ರಸಾಯಣ
ಕನ್ನಡದ ಭಾವಗೀತೆಗಳು ಅಂದರೆ ನನಗೆ ಶಾಲಾದಿನಗಳಿಂದಲೇ ತುಂಬಾ ಇಷ್ಟ. ಅದಕ್ಕೆ ಕಾರಣ “ಅಂಬಿಕಾತನಯದತ್ತ” ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ವರಕವಿ ಡಾ.ದ.ರಾ.ಬೇಂದ್ರೆಯವರು.
ನವಜೀವನ ಹೈಸ್ಕೂಲ್, ಪೆರಡಾಲದಲ್ಲಿ ನಾನು ಓದುತ್ತಿದ್ದೆ. ಕಾಸರಗೋಡಿನ ಕವಿ ವಿದ್ವಾನ್ ಕಯ್ಯಾರ ಕಿಂಞಂಣ್ಣ ರೈ ಅವರು ನಮಗೆ ಕನ್ನಡಕ್ಕೆ ಮತ್ತು ನನ್ನ ದೊಡ್ಡಣ್ಣ ಶ್ರೀಕೃಷ್ಣ ಅವರು ನಮಗೆ ವಿಜ್ಛಾನದ ಅಧ್ಯಾಪಕರಾಗಿದ್ದರು.ನನ್ನ ಅಣ್ಣ ಶ್ರೀ ಕೃಷ್ಣ ಅವರೂ ಉದಯೋನ್ನುಖ ಕನ್ನಡದ ಯುವ ಸಾಹಿತಿಯಾಗಿದ್ದರು. ಆ ಕಾಲದಲ್ಲಿ ಸಣ್ಣ ಕತೆಗಳ ರಾಜ ಎಂದು ಹೆಸರಾದ “ಆನಂದ ಕಂದ“,ಎಂಬ ಕಾವ್ಯನಾಮದ ಬೆಟೆಗೇರಿ ಕೃಷ್ಣಶರ್ಮರ ಸಂಪಾದಕೀಯದಲ್ಲಿ ಹೆಸರಾದ“ಜಯಂತಿ“, ಮತ್ತು ಶ್ರೀ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಸಂಪಾದಕರಾಗಿದ್ದ “ಜೀವನ” ಎಂಬ ಇನ್ನೊಂದು ಪ್ರಸಿದ್ದ ಕನ್ನಡ ಮಾಸಪತ್ರಿಕೆಗಳು ಕನ್ನಡ ಸಾಹಿತ್ಯ ಸೌಧದ ಆಧಾರಸ್ತಂಭಗಳು ಎಂದರೆ ಅತಿಶಯವಾಗದು. ಈ ಎರಡು ಪತ್ರಿಕೆಗಳು ಹುಬ್ಬಳ್ಳಿ–ಧಾರವಾಡಗಳಿಂದ ಬರುತ್ತಿತ್ತು. ನನ್ನ ಅಣ್ಣನು ಬರೆದ ಭಾವಗೀತೆಗಳು, ಸಣ್ಣಕತೆಗಳು ಮತ್ತು ವಿಮರ್ಷೆಗಳು ಅವುಗಳಲ್ಲಿ ಬರುತ್ತಿದ್ದವು.
ಹಾಗೊಮ್ಮೆ ನವಜೀವನ ಹೈಸ್ಕೂಲಿಗೆ ಡಾ.ದ.ರಾ.ಬೇಂದ್ರೆ ಮಾತ್ತು ಶ್ರೀ.ದ.ಬಾ.ಕುಲಕರ್ಣಿ ಅವರನ್ನು ಕವಿ ಕಯ್ಯಾರರು ಆಹ್ವಾನಿದ್ದರು. ಬೇಂದ್ರೆಯವರು ಸಾಹಿತ್ಯದಲ್ಲಿ ಬಹಳ ಎತ್ತರಕ್ಕೇರಿದ್ದರೂ ದೈಹಿಕವಾಗಿವಾಗಿ ವಾಮನನಂತೆ. ಕಯ್ಯಾರರು ನೀಳಕಾಯದ ಆಜಾನುಬಾಹು. ಮಹಾನ್ ಸಾಹಿತಿಗಳು ನಮ್ಮಶಾಲೆಯ ರಂಗದ ಮೇಲೆ! ನಮ್ಮ ಸಡಗರಕ್ಕೆ ಎಣಿವಿಲ್ಲದಾಯಿತು. ವರಕವಿಯು ಸ್ವತಹ ಹಾಡಿದ ಭಾವಗೀತೆಗಳು ಇಂದಿಗೂ ನಾನು ಗುಂಗುನಿಸುತ್ತೇನೆ. ನನಗೆ ಅತ್ಯಂತ ಪ್ರಿಯವಾದ ಎಂದೆಂದಿಗೂ ಮರೆಯಲಾರದ ಭಾವ ಗೀತೆ ಇದು…
ನನ್ನ ಹರಣ
ನಿನಗೆ ಶರಣ
ಸಕಲಕಾರ್ಯ ಕಾರಣ…. ಕೊನೆಯ ಸಾಲು-
ರಸವೆ ಜನನ
ವಿರಸ ಮರಣ
ಸಮ ರಸವೇ ಜೀವನ
ಇಂದಿಗೂ ಈ ಗೀತೆಯನ್ನು ಮೆಲುನುಡಿಯಲ್ಲಿ ಹಾಡುತ್ತಿದ್ದರೆ ನನ್ನ ಮನಸ್ಸಿಗೆ ಸಿಗುವ ಶಾಂತಿ, ಸಾಂತ್ವನ ಮತ್ತು ಆನಂದಕ್ಕೆ ಮಿತಿಯಿಲ್ಲ. ವರಕವಿಯು ಹೇಳಿದಂತೆ, ರಸ-ವಿರಸಗಳ ಮಧ್ಯೆ ಸಾಗುವ ನಮ್ಮ ಜೀವನ ಒಂದು ಸಮರಸ. ನಾನು ಅದರೊಳಗೆ ಸಮ ಮತ್ತು ರಸಗಳ ಮಧ್ಯೆ ಸಮರವನ್ನೂ ಕಂಡೆ.ನಿಜವಾಗಿ ಜೀವನದಲ್ಲಿ ನವರಸಗಳು ತುಂಬಿವೆ. ಅವು ಎಂದಿಗೂ ಜೀವನದಲ್ಲಿ ಸಮಾನವಾಗಿರಲು ಸಾಧ್ಯವೇ ?
ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ……ಅಸಾಧ್ಯ.
ನಮ್ಮ ಒಂದೊಂದು ಸಮಯದಲ್ಲಿ ನಾವು ನವರಸಗಳಲ್ಲಿ ಒಂದಲ್ಲ ಒಂದು ರಸಾನುಭವವನ್ನು ಮಾಡುತ್ತಿರುವುದೇ ನಮ್ಮಜೀವನ !
ಜೀವನದ ಸಮರದಲ್ಲಿ ಮುಂದುವರೆದ ನನ್ನ ದೊಡ್ದಣ್ಣ ತನ್ನ ಕುಟುಂಬದ ಜವಾಬ್ದಾರಿಗಳ ಹೊರೆಯ ಭಾರಹೊತ್ತಾಗ ಅವರ ಕನ್ನಡ ಸಾಹಿತ್ಯದ ಒಸರು ಬತ್ತಿಹೋಗಿತ್ತು. ಜೀವನದಲ್ಲಿ ಅಣ್ಣನು ರೂಢಿಸಿದ ಶಿಸ್ತು, ಆದರ್ಶ, ಮೌಲ್ಯಗಳು ನನ್ನ ಜೀವನದ ಮುಂದಿನ ಆಯಾಮದಲ್ಲಿ ಪ್ರಭಾವಿಸಿದವು.
ಲೆಕ್ಕದಲ್ಲಿ ಡಿಗ್ರಿ ಸಂಪಾದಿಸಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹೈಸ್ಕೂಲಿನಲ್ಲಿ ಲೆಕ್ಕದ ರಾಮಚಂದ್ರ ಮಾಸ್ತರ್ ಆಗಿದ್ದೆ. ಆದರೆ ಔದ್ಯೋಗಿಕ ವಿದ್ಯಾಭ್ಯಾಸವಿಲ್ಲದೆ ಸಮಾಜದಲ್ಲಿ ಒಂದು ಸ್ಥಾನ, ಮಾನ ದೊರೆಯುವುದಿಲ್ಲ ಎಂಬ ಅರಿವು ನನ್ನನ್ನು ಲೆಕ್ಕದ ಮಾಸ್ತರಿಕೆ ತ್ಯಜಿಸಿ ದಿಲ್ಲಿಗೆ ವಲಸೆ ಬಂದು ಲೆಕ್ಕ ಪರಿಶೀಲಕನಾಗುವಂತೆ ಪ್ರೇರಿಸಿತ್ತು.
ಅದರೊಂದಿಗೆ ನನ್ನ ಕನ್ನಡ ಸಾಹಿತ್ಯದ ಮೇಲಿನ ಪ್ರೇಮವೂ ಅಜ್ಞಾತವಾಸಕ್ಕೆ ಹೋಯಿತು. ದಿಲ್ಲಿಯಲ್ಲಿ ಕಲಿಯುವ ನಾಟಕ ಮಾಡಿ ಲೆಕ್ಕ ಪರಿಶೀಲಕನಾದೆ. ನನ್ನ ನೀರಸವಾದ ಲೆಕ್ಕ ಪರಿಶೀಲನಾಕಾರ್ಯದಲ್ಲೂ ನವರಸ ಭರಿತವಾದ ಹಲವಾರು ಕ್ಷಣಗಳು ಬರುತ್ತಿದ್ದವು ಎಂದರೆ ನೀವು ನಂಬಲಾರಿರಿ.
ಲೆಕ್ಕ ಪರಿಶೀಲಕನ ಜೀವನ ನೀರಸ ಎಂದು ತಿಳಿದರೂ, ಒಬ್ಬ ರಸಿಕ ಎಂದೆಂದಿಗೂ ರಸಿಕನೇ ಎಂಬುದೂ ಸತ್ಯವೇ ಅಲ್ಲವೇ ? ಆದರೆ ಲೆಕ್ಕದಲ್ಲಿ ಏನು ಮಣ್ಣು ರಸಾಸ್ಪಾದನೆಗೆ ಅವಕಾಶವೆಲ್ಲಿದೆ ?
ಇದೆ, Connaught Place ನಲ್ಲಿ ಐದು ವರ್ಷಗಳ ಆರ್ಟಿಕಲ್ ಮಾಡುತ್ತಿದ್ದಾಗ ಶೃಂಗಾರ ರಸದ ಭರ ಸಾಗಿತ್ತು. ಈ ನಾಟಕದಲ್ಲಿ ಸತ್ಯವನ್ನು ಸುಳ್ಳು ಮಾಡಿ, ಸುಳ್ಳನ್ನು ಸತ್ಯ ಮಾಡುವ ಕಲೆಯಿದೆ .ಅಂದರೆ ನವರಸಗಳಿಗೆ ಏನೂ ಕೊರತೆ ಇಲ್ಲ. ಅರವತ್ತನೇ ದಶಕದ ಕೊನೆಯಲ್ಲಿ ನಾನು ವಿದ್ಯಾರ್ಥಿ.
ದಿಲ್ಲಿಯ ನೇತಾಜೀ ನಗರದಲ್ಲಿ ಗ್ವಾಲಿಯರ್ ಪಾಟ್ಟರೀಸ್ ಲಿಮಿಟೆಡ್ ಎಂಬ ಒಂದು ಔದ್ಯೋಗಿಕ ಸಂಸ್ಥೆಯ ಲೆಕ್ಕ ಪರಿಶೀಲಿಸುವ ಸಂದರ್ಭ ಸಿಕ್ಕಿತ್ತು.
ಒಬ್ಬ ಸೇನಾನಿವೃತ್ತ ಜನರಲ್ ಗೊರಾಯ ಎಂಬ ಒಬ್ಬ ರಸಿಕ ಅಲ್ಲಿನ ಕಾರ್ಯಕಾರೀ ಅಧಿಕಾರಿಯಾಗಿದ್ದ. ಅವನ ಆಫೀಸಿನಲ್ಲಿ ಅವನ ಸೀಟಿನ ಪಕ್ಕದಲ್ಲೇ ಪರದೆಯ ಹಿಂದೆ ಅವನ ಪರ್ಸನಲ್ ಸೆಕ್ರೆಟರಿ. ಅಲ್ಲಿ ಆಡಿಟ್ ಮಾಡಲು ಹೋಗುವ ಮೊದಲೇ ನನ್ನ ಸೀನಿಯರ್ ಹುಡುಗರಿಂದ ಜನರಲ್ ಮತ್ತು ಬೇಗಮ್ ಶಹನಾಝ್ ಹುಸೇನ್ ಅವರ ಪ್ರಕರಣದ ಬಗ್ಗೆ ಕೇಳಿದ್ದೆ. ಲೆಕ್ಕ ಪರಿಶೀಲನೆ ನಡೆಯುತ್ತಿದ್ದಾಗ ಅಲ್ಲಿನ ನಾಟಕ ಶೃಂಗಾರ ರಸದ ಹೊನಲಾಗಿತ್ತು. ” ಪ್ರಿಂಟಿಂಗ್ & ಸ್ಟೇಷನರಿ” ಅಕೌಂಟಿನಲ್ಲಿ ಸೆಕ್ರೆಟೇರಿಯಲ್ ಎಕ್ಸ್ಪೆನ್ಸ್ ಎಂದು ಹಾಕಿದ ಬಿಲ್ಲುಗಳಲ್ಲಿ ಸೆಕ್ರೆಟರಿಯ ಒಳಬಟ್ಟೆಗಳನ್ನು ಖರೀದಿಸಿದ ಕ್ಯಾಶ್ ಮೆಮೋ ಸಿಕ್ಕಿತ್ತು!
ಕಲಿಯುವಾಗ CA ಯ ಪರ್ಯಾಯ ಹಿಂದಿಯಲ್ಲಿ “ಭಾಡೇ ಕಾ ಮುನೀಮ್ ” ಎಂದುಹೇಳಿ ಹಾಸ್ಯ ರಸದಿಂದಲೇ ತೊಡಗಿತ್ತು.
ಇನ್ನು ನನ್ನ ನೀರಸವಾದ ಉದ್ಯೋಗದ ಸಾಮಾನ್ಯ ಜೀವನದಲ್ಲಿ ಬಂದಂತಹ ರಸಮಯ ಸಂದರ್ಭಗಳ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.
ನಾನು ಮೊದಲು ಹೇಳಿದಂತೆ, ನನ್ನ ಈ ಲೆಕ್ಕ ಪರಿಶೋಧನೆಯ ಉದ್ಯೋಗ ಹೊರಗಿನಿಂದ ಬರೀ ನೀರಸವೆಂಬುದು ನಿಜವೇ. ಹಾಗೆ ನನ್ನ ಔದ್ಯೋಗಿಕ ವೃತ್ತಿ ಜೀವನದಲ್ಲಿ ಅನುಭವಿಸಿದ ಒಂದು ಮರೆಯಲಾಗದ ಘಟನೆಯ ಬಗ್ಗೆ ಬರೆಯುತ್ತೇನೆ.
ನಾನು ೨೯೬೭ರ ಕೊನೆಯಿಂದ ೧೯೭೨ ಮಾರ್ಚ್ ತನಕ ಸಿ.ಎ. ಆರ್ಟಿಕಲ್ಸ್ ಟ್ರೈನೀಯಾಗಿದ್ದೆ.
ಆಗ ಅದನ್ನು Bonded labour ಎಂದೂ ಹೇಳುತ್ತಿದ್ದರು. ಯಾಕೆಂದರೆ ಈ ತರಹದ ತರಬೇತಿಯ ಕಾಲದಲ್ಲಿ ಯಾವುದೇ stipendನ ಸಹಾಯ ಇರಲಿಲ್ಲ. ಆದರೆ ನಾವು ನಮ್ಮ ಕೆಲಸದ ಪ್ರಯುಕ್ತ ಡೆಲ್ಲಿಯಿಂದ ಹೊರಗೆ ಹೋಗಬೇಕಾಗಿ ಬಂದರೆ ನಮ್ಮ ಪ್ರಯಾಣದ ಖರ್ಚು , ಬೋರ್ಡಿಂಗ್ ಲಾಡ್ಜಿಂಗ್ ಗಳ ವ್ಯವಸ್ಥೆ ಮಾಡುತ್ತಿದ್ದರು. ಆಗ ಪ್ರತಿ ವರ್ಷ ಎರಡು ಬಾರಿ ಪಂಜಾಬಿನ ಅಂಬಾಲ, ಚಂಡೀಗಢ, ಲುಧಿಯಾನ, ಕಪೂರ್ಥಲಾ ಎಂಬ ನಗರಗಳಲ್ಲಿ ಕೆಲಸಕ್ಕಾಗಿ ನನ್ನನ್ನು ಕಳುಹಿಸುತ್ತಿದ್ದರು. ಹೀಗೆ ಡೆಲ್ಲಿಯಿಂದ ಹೊರಗೆ ಹೋಗುವ ಅವಕಾಶವು ನಮಗೆ ಕೆಲವು ರೀತಿಯಲ್ಲಿ ಬಹಳ ಸಂತೋಷಕರವಾಗಿತ್ತು. ಮೊದಲನೆಯದಾಗಿ ಅದು ನಮ್ಮ ವಿದ್ಯಾರ್ಥಿ ಜೀವನದಲ್ಲಿ ಒಂದು ಬಗೆಯ ಸ್ವಾತಂತ್ಯ ಕೊಡುತ್ತಿತ್ತು. ಬೇರೆ ಬೇರೆ ರೀತಿಯ ವ್ಯವಹಾರದ ಔದ್ಯೋಗಿಕ ಕಂಪೆನಿಗಳ ಲೆಕ್ಕಪತ್ರಗಳು, ತಾಂತ್ರಿಕ ಕೆಲಸಗಳ ಬಗ್ಗೆ ತಿಳಯುವುದಲ್ಲದೆ ಅಲ್ಲಿನ ವಿಭಾಗಗಳಲ್ಲಿ ಕೆಲಸಮಾಡುವ ಅಧಿಕಾರಿಗಳೊಂದಿಗೆ ಸೇರಿ ವಿಚಾರ ವಿಮರ್ಷೆ ಮಾಡುವ ಅವಕಾಶಗಳು, ಎಲ್ಲಕ್ಕಿಂತಲೂ ಮಿಗಿಲಾದುದು ನಾವು ಅವರ ಕಂಪೆನಿಗೆ ಡೆಲ್ಲಿ ಮಹಾನಗರದಿಂದ ಪಂಜಾಬಿಗೆ ಬಂದಿರುವ ಅತಿಥಿ ಆಗಿದ್ದು ಅವರು ನಮಗೆ ಕೊಡುವ ಆತಿಥ್ಯದ ಸೌಲಭ್ಯಗಳನ್ನು ಆನಂದಿಸುವುದು! ಒಂದೊಂದು ಸಾರಿ ಪಂಜಾಬಿನ ದರ್ಶನ ಮಾಡಿ ಬಂದಾಗ ನನ್ನ ದೇಹದ ತೂಕ ಹೆಚ್ಚಾಗುತ್ತಿತ್ತು. ಕಾರಣ ಹೇಳುವ ಅಗತ್ಯವಿಲ್ಲವಷ್ಟೆ. ಅದಲ್ಲದೆ ನಾನು ನನ್ನ ಕಾರ್ಯಕುಶಲತೆಯಿಂದ ಕಂಪೆನಿಯವರಿಂದಲೂ, ನನ್ನ ಆಫೀಸಿನ ಬಾಸ್ ಆಗಿದ್ದ ಭಟ್ನಾಗರ್ ಅವರಿಂದಲೂ ಮೆಚ್ಚುಗೆ ಗಳಿಸಿಕೊಂಡು ತೂಕ ಬೇರೆ ಹೆಚ್ಚುತ್ತಿತ್ತು !
ಹಾಗೆ ೧೯೭೧ ಡಿಸೆಂಬರ್ ೩ ರಂದು ನಾನು ಮಧ್ಯಾಹ್ನದ ಮೇಲೆ ಡೆಲ್ಲಿಯಿಂದ ರೈಲುಗಾಡಿಯನ್ನೇರಿ ಜಲಂಧರ್ ಗೆ ಒಬ್ಬನೇ ಹೊರಟಿದ್ದೆ. ಅಲ್ಲಿಂದ ಬೇರೊಂದು ಗಾಡಿಗೆ ಬದಲಾಯಿಸಿ ರಾತ್ರೆಯೇ ಕಪೂರ್ಥಲಕ್ಕೆ ತಲಪುವ ಉದ್ದೇಶವಾಗಿತ್ತು. ನಿಮಗೆಲ್ಲ ಗೊತ್ತಿರುವಂತೆ ಚಳಿಗಾಲದಲ್ಲಿ ಸಂಜೆ ೫ ಗಂಟೆ ಕಳೆದರೆ ಬೇಗ ಕತ್ತಲಾಗುತ್ತದೆ. ಹಾಗೆ ಹರಿಯಾಣದ ಪಾಣಿಪತ್ ಬರುವ ಮೊದಲೇ ಅಂದು ಕತ್ತಲು ಅವರಿಸಿತ್ತು. ಪ್ರಯಾಣಿಕರೆಲ್ಲ ತಮ್ಮ ತಮ್ಮೊಳಗೇ ಗುಂಪುಗಳಲ್ಲಿ ಕುಳಿತು ಇಸ್ಫೇಟ್ ಕಾರ್ಡ್ ಹರಗಿ ಆಡುತ್ತಿದ್ದರೆ ಇತರರು ಹರಟೆ ಅಥವಾ ಗೊರಕೆ ಹೊಡಯುತ್ತಲೋ ಸಮಯ ಕಳೆಯುತ್ತಿದ್ದರು.
ಆಷ್ಟರಲ್ಲೇ, ಇದ್ದಕ್ಕಿದ್ದಂತೆ ಅಲ್ಲಿಯ ಹಳ್ಳಿ ಗದ್ದೆಗಳ ನಡುವೆ ತಟ್ಟನೆ ಎಲ್ಲಾ ದೀಪಗಳು ನಂದಿದ್ದಲ್ಲದೆ ರೈಲುಗಾಡಿಯೂ ಬ್ರೇಕ್ ಹಾಕಿ ಓಟ ನಿಂತಿತು. ಗಾಡಿಯ ಒಳಗೂ ಹೊರಗೂ ಎಲ್ಲಾ ಕತ್ತಲೆ ಆವರಿಸಿತು. ಪಟ್ಟಾಂಗ ಹೊಡೆಯುತ್ತಿದ್ದ ಪ್ರಯಾಣಿಕರೆಲ್ಲ ಭಯಭೀತಿಯಿಂದ ತೆಪ್ಪಗಾಗಿದ್ದರು. ಯಾರೋ ಢಕಾಯಿತರು ರೈಲಿನ ಮೇಲೆ ಧಾಳಿ ಮಾಡಿರಬೇಕು ಎಂಬ ಗುಸು ಗುಸು ಮಾತು ಬೇರೆ ಕೇಳಿತು. ಎಲ್ಲರೂ ಕುಳಿತಲ್ಲಿಂದ ಅಲುಗದೆ ಮೌನವಾಗಿ ಕತ್ತಲೆಯಲ್ಲಿ ಮುಖ ಮುಖ ನೋಡಿಕೊಂಡು ಕುಳಿತಿದ್ದರು. ಚಳಗಾಳಿಗೆ ಭದ್ರವಾಗಿ ಮುಚ್ಚಿದ್ದ ಕಿಟಕಿ ಬಾಗಿಲುಗಳನ್ನು ತೆರೆದು ನೋಡುವ ಧೈರ್ಯವೂ ತೋರಲಿಲ್ಲ. ಹೊರಗಿನಿಂದಲೂ ಏನೂ ಸದ್ದು ಗದ್ದಲವಿಲ್ಲ. ನಾನು ಆಗ ಮುಂದೇನು ಆಗಲಿದೆಯೋ ಎಂಬ ಹೆದರಿಕೆಯಿಂದ ಭಗವಂತನ ನಾಮ ಸ್ಮರಣೆ ಮಾಡುತ್ತಾ ಕುಳಿತಿದ್ದೆ.
ಸ್ವಲ್ಪ ಸಮಯದ ಬಳಿಕ ರೈಲಿನ T.C. ಯೊಬ್ಬಾತನು ಬಂದು, ಪಾಕಿಸ್ಥಾನದೊಂದಿಗೆ ಭಾರತದ ಯುದ್ಧದ ಘೋಷಣೆಯಾಗಿ ಸಂಪೂರ್ಣ ಬ್ಲಾಕ್ ಔಟ್ ಮಾಡಲಾಗಿದೆ ಎಂದು ತಿಳಿಸಿದ. ಈಗ ಪ್ರಯಾಣಿಕರ ಭಯ ಭೀತಿಯ ಚಿತ್ರವೇ ಬದಲಾಗಿತ್ತು.
ಸುಮಾರು ಒಂದು ಗಂಟೆಯ ಕಾಲ ಅಲ್ಲಿ ಅಂಧಕಾರದಲ್ಲಿ ನಿಂತಿದ್ದ ರೈಲು ಮತ್ತೆ ಬಹಳ ನಿಧಾನವಾಗಿ ಮುಂದಕ್ಕೆ ಚಲಿಸಲು ತೊಡಗಿತು. ಹಾಗೆಯೇ ಕತ್ತಲೆಯಲ್ಲೇ ಹೋಗುತ್ತಾ ಇದ್ದಂತೆ ರೈಲ್ಲೇಸ್ಟೇಷನ್ ಗಳು ಬಂದರೆ ಎಲ್ಲಾ ಕತ್ತಲೆಯಾಗಿ, ಆಗಿನ ಭೀಕರ ವಾತಾವರಣದಲ್ಲಿ ಪ್ರಯಾಣಿಕರು ಯಾರೂ ರೈಲು ಹತ್ತುವವರು ಇರಲಿಲ್ಲ. ಎಲ್ಲಿಯೂ ಒಂದು ಕಪ್ ಚಾ ಆಗಲೀ ಯಾವುದೇ ಬಗೆಯ ತಿಂಡಿ, ಅಥವಾ ಆಹಾರವಾಗಲೀ ಸಿಗುವಂತಿರಲಿಲ್ಲ. ಹಾಗೆಯೇ ಸಾವಧಾನದಿಂದ ಸಾಗಿದ ರೈಲುಗಾಡಿ ಮಧ್ಯರಾತ್ರಿಗೆ ಜಲಂಧರ್ ಗೆ ತಲಪಿದಾಗ ತಿಳಿದುಬಂತು ಯುದ್ಧ ಆರಂಭವಾಗಿ ಪಾಕಿ ಯುದ್ಧ ವಿಮಾನಗಳು ಗಡಿಯಿಂದ ಇತ್ತ ಬಾಂಬು ಧಾಳಿ ಮಾಡಿದ್ದವು ಎಂದು. ಕಾಶ್ಮೀರ, ಪಂಜಾಬ್ ಗಡಿ ಪ್ರದೇಶದಲ್ಲಿ ಅಲ್ಲದೆ ಅಂಬಾಲದ ಕಂಟೋನ್ಮೆಂಟ್ ಇಲಾಖೆಯಲ್ಲೂ ಬಾಂಬ್ ಹಾಕಿದ್ದರಂತೆ.
ಜಲಂಧರ್ ರೈಲ್ವೇ ಸ್ಟೆಷನ್ ನಲ್ಲಿ ಕತ್ತಲೆಯಲ್ಲಿ ಮೊಂಬತ್ತಿ ಉರಿಸಿ ಅಧಿಕಾರಿಗಳು ಜನರ ಗಲಿಬಿಲಿಯನ್ನು ತಡೆಯಲು ಪ್ರಯತ್ನ ಮಾಡುತ್ತಿದ್ದರು. ಎಲ್ಲಾ ಕಡೆಯೂ ಕತ್ತಲೆ! ಅಲ್ಲದೆ ಅಲ್ಲಿಂದ ನಡು ರಾತ್ರೆಯ ಸಮಯ ಮುಂದೆ ಹೋಗಲು ಯಾವುದೇ ಅವಕಾಶ ಕಾಣಲಿಲ್ಲ. ಜೊತೆಗೆ, ಮಧ್ಯಾಹ್ನದಿಂದ ಏನೂ ತಿನ್ನಲು ಸಿಗದೆ ಹೊಟ್ಟೆಯೂ ಬೇರೆ ಚುರು ಚುರು ಹೇಳುತ್ತಿದ್ದರೂ ಅದಕ್ಜೆ ಯಾವುದೇ ಪರಿಹಾರ ಕಾಣಲಿಲ್ಲ. ಮಾನಸಿಕವಾಗಿ ಭಯದಿಂದ ದಿಕ್ಕು ತೋರದೆ ಇದ್ದಾಗ ದೈಹಿಕವಾಗಿಯೂ ಹಸಿವು ಆಸರುಗಳೊಂದಿಗೆ ತೀವ್ರವಾದ ಚಳಿಯಿಂದ ಕಂಗಾಲಾಗಿದ್ದ ನನ್ನ ಆಗಿನ ಅವಸ್ಥೆಯನ್ನು ಹೇಳುವುದೇ ಅಸಾಧ್ಯ.
ನಾನು ನನ್ನ ಸೂಟ್ ಕೇಸನ್ನು ಹೊತ್ತು ಸ್ಟೇಷನ್ ನಿಂದ ಕತ್ತಲಲ್ಲೇ ಹೊರಬಂದೆ. ಅಲ್ಲೊಬ್ಬ ರಿಕ್ಷಾವಾಲ ಸಿಕ್ಕಿದ. ಅವನು ಥೇಟ್ ಪಂಜಾಬಿಯಲ್ಲಿ ಹೇಳಿದಂತೆ ಅಲ್ಲಿನ ಬಸ್ ಅಡ್ಡಾ ದಿಂದ ಖಾಸಗಿ ಬಸ್ ಗಳು ಕಫೂರ್ಥಲಾ ಶಹರಿಗೆ ಹೋಗುತ್ತವೆ ಎಂದು ತಿಳಿಯಿತು. ಅಂತೂ ಧೈರ್ಯ ಮಾಡಿ ಚಲೋ ಅಂದು, ರಿಕ್ಷಾದಲ್ಲಿ ಹತ್ತಿ ಮೌನವಾಗಿ ಕುಳಿತೆ. ಕತ್ತಲೆಯ ಮಾರ್ಗದಲ್ಲಿ ಯಾವುದೇ ವಾಹನಗಳಿಲ್ಲ, ಜನರೂ ಕಾಣುವುದಿಲ್ಲ. ದಾರಿಯುದ್ದಕ್ಕೂ ರಿಕ್ಷಾವಾಲನ ಸವಾಲುಗಳೂ ಬೇರೆ, ನನಗೆ ಸಂಶಯ ಹಾಗೂ ಹೆದರಿಕೆ ಹುಟ್ಟಿಸಿತ್ತು. ಏನಾದರೂ ಆಗಲಿ ನನ್ನ ಅಂತಿಮ ದಿನ ಹೀಗೇ ಎಂದು ಬರೆದಿದ್ದರೆ …ಎಂದು ಧೈರ್ಯಮಾಡಿದೆ. ನಾನು ದಿಲ್ಲಿಯಿಂದ ಸರಕಾರೀ ಕೆಲಸದ ಮೇಲೆ ಕಪೂರ್ಥಲಾದ ಸರದಾರ್ ಬಾವಾ ಜಸ್ವಂತ್ ಸಿಂಘ್ ಅವರ BMS ಕಂಪೆನಿಯ ಚೆಕಿಂಗ್ ಮಾಡಲು ಹೋಗುತ್ತಿದ್ದೇನೆ ಎಂದು ನನ್ನ ಹರಕು ಪಂಜ್ಲೀಷ್ ಭಾಷೆಯಲ್ಲಿ ಹೇಳಿದೆ !
ಬಸ್ ಅಡ್ಡಾದಲ್ಲಿ ಕತ್ತಲೆಯಲ್ಲಿ ಸಿಕ್ಕಿಬಿದ್ದ ನನ್ನಂತಹ ಪ್ರಯಾಣಿಕರ ಗಲಿಬಿಲಿ ಅಲ್ಲದೆ ಯಾವುದೇ ಬಸ್ಸಿನ ವ್ಯವಸ್ಥೆ ಕಾಣಲಿಲ್ಲ. ನನಗೆ ತಡೆಯಲಾರದ ಹಸಿವು. ಅಲ್ಲಿಯೂ ಏನೂ ಸಿಗಲಿಲ್ಲ. ಆದರೂ ರಿಕ್ಷಾವಾಲ ನನ್ನನ್ನು ಬಿಡಲಿಲ್ಲ. “ಮೇ ತನ್ನೂ ರೋಟೀ ಖಿಲಾವಾಂ, ಓರ್ ಹೋಟಲ್ ವಿಛ್ ಕಮ್ರಾ ದಿಲಾವಾಂ” ಎಂದು ಹೇಳಿ ರಿಕ್ಷಾ ವನ್ನು ತಿರುಗಿಸಿದ.
ಯಾವುದೇ ಸಣ್ಣಪುಟ್ಟ ಹೋಟೆಲ್, ಗೆಸ್ಟ್ ಹೌಸ್ ಗಳಲ್ಲಿ ರೂಮುಗಳು ತೆರವಿರಲಿಲ್ಲ. ಅಷ್ಟರಲ್ಲಿ ರಿಕ್ಷಾವನ್ನು ಅವನು
ಮಾರ್ಗದಿಂದ ಒಂದು ಓಣಿಗೆ ತಿರುಗಿಸಿದ. ನನ್ನ ಎದೆ ಡಬಡಬ ಬಡಿಯತೊಡಗಿತ್ತು . ಓಣಿಯ ಒಂದು ಕೊನೆಯಲ್ಲಿ ರಿಕ್ಷಾವನ್ನು ನಿಲ್ಲಿಸಿ ” ಮೇಂ ಹುಣೇ ಆಯಾ” ಎಂದು ಹೇಳಿ ಕತ್ತಲೆಯಲ್ಲಿ ಮಾಯವಾದ. ನಾನು ಭಯಭೀತನಾಗಿ ಚಳಿಗೆ ಸುತ್ತಿದ್ದ ನನ್ನ ಮಫ್ಲರನಿಂದ ಕಿವಿಗಳನ್ನಲ್ಲದೆ, ಕಣ್ಣುಗಳನ್ನೂ ಮುಚ್ಚಿ ಕುಳಿತೆ. ಸ್ವಲ್ಪ ಸಮಯದ ಬಳಿಕ “ಹನ್ಜೀ ಹನ್ಜೀ, ಮೇಆಯಾ” ಅನ್ನುತ್ತಾ ಬಂದ, ರಿಕ್ಷಾವಾಲ. ಅವನ ಕೈಯಲ್ಲಿ ಏನೋ ಹಿಡಿದುಕೊಂಡಿದ್ದ. ಅದು ಕೃಪಾಣ ಎಂದು, ನನ್ನ ಮನಸ್ಸಿನಲ್ಲಿದ್ದ ಭಯ ಪಾಕಿಸ್ಥಾನದ ಗಡಿಪಾರಾಗಿತ್ತು! ಮತ್ತೊಂದು ಕ್ಷಣದಲ್ಲಿ ಅವನು ರಿಕ್ಷಾದ ಹತ್ತಿರ ಬಂದರೆ ಅವನ ಕೈಯಲ್ಲಿರುವುದು ಕತ್ತಿಯಲ್ಲ, ಬಾಟಲಿ ಎಂದು ತಿಳಿಯಿತು. ನನ್ನ ಭಯದ ರಂಗು ಬದಲಿತು, ಇನ್ನೇನು ಬರಲಿದೆಯೋ ಎಂಬ ಭೀತಿ ಹುಟ್ಟಿತ್ತು.
ಅವನು ಬಾಟಲಿಯನ್ನು ಎತ್ತಿ, “ತುಸ್ಸಿ ಏಕ್ ಘುಟ್ ಲೋಗೇ” ಎಂದೇ ಕೇಳಿದ. “ಸರ್ಜೀ, ಠಂಡಾಂವಿಛ್ವ್ ಸಾಡ್ಡಕಾಮ್ ನಹೀಂ ಚಲ್ದಾ ” ಎಂದು ಕುಡಿಯ ತೊಡಗಿದ. ಬಾಟಲಿಯನ್ನು ಅರ್ಧದಷ್ಟು ಕುಡಿದು ಚೀಲದಲ್ಲಿ ತೂಗಿಸಿ ಪುನಃ ರಿಕ್ಷಾ ಸವಾರಿ ಸ್ಟೇಷನ್ ಕಡೆಗೆ ಹೊಡೆದ.
ಸ್ವಲ್ಪ ಧೈರ್ಯ ಬಂದಂತಾಗಿ, ಅವರನ್ನು ಮಾತಾಡಿಸಿ ದೋಸ್ತಿ ಮಾಡಿದರೆ ಪಂಜಾಬಿಗಳು ತುಂಬಾ ಉದಾರಿಗಳಾಗುತ್ತಾರೆ ಎಂದು,
“ರೇ ಪ್ರಾಜೀ ಆ ದಸ್ಸೋ ತ್ವಾಡ್ಡಾ ನಾಂ ಕೀಯೇ ?” ಎಂದು ಕೇಳಿದೆ.
“ಮೇರಾ ನಾಂ ಜೊಗಿಂದರ್ ಹೆಗಾ“
ಅಂತೂ ಮಧ್ಯರಾತ್ರೆಯಲ್ಲೂ ಬಿಸಿ ಬಿಸಿ ಪರಾಠ ಸಿಗುವ ಡಾಬದ ಬಳಿಗೆ ಹೋಗಿ ನಾವಿಬ್ಬರೂ ಎರಡೆರಡು ಪರಾಠ ತಿಂದು ಬಿಸಿ ಬಿಸಿ ಚಾ ಕುಡಿದ ನಂತರ ತೃಪ್ತಿಯಾಯಿತು.
ಅವನೂ ನನ್ನ ಮೇಲೆ ತುಂಬ ಆದರವನ್ನು ತೋರಿಸಿದ. ನೇರವಾಗಿ ರೈಲ್ವೇ ಸ್ಟೇಷನ್ ಪಕ್ಕದ ಒಂದು ಹೋಟೆಲ್ ನಲ್ಲಿ ಹತ್ತಿಪ್ಪತ್ತು ರುಪಾಯಿಗೆ ಬೆಳಗಿನ ತನಕ ಸುಖವಾಗಿ ನಿದ್ರಿಸಲು ರೂಮಿನ ಸೌಕರ್ಯ ಮಾಡಿಸಿದ. ಅಲ್ಲದೆ ಬೆಳಗ್ಗಿನ ೭ಗಂಟೆಯ ಟ್ರೈನಿಗೆ ತಾನೇ ಬಂದು ಬಿಡುತ್ತೇನೆ ಎಂದು ಹಣ ಕೂಡಾ ಆಮೇಲೆ ತಗೊಳ್ತೇನೆ ಅಂದು ಹೋದ. ಆ ಘೋರ ಕತ್ತಲೆಯ ರಾತ್ರೆಯಲ್ಲೂ ನನಗೆ ಪಂಜಾಬಿಯತ್ ನ್ನು ಪರಿಚಯಿಸಿದ್ದ!
ಅಷ್ಬೊಂದು ಆಯಾಸ ಪಟ್ಟಿದ್ದ ನಾನಂತೂ ಬೆಳಗಿನ ತನಕ ಹೋಟಲಿನ ರೂಮಿನಲ್ಲಿ ಯಾವ ಹೆದರಿಕೆಯೂ ಇಲ್ಲದೆ ಸುಖ ನಿದ್ದೆ ಮಾಡಿದೆ.
ಬೆಳಗ್ಗೆ ಏಳು ಗಂಟೆಗೆ ಜೊಗಿಂದರ್ ಬಂದು ನನ್ನನ್ನು ಎಬ್ಬಿಸಿದಾಗಲೇ ಎಚ್ಚರವಾದುದು. ನಾನು ಅವನ ಮುಖ ಸರಿಯಾಗಿ ನೋಡಿದ್ದೇ ಆಗ!
ಕೂಡಲೇ ಸ್ಟೇಷನ್ ನಿಗೆ ಹೋಗಿ ಅವನೊಂದಿಗೆ ಪ್ಲಾಟ್ ಫಾರಂನಲ್ಲಿ ಒಂದು ಗ್ಲಾಸ್ ಬಿಸಿ ಚಾಹ ಕುಡಿದು ನಾನ್ಕಟಾಯಿ ತಿಂದು, ಅವನಿಗೆ ಕೇಳಿದಾಗ ಅವನು ೫ ರೂಪಾಯಿ ಕೇಳಿ ತಗೊಂಡು ಹೋದ!
ನಾನೂ ರೈಲುಗಾಡಿಯಲ್ಲಿ ಕಫೂರ್ಥಲಾಕ್ಕೆ ತಲುಪಿ, ೯ ಗಂಟೆಗೆ ಕಂಪೆನಿ ಗೆಸ್ಟ್ ಹೌಸಿಗೆ ತಲಪಿದೆ. ಅಲ್ಲೊಬ್ಬ ರಾಮ್ ಭರೋಸಾ ಎಂಬ ಯು.ಪಿಯ ಭೈಯ್ಯ ನನ್ನ ದಾರಿ ನೋಡುತ್ತಾ ಇದ್ದ. ನಾನು ಹೆಚ್ಚಾಗಿ ಟೂರಿಗೆ ಹೋದಾಗ ಖಾದೀ ಕುರ್ತಾ ಪಜಾಮಾಗಳನ್ನೇ ಧರಿಸುತ್ತಿದ್ದುದರಿಂದ ನನ್ನನ್ನು ಅವನು ” ನೇತಾಜೀ” ಎಂದು ಕರೆಯುತ್ತಿದ್ದ !
“ನೇತಾಜೀ ಆಗಯೇ, ನೇತಾಜೀ ಆಗಯೇ” ಎಂದು ಕಂಪೆನಿ ಆಫೀಸಿಗೆ ಫೋನ್ ಮಾಡಿದ. ಆ ಕೂಡಲೇ ಅಲ್ಲಿಂದ ರಾಮ ಮೂರ್ತಿ ನಯ್ಯರ್ ಎಂಬ ಹೆಸರಿನ ಎಕೌಂಟೆಂಟ್ ಬಂದು ನನಗೆ ಬೇಕಾದ ವ್ಯವಸ್ಥೆಗಳನ್ನೆಲ್ಲ ಮಾಡಿ ಹೋದ. ಆಮೇಲೆ ನಾನೂ ಸ್ನಾನ ಮಾಡಿ, ಪರೋಠಾ ಮತ್ತು ಚಾ ಸೇವನೆ ಮಾಡಿ ಆಫೀಸಿನ ಕಡೆಗೆ ಹೋದೆ. ರಾಮಮೂರ್ತಿನಯ್ಯರ್ ಬಹಳ ಅಚ್ಚುಕಟ್ಟಾಗಿ ಲೆಕ್ಕ ಪುಸ್ತಕಗಳನ್ನೂ ಫೈಲುಗಳನ್ನೂ ಇರಿಸುತ್ತಿದ್ದ. ಅವನು ಲೆಕ್ಕಪುಸ್ತಕಗಳೂ ಉರ್ದು ಭಾಷೆಯಲ್ಲಿ ಬರೆಯುತ್ತಿದ್ದುದರಿಂದ ನಾನೂ ಆಗ ಉರ್ದು ಭಾಷೆಯನ್ನು ಓದುವಷ್ಟು ಅಭ್ಯಾಸ ಮಾಡಿದ್ದೆ. ಅವರ ಚೇರ್ ಮ್ಯಾನ್ ಆದ ಸರದಾರ್ ಜಸ್ವಂತ್ ಸಿಂಗ್ ಮತ್ತು ಅವರ ತಮ್ಮ ಸುರೆಂದರ್ ಸಿಂಘ್ ಅವರ ಭೇಟಿಗೆ ನನ್ನನ್ನು ಕರೆದುಕೊಂಡು ಹೋದ.
ಅವರೆದುರು ನನ್ನ ಉರ್ದು ಪರಿಣತೆ ಯನ್ನು ಶ್ಲಾಘಿಸಿದನಲ್ಲದೆ, “ಹಮಾರೇ ಮದ್ರಾಸೀ ನೇತಾಜೀ ಅಬ್ CA ಕಾ intercourse ಭೀ ಬಹುತ್ ಅಛ್ಛೇ ನಂಬರ್ ಸೇ ಪಾಸ್ ಹೋಗಯೇ!” ಎಂದೂ ಹೇಳಿದ. ನನಗೂ ಬಾವಾ ಸಿಂಘ್ ಸಹೋದರರಿಗೂ ನಗೆ ತಡೆಯಲಾಗಲಿಲ್ಲ. ರಾಮಮೂರ್ತಿ ನಯ್ಯರ್ ಗೆ ತನ್ನಿಂದ ಏನು ತಪ್ಪಾಯಿತು ಎಂದು ಅಚ್ಚರಿ!
All that ends, ends well ಎಂಬಂತೆ ಮತ್ತೆರಡು ದಿನಗಳಲ್ಲಿ ಭಾರತವು ಬಾಂಗ್ಲಾ ದೇಶದಲ್ಲಿ ಪಾಕಿಸ್ಥಾನದ ಸೇನೆಯ ಶರಣಾಗತಿಯನ್ನೂ ಬೇಡಿತ್ತು.
ಪಂಜಾಬಿನಲ್ಲಿ ಪಾಕಿಸ್ಥಾನವನ್ನು ಯುದ್ದದಲ್ಲಿ ಗೆದ್ದ ಸಂಭ್ರಮದಲ್ಲಿ ನನಗೂ ಪಾಲುಗಳ್ಳುವ ಅವಕಾಶ ಸಿಕ್ಕಿದ್ದು ಅವಿಸ್ಮರಣೀಯ. ಅದು ಒಂದು ಹಬ್ಬದಂತಹ ದಿನವಾಗಿತ್ತು, ಢೋಲು, ಭಾಂಗ್ಡಾ ಕುಣಿತ, ಸಿಡಿಮದ್ದು, ಸಿಹಿ ತಿಂಡಿಗಳ ಸುರಿಮಳೆ ಹರಿದಿತ್ತು. ಪಾಕಿಸ್ತಾನದ ಗಡಿಯಲ್ಲಿರುವ ಪಂಜಾಬಿಗಳಿಗೆ ದೇಶದ ವೈರಿಗಳನ್ನು ಗೆದ್ದಂತಹ ಆ ದಿನ ಅತ್ಯಂತ ಸಂತೋಷದ ದಿನವಾಗಿತ್ತು.
ಈ ರಸಾಯಣದ ಭಾಗದಲ್ಲಿ ನನಗೆ ಏನೆಲ್ಲ ರಸಗಳ ಮಿಶ್ರಣಗಳ ಅನುಭವವಾಗಿತ್ತು ಎಂದು ನೀವೇ ನೋಡಿ !