರು ಬಹಳ ಇರುವದರಿಂದ, ಈ ಹಬ್ಬಗಳ ಮುಖ್ಯ ವಿಷಯ ಬೌದ್ಧ ಧರ್ಮದ ಕಥೆ,  ಬುದ್ಧನ ಉಪದೇಶಗಳು ಅಥವಾ ಬೌದ್ಧ ಧರ್ಮದ ಸನ್ಯಾಸಿಗಳ ಕುರಿತ ವಿಷಯಗಳಿರುತ್ತವೆ. ಹೆಚ್ಚಾಗಿ ಎಲ್ಲಾ ಹಬ್ಬಗಳಲ್ಲಿ ಬಣ್ಣ ಬಣ್ಣದ ಮುಖವಾಡ ಮತ್ತು ವೇಷ ಧರಿಸಿದ ತಂಡ ತಾಳಬದ್ಧವಾಗಿ, ಹಿನ್ನೆಲೆಯ ಸಂಗೀತಕ್ಕೆ ಸರಿಯಾಗಿ ಹೆಜ್ಜೆ ಇಡುತ್ತಾ, ಹಾವ ಭಾವದಿಂದ ಕಥೆಯನ್ನು ಹೇಳುತ್ತಾರೆ. ಪ್ರವಾಸಿಗರಿಗೆ ಅನುಕೂಲವಾಗಲೆಂದು, ಹಬ್ಬದ ಹಿನ್ನೆಲೆಯನ್ನು ಹೊಂದಿದ ಪುಸ್ತಕಗಳನ್ನು, ಅಲ್ಲಿಯ ವ್ಯವಸ್ಥಾಪಕರು ಬಿಡುಗಡೆ  ಮಾಡಿದ್ದಾರೆ.  

 

ನಮಗೆ ನೋಡಲು ಸಿಕ್ಕಿದ್ದು-   “ಹೆಮಿಸ್ ಹಬ್ಬ” (Hemis Festival). ಇದನ್ನು ಪ್ರತಿ ವರ್ಷವೂ, ಸುಪ್ರಸಿದ್ದ ಹೆಮಿಸ್ ಬುದ್ಧ ಮಠ (Hemis Monastery) ದವರು, ಅವರ ಗುರುಗಳಾದ ಶ್ರೀ ಗುರು ಪದ್ಮಸಂಭವ (Guru Padmasambhava) ಅವರ ಜನ್ಮ ವಾರ್ಷಿಕೋತ್ಸವದ ದಿನದಂದು ಆಚರಿಸುತ್ತಾರೆ. ಈ ಹಬ್ಬ 2 ರಿಂದ 3 ದಿನ ನಡೆಯುತ್ತದೆ, ಸಾವಿರಾರು ದೇಶ ವಿದೇಶದ ಪ್ರವಾಸಿಗರು ನೋಡಲು ಬರುತ್ತಾರೆ. ವರ್ಣ ರಂಜಿತ ಉಡುಗೆ ಹಾಗು ಬೇರೆ ಬೇರೆ ರೀತಿಯ ಮುಖವಾಡ ಧರಿಸಿದ ಪಾತ್ರಧಾರಿಗಳ ಲಯಮಯ ಕುಣಿತ, ಮಧುರವಾದ ಹಿನ್ನೆಲೆ ಸಂಗೀತ, ಆಹಾ!  ನೋಡಲು ಅತ್ಯಂತ ಸುಂದರ! 

ನಮ್ಮ ಈ ಲೇಹ್  ಪ್ರವಾಸದ ಕೊನೆಯ ಪ್ರವಾಸಿ ಸ್ಥಳ – ತ್ಸೋ ಮೋರೀರಿ ಸರೋವರ (Tso Moriri Lake). ಆ ಸರೋವರವು,   ಸಮುದ್ರ ಮಟ್ಟದಿಂದ 14385 ಅಡಿಯ ಎತ್ತರದಲ್ಲಿದ್ದು, ಭಾರತದ ಅತ್ಯಂತ ಎತ್ತರದ ಅತಿ ದೊಡ್ಡ ಸರೋವರ ಎನ್ನಲಾಗುತ್ತದೆ. ಈ ಸರೋವರವು 26 ಕಿಲೋಮೀಟರು ಉದ್ದವಿದ್ದು 5 ಕಿಲೋಮೀಟರು ಅಗಲವಾಗಿದೆ. ಅತಿ ಸುಂದರ ಹಾಗು ಶಾಂತ ಸರೋವರ.  ಇದು ಉಪ್ಪು ನೀರಿನ ಸರೋವರ. ಚಳಿಗಾಲದಲ್ಲಿ ನೋಡಿದರೆ, ಸರೋವರ ಪೂರ್ತಿ ಹೆಪ್ಪುಗಟ್ಟಿರುತ್ತದೆ!  ಈ ಸರೋವರ, ಲೇಹ್ ದಿಂದ  250 ಕಿಲೋಮೀಟರು ದೂರ.  ನಾವು ಲೇಹ್ ದ ಹತ್ತಿರದ ಪಂಗೊಂಗ್ ಸರೋವರಕ್ಕೆ (Pangong Lake) ಹೋಗದೆ ಇಲ್ಲಿ ಭೇಟಿ ಕೊಟ್ಟ ಕಾರಣ, ಪ್ರವಾಸಿಗರ ಹಾವಳಿಯನ್ನು ತಡೆಯುವದು! ಪಂಗೊಂಗ್ ಸರೋವರ ಲೇಹ್ ಹತ್ತಿರ ಇರುವದರಿಂದ, ಅಲ್ಲಿ ಬಹಳ ಪ್ರವಾಸಿಗರ ಹಾವಳಿ. ಶಾಂತತೆ ಬಹಳ ವಿರಳ. ಈ ಸರೋವರ, ಹಿಂದಿ ಸಿನೆಮಾ “3 idiots” ದಲ್ಲಿ ಇರುವದರಿಂದ, ಪ್ರವಾಸಿಗರ ತಂಡ ತಂಡವೇ ತಮ್ಮ ಫೋಟೋ ಈ ಸ್ಥಳದಲ್ಲಿ ತೆಗೆದುಕೊಳ್ಳಲು ಬರುತ್ತವೆ! ಈ ಸರೋವರದ ಒಂದು ಭಾಗ ಭಾರತದಲ್ಲಿದ್ದರೆ, ಇನ್ನೊಂದು ಭಾಗ ಚೀನಾಕ್ಕೆ ಸೇರುತ್ತದೆ. ಇನ್ನೊಂದು ಕಾರಣ, ಎರಡೂ ಸರೋವರಗಳು ಅವುಗಳ ಸೌಂದರ್ಯಕ್ಕೆ ಸುಪ್ರಸಿದ್ಧವಾಗಿದ್ದರೂ, ತ್ಸೋ ಮೋರೀರಿ ಸರೋವರ ಶಾಂತತೆ ಹಾಗೂ ಸೌಂದರ್ಯದಲ್ಲಿ ಸ್ವಲ್ಪ ಮೇಲು. ಬೆಳಗಿನ ಸ್ವಚ್ಛ ಆಕಾಶದ, ಅಲ್ಲಲ್ಲಿ ಮೋಡದ ಮರೆಯ ಸೂರ್ಯೋದಯ ನೋಡಲಂತೂ ಎರಡು ಕಣ್ಣು ಸಾಲದು!

 

ತ್ಸೋ ಮೋರೀರಿ ಸರೋವರದ ದಾರಿಯಲ್ಲಿ (50 ಕಿಲೋಮೀಟರ ಮೊದಲು), ಇನ್ನೊಂದು ಪ್ರಸಿದ್ಧ ತ್ಸೋ ಕಾರ್ (Tso Kar Lake) ಸರೋವರ ಸಿಗುತ್ತದೆ. ಇದೂ ಕೂಡ ಉಪ್ಪು ನೀರಿನ ಸರೋವರ. ಇದನ್ನು “ಬಿಳಿ ಸರೋವರ” ಅಂತ ಕರೆಯುತ್ತಾರೆ. ದೂರದಿಂದ ಈ ಸರೋವರವನ್ನು ನೋಡಿದರೆ, ಬಿಳಿ ಹಾಸಿಗೆ ತರ ಕಾಣುತ್ತದೆ. ಕಾರಣವಿಷ್ಟೇ, ಇದು ಉಪ್ಪು ನೀರಿನ ಸರೋವರವಾಗಿದ್ದರಿಂದ, ಅಂಚಿನಲ್ಲಿ ಬಂದ ನೀರು, ಬಿಸಿಲಿಗೆ ಒಣಗಿ ಕ್ರಮೇಣ ಬಿಳಿ ಉಪ್ಪಿನ ಹಾಸಿಗೆಯಾಗಿರುತ್ತದೆ. ಇಲ್ಲಿ ಬಹಳ ತರದ ಪಕ್ಷಿಗಳನ್ನೂ ನೋಡಬಹುದು. ಈ ಸರೋವರ 22 ಚದುರ ಅಡಿ ಕಿಲೋಮೀಟರನ್ನು ವಿಸ್ತರಿಸಿದೆ.

ಎಲ್ಲಾ ಪ್ರವಾಸಿಗರಂತೆ, ನಾವೂ ಅಮಿರ್ ಖಾನ್ ನಟಿಸಿದ 3 ಈಡಿಯಟ್ಸ್ (3 idiots) ಸಿನೆಮಾದಲ್ಲಿ ತೋರಿಸಿದ ಶಾಲೆಗೂ ಭೇಟಿಕೊಟ್ಟಾಯಿತು. ಸಿನೆಮಾದ ಮಜಾ ಇಲ್ಲಿ ಬರಲಿಲ್ಲ. ಮತ್ತೆ ಸಾಯಂಕಾಲ ಲೇಹ್ ದ ಹೋಟೆಲ್ ಗೆ ಮರಳಿದೆವು. ರಾತ್ರಿ ಸರಿಯಾದ ವಿಶ್ರಾಂತಿ ಮಾಡಿ, ಬೆಳಿಗ್ಗೆ ಬೇಗ ಎದ್ದು, ತಿರುಗಿ ದೆಹಲಿಗೆ ಮರಳುವ ತಯಾರಿ ನಡೆಸಿದೆವು. ಮೊದಲೇ ಹೇಳಿದಂತೆ, ಲೇಹ್ ಮನಾಲಿ ರಸ್ತೆ ಅಷ್ಟು ಚೆನ್ನಾಗಿಲ್ಲದಿದ್ದರಿಂದ, ಸ್ಥಳೀಯ ಜನರಿಂದ ಲೇಹ್ -ಶ್ರೀನಗರ- ಜಮ್ಮು- ದೆಹಲಿಯ ಹೆದ್ದಾರಿಯ ಗುಣಮಟ್ಟದ ಬಗ್ಗೆ ವಿಚಾರಿಸಿದೆವು. ಎಲ್ಲರಿಂದಲೂ, ಸ್ವಲ್ಪ ದೂರವಾದರೂ ರಸ್ತೆ ಚೆನ್ನಾಗಿದೆ ಅಂತ ಅಭಿಪ್ರಾಯ ಬಂತು. ಹಾಗಾಗಿ, ಮರಳಿ ಬರುವಾಗ ಲೇಹ್- ಶ್ರೀನಗರ ಹೆದ್ದಾರಿಯನ್ನು ಅವಲಂಬಿಸಿದೆವು.

 

ಲೇಹ್ ದಿಂದ ಕಾಶ್ಮೀರದ ಶ್ರೀನಗರಕ್ಕೆ ರಾಷ್ಟ್ರೀಯ ಹೆದ್ದಾರಿ 1ರಲ್ಲಿ ಪ್ರಯಾಣ ಮಾಡಿದರೆ 418 ಕಿಲೋಮೀಟರು ದೂರ (ಸುಮಾರು 10 ತಾಸಿನ ಪ್ರಯಾಣ). ಶ್ರೀನಗರದಿಂದ ಮುಂದಕ್ಕೆ ಜಮ್ಮುವಿಗೆ ತಲುಪಲು ಇನ್ನೂ 250 ಕಿಲೋಮೀಟರು (ಸುಮಾರು 7 ತಾಸಿನ ಪ್ರಯಾಣ). ನಮ್ಮ ಹೊರಟಾಗಿನ ಉದ್ದೇಶ, ಆದಷ್ಟು ಬೇಗ ಸುರಕ್ಷಿತವಾಗಿ ಕತ್ತಲೆ ಆಗುವುದರೊಳಗೆ, ಜಮ್ಮುವಿನ ಹತ್ತಿರ ತಲುಪುವದು. ಹಾಗಾಗಿ, ವೇಗವನ್ನು ಸಮತೋಲಿಸಿ, ಸುರಕ್ಷಿತವಾಗಿ ಈ ಕಷ್ಟಕರ ತಿರುವು ಮುರುವಿನ ಕಣಿವೆ ರಸ್ತೆಯಲ್ಲಿ ವಾಹನ ಚಲಾಯಿಸುವುದು! ನಮ್ಮ ಕಾರಿನಲ್ಲಿ ಇನ್ನಿಬ್ಬ ಚಾಲಕರಿದ್ದರೂ, ಘಟ್ಟ ಕಣಿವೆ ಪ್ರದೇಶಗಳ ಚಾಲನೆಯ ಅನುಭವ ಸ್ವಲ್ಪ ಕಡಿಮೆ, ಹಾಗೆಂದು ಸಮಾ ದಾರಿ ಯಾ ಪಟ್ಟಣಗಳಲ್ಲಿ ಒಳ್ಳೆಯ ಚಾಲಕರು. ಎಲ್ಲರ ಒಮ್ಮತದಿಂದ, ಬೆಳಗ್ಗೆ ಹೋಟೆಲ್ ನಲ್ಲಿ ತಿಂಡಿ ತಿಂದು, ಲೇಹ್ ಗೆ ವಿದಾಯ ಹೇಳಿ,  ಸುಮಾರು 7:30ಕ್ಕೆ  ಕಾರನ್ನು ನಾನೇ ಚಲಾಯಿಸಲು ಪ್ರಾರಂಭಿಸಿದೆ. ಲೇಹ್ ದಿಂದ ಶ್ರೀನಗರ ಕ್ಕೆ ಹೋಗುವ ಹೆದ್ದಾರಿಯಲ್ಲಿ ಖಾಲ್ಸಿ, ಕಾರ್ಗಿಲ್, ದ್ರಾಸ್, ಸೋನಮಾರ್ಗ, ಎಂಬ ಊರುಗಳು ಸಿಗುತ್ತವೆ. ದ್ರಾಸ್ ಗುಡ್ಡಗಾಡು ಪ್ರದೇಶ, ಜಗತ್ತಿನಲ್ಲಿ ಎರಡನೆಯ ಅತ್ಯಂತ ಶೀತ ಪ್ರದೇಶದಲ್ಲಿ ಜನವಸತಿ ಇರುವಂತಹ ಸ್ಥಳ. ಹಾಗೆ ಮುಂದುವರಿದರೆ, ಶ್ರೀನಗರ ದಿಂದ ಜಮ್ಮುವಿಗೆ, ಅನಂತನಾಗ್, ಬಂಥಲ್, ಉಧಂಪುರ್, ಎನ್ನುವ ಊರುಗಳನ್ನು ದಾಟಬೇಕಾಗುತ್ತದೆ. ಕಾರ್ಗಿಲ್ ಅಂದ ತಕ್ಷಣ, 1999ರ ಭಾರತ ಪಾಕಿಸ್ತಾನದ ಯುದ್ಧದ ನೆನಪಾಗುತ್ತದೆ. ಬರುವ ದಾರಿಯಲ್ಲಿ, ಕಾರ್ಗಿಲ್ ಯುದ್ಧ ಸ್ಮಾರಕ ದಾಟುವಾಗ, ನಮ್ಮ ಹುತಾತ್ಮರಾದ ಸೈನಿಕರನ್ನು  ನೆನಪಿಸಿಕೊಂಡು, ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಯಾಣವನ್ನು ಮುಂದುವರಿಸಿದೆವು. 

 

ಲೇಹ್ ದಿಂದ ಶ್ರೀನಗರದ ಹೆದ್ದಾರಿ ಸ್ಥಳೀಯ ಜನ ಹೇಳಿದಂತೆ ಚೆನ್ನಾಗಿತ್ತು. ಚಾಲಕರಿಗೆ ಏರು, ತಿರುವು ಹಾಗೂ ಕಣಿವೆ ರಸ್ತೆಗಳ ಎದುರಾದರೂ, ಒಂದೇ ರೀತಿಯ ವೇಗದಿಂದ ಸುರಕ್ಷಿತವಾಗಿ ಪ್ರಯಾಣ ಮಾಡಲು ತೊಂದರೆಯಾಗಲಿಲ್ಲ.   ಆದರೆ…!

 

ಒಮ್ಮೆ ಝೋಜಿಲ ಶಿಖರವನ್ನು  (Zojila Pass) ತಲುಪಿದಾಗ, ನಮ್ಮೆಲ್ಲರ ಎದೆ ಬಡಿತ ಒಮ್ಮೆಲೇ ಜೋರಾಯಿತು. ಈ ಝೋಜಿಲ ದ ರಸ್ತೆಯ ಸವಾಲಿನ ಬಗ್ಗೆ ಬಹಳ ಓದಿದ್ದೆ ಹಾಗೂ ಕೇಳಿದ್ದೆ. ಆದರೆ ಆ ಸ್ಥಳಕ್ಕೆ ನಿಜವಾಗಿ ಬಂದಾಗ, ಅದರ ಅರಿವಾಗಲು ಪ್ರಾರಂಭವಾಯಿತು. ಲೇಹ್ ದಿಂದ ಝೋಜಿಲ ಶಿಖರದ ತುದಿಗೆ ಬಂದಾಗ,  ಆ ಕಣಿವೆ ರಸ್ತೆ ಎಷ್ಟು ಕಡಿದಾಗಿದೆ, ಎಷ್ಟು ತಿರುವಿದೆ, ಎಷ್ಟು ಕಿರಿದಾಗಿದೆ ಅನ್ನುವದು ಅರಿವಾಯಿತು. ಗುಡ್ಡದ ಮೇಲಿಂದ ಕೆಳಗೆ ಇಳಿಯುವ ತನಕ, 15 ಕಿಲೋಮೀಟರು ರಸ್ತೆಯಲ್ಲಿ  11575 ಅಡಿ ಕೆಳಗೆ ಬಂದಿರುತ್ತೇವೆ! ಈ ಝೋಜಿಲ ಕಣಿವೆ ರಸ್ತೆ, ಜಗತ್ತಿನ ಅತ್ಯಂತ ಕಷ್ಟದಾಯಕ ರಸ್ತೆಗಳಲ್ಲಿ ಒಂದು! ಅದೇ ರೀತಿ, ಈ ಝೋಜಿಲ ರಸ್ತೆ ಭಾರತ ಪಾಕಿಸ್ತಾನ ಎಲ್ಲಾ ಯುದ್ಧಗಳಲ್ಲಿ ಮಹತ್ವ ಪಾತ್ರವನ್ನು ವಹಿಸಿದೆ.  ಇಲ್ಲಿ ವಾಹನ ಚಲಿಸುವಾಗ ಬಹಳ ಹುಷಾರಿಯಾಗಿರಬೇಕು. ಎಡ ಬದಿಯಲ್ಲಿ ಆಳವಾದ ಕಣಿವೆ ಹಾಗೂ ಬಲಕ್ಕೆ ಎತ್ತರದ ಗುಡ್ಡ, ಕಿರಿದಾದ ರಸ್ತೆ. ಮುಂದಿನಿಂದ ದೊಡ್ಡ ವಾಹನಗಳು ಬಂದರೆ, ನಮ್ಮ ವಾಹನವನ್ನು ದೂರದಲ್ಲೇ ನಿಲ್ಲಿಸಿ, ಮುಂದಿನ ಬರುವ ವಾಹನ ಹೋಗುವ ತನಕ ಕಾಯಬೇಕಾಗುತ್ತದೆ. ಎಡದಲ್ಲಿ ದೊಡ್ಡ ಬೇಲಿಯಾಗಲಿ ಅಥವಾ ಕಟ್ಟೆಯಾಗಲಿ ಇಲ್ಲ. ಒಂದು ಚೂರು ಚಾಲಕನ ಲಕ್ಷ್ಯ ತಪ್ಪಿದರೂ, ಗೋವಿಂದ! ಅದಕ್ಕೂ ಹೆಚ್ಚಾಗಿ, ಈ ರಸ್ತೆ ನಮ್ಮ ಸೈನಿಕರಿಗೆ ಮಹತ್ವದ ದಾರಿ. ಯಾವಾಗಲೂ, ದೊಡ್ಡ ದೊಡ್ಡ ಸೈನಿಕರ ಲಾರಿ ಮತ್ತು ಸೈನಿಕರನ್ನು ಸಾಗಿಸುವ ಬಸ್ ಗಳು, ಮುಂದಿನಿಂದ ಬರುತ್ತಿರುತ್ತವೆ.   ಅಂತೂ, ನಾವು ಹುಷಾರಾಗಿ ನಮ್ಮ ಕಾರನ್ನು ನಡೆಸಿ, ಕೆಳಗೆ ಸೋನಮಾರ್ಗ ಹತ್ತಿರ ಬಂದೆವು. ಕೆಳಗೆ ಬಂದ ಮೇಲೆ ನಮ್ಮೆಲ್ಲರ ಎದೆ ಬಡಿತ ಮೊದಲಿನ ಸ್ಥಿತಿಗೆ ಬಂತು. ನನಗೆ ಮಾತ್ರ, ಊರಿಗೆ ಬಂದು ಒಂದು ವಾರದ ತನಕ, ಕನಸಿನಲ್ಲಿ ಆ ಝೋಜಿಲ ಕಣಿವೆಯ ರಸ್ತೆಯೇ ಬರುತ್ತಿತ್ತು!

 

ಮೊದಲು ಕೊಟ್ಟ ಭರವಸೆಯಂತೆ, 9 ಘಂಟೆಗಳ ಕಾಲ ಕಾರನ್ನು ಚಲಾಯಿಸಿ, ಶ್ರೀನಗರಕ್ಕೆ ಬಂದು, ಕಾರನ್ನು ಬೇರೆಯವರಿಗೆ ಓಡಿಸಲು ಅವಕಾಶ ಮಾಡಿಕೊಟ್ಟೆ. ನಮ್ಮ ಮುಂದಿನ ಗುರಿ, ಇನ್ನೊಂದು 4 ಘಂಟೆಗಳ ಕಾಲ ಪ್ರಯಾಣ ಮಾಡಿ, ಜಮ್ಮುವಿಗಿಂತ ಸ್ವಲ್ಪ ಮೊದಲು ಎಲ್ಲಾದರೂ ರಾತ್ರಿ ತಂಗುವುದು. ಅಮರನಾಥ್ ಯಾತ್ರೆ ಇರುವದರಿಂದ ಶ್ರೀನಗರ ಜಮ್ಮು ರಸ್ತೆ, ಜಮ್ಮುವಿನಿಂದ ಬರುವ ಯಾತ್ರಿಗಳಿಗೋಸ್ಕರ ಶ್ರೀನಗರದ ಕಡೆಯಿಂದ ಹೋಗಲು ತಡೆ ಹಾಕಬಹುದೆನ್ನುವ ಅನುಮಾನವಿತ್ತು.   ಆದರೂ, ನಮ್ಮ ಪ್ರಯಾಣ ಶ್ರೀನಗರದಿಂದ ಮುಂದುವರಿಸಿದೆವು. ಇನ್ನೇನು ಅನಂತನಾಗ್ ದಾಟುತ್ತೇವೆ ಅನ್ನುವುದರೊಳಗೆ, ಇತರ ವಾಹನಗಳ ಜೊತೆ, ಪೊಲೀಸ್ ಪಡೆ ನಮ್ಮನ್ನೂ ನಿಲ್ಲಿಸಿ, ಇಲ್ಲೇ ಹತ್ತಿರದ ಹೋಟೆಲ್ ನಲ್ಲಿ ಉಳಿದು ಬೆಳಗ್ಗೆ ಬೇಗನೇ ಹೊರಡುವ ಸಲಹೆ ಕೊಟ್ಟರು. ವಿಚಾರಿಸಿದಾಗ, ಶ್ರೀನಗರ ಜಮ್ಮು ಹೆದ್ದಾರಿಯನ್ನು ಬರುವ ಯಾತ್ರಿಗಳಿಗಾಗಿ ಇಲ್ಲಿಂದ  ಹೋಗಲು ಅವಕಾಶವಿಲ್ಲ ಅಂತ ತಿಳಿಯಿತು.  ಹತ್ತಿರದ ಹೋಟೆಲ್ ನಲ್ಲಿ ರಾತ್ರಿ ಉಳಿಯಲು ವ್ಯವಸ್ಥೆ ಮಾಡಿಕೊಂಡಾಯಿತು.

 

ಬೆಳಿಗ್ಗೆ ಬೇಗ ಎದ್ದು ಮತ್ತೆ ಶ್ರೀನಗರ ಜಮ್ಮು ಹೆದ್ದಾರಿಗೆ ತಲುಪಿ ಪ್ರಯಾಣ ಮುಂದುವರಿಸಿದೆವು. ಆದರೆ, ನಮ್ಮ ದುರದೃಷ್ಟಕ್ಕೆ ಸ್ವಲ್ಪ ದೂರ ಪ್ರಯಾಣ ಮಾಡುವಷ್ಟರಲ್ಲಿ ನಿಂತ ವಾಹನಗಳ ಸಾಲು ಕಾಣಲು ಪ್ರಾರಂಭವಾಯಿತು. ನಾವೂ ಸ್ವಲ್ಪ ಮುಂದಕ್ಕೆ ಹೋಗಿ ಪಕ್ಕದಲ್ಲಿ ಹೋಟೆಲ್ ಮತ್ತು ಅಂಗಡಿಗಳು ಇರುವ ಜಾಗದಲ್ಲಿ ನಿಲ್ಲಿಸಿ ವಿಚಾರಿಸಲಾಗಿ ಈಗ ಸ್ವಲ್ಪ ಸಮಯದ ಮೊದಲು ಶ್ರೀನಗರದ ಕಡೆಯಿಂದ ಹೋಗುವ ವಾಹನಗಳನ್ನು ತಡೆಗಟ್ಟಲಾಗಿದೆ, ಕೇವಲ ಜಮ್ಮುವಿನ ಕಡೆಯಿಂದ ವಾಹನಗಳನ್ನು ಬಿಡುತ್ತಿದ್ದಾರೆ, ಎನ್ನುವ ಸುದ್ದಿ ತಿಳಿಯಿತು. ಇನ್ನೂ ವಿಚಾರಿಸಲಾಗಿ 4-5 ಘಂಟೆಗಳ ಕಾಲ ಕಾಯಬೇಕಾಗಬಹುದು ಎನ್ನುವ ಆಘಾತಕಾರಿ ಸುದ್ದಿ ಕೇಳಿ, ಎಲ್ಲರ ಮನಸ್ಸು ಕುಗ್ಗಿ ಹೋಯಿತು. ಇದು ಮೊದಲೇ ಗೊತ್ತಿದ್ದರೆ, ಹೋಟೆಲ್ ನಲ್ಲೆ ಆರಾಮವಾಗಿ ನಿದ್ದೆ ಮಾಡಿ ಹೊರಡಬಹುದಿತ್ತೇನೋ ಎಂತಲೂ ಅನ್ನಿಸಿತು!  ಅಂತೂ, 5 ಘಂಟೆಗಳ ಕಾಲ ಕಾರಲ್ಲಿ ಕಳೆದು, ಪಕ್ಕದ ಹೋಟೆಲ್ ನಲ್ಲಿ ತಿಂಡಿ ತಿಂದು, ಮುಂದಿನ ಪ್ರಯಾಣ ಬೆಳೆಸಿದೆವು.

 

ಇಲ್ಲಿಂದ ಹೊರಡುವ ಮೊದಲು, ಮರುದಿನ ಬೆಳಗಾಗುವದರಲ್ಲಿ ದೆಹಲಿ ತಲುಪಬೇಕು ಅನ್ನುವ ನಿರ್ಧಾರ ಮಾಡಿದೆವು. 3 ಜನ ವಾಹನ ಚಾಲಕರಿರುವುದರಿಂದ, ಊಟ ಮತ್ತು ತಿಂಡಿ ಬಿಟ್ಟರೆ, ಬೇರೆ ಎಲ್ಲೂ ನಿಲ್ಲದೆ, ಹಗಲು ರಾತ್ರಿ ಕಾರನ್ನು ನಡೆಸಿ, ದೆಹಲಿ ತಲುಪುವ ಉದ್ದೇಶ. ಅದರಂತೆಯೇ, ನನ್ನ ಇಬ್ಬರು ಸ್ನೇಹಿತರು ಪಾಳಿಯ ಮೇಲೆ, ಕಾರನ್ನು ಚಲಾಯಿಸಿ, ರಾತ್ರಿ 11 ಘಂಟೆಗೆ ಕಾರನ್ನು ನನಗೆ ಒಪ್ಪಿಸಿದರು. ಅಂತೂ, ಸುರಕ್ಷಿತವಾಗಿ ಬೆಳಗ್ಗೆ 6 ಘಂಟೆಗೆ ದೆಹಲಿಗೆ ಎಲ್ಲರನ್ನೂ ತಲುಪಿಸಿದೆ.

 

ಕ್ಷಮೆ ಇರಲಿ, ನಮ್ಮ ಲೇಹ್ ಪ್ರವಾಸದಂತೆ, ನನ್ನ ಈ ಪಯಣ ಕಥನವೂ  ಬಹಳ ಉದ್ದವಾಯಿತು! ನೀವೆಲ್ಲಾ ಈ ಕಥನ ಓದಿದ ಬಳಿಕ ನೀವೂ ಲಡಾಖ್ ಗೆ ಹೋಗಲು ಉತ್ಸುಕರಾಗುತ್ತೀರಿ ಅನ್ನುವ ಸಣ್ಣ ಆಸೆ! ದೇಹ ಹಾಗೂ ಮನಸ್ಸು ಗಟ್ಟಿ ಇದ್ದಾಗ ಒಮ್ಮೆ ಲದಾಖ್ ಗೆ ಹೋಗಿ ಬನ್ನಿ. ರಸ್ತೆಯ ಮೂಲಕ ಹೋಗುವ ಧೈರ್ಯವಾಗದಿದ್ದರೆ, ವಿಮಾನದಲ್ಲಾದರೂ ಪರವಾಗಿಲ್ಲ, ಒಮ್ಮೆ ಹೋಗಿ ಬನ್ನಿ. ತುಂಬಾ ರಮಣೀಯ ಪ್ರದೇಶ!  ನನ್ನ ಮಟ್ಟಿಗೆ ಯಾವುದೇ ಸ್ಥಳವನ್ನು ಆನಂದಿಸಬೇಕೆಂದರೆ, ರಸ್ತೆಯ ಪ್ರವಾಸಕ್ಕೆ ಯಾವುದೂ ಸರಿಸಾಟಿಯಿಲ್ಲ, ಅದರ ಆನಂದವೆ ಬೇರೆ!

 

ಇನ್ನೊಂದು ವಿಷಯ- ನಾವು ತಿರುಗಿ ಬಂದ ಒಂದು ವಾರದಲ್ಲೇ ಬಹಳ ಮಳೆಯಾಗಿ ಹಿಮಾಚಲ, ಜಮ್ಮು ಮತ್ತು ಕಾಶ್ಮೀರದ ಜನ ಬಹಳ ತೊಂದರೆಯನ್ನು ಅನುಭವಿಸಿದ್ದಾರೆ ಅಂತ ಓದಿದೆ. ಈ ಮಳೆಯಿಂದ ಮನಾಲಿ-ಲೇಹ್ ಹೆದ್ದಾರಿಯ ಬಹಳ ಜಾಗಗಳಲ್ಲಿ ಕುಸಿತವಾಗಿದೆ. ಇದರಿಂದ ಬಹಳ ಪ್ರವಾಸಿಗರು ಮಧ್ಯ ದಾರಿಯಲ್ಲೇ ಹಲವಾರು ದಿನ ಕಳೆಯುವ ಸಂಭವ ಬಂದಿತ್ತು. ಅಲ್ಲಿಯ ಸ್ಥಳೀಯ ಜನ ಬಹಳ ಮಳೆಯಿಂದ ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಇದನ್ನೆಲ್ಲಾ ಓದಿ, ನಾವು ಎಷ್ಟು ಅದೃಷ್ಟವಂತರು ಎನ್ನುವ ಅರಿವಾಯಿತು. ನಾವು ಹೋಗಿ ಬರುವಾಗ ಯಾವುದೇ ತೊಂದರೆಯಲ್ಲಿ ಸಿಕ್ಕಿಕೊಳ್ಳಲಿಲ್ಲ. ಸುರಕ್ಷಿತವಾಗಿ ಪ್ರಯಾಣವನ್ನು ಮುಗಿಸಿದೆವು.

 

ಅಂದ ಹಾಗೆ, ನಮ್ಮ ಮುಂದಿನ ರಸ್ತೆ ಪ್ರವಾಸದ ತಯಾರಿ ನಡೆಯುತ್ತಿದೆ – ದೆಹಲಿಯಿಂದ ನೇಪಾಳದ ಕಾಠಮಂಡುಗೆ! ಬಹಳ ದೂರವಿಲ್ಲ- ಕೇವಲ 1200 ಕಿಲೋಮೀಟರು!

 

ನಿಮ್ಮ ಪ್ರವಾಸಿ ಉತ್ಸುಕ ಸ್ನೇಹಿತ,

ಡಾ. ಶ್ರೀಪಾದ ಭಟ್ಟ