ಲಕ್ಷ್ಮಿ ನಾರಾಯಣ ಸಣ್ಣ ಭಟ್ - ನೆನಪಿನ ಸುರಿಮಳೆಯಿಂದ...

ಅದು 1960ರ ದಿನಗಳು. ನೆನಪಿಸಿಕೊಳ್ಳುತ್ತಿದ್ದೇನೆ. ನಾನು ಒಂಟಿಯಾಗಿ ಕಲಕತ್ತೆ ತಲುಪಿ ಸೀದಾ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ತಲುಪಿದ್ದೆ. ಹೌರಾ ರೇಲ್ವೆ ಸ್ಟೇಶನ್ ದಿಂದ ಸುಮಾರು 12 ಕಿಲೊಮೀಟರ್ ದೂರದಲ್ಲಿ. ಯಾರದ್ದೂ ಪರಿಚಯವಿರಲಿಲ್ಲ-ಕೈಯಲ್ಲಿ ಬರೇ ಒಂದು ಬೀ ಸ್ಟಾಟ್ದ ಪ್ರವೇಶ ಪತ್ರವಿತ್ತು. ಆದರೆ ಕೇಳಿದ್ದೆ ಒಬ್ಬರ ಹೆಸರನ್ನು ಡಾ. ಎಲ್. ಎಸ್. ಭಟ್ ಎಂಬುವವರು ಅದೇ ಸಂಸ್ಥೆಯಲ್ಲಿ ಭೂಗೋಲ ಶಾಸ್ತ್ರದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ ಎಂದು. ಗೊತ್ತಿತ್ತು ಅವರು ಮೂಲತಃ ಕುಮಟಾ ತಾಲೂಕಿನ ಹೊಲನಗದ್ದೆಯವರೆಂದು. ಹುಡುಕಿಕೊಂಡು ಹೋದೆ ಅವರ ಆಫೀಸಿಗೆ. ನನ್ನ ಹೆಸರನ್ನು ಕೇಳಿದ ಕೂಡಲೇ ಅವರಿಗೆ ಕಣ್ಣೀರು ಬಂದುಬಿಡ್ತು ಯಾಕೆಂದರೆ, ನನ್ನ ಅಜ್ಜಿಯ ಮನೆ ಹೊಲನಗದ್ದೆ. ನನ್ನ ಅಜ್ಜ ಹಾಗೂ ಅವರ ತಂದೆ ಸಣ್ಣ ಭಟ್ಟರು ತುಂಬಾ ಹಳೆಯ ಗೆಳೆಯರು ಕುಮಟಾದಲ್ಲಿ. ಅದೇ ನಮ್ಮಿಬ್ಬರ ಮೊದಲನೇ ದಿನದ ಭೇಟಿಯ ನೆನಪು. ನನಗೆ ಇಂದಿಗೂ ನನ್ನ ಕಣ್ಣ ಮುಂದೆ ಬರುತ್ತಿದೆ. ನಂತರ ಸುಮಾರು ನಾಲ್ಕು ವರ್ಷಗಳ ವರೆಗೂ ನಾನು ಅವರ ನಿತ್ಯ ಸಂಪರ್ಕದಲ್ಲಿ ಇದ್ದೆ. ಅವರು ಕಲಕತ್ತೆ ಬಿಟ್ಟು ದಿಲ್ಲಿಗೆ ಹೋಗುವವರೆಗೂ ಬಹುಶಃ ಸನ್ 1964ರಲ್ಲಿರಬೇಕು.

ಡಾ. ಭಟ್ ರು ಐ ಎಸ್ ಐ ದಿಂದಲೇ ರೀಜನಲ್ ಪ್ಲ್ಯಾನಿಂಗ್ ಎಂಬ ಹೊಸ ಭೂಗೋಳ ಶಾಸ್ತ್ರದಲ್ಲಿನ ವಿಷಯದ ಮೇಲೆ ತಮ್ಮ ಪ್ರಬಂಧವನ್ನು ಬರೆದು 1965 ರಲ್ಲಿ ಪಿ ಎಚ್ ಡಿ ಪದವಿಯನ್ನು ಪಡೆದರು.

 

ಅವರ ಜನ್ಮ ಸನ್ 1931ರಲ್ಲಿ ಹೊಲನಗದ್ದೆಯಲ್ಲಿ. ಹೈಸ್ಕೂಲ್ ಕಲಿತಿದ್ದು ಕುಮಟಾದ ಗಿಬ್ ಹೈಸ್ಕೂಲಿನಲ್ಲಿ. ನಂತರ ಧಾರವಾಡದ ಸುಪ್ರಸಿದ್ಧ ಕರ್ನಾಟಕ ಕಾಲೇಜಿನಲ್ಲಿ ಬಿ.ಎ ಕಲಿತು, ಆಗಿನ ಬೊಂಬೇ ವಿಶ್ವ ವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಉಚ್ಚ ಶ್ರೇಣಿಯಲ್ಲಿ ಎಮ್. ಎ ಪಾಸಾದರು. ಅವರು ತನ್ನ ಜೀವನದ ಕೊನೆಯವರೆಗೂ ಅತ್ಯಂತ ಹೆಮ್ಮೆಯಿಂದ ನೆನಪಿಸಿಕೊಂಡ ಗುರುಗಳೆಂದರೆ ಪ್ರೊಫೆಸರ್ ಸಿ.ಡಿ. ದೇಶಪಾಂಡೆ. ಪ್ರೊ. ದೇಶಪಾಂಡೆಯವರು ಅವರಿಗೆ ಭೌಗೋಲಿಕ ಶಾಸ್ತ್ರವನ್ನು ಕಲಿಸಿದ ಗುರು.

ಕಲಕತ್ತೆಯಲ್ಲಿ ಇದ್ದಾಗ ಅವರು ಆಸ್ಟ್ರೇಲಿಯಾದ ಪ್ರೊಫೆಸರ್ ಲಿಯರ್ ಮೌಥ್ ರ ಸಂಗಡ ಭೂಗೋಲ ಮತ್ತು ನೆಲ-ನೀರು-ಮಣ್ಣು ಹಾಗೂ ವಾತಾವರಣಕ್ಕೆ ಸಂಬಂಧಿಸಿದ ಅಭಿವೃದ್ಧಿಯ ವಿಚಾರಗಳ ಸಂಶೋಧನೆಗಳಲ್ಲಿ ತೊಡಗಿ ಮೈಸೂರು ಅಟ್ಲಾಸ್ ಎಂಬ ಒಂದು ಗ್ರಂಥವನ್ನು ಬರೆದರು. ಬಹುಶಃ ಸನ್ 1967ರಲ್ಲಿ. ಅದು ಇಂದಿಗೂ ಭೂಗೋಲ ಶಾಸ್ತ್ರದಲ್ಲಿ ಒಂದು ಧರ್ಮ ಗ್ರಂಥದಂತಿದೆ. ದಿಲ್ಲಿಗೆ 1965ರ ಆಸುಪಾಸಿಗೆ ಬಂದು ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ದಲ್ಲಿ ಸೇರಿ ಸುಮಾರು 35 ವರ್ಷಗಳವರೆಗೆ ಸೇವೆ ಸಲ್ಲಿಸಿದ್ದಾರೆ. ಅವರ ವಿದ್ವತ್ತನ್ನು ಗಮನಿಸಿ ಅಂದಿನ ಡೈರೆಕ್ಟರ್ ಪ್ರೊಫೆಸರ್ ಸಿ. ಆರ್. ರಾವ್ ಅವರು ಅವರನ್ನು ಪ್ರೊಫೆಸರ್ ಎಂದು ನೇಮನೂಕಿ ಮಾಡಿದ್ದರು.

ಡಾ. ಎಲ್‌.ಎಸ್‌.ಭಟ್ಟರು ಐ. ಎಸ್‌.ಐದಲ್ಲಿ ಪದವಿ ಪಡೆಯಲು ಮೊದಲನೇ ಸಾಲಿನಲ್ಲಿ ಕುಳಿತಿದ್ದು - 1965
ತಮ್ಮ ಅತಿ ಗೌರವಾನ್ವಿತ ಗುರು ಸಿ ಡಿ ದೇಶಪಾಂಡೆಯವರೊಂದಿಗೆ

ಅದೇ ಸಮಯದಲ್ಲಿ ಡಾ. ಭಟ್ ಅವರು ಡಾ. ವಿ. ಎಲ್. ಎಸ್. ಪ್ರಕಾಶ್ ರಾವ್ ಎಂಬ ಸುಪ್ರಸಿದ್ಧ ರೀಜನಲ್ ಪ್ಲಾನರ್ ರ ಸಂಪರ್ಕದಲ್ಲಿ ಬಂದು, ಅವರ ಸಂಗಡ ನಮ್ಮ ದೇಶದ ಸಾಮಾಜಿಕ ಅಭಿವೃದ್ಧಿಯ ಬಗ್ಗೆ ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ. ಪಾಂಡಿತ್ಯ ಮತ್ತು ಶೈಕ್ಷಣಿಕ ದೃಷ್ಟಿಯಿಂದ ವಿಚಾರ ಮಾಡಿದರೆ, ಭಟ್ ರ ಒಂದು ವೈಶಿಷ್ಟ್ಯವೆಂದರೆ ಸುಮಾರು 5 ತಲೆಮಾರಿನಷ್ಟು ಜನರ ಸಂಪರ್ಕ ಸಹಯೋಗಗಳನ್ನು ಕಾದಿರಿಸಿಕೊಂಡು ಸಂಶೋಧನೆಗಳನ್ನು ಮುಂದುವರಿಸಿದ್ದು 20ನೇ ಶತಮಾನದ ಪದ್ಧತಿಯಂತೆ ಕಾರ್ಟೋಗ್ರಾಫಿ಼ಯನ್ನು ಉಳಿಸಿಕೊಂಡು, ಇಂದಿನ ದಿನಮಾನಗಳಂತೆ ಜಿ. ಐ. ಎಸ್ ದಿಂದ ಬಂದ ಮಾಹಿತಿಗಳನ್ನು ಉಪಯೋಗಿಸಿ, ಸರಕಾರಕ್ಕೆ, ಅಭ್ಯುದಯದಲ್ಲಿ ತೊಡಗಿದ ಅಂತರ್ ರಾಷ್ಟ್ರೀಯ ಸಂಸ್ಥೆಗಳಿಗೆ, ಹಾಗೂ ಪರಿಸರ ಮಂತ್ರಾಲಯಗಳಿಗೆ ಸಲಹೆಕಾರರಾಗಿ 20 ವರ್ಷ ಸೇವೆ ಸಲ್ಲಿಸಿದ್ದಾರೆ.

ದಿಲ್ಲಿಯಲ್ಲಿ ಸುಮಾರು 50 ವರ್ಷಗಳವರೆಗೆ ನಿವಾಸಿಯಾಗಿ, ಒಬ್ಬ ಹೆಮ್ಮೆಯ ಕನ್ನಡಿಗನಾಗಿ, ಹವ್ಯಕ ಬಾಂಧವರ ಪ್ರೇಮಿಗಳಾಗಿ, ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ದಲ್ಲಿ ಪ್ರೊಫೆಸರ್ ಆಗಿ ಒಂದು ಆದರ್ಶಮಯ ಜೀವನವನ್ನು ಕಳೆದ ವ್ಯಕ್ತಿ ಡಾ. ಎಲ್. ಎಸ್ ಭಟ್ಟರು. ನನ್ನ ಸ್ವಂತ ವೃತ್ತಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕನಾಗಿ ನಾನು ಸುಮಾರು 50 ವರ್ಷ ಕಳೆದಿದ್ದು. ಅನೇಕಾನೇಕ ಸುಸಂಧಿಗಳಲ್ಲಿ ಡಾ. ಭಟ್ ರ ಸಲಹೆ, ಸೂಚನೆ, ವಿಚಾರಗಳನ್ನು ಅವಲಂಬಿಸಿ ನನ್ನ ಸಂಶೋಧನೆಗಳನ್ನು ಮುಂದುವರಿಸಿದ್ದೇನೆ.

ಡಾ. ಭಟ್ ರ ಸಾಮಾಜಿಕ ಬೆಳವಣಿಗೆಯ ಬಗ್ಗೆ ಇದ್ದ ಕಳಕಳಿಯ ಬಗ್ಗೆ ಬರೆಯಲೇ ಬೇಕು. ಅವರು ದಿಲ್ಲಿಯಲ್ಲಿರುವ ‘ಸ್ಟಾಟಿಸ್ಟಿಕ್ ಸೊಸೈಟಿ ಆಫ್ ನೊರ್ಥೆರ್ನ್ ಇಂಡಿಯ’ದ ಸಂಗಡ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಅಂಗವಿಕಲರ ಹಿತಕ್ಕೆಂದು ಹಣ ಒಟ್ಟು ಮಾಡುವುದು. ಅಂಥ ಮಕ್ಕಳಿಗಾಗಿ ಭವಿಷ್ಯಕ್ಕೆಂದು ದ್ವಾರ್ಕಾದಲ್ಲಿ ಒಂದು ವಾಸ್ತವ್ಯದ ಕಟ್ಟಡವನ್ನು ನಿರ್ಮಿಸುವುದು, ಅವರ ಶಿಕ್ಷಣದ ವ್ಯವಸ್ಥೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಸುವುದು, ಹೀಗೇ ಅನೇಕ  ಹಿತಕರ ಕಾರ್ಯಗಳಲ್ಲಿ ಸದಾ ನಿರತರಾಗಿರುತ್ತಿದ್ದರು.

ಗೋಕರ್ಣ ಮಂಡಳದ ಸಂಸ್ಥಾಪನೆಯಲ್ಲಿ ಡಾ. ಭಟ್ರ ಕೈ ಅತಿ ಮುಖ್ಯವಾಗಿತ್ತು. ಸನ್ 1981-82 ರಲ್ಲಿ ಈ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ಹವ್ಯಕ ಸಂಘಗಳಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸುವುದರಲ್ಲಿ ಸದಾ ತೊಡಗಿರುತ್ತಿದ್ದರು.

ಪ್ರೊಫೆಸರ್ ಸಿ ಆರ್ ರಾವ್ ಮತ್ತು ಪ್ರೊಫೆಸರ್ ಲಿಯರ್ ಮೌಥರ ಸಂಗಡ ಬಹುಶಃ ಸನ್ 1966 ರಲ್ಲಿರಬೇಕು.
ಡಾ. ಎಲ್ ಎಸ್ ಭಟ್, ಗೋಪಾಲ್ ಕಡೆಕೋಡಿ ಮತ್ತು ಉಮಾ

ಡಾ. ಭಟ್ಟರ ಮನೆ ಅಂದಿನ ಈಸ್ಟ್ ಆಫ಼್ ಕೈಲಾಸದಲ್ಲಿತ್ತು. ಒಂದು ಡಿ.ಡಿ.ಎ ಮಹಡಿ ಮನೆಯಲ್ಲಿದ್ದರು. ಅವರ ಮಡದಿ ಉಮಾ ಅಂದರೆ, ಊರಿನವರಿಗೆಲ್ಲ ತಾಯಿಯಂತೆ. ಮನೆಗೆ ಬಂದವರಿಗೆಲ್ಲ ಅತಿಥಿ ಸತ್ಕಾರವೇ ಸತ್ಕಾರ- ಊಟೋಪಚಾರ, ತಿಂಡಿ ತೀರ್ಥಗಳ ಸುರಿಮಳೆ. ದಿಲ್ಲಿಯ ಅನೇಕಾನೇಕ ಹವ್ಯಕ ಬಾಂಧವರು ಅವರ ಸಂಪರ್ಕದಿಂದ ತಮ್ಮ ತಮ್ಮ ಊರಿನ ಸವಿ ನೆನಪುಗಳನ್ನು ಮೆಲಕಾಡಿಸುತ್ತ, ಅವರ ಮನೆಯಲ್ಲಿ ದಿನಗಟ್ಟಲೇ ಕಳೆದಿದ್ದಾರೆ.

ನನಗಿನ್ನೂ ನೆನಪಿದೆ, ಹೇಗೆ 1965 ರಲ್ಲಿ ನನ್ನನ್ನು ದಿಲ್ಲಿಗೆ ಮೊದಲನೆ ಸಲ ಕಲಕತ್ತೆಯಿಂದ ಬರಮಾಡಿಕೊಳ್ಳಲು ಹಳೇದಿಲ್ಲಿ ನಿಲ್ದಾಣಕ್ಕೆ ರಾತ್ರಿ 11 ಘಂಟೆಗೆ ಬಂದಿದ್ದರೋ, ಹಾಗೇ ನಾವು ದಿಲ್ಲಿ ಬಿಟ್ಟು 1998 ರಲ್ಲಿ ಧಾರವಾಡಕ್ಕೆ ಉಗಿಬಂಡಿಯಲ್ಲಿ ಹೊರಟಾಗ ಅವರು ನಿಝಾಮುದ್ದೀನ್ ನಿಲ್ದಾಣಕ್ಕೆ ಬಂದು ನಮ್ಮೆಲ್ಲರನ್ನು ಬೀಳ್ಕೊಟ್ಟಿದ್ದರು. ಅವರೆಡೂ ಸಂದರ್ಭಗಳನ್ನು ನೆನೆಸಿದರೆ, ನನಗೆ ಇಂದಿಗೂ ಕಣ್ಣೀರು ಬರುತ್ತದೆ.

 

ಅತಿ ನಿಕಟ ಬಂಧುಗಳಿಗೆ ಡಾ. ಭಟ್ ರು ‘ಕಾಕಾ’ ಎಂದೇ ಪ್ರಚಲಿತರಾಗಿದ್ದರು. ದುರ್ದೈವದಿಂದ ಕಾಕಾ ನಮ್ಮನ್ನು ಅಗಲಿ 2013ರಲ್ಲಿ ಸ್ವರ್ಗವಾಸಿಯಾದರು. ಅವರ ಹಿರಿಯ ಮಗ ಅನಿಲ್  ಒಬ್ಬ ಹೆಸರಾದ ಹೃದಯ ಶಸ್ತ್ರಚಿಕಿತ್ಸಾ ವೈದ್ಯ. ಹೆಂಡತಿ ಸುಜಾತಾ ಒಬ್ಬ ಮಹಿಳಾ ಪ್ರಸೂತಿಯ ವೈದ್ಯಳು. ಮಗಳು ಅನಿತಾ ಜಿ.ಇ ಕ್ಯಾಪಿಟಲ್ ಅಂತ ಒಂದು ಜಗತ್ಪ್ರಸಿದ್ಧ ಕಂಪನಿಯಲ್ಲಿ ಸಹ ಅಧ್ಯಕ್ಷಳು. ನಾನು ದಿಲ್ಲಿಗೆ ಹೋದಾಗ, ಸಮಯ ಸಿಕ್ಕಾಗೆಲ್ಲಾ ಅವರ ಮನೆಗೆ ಹೋಗಿ ಉಮಾಳನ್ನು ಮಾತನಾಡಿಸಿಕೊಂಡು ಬರುತ್ತೇನೆ. ಅಲ್ಲದೇ ಅವರೊಟ್ಟಿಗೆ ಕಳೆದ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ಅನಿತಾ ಅವಳದೇ ಮಾತಿನಲ್ಲಿ ಹೇಳಿದ ಮಾತು ಇದು, ‘ಗೊಪಾಲ್ ಚಿಕ್ಕಪ್ಪಾ, ನಿಮ್ಮಲ್ಲಿ ಕಾಕಾರವರನ್ನು ಜೀವಂತ ಕಾಣುತ್ತಿದ್ದೇವೆ’, ಎಂದು. ಎಷ್ಟೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೂ ನಾನು ದಿಲ್ಲಿಯಲ್ಲಿ ಎಲ್ಲಿ ಉಳಿದುಕೊಂಡಿದ್ದರೂ ಸ್ವತಃ ಕಾರು ಬಿಟ್ಟುಕೊಂಡು ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾಳೆ, ವಿಮಾನ ನಿಲ್ದಾಣಕ್ಕೆ ಬಿಟ್ಟು ಕೊಡುತ್ತಾಳೆ. ಅದೆಂಥ ಉದಾರತ್ವ ಆ ಮಗಳದ್ದು!

ಗೋಕರ್ಣ ಮಂಡಲ ಡಾ. ಎಲ್. ಎಸ್‌. ಭಟ್ ರಿಗೆ ಸದಾಚಿರ ಋಣಿಯಾಗಿರಲೇ ಬೇಕು. ಅವರು ಸಲ್ಲಿಸಿದ ಅಮೋಘ ಸೇವೆ, ದಾನ, ಧರ್ಮಗಳನ್ನು ನೆನಪಿಸುತ್ತಾ, ಅವರ ಆತ್ಮಕ್ಕೆ ಭಗವಂತನು ಸದಾ ಚಿರಶಾಂತಿಯನ್ನು ನೀಡಲೆಂದು ಪ್ರಾರ್ಥಿಸಿ ನನ್ನ ಈ ಚಿಕ್ಕ ಲೇಖನಕ್ಕೆ ಪೂರ್ಣ ವಿರಾಮವಿಡುತ್ತೇನೆ.

ಡಾ. ಗೋಪಾಲ ಕೃಷ್ಣ ಕಡೇಕೋಡಿ

5 thoughts on “LSBhat”

  1. ತುಂಬ ಚೆನ್ನಾಗಿ ಬರೆದಿದ್ದೀರಿ. . ನಿಮ್ಮ ಲೇಖನ ನನ್ನ ದಿಲ್ಲಿಯ ಹಳೆಯ ಜೀವನದ ಚಿತ್ರಗಳನ್ನು ಮನದಲ್ಲಿ ಮೂಡಿಸಿದುವು
    ಎಲ್ ಎಸ್ ಭಟ್ಟರ ಶ್ರೀಮತಿಯವರಾದ ಉಮಾ ಅವರಂತೆ ಯೇ ನಮಗೆ ನಿಮ್ಮ ಮನೆಯಲ್ಲಿ ಸವಿತಕ್ಕ ಅವರ ಅತಿಧ್ಯ ಸದಾ ಸಿಗುತ್ತಿತ್ತು. ಅಂದಿನ ಜೀವನದ ಆನೆನಪುಗಳು ಅತ್ಯಂತ ಮಧುರ
    ನಮಸ್ಕಾರ
    ಸತ್ಸನಾಭ

  2. ಡಾ. ಎಲ್‌. ಎಸ್‌ ಭಟ್ಟರನ್ನು ಸ್ಮರಿಸಿಕೊಳ್ಳುವುದೆಂದರೆ ಗೋಕರ್ಣ ಮಂಡಲಕ್ಕೆ ಶಾಲು ಹೊದೆಸಿ ಸನ್ಮಾನಿಸಿದಂತೆ. ಅತಿ ವಿದ್ವಾಂಸರಿಗೆ ಸಾಮಾನ್ಯವಾಗಿ ಅಹಂ ಎಂಬುದು ಬಳುವಳಿಯಾಗಿ ಬಂದಿರುತ್ತದೆ. ಆದರೆ ತನ್ನೊಳಗೆ ವಿದ್ವತ್ ಇದ್ದರೂ ಅದನ್ನು ಸಹಜವೆಂಬಂತೆ ತನ್ನಲ್ಲೇ ಇಟ್ಟುಕೊಂಡು ಎಲ್ಲರೊಂದಿಗೆ ಸಹಜವಾಗಿ ಇದ್ದ ಎಲ್‌.ಎಸ್‌ ಭಟ್ಟರೊಂದಿಗೆ ಕೆಲವು ವರ್ಷವಾದರೂ ಒಡನಾಡುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆಯಿದೆ. ಒಬ್ಬ ಸಜ್ಜನನ ಪರಿಪೂರ್ಣತೆ ಹೇಗಿರುತ್ತದೆ ಎಂಬುದಕ್ಕೆ ಎಲ್‌ ಎಸ್‌ ಭಟ್ಟರು ಉದಾಹರಣೆಯಾಗಿದ್ದರು. ಅವರ ಕುರಿತು ಬರೆದು ನಮಗೆ ತಿಳಿಯದ ವಿಷಯಗಳನ್ನು ಹಂಚಿಕೊಂಡ ಕಡೇಕೋಡಿಯವರಿಗೆ ಅನಂತಾನಂತ ಧನ್ಯವಾದಗಳು.

  3. We have experienced the magnanimity, love and affection of Dr L S Bhat for about 2 decades during our stay at Delhi. But the way Dr Gopalakrishna Kadekodi has lived glorious years in Kolkatta and Delhi, and narrated the story by heart is simply marvelous. Gokarna Mandala should remember the contribution of such giants before they worship God (Sandhyavandana). I am sure this article will capture the attention of the Havyaka community in India and abroad.

  4. ನಾನು ಎಲ್. ಎಸ್. ಭಟ್ ಅವರ ಬಗ್ಗೆ ಕೇಳಿದ್ದೆ, ಇಷ್ಟೊಂದು ವಿವರವಾಗಿ ತಿಳಿದಿರಲಿಲ್ಲ. ಸಮಾಜಕ್ಕೆ ಹಾಗೂ ಪ್ರತಿಭಾವಂತರಿಗೆ ದಾರಿದೀಪ ವಾಗಿದ್ದ ಅವರು ಐವತ್ತು ವರ್ಷಗಳ ಹಿಂದೆ ಗುರುತಿಸಲ್ಪಟಿದ್ದರು ಎಂಬದು ಹೆಮ್ಮೆಯ ವಿಷಯ. ಅವರ ಬದುಕು ಇತರರಿಗೆ ಸ್ಪೂರ್ತಿ ತರಲಿ.

Leave a Reply

Your email address will not be published. Required fields are marked *