ನೆನಪಿನ ಸುರುಳಿಯಿಂದ…
ಕಲ್ಚಾರು ಲಲಿತಾ ಗಣೇಶ್
1971ನೇ ಇಸವಿ ಜೂನ್ ತಿಂಗಳ 8ನೇ ತಾರೀಕು ಹೈದರಾಬಾದ್ ನಿಂದ ಹೊರಟ ದಕ್ಷಿಣ ಎಕ್ಸ್‌ಪ್ರೆಸ್ ನಲ್ಲಿ 10ನೇ ತಾರೀಕು ಬೆಳಿಗ್ಗೆ 6ಗಂಟೆಗೆ ನಾವು ನ್ಯೂ ಡೆಲ್ಲಿಯ ರೈಲ್ವೆ ಸ್ಟೇಷನ್ ನಲ್ಲಿ ಬಂದಿಳಿದೆವು. ಹೊರಬಂದು ಟ್ಯಾಕ್ಸಿಯಲ್ಲಿ ಕುಳಿತು ಕರೋಲ್ ಬಾಗ್ ನತ್ತ ಹೊರಟೆವು.ಆಹಾ! ಎಂತಹ ಸುಂದರ ನೋಟ! ರಸ್ತೆಯ ಎರಡೂ ಬದಿಗಳಲ್ಲಿ ಮಣ್ಣಿನ ಹೂಜಗಳ ರಾಶಿ, ಸಾಸಿವೆ ಎಣ್ಣೆಯಲ್ಲಿ ಕರಿದು ಮಾಡಿಟ್ಟ ಬ್ರೆಡ್ ಪಕೋಡಗಳ ಸುವಾಸನೆ, ಅಲ್ಲಲ್ಲಿ DMS Milk ಬೂತ್ ಗಳು ಹಾಗೂ ಅದರ ಮುಂದೆ ಸಾಲಾಗಿ ನಿಂತಿರುವ ಜನರು, ಸೆಕೆಗಾಲದ ಮುಂಜಾನೆಯ ತಂಪುಗಾಳಿ, ಇವನ್ನೆಲ್ಲಾ ಕಣ್ಣು ತುಂಬಾ ಸವಿಯುತ್ತಾ ಮುಂದುವರಿದೆ. ಹುಟ್ಟೂರು ಬಿಟ್ಟು ಬೇರೆ ಊರಿಗೆ ಬಂದೆನೆಂಬುದು ಹಾಗೂ ಎರಡು ದಿನದ ರೈಲು ಪ್ರಯಾಣದ ಆಯಾಸವೆಲ್ಲಾ ಮರೆತು ಹೋಗಿತ್ತು.ಅಷ್ಟೊಂದು ಸಂತೋಷವಾಗಿತ್ತು!
1971ನೇ ಇಸವಿ ಜೂನ್ ತಿಂಗಳ 8ನೇ ತಾರೀಕು ಹೈದರಾಬಾದ್ ನಿಂದ ಹೊರಟ ದಕ್ಷಿಣ ಎಕ್ಸ್‌ಪ್ರೆಸ್ ನಲ್ಲಿ 10ನೇ ತಾರೀಕು ಬೆಳಿಗ್ಗೆ 6ಗಂಟೆಗೆ ನಾವು ನ್ಯೂ ಡೆಲ್ಲಿಯ ರೈಲ್ವೆ ಸ್ಟೇಷನ್ ನಲ್ಲಿ ಬಂದಿಳಿದೆವು. ಹೊರಬಂದು ಟ್ಯಾಕ್ಸಿಯಲ್ಲಿ ಕುಳಿತು ಕರೋಲ್ ಬಾಗ್ ನತ್ತ ಹೊರಟೆವು.ಆಹಾ! ಎಂತಹ ಸುಂದರ ನೋಟ! ರಸ್ತೆಯ ಎರಡೂ ಬದಿಗಳಲ್ಲಿ ಮಣ್ಣಿನ ಹೂಜಗಳ ರಾಶಿ, ಸಾಸಿವೆ ಎಣ್ಣೆಯಲ್ಲಿ ಕರಿದು ಮಾಡಿಟ್ಟ ಬ್ರೆಡ್ ಪಕೋಡಗಳ ಸುವಾಸನೆ, ಅಲ್ಲಲ್ಲಿ DMS Milk ಬೂತ್ ಗಳು ಹಾಗೂ ಅದರ ಮುಂದೆ ಸಾಲಾಗಿ ನಿಂತಿರುವ ಜನರು, ಸೆಕೆಗಾಲದ ಮುಂಜಾನೆಯ ತಂಪುಗಾಳಿ, ಇವನ್ನೆಲ್ಲಾ ಕಣ್ಣು ತುಂಬಾ ಸವಿಯುತ್ತಾ ಮುಂದುವರಿದೆ. ಹುಟ್ಟೂರು ಬಿಟ್ಟು ಬೇರೆ ಊರಿಗೆ ಬಂದೆನೆಂಬುದು ಹಾಗೂ ಎರಡು ದಿನದ ರೈಲು ಪ್ರಯಾಣದ ಆಯಾಸವೆಲ್ಲಾ ಮರೆತು ಹೋಗಿತ್ತು.ಅಷ್ಟೊಂದು ಸಂತೋಷವಾಗಿತ್ತು!
ಮನೆ ಸೇರಿದ ತಕ್ಷಣ ಪಕ್ಕದ ಮನೆಯವರ ಉಪಚಾರ – ಚಹ ಮತ್ತು ಬಿಸ್ಖೆಟ್ಸ, ತದನಂತರ ಬೆಳಗಿನ ಉಪಹಾರಕ್ಕೆ ಆಲೂ ಪರೋಟ, ಮೀಠೀ ಲಸ್ಸೀ, ಬಿಳಿ ಬೆಣ್ಣೆ, ಮಾವಿನಕಾಯಿ ಉಪ್ಪಿನಕಾಯಿ – ಇವೆಲ್ಲಾ ನನ್ನನ್ನು ಸಂತೋಷ ಸಾಗರದಲ್ಲಿ ತೇಲಿಸಿತು. ಐವತ್ತು ವರ್ಷದ ಹಿಂದಿನ ದೆಹಲಿ ಎಂದರೆ ನನಗೆ ನೆಮಪಾಗುವುದೇ ಈ ಸುಂದರ ದೃಶ್ಯಗಳು; ಇನ್ನೂ ನನ್ನ ಕಣ್ಣಮುಂದೆ ಅಚ್ಚಳಿಯದೆ ನಿಂತಿವೆ.
ಕೆಲವೊಂದು ಹವ್ಯಕ ಕುಟುಂಬಗಳು ಇದಕ್ಕೂ ಮೊದಲೇ ದೆಹಲಿಗೆ ಬಂದು ನೆಲೆಸಿದ್ದವರಿದ್ದರು. ನನಗೆ ನೆನಪಾಗುವ ಕುಟುಂಬಗಳೆಂದರೆ : ಶ್ರೀ. ಈಶ್ವರ ಭಟ್ಬ ಫ್ಯಾಮಿಲಿ, ಮೋತಿಬಾಗ್ ; ಶ್ರೀ. ಮೇಣ ರಾಮಕೃಷ್ಣ ಭಟ್ಟ ಫ್ಯಾಮಿಲಿ, ಕಮಲಾನಗರ; ಕ್ಯಾಪ್ಟನ್ ಜಿ.ಕೆ.ಭಟ್ಟ ಫ್ಯಾಮಿಲಿ, ಅರ್.ಕೆ.ಪುರಂ ; ಶ್ರೀ. ಎಂ.ಎಸ್.ಭಟ್ಟ ಫ್ಯಾಮಿಲಿ, ರೈಲ್ವೆ ಕ್ವಾರ್ಟರ್ಸ್; ಶ್ರೀ. ಕೋಳಾರಿ ಸುಬ್ರಹ್ಮಣ್ಯ ಭಟ್ಟ ಫ್ಯಾಮಿಲಿ, ಲಜಪತ್ ನಗರ ; ಶ್ರೀ. ಪುರಂದರ ಭಟ್ಟ, ಲಜಪತ್ ನಗರ; ಶ್ರೀ. ಟಿ.ಕೃಷ್ಣ ಭಟ್ಟ, ಲಜಪತ್ ನಗರ ; ಶ್ರೀ. ಕೆ.ಫಾಲಚಂದ್ರ ಭಟ್ಡ, ಪಟೇಲ್ ನಗರ. ಈ ಹವ್ಯಕ ಕುಟುಂಬಗಳೊಂದಿಗೆ ಸೇರಿಕೊಂಡೆವು ನಾವು, ಶ್ರೀ. ಕಲ್ಚಾರು ಗಣೇಶ ಫ್ಯಾಮಿಲಿ, ಕರೋಲ್ ಬಾಗ್. ಕ್ರಮೇಣ ಇವರಲ್ಲಿ ಕೆಲವರು ನಿವೃತ್ತಿ ಹೊಂದಿದರು. ಮತ್ತೆ ಕೆಲವರು ವರ್ಗಾವಣೆಯಾಗಿ ಬೇರೆ ಬೇರೆ ಊರುಗಳಿಗೆ ಪಯಣಿಸಿದರು.ಪರಸ್ಪರ ಸಂಪರ್ಕಗಳು ದೂರವಾದವು.
ಇದರಲ್ಲಿ ನಮಗೆ ತೀರಾ ಹತ್ತಿರವಾಗಿದ್ದ ಕುಟುಂಬವೆಂದರೆ ಮೋತೀಬಾಗ್ ಈಶ್ವರ ಭಟ್ಟರ ಮನೆ. ಅವರದ್ದು ಅವಿಭಕ್ತ ಕುಟುಂಬ. ಅವರ ತಮ್ಮಂದಿರಾದ ಶ್ರೀ. ನಾರಾಯಣ ಭಟ್ಟ ಮತ್ರು ಶ್ರೀ. ರಾಮಚಂದ್ರ ಭಟ್ಟ ಅವರಿಗಿನ್ನೂ ಮದುವೆಯಾಗಿರಲಿಲ್ಲ. ಅವರ ಇನ್ನೊಬ್ಬ ಸಹೋದರ ಶ್ರೀ. ಶಂಕರ ಭಟ್ಟ ಮತ್ತು ಫ್ಯಾಮಿಲಿ ರೇವಾಡಿಯಲ್ಲಿ ಇರುತ್ತಿದ್ದರು. ನೆನಪಾದಾಗಲೆಲ್ಲಾ ನಾವು ಈಶ್ವರ ಭಟ್ಟರ ಮನೆಯ ಕದತಟ್ಟಿ ಯಾವ ಮುಜುಗರವೂ ಇಲ್ಲದೆ ಉಂಡು ತಿಂದು ತೇಗಿ ಬರುತ್ತಿದ್ದೆವು. ಶ್ರೀಮತಿ ಈಶ್ವರ ಭಟ್ಟ (ವೆಂಕಟೇಶ್ವರಿ ಅಕ್ಕ) ಅವರು ಸದಾ ಹಸನ್ಮುಖದಿಂದ ಸ್ವಾಗತಿಸುತ್ತಿದ್ದರು.
ಉತ್ತರ ಭಾರತದವರ ಮನೆಯನ್ನು ಗುರುತಿಸುವುಸು ಬಹಳ ಸುಲಭವಾಗಿತ್ತು. ಮನೆ ಮುಂದೆ ಹುರಿ ಹಗ್ಗದಲ್ಲಿ ನೇಯ್ದು ಮಾಡಿದ ಮಂಚಗಳು ನಿಂತಿರುತ್ತಿದ್ದವು. ಯಾಕೆಂದರೆ ಸೆಖೆಗಾಲದಲ್ಲಿ ಮಂಚಗಳನ್ನು ಬಿಡಿಸಿ ಹೊರಗಡೆ ಮಲಗುವುದೇ ರೂಢಿಯಾಗಿತ್ತು. ಪ್ರತೀ ಮನೆಯಲ್ಲೂ ಟೇಬಲ್ ಫ್ಯಾನ್ ಇದ್ದೇ ಇರುತ್ತಿತ್ತು. A/C, ಕೂಲರ್ ಇತ್ಯಾದಿಗಳು ಬೆರಳೆಣಿಕೆ ಎಂಬಂತೆ ಅಲ್ಲೋ ಇಲ್ಲೋ ಒಂದು ಇರುತ್ತಿತ್ತು ಅಷ್ಟೆ. ಇಡೀ ಚಳಿಗಾಲದಲ್ಲಿ ಈ ಮಂಚಗಳು ಹೆಂಗಸರಿಗೆ ಬಿಸಿಲಲ್ಲಿ ಕೂತು ಸ್ವೆಟರ್ ಹೆಣೆದುಕೊಂಡು, ಜೊತೆಯಾಗಿ ಚಹಾ ಕುಡ್ಕೊಂಡು, ಹರಟೆ ಹೊಡೆಯುವ ತಾಣಗಳಾಗುತ್ತಿದ್ದವು. ಅಂತಹ ಮೋಜು ಅದಾಗಿತ್ತು!
ಅದೇ ದಕ್ಷಿಣ ಭಾರತದವರ ಮನೆಯಲ್ಲಿ ರುಬ್ಬುವ ಕಲ್ಲು! ಗ್ರೈಂಡರ್–ಮಿಕ್ಸರ್ ಅಷ್ಟೊಂದು ಬಳಕೆಗೆ ಬಂದಿರಲಿಲ್ಲ. ನಮ್ಮ ಮನೆಯಲ್ಲಿನ ಸಣ್ಣ ರುಬ್ಬುವ ಕಲ್ಲನ್ನು ನೋಡಿ ಅಲ್ಲಿಯ ಜನರು ” ದೊಡ್ಡ ಶಿವಲಿಂಗವನ್ನು ಯಾಕೆ ಮನೆಯಲ್ಲಿ ಇಟ್ಟುಕೊಂಡಿದ್ದೀರಿ?” ಎಂದು ನಕ್ಕಿದ್ದೂ ಉಂಟು!
ಶ್ರೀಮಂತ ಬಡವ ಎಂಬ ತಾರತಮ್ಯವಿಲ್ಲದೆ ಎಲ್ಲರೂ ರೇಷನ್ ಕಾರ್ಡ ಹೊಂದಿರುತ್ತಿದ್ದರು. ಪ್ರತೀ ತಿಂಗಳು ರೇಷನ್ ನಲ್ಲಿ ಸಿಗುವ ಅಕ್ಕಿ, ಗೋಧಿ, ಸಕ್ಕರೆ, ಸೀಮೆಎಣ್ಣೆ ಎಲ್ಲಾ ಶೇಖರಣೆ ಮಾಡಿ ಸಂಸಾರ ಸಾಗಿಸುವ ಜವಾಬ್ದಾರಿ ಹೆಚ್ಚಿನ ಮನೆಗಳಲ್ಲಿ ಹೆಂಗಸರದ್ದೇ ಆಗಿತ್ತು. ಸಿಗುವ ಸಾಮಾನುಗಳನ್ನು ಹೊತ್ತು ತರಲು ಅಕ್ಕಪಕ್ಕದವರೆಲ್ಲಾ ಜೊತೆಯಾಗಿ ಹೋಗುತ್ತಿದ್ದೆವು. ಹೊರಲು ಕಷ್ಟವಾದರೆ, ಒಂದು ದಿನ ಒಬ್ಬರ ಮನೆಯದ್ದು, ಮರುದಿನ ಇನ್ನೊಬ್ಬರ ಮನೆಯದ್ದು, ಈ ತರಹ ಸಹಬಾಳ್ವೆಯಿಂದ ಸರಳ ಜೀವನ ನಡೆಯುತ್ತಿತ್ತು. ಅಡುಗೆ ಅನಿಲ ಬಳಕೆಯಲ್ಲಿದ್ದರೂ ಸಿಲಿಂಡರು ಒಂದೊಂದೇ ಇರುತ್ತಿತ್ತು. ಅದಕ್ಕೂ ವಾರಗಟ್ಟಲೆ ಕಾಯಬೇಕಾಗಿತ್ತು. ಹಾಗಾಗಿ ಸೀಮೆಎಣ್ಣೆ ಸ್ಟೌ ಅಗತ್ಯವಾಗಿತ್ತು. ಯಾವುದೇ ಆಧುನಿಕತೆಯು ಅಷ್ಟೊಂದು ಇಲ್ಲದಿದ್ದುದರಿಂದ ಮನುಷ್ಯನ ಜೀವನ ಸರಳವಾಗಿತ್ತೇ ವಿನಹ ಯಾಂತ್ರಿಕವಾಗಿರಲಿಲ್ಲ. ಜೀವನ ಅಷ್ಟೊಂದು ಕಷ್ಟವೂ ಅನಿಸುತ್ತಿರಲಿಲ್ಲ.. ಕೈಗೆ ಬರುವ ತಿಂಗಳ ವರಮಾನದಲ್ಲಿ ಜೀವನ ಸಂತೋಷದಿಂದ ಸಾಗುತ್ತಿತ್ತು. ಮನೆ ಬಾಡಿಗೆಯೊಂದೇ ಸ್ವಲ್ಪ ಜಾಸ್ತಿ ಎಂದು ಅನಿಸಿದರೂ ನಮಗೆ, ದಕ್ಷಿಣ ಭಾರತೀಯರಿಗೆ, ಇತರರಿಗಿಂತ ಸ್ವಲ್ಪ ಕಡಿಮೆಗೆ ಸಿಗುತ್ತಿತ್ತು. ನಮ್ಮನ್ನೆಲ್ಲಾ “ಮದ್ರಾಸೀ” ಎಂದೇ ಕರೆದರೂ ತುಂಬಾ ಗೌರವ, ಮನ್ನಣೆ ಕೊಡುತ್ತಿದ್ದರು.
ಮುಂದುವರೆಯುವುದು…
ದಕ್ಷಿಣ ಭಾರತೀಯರ ತಾಣವಾಗಿದ್ದ ಕರೋಲ್ ಬಾಗ್ ನ ಅಜ್ಮಲ್ ಖಾನ್ ರೋಡ್ ನ ಫುಟ್ ಪಾತ್ ಮಾರ್ಕೆಟ್ ಬಗ್ಗೆ ಒಂದೆರಡು ವಾಕ್ಯಗಳನ್ನು ಬರೆಯದಿದ್ದಲ್ಲಿ ದೆಹಲಿಯಲ್ಲಿ ವಾಸವಾಗಿದ್ದದ್ದು ವ್ಯರ್ಥವೆಂದೇ ಹೇಳಬಹುದು. 1971 ರ ಪ್ರಮುಖವಾದ ಫುಟ್ ಪಾತ್ ಮಾರ್ಕೆಟ್, ವಾರದ ಏಳೂ ದಿನಗಳೂ ಸಂಜೆ 6 ಗಂಟೆಯಿಂದ ರಾತ್ರೆ 11 ಗಂಟೆಯವರೆಗೂ ತೆರೆದಿರುತ್ತಿತ್ತು. ಜನಸಂದಣಿಯಲ್ಲಿ ನಡೆಯುವುದೇ ಕಷ್ಟವಾಗುತ್ತಿತ್ತು. ಆದರೆ ಸಿಗದ ವಸ್ತುಗಳೇ ಇರುತ್ತಿರಲಿಲ್ಲ. ಬಹಳ ಅಗ್ಗಕ್ಕೆ ಸಿಗುತ್ತಿತ್ತೆಂದು 15 ರೂಪಾಯಿಗಳನ್ನು ಕೊಟ್ಟು ಒಂದು ಸೀರೆ ತೆಗೆದುಕೊಂಡಿದ್ದೆ.15 ದಿನಗಳೂ ಬಾಳಿಕೆ ಬಂದಿರಲಿಲ್ಲ! ಆದರೆ ಕೆಲವು ಸಾಮಾನುಗಳು ಬಾಳಿಕೆ ಬಂದದ್ದೂ ಉಂಟು. ಸೆಕೆಗಾಲದಲ್ಲಿ ರಾತ್ರೆ 8 ಗಂಟೆಯ ನಂತರ ಊಟ ಮಾಡಿ, ವಾಕ್ ಹೋಗಲು ಒಳ್ಳೆಯ ಜಾಗ. ಕೈಯಲ್ಲಿ ಐಸ್ ಕ್ರೀಮ್ ಹಿಡಿದು ತಿನ್ನುತ್ತಾ, ಪೆಟ್ರೊಮ್ಯಾಕ್ಸ ಕೆಳಗಡೆ ಕುಳಿತ ವ್ಯಾಪಾರಿಗಳ ಹತ್ತಿರ ಚರ್ಚೆ ಮಾಡುತ್ತಾ ವಸ್ತಗಳ ಖರೀದಿಯಲ್ಲೇ ಒಂದು ಮಜಾ ಇರುತ್ತಿತ್ತು. ಆಹಾ, ಮರೆಯಲಾಗದ ಸುಂದರ ಮಾರ್ಕೆಟ್!
ಹಾಗೆಂದು ನಮಗೆ ಬೇಕಾದ ತೆಂಗಿನಕಾಯಿ, ಕಾಫೀಪುಡಿ ಇತ್ಯಾದಿಗಳು ಸಿಗುತ್ತಿರಲಿಲ್ಲ. ಸಿಗುತ್ತಿದ್ದರೂ ತುಂಬಾ ದುಬಾರಿಯಾಗಿರುತ್ತಿತ್ತು. ಹಾಗಾಗಿ ಊರಿನಿಂದ ಬರುವಾಗಲೇ ಸಾಧ್ಯವಾದಷ್ಟು ಹೊತ್ತುತರುತ್ತಿದ್ದದ್ದು. ಅದೂ ಕಷ್ಟವಾಗುತ್ತಿತ್ತು, ಯಾಕೆಂದರೆ direct trainಗಳು ಇರಲಿಲ್ಲ. ಮದ್ರಾಸ್ ನಿಂದ ನವದೆಹಲಿಗೆ ಜಿ.ಟಿ.ಎಕ್ಸ್‌ಪ್ರೆಸ್ ಮತ್ತು ಹೈದರಾಬಾದ್ ನಿಂದ ನವದೆಹಲಿಗೆ ದಕ್ಷಿಣ ಎಕ್ಸ್‌ಪ್ರೆಸ್ ಮಾತ್ರ ಇದ್ದದ್ದು. ನಮ್ಮ ನಮ್ಮ ಊರಿಗೆ ಹೋಗಬೇಕಿದ್ದಲ್ಲಿ ಬೇರೆ connecting train ಅಥಬಾ ಬಸ್ಸನಲ್ಲಿ ಪ್ರಯಾಣ ಮಾಡಬೇಕಾಗುತ್ತಿತ್ತು.
ಟಿ.ವಿ. ಅವಿಷ್ಕಾರವಾಗಿದ್ದರೂ ಬಳಕೆಯಲ್ಲಿ ಇರಲಿಲ್ಲ. ಮನೋರಂಜನೆಗೆ ರೇಡಿಯೋ ಮಾತ್ರ ಇದ್ದದ್ದು. ರೇಡಿಯೋದ band width ಎಷ್ಟು ಬದಲಾಯಿಸಿದರೂ ದಕ್ಷಿಣ ಭಾರತದ ಯಾವ ಸ್ಟೇಷನ್ ಗಳು ಸಿಗುತ್ತಿರಲಿಲ್ಲ. ಪ್ರತೀ ಶನಿವಾರ ಮುಂಜಾನೆ 6 ಗಂಟೆಗೆ ಎಂ. ಎಸ್.ಸುಬ್ಬಲಕ್ಷ್ಮಿ ಯವರ ವೆಂಕಟೇಶ ಸುಪ್ರಭಾತ ಮಾತ್ರ ಆಕಾಶವಾಣಿಯಲ್ಲಿ ಕೇಳಬಹುದಾಗಿತ್ತು ಅಷ್ಟೆ. ಇಷ್ಟೆಲ್ಲಾ ತೊಂದರೆಗಳು ಇದ್ದರೂ ಸ್ವಲ್ಪವೂ ಬೇಸರವಿರುತ್ತಿರಲಿಲ್ಲ. ಯಾಕೆಂದರೆ ಸಹಬಾಳ್ವೆ, ಪರಸ್ಪರ ಒಡನಾಟ ತುಂಬಾ ಚೆನ್ನಾಗಿತ್ತು. ಭಾನುವಾರ ಬಂತೆಂದರೆ ಒಬ್ಬರು ಇನ್ನೊಬ್ಬರ ಮನೆಗೆ ಭೇಟಿಕೊಟ್ಟು, ಸುಖ ದು:ಖ ಹಂಚಿಕೊಂಡು ಹರಟೆ ಹೊಡೆದುಬರುವುದರಲ್ಲೇ ತೃಪ್ತಿ ಕಂಡಿದ್ದೆವು.
1971- ಇಂಡೋ-ಪಾಕಿಸ್ತಾನ್ ಸಮರ (ಡಿಸೆಂಬರ್ 3-16)
2020 ಹಾಗು 2021ರಲ್ಲಿ ಲಾಕ್ ಡೌನ್ ಘೋಷಣೆಯಾದ ತಕ್ಷಣ ನನ್ನ ಮನಸ್ಸು ಐವತ್ತು ವರ್ಷ ಹಿಂದಕ್ಕೆ ಹೋಯಿತು – 1971ರ ಇಂಡೋ – ಪಾಕಿಸ್ತಾನ್ ಯುದ್ಧ.
ನಾವು ಕರೋಲ್ ಬಾಗ್ ಬಿಟ್ಟು ನರೈನವಿಹಾರಕ್ಕೆ ಮನೆ ಬದಲಿಸಿ ಎರಡು ತಿಂಗಳಾಗಿತ್ತು. ಚಳಿಗಾಲವೂ ಪ್ರಾರಂಭವಾಗಿತ್ತು. ನರೈನದಲ್ಲಿ ಯಾವ ಅಂಗಡಿಗಳೂ ಇಲ್ಲದಿದ್ದರಿಂದ ಪ್ರತಿಯೊಂದು ಸಾಮಾನುಗಳನ್ನು ಕರೋಲ್ ಬಾಗ್ ನಿಂದಲೇ ತರುತ್ತಿದ್ದೆವು. ಎಂದಿನಂತೆ, ದಶಂಬರ 3 1971ರಂದು ನಾವು ಸಂಜೆ 6 ಗಂಟೆಹೆ ಕರೋಲ್ ಬಾಗ್ ತಲುಪಿ ಸಾಮಾನು ಖರೀದಿಸುತ್ತಿದ್ದಾಗ ಅಲ್ಲಿಯ ಅಂಗಡಿಯ ಲಾಲಾಜಿಯವರು ನಮ್ಮ ಯಾಜಮಾನರನ್ನು ಹತ್ತಿರ ಕರೆದು ” ಯುದ್ಧ ಪ್ರಾರಂಭವಾಗುವ ವದಂತಿ ಇದೆ. ಸ್ವಲ್ಪ ಜಾಸ್ತಿ ಸಾಮಾನು ತೆಗೆದುಕೊಂಡು ಬೇಗ ಮನೆ ಸೇರಿ” ಎಂದಿದ್ದರಂತೆ. ಅಂತೆಯೇ ನಾವು ಸಾಮಾನು ತೆಗೆದುಕೊಂಡು ಹೊರಟು ಪೂಸಾ ರೋಡ್ ಬಿಟ್ಟು ಪೂಸಾ ಇನ್‌ಸ್ಟಿಟ್ಯೂಟ್ ಒಳಗಡೆ ನುಗ್ಗಿದ ತಕ್ಷಣವೇ ಲೈಟ್ ಗಳೆಲ್ಲಾ ಆಫ್ ಆಗಿ, ಜೋರಾಗಿ ಉದ್ದನೆ ಸೈರನ್ ಮೊಳಗಿತು. ಲಾಲಾಜಿಯ ಮಾತು ನೆನಪಾಯಿತು. ಗಾಬರಿಗೊಂಡೆವು. ಆ ರಸ್ತೆಯಲ್ಲಿ ಮೊದಲೇ ಬೀದಿ ದೀಪಗಳು ಎಲ್ಲೂ ಇರಲಿಲ್ಲ. ಅಷ್ಟೊಂದು ಮನೆಗಳೂ ಇರಲಿಲ್ಲ. ಕಾಡು ಮರಗಳೇ ಜಾಸ್ತಿ ಇದ್ದಿದ್ದು. Black-out ಎಂದು ಮನದಟ್ಟಾಯಿತು.
ಅಂತೂ ನಿಧಾನವಾಗಿ ಮನೆ ಸೇರಿ ರಾಜದೂತ್ ಮೋಟರ್ ಬೈಕ್ ನ ಹೆಡ್ ಲೈಟ್ ಆನ್ ಮಾಡಿ ಮನೆ ಬೀಗ ತೆಗೆಯುವಷ್ಟರಲ್ಲಿ ಇಬ್ಬರು ಪೊಲೀಸ್ ನವರು ಬಂದು ಜೋರು ಮಾಡಿ ” ವಾರ್ ಶುರು ಹೋಗಯಾ , ಸಾರೆ ಲೈಟ್ ಆಫ್ ಕರ್ ದೋ” ಎಂದರು. ಒಳಗೆ ಹೋಗಿ ಮೇಣದ ಬತ್ತಿಯನ್ನು ಹಚ್ಚಬೇಡಿ, ಹೊರಗಡೆಗೆ ಬೆಳಕು ಬರಬಾರದು, ಜನರ ವಾಸವಿದೆ ಎಂದು ಶತ್ರುಗಳಿಗೆ ತಿಳಿಯಬಾರದು ಹಾಗು ಮನೆಯ ಕಿಟಕಿಯ ಗಾಜುಗಳನ್ನು ಕಪ್ಪು ಬಟ್ಟೆಯಿಂದ ಮುಚ್ಚ ಬೇಕೆಂದು ವಾರ್ನಿಂಗ್ ಕೊಟ್ಟು ಹೋದರು. ಮನೆಯ ಒಳಗೆ ಹೋಗಿ ರೇಡಿಯೋದಲ್ಲಿ ವಾರ್ತೆ ಕೇಳಿದಾಗ ಎಲ್ಲಾ ವಿಷಯಗಳೂ ತಿಳಿದು ಬಂದವು. 2021 ರ ಲಾಕ್ ಡೌನ್ ನಂತೆ ಆಗ ಬರೀ ನೈಟ್ ಕಫ್ಯೂ ೯ ಮಾತ್ರ ಜಾರಿಯಲ್ಲಿತ್ತು. ಹಗಲು ಅಷ್ಟೇನು ತೋಂದರೆಯಿರಲಿಲ್ಲ. ಪ್ರತಿಯೊಬ್ಬರೂ ಸಂಜೆ 6 ಗಂಟೆಯ ಒಳಗೆ ಮನೆ ಸೇರಬೇಕೆಂಬ ಕಟ್ಟಾಜ್ಞೆ ಇತ್ತು.
3 ನೇ ತಾರೀಕು ಶುರುವಾದ ಯುದ್ಧ 16 ನೇ ತಾರೀಕು ಕೊನೆಗೊಂಡಿತು. ಜೀವನ ಏರುಪೇರಾಗಿ ಹೋಗಿತ್ತು. 1971 ಮುಗಿದೇ ಹೋಯಿತು. ಅಸ್ತವ್ಯಸ್ತವಾದ ಜೀವನ ಪುನ: ಸಮತೋಲನಕ್ಕೆ ಬರಲು, ವ್ಯಾಪಾರ ವಹಿವಾಟುಗಳೆಲ್ಲಾ ಸರಿಯಾಗಲು ಮಾಚ್೯ 1972 ಬರಬೇಕಾಯಿತು.
ಮುಂದುವರಿಯುವುದು…