ಕೆನಡಾದ ಸೆಕೆಗಾಲ

 

ಭೀಕರವಾದ ಚಳಿಗಾಲ ಕಳೆದು ಬರುವುದೇ ವಸಂತ ಋತು. ಕೆನಡಾದಲ್ಲಿ ಅಕ್ಟೋಬರ್ ತಿಂಗಳಿನಿಂದ ಪ್ರಾರಂಭವಾದ ಚಳಿಗಾಲ ತಕ್ಕಮಟ್ಟಿಗೆ ಕೊನೆಗೊಳ್ಳುವುದು ಮಾಚ್೯ ತಿಂಗಳಲ್ಲಿ. ಅಂದರೆ ಮತ್ತೆರಡು ತಿಂಗಳು ಏಪ್ರಿಲ್ ಮತ್ತು‌ ಮೇಯಲ್ಲಿ‌ ಚಳಿ ಇಲ್ಲವೆಂದರ್ಥವಲ್ಲ. ಮಣಗಟ್ಟಲೆ ಭಾರದ ಉಣ್ಣೆ ಬಟ್ಟೆಗಳನ್ನು ಧರಿಸುವ ಅವಶ್ಯಕತೆ ಕಡಿಮೆಯಾಗಿ ಸ್ವೆಟರ್ ಶಾಲುಗಳಲ್ಲಿ ದಿನ ಕಳೆಯಬಹುದು. ಚಳಿಗಾಲದಲ್ಲಿ ಬೋಳುಬೋಳಾಗಿ ನಿಂತ ಗಿಡಮರಗಳು ಏಪ್ರಿಲ್ ತಿಂಗಳಲ್ಲಿ ಚಿಗುರೊಡೆದು ಹೂ ಬಿಡಲು ಪ್ರಾರಂಭಿಸುತ್ತವೆ. ಹೆದ್ದಾರಿಗಳ ಎರಡೂ ಪಕ್ಕಗಳಲ್ಲಿ ಮೇಪಲ್ ಗಿಡಗಳು ಸೊಂಪಾಗಿ ಬೆಳೆದು ಮನಸ್ಸಿಗೆ ಉಲ್ಲಾಸ ನೀಡುತ್ತವೆ. ಸೆಕೆಗಾಲದ ಮುನ್ಸೂಚನೆಯನ್ನು ತೋರಿಸುತ್ತವೆ.

 

ಮೇಪಲ್ ಗಿಡದ ಎಲೆಯ ಆಕೃತಿಗೂ ಕೆನಡಾದ ರಾಷ್ಟ್ರಧ್ವಜದ emblemಗೂ‌ ಏನೋ ನಿಕಟ ಸಂಧವಿದೆಯಂತೆ ಎಂದು‌ಪೌರಾಣಿಕ‌ ಹಿನ್ನೆಲೆಯಿಂದ ತಿಳಿದು ಬಂದಿದೆ. ಪ್ರತೀವರ್ಷ ಜುಲೈ ಮೊದಲನೆಯ ವಾರ ಕೆನಡಾ ಡೇ ಎಂದು ಆಚರಿಸುತ್ತಾರೆ. ಮನೆಯ ಮುಂದೆ ರಾಷ್ಟಧ್ವಜವನ್ನು ಹಾರಿಸುತ್ತಾರೆ.

ಸೆಕೆಗಾಲವೆಂದು ಪರಿಗಣಿಸುವುದು ಜೂನ್,ಜುಲೈ, – ಈ ಮೂರು ತಿಂಗಳ ಆನಂದಮಯ ಜೀವನಕ್ಕೆ ವಸಂತ ಋತುವಿನ ಆ ಎರಡು ತಿಂಗಳುಗಳಿಂದ ಕಾಯುತ್ತಾ ಇರುತ್ತಾರೆ. ಬೇಕಾದೆಲ್ಲಾ ತಯಾರಿ ಮಾಡ್ತಾರೆ. ಇಲ್ಲಿ Garage sale ಎಂಬುದೊಂದು ವಾಡಿಕೆ ಇದೆ. ತಮ್ಮ garageಗಳನ್ನೆಲ್ಲಾ ತೆರೆದಿಟ್ಟು, ತಮ್ಮ ಮಕ್ಕಳ ಆಟಿಕೆಗಳು, ಬಟ್ಟೆಬರೆಗಳು, ಫರ್ನಿಚರ್ ಹೀಗಿರುವುದನ್ನೆಲ್ಲಾ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಸೆಕೆಗಾಲದ ಫರ್ನಿಚರ್ ಗಳು ಬೇರೆಯಾಗಿರುತ್ತವೆ. ಹೊಸದಾಗಿ ಬೇರೆ ದೇಶದಿಂದ ಬಂದು ಸಂಸಾರ ಹೂಡುವವರಿಗೆ ತುಂಬಾ ಸಹಾಯವಾಗುತ್ತದೆ. ತುಂಬಾ ಅಗ್ಗಕ್ಕೆ ಒಳ್ಳೆ ಸಾಮಾನುಗಳು ಸಿಗುತ್ತವೆ.

 

ಇಲ್ಲಿಯ ಇನ್ನೂ ಒಂದು ವಿಶೇಷತೆ ಏನೆಂದರೆ, ಈ ಮೂರು ತಿಂಗಳು ತಾಪಮಾನ 40 ಡಿಗ್ರಿಯವರೆಗೆ ಹೋಗುತ್ತದೆ. ಹಾಗೆಂದು ಪುನ: ಎರಡೇ ದಿನಗಳಲ್ಲಿ ಮಳೆ ಅಥವಾ ತಣ್ಣನೆಯ ಗಾಳಿ ಬಂದು ತಾಪಮಾನ 20 ಡಿಗ್ರಿಯವರೆಗೆ ಇಳಿದು ತಂಪು ಕೊಡುತ್ತದೆ. ಜುಲೈ ತಿಂಗಳಲ್ಲಿ ಹಿಮಪಾತ ಆದದ್ದೂ ಇದೆಯಂತೆ. ಜೂನ್ ತಿಂಗಳಿನಿಂದ ಸೂರ್ಯೋದಯ ಸಾಧಾರಣವಾಗಿ ಬೆಳಿಗ್ಗೆ 5.30ಕ್ಕೆ ಹಾಗೂ ಸೂರ್ಯಾಸ್ತ ರಾತ್ರಿ 9.05ಕ್ಕೆ ಆಗುತ್ತದೆ. ಲಾಂಗ್ ಡೇ ಮತ್ತು ಶಾರ್ಟ್ ನೈಟ್ ಆಗಿರುವುದರಿಂದ ಮೊದಮೊದಲು ಒಂದು ವಾರ ನಿದ್ದೆ ಕಡಿಮೆಯಾಗಿ, ನನ್ನಂಥವರಿಗೆ ಆರೋಗ್ಯ ಹದಗೆಡುತ್ತದೆ. ಸೂರ್ಯನ ಶಾಖವೂ ತೀವ್ರವಾಗಿರುತ್ತದೆ. ಬೆಳಿಗ್ಗೆ 8ಗಂಟೆಗೆ ವಾಯು ವಿಹಾರಕ್ಕೆಂದು ಹೊರಡುವಾಗ ಕಣ್ಣಿಗೆ sun glasses ಹಾಕಲೇಬೇಕಾಗುತ್ತದೆ. ಹಾಗೆಂದು ಗಾಳಿ ಮಾತ್ರ ತಣ್ಣಗೆ ಬೀಸುತ್ತಿರುತ್ತದೆ. ಇದೂ ಒಂದು ವೈಶಿಷ್ಟ್ಯ. ಹಾಗಾಗಿ, “ಹಾ ಸೆಕೆ, ಅಬ್ಬಾ ಸೆಕೆಎಂದು ಯಾರೂ ಬೊಬ್ಬಿಡುವುದಿಲ್ಲ. ಶಾಲಾ ಮಕ್ಕಳಿಗೂ ಜುಲೈ, ಆಗಸ್ಟ ಸಮ್ಮರ್ ವೆಕೇಶನ್ ಕೊಡುತ್ತಾರೆ.

 

ತಂತಮ್ಮ ಮನೆಯ ಮುಂದೆ ಅಗಲವಾದ ಕಾಲುದಾರಿಗಳಿದ್ದರೂ ಯಾರೂ ಅದರಲ್ಲಿ ಕಾಲ್ನಡಿಗೆಯಲ್ಲಿ ಹೋಗುವುದಿಲ್ಲ. ಪ್ರಯಾಣಿಕರು ಅಥವಾ ಸಾಕು ಪ್ರಾಣಿಗಳ ಮಲವಿಸರ್ಜನೆಗೆಂದು ಕರೆದೊಯ್ಯುವವರು ಮಾತ್ರ ಕಾಣುತ್ತಾರೆ. ಪ್ರಾಣಿಗಳ ಮಲವನ್ನು ಅಲ್ಲಿಯೇ ಬಿಡುವ ಹಾಗಿಲ್ಲ. ಪ್ಲಾಸ್ಟಿಕ್ ಕವರಲ್ಲಿ ಅದನ್ನು ಹೆಕ್ಕಿ ತಮ್ಮ ತಮ್ಮ ಮನೆಯ ಕಮೋಡ್ ಗಳಲ್ಲಿ ಹಾಕಬೇಕು. ಇಲ್ಲದಿದ್ದರೆ ಶಿಕ್ಷೆ ವಿಧಿಸಲಾಗುತ್ತದೆ. ಕಾಲುದಾರಿಗಳು ಅಗಲವಾಗಿದ್ದು ಒಂದು ಸ್ವಲ್ಪವೂ ಮಣ್ಣು,ಧೂಳು, ಕಸ ಇಲ್ಲದೆ ತುಂಬಾ ಶುಚಿಯಾಗಿರುತ್ತದೆ. ಆರಾಮವಾಗಿ ನಿಧಾನವಾಗಿ ನಡೆದು ಹೋಗಬಹುದು.

ಸೆಕೆಗಾಲದಲ್ಲಿ ಇಲ್ಲಿಯ ಜನರು ವಾಕ್ ಮತ್ತು ವಿಹಾರ ಮಾಡುವುದೆಂದರೆ ಹತ್ತಿರದ ಪಾರ್ಕಗಳಲ್ಲಿ. ಪಾರ್ಕಗಳೆಂದರೆ ಅದರಲ್ಲೇ ಕೆರೆಗಳು, ಈಜುಕೊಳಗಳು ಇರುತ್ತವೆ.

ಇಲ್ಲಿಯ ಬಿಸಿಲಿನ ತಾಪಮಾನ ನೆನೆಸಿದಾಗ, ಹಪ್ಪಳ, ಸೆಂಡಿಗೆ ಮಾಡಬೇಕೆಂಬ ಆಸೆ ಹುಟ್ಟುತ್ತದೆ. ಆದರೆ ಅದು ಯಾವುದಕ್ಕೂ ಇಲ್ಲಿ ಅವಕಾಶವಿಲ್ಲ. ಯಾಕೆಂದರೆ ತೆರೆದ ಟೆರೇಸ್ ಗಳಿಲ್ಲ. ಬರೀ ಬೇಸ್ಮೆಂಟ್ ಗಳೇ. ಬಾಲ್ಕನಿಗಳಿದ್ದರೂ ಬಟ್ಟೆ ಒಣಗಲು ಹಾಕಲೂ ಪರ್ಮಿಶನ್ ತೆಗೆದುಕೊಳ್ಳಬೇಕು. ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಅಷ್ಟೊಂದು ಪ್ರಾಮುಖ್ಯತೆ. ಅದೇ ಇಲ್ಲಿಯ ವಿಶೇಷತೆ.

 

ತಮ್ಮ ತಮ್ಮ ಮನೆಯ ಮುಂದೆ ಹೂಕುಂಡಗಳನ್ನು ಇಟ್ಟು ಬಣ್ಣಬಣ್ಣದ ಹೂಗಳಿಂದ ಅಲಂಕರಿಸುತ್ತಾರೆ. ಮನೆಯ ಹಿಂದೆ ಕಾಂಪೌಂಡ್ಗಳಲ್ಲಿ ತರಕಾರಿ ಬೆಳೆಸುತ್ತಾರೆ. ಕೆಲವರು patioಗಳಲ್ಲಿ Barbeque ಮಾಡುತ್ತಾರೆ. ನಾಲ್ಕೇ ತಿಂಗಳಿನ ಈ ಸೆಕೆಗಾಲದಲ್ಲಿ ತರಕಾರಿಗಳು ಸಮೃದ್ಧವಾಗಿ ಬೆಳೆಯುತ್ತವೆ. ಫಲವತ್ತಾದ ಮಣ್ಣು ಮತ್ತು ದೀರ್ಘವಾದ ಬಿಸಿಲೇ ಇದಕ್ಕೆ ಕಾರಣವೆನ್ನುತ್ತಾರೆ. ನಾಲ್ಕೇ ತಿಂಗಳಲ್ಲಿ ಆಲೂಗಡ್ಡೆ, ಈರುಳ್ಳಿ ಮುಂತಾದವುಗಳನ್ನು ಬೆಳೆದು, ಚಳಿಗಾಲಕ್ಕೆ ಬೇಕಾಗುವುದನ್ನು ಶೇಖರಿಸಿಡುತ್ತಾರೆ. ತಮ್ಮ ಮನೆಯ ಹಿಂದಿನ ಅಂಗಳಗಳಲ್ಲಿ swimming pool ಮಾಡಿರುತ್ತಾರೆ. ಅದನ್ನೇ ಚಳಿಗಾಲಕ್ಕೆ Jacuzi Tub ಆಗಿ convert ಮಾಡ್ತಾರೆ.

 

ಜನರು ಶ್ರಮಜೀವಿಗಳು. ಚಳಿ ಇರಲಿ ಸೆಕೆ ಇರಲಿ ಯಾವ ಕೆಲಸವನ್ನೂ ಮುಂದೂಡುವುದಿಲ್ಲ. ನಿಷ್ಠೆಯಿಂದ‌ ಮಾಡುತ್ತಾರೆ.

 

 

ಕಲ್ಚಾರು ಲಲಿತಾ ಗಣೇಶ್

Leave a Reply

Your email address will not be published. Required fields are marked *