ಯಮ್ಮನೆ ತಂಗಿ ಮದ್ವೆ

ಮೊನ್ನೆ ಅಷ್ಟೇ ಯಮ್ಮನೆ ತಂಗಿ ಮದ್ವೆ ಆತು. ಇವತ್ತು ಹಿಂಗೆ ಜಗ್ಲಿ ಮೇಲೆ ಕುತ್ಗಂಡು ಯೋಚ್ನೆ ಮಾಡ್ತಾ ಇದ್ದಿದ್ದಿ. ಮೊನ್ನೆ ಮೊನ್ನೆ ಹುಟ್ದಂಗೆ ಕಾಣ್ತಿತ್ತು, ಎಷ್ಟ್ ಬೇಗ ಮದ್ವೆ ಆಗಿ ಗಂಡನ ಮನೆಗೆ ನೆಡತ್ತು. ಈಗಂತೂ ಮನೆ ಎಲ್ಲಾ ಬಣ ಬಣ ಹೇಳ್ತಾ ಇದ್ದು. ತಂಗಿದು ತುಂಬಾ ನೆನಪು ಅಗ್ತಾ ಇದ್ದು. ಕಣ್ಣಿಂದ ನಾಕು ಹನಿ ಕೂಡ ಉದುರಿದ್ದೂ ಗೊತ್ತಾಜಿಲ್ಲೆ. ಕಡಿಗೆ ಆನೇ ಸಮಾಧಾನ ಮಾಕ್ಯಂಡಿ. ಹುಟ್ಟಿದ ಹೆಣ್ಣು ಕುಲದ ಹೊರಕ್ಕೆ ಅಲ್ದ. ಆನೂ ಯನ್ನ ಅಮ್ಮ ಅಪ್ಪನ ಬಿಟ್ಟು ಗಂಡನ ಮನಿಗೆ ಬಂಜನಿಲ್ಯ. ಹಾಂಗೆಯಾ ಯಮ್ಮನೆ ತಂಗಿನೂ ಯಂಗ್ಳ ಬಿಟ್ಟಿಕ್ಕೆ ಗಂಡನ ಮನಿಗೆ ಹೋತು ಹೇಳಿ. ಇದ್ದಿದ್ರಲ್ಲಿ ಮದ್ವೆ ಕಾರ್ಯಕ್ರಮ ಎಲ್ಲಾ ದೇವರ ದಯೆಯಿಂದ  ಚೊಲೋ ಆತು. ಎಲ್ಲೂ ತೊಂದ್ರೆ ಆಜಿಲ್ಲೆ. ಎಲ್  ಸುಟ್ ಮಳೆ ತ್ರಾಸ್ ಕೊಟ್ಬುಡ್ತನ ಹೇಳಿ ಮಾಡ್ಕ್ಯಂಡಿದ್ದಿ. ಹಾಂಗೆಳಿ ಮದ್ವೆ ಹಿಂದಿನ ದಿನನೂ ಮಳೆ ಮರ್ದಿನನೂ ಮಳೆ. ಮದ್ವೆ ಮುಂಚಿನ್ ದಿನ ಅಂತೂ ಬೆಳಗಿನ ಜಾವದ ವರಿಗೂ ಜಿಟಿ ಜಿಟಿ ಸುರಿತಾನೇ ಇತ್ತು. ಕರೆಂಟ್ ಒಂದ್ ಬದಿಗೆ ಇತ್ತಿಲ್ಲೆ. ಜನರೇಟರೂ ಬೇಕಾದಾಗ್ಲೇ ಕೈ ಕೊಟ್ಬುಡ್ತು. ಮ್ಯಾಣದ್ ಬತ್ತಿ ಹಚ್ಗ್ಯಂಡು ಮಿಂದ್ಕಂಡು ತಯಾರ್    ಆಗಿದ್ದೇಯಾ. ಈ  ಸರಿಯಂತು ವರ್ಷ ಕಾಲಾವಧಿ ಮಳೆನೆಯಾ. ಈ ಸುಟ್ ಮಳಿಗೆ ಹೆದ್ರಿಕ್ಯನ್ಡು ಮಂಟಪ ಅಂಗ್ಳದಲ್ಲಿ ಕಟ್ಟಿದ್ವೇ ಇಲ್ಲೆ. ಮನೆ ಹೇಡ್ಗೆ ಮ್ಯಾಲೇ ಕಟ್ಟಿದಿದ್ಯ. ಪಾಪ! ಆ ಫೋಟೊ ಹೊಡ್ಯವoಗೆ ಸಲ್ಪ ತ್ರಾಸಾತು ಕಾಣ್ತು. ಆದ್ರೆ ಎಂತಾ ಮಾಡದು, ದಾರೆ ಎರಿತಾ ಇದ್ದಾಗ ಮಳೆ ಬಂದ್ ಬುಟ್ರೆ  ಹೇಳಿ ಹಾಂಗ್ ಮಾಡ್ದ್ಯ. ಇಲ್ಲೆ ಅಂದ್ರೆ ಯಮ್ಮಲ್ಲಿ ಅಂಗ್ಳ ಏಲ್ಲಾ ದೊಡ್ಕೇ ಇತ್ತು. ಆದ್ರೆ  ಮಂಟಪ ಹೇಡ್ಗೆ ಮ್ಯಾಲೆ ಕಟ್ಟಿರೂ ಚೊಲೋ ಮಾಡೆ ಕಟ್ಟಿದಿದ್ದ. ಬಾಳೆ ಕಂಬದ್ ಮಂಟಪ ಆಗಿತ್ತು.

ಯಮ್ಮನೆ ಅಳ್ಯಾ ಗನಾ ಅಳ್ಯಾ. ನೋಡಲೂ ಬೆಳ್ಗೆ ಚೊಲೋ ಇದ್ದಾ. ಮದ್ವೆಲ್ಲಿ ಬಾಶಿಂಗ ಕಟ್ಗ್ಯoಡು ತೋರಣದ ಬಾಗ್ಲಿಗೆ ಬಂದು ನಿಂತ್ಕಂಡಾಗಂತೂ ಒಳ್ಳೆ ರಾಜ್ಕುಮಾರನ ಹಂಗೇ ಕಾಣ್ತಿದ್ದಾ. ಯಮ್ಮನೆ ತಂಗಿಗೆ ಚೊಲೋ ಜೋಡಿ ಆಜು. ಹಾಂಗೆಳಿ ಯಮ್ಮನೆ ತಂಗಿನೂ ಚೊಲೋನೇ ಕಾಣ್ತಿತ್ತು. ವಪಾಗಿ ತಯಾರಾಕ್ಯಂಡಿತ್ತು.  ಕೈ ಕಾಲಿಗೆಲ್ಲಾ ಮದ್ರಂಗಿ ಹಚ್ಗ್ಯಂಡು, ಒಂಥರಾ ಗಂಧದ ಬಣ್ಣದ ಸೀರೆ ಮ್ಯಾಚಿಂಗ್ ಪಲ್ಕಾ. ತಲಿಗೆ ಮಾಂಗ್ ಟೀಕವೇನ, ಕೈಗೆ ಬಾಜುಬಂಧಿ, ಸೊಂಟದಪಟ್ಯಡಾ, ಕಿವಿಗೆ ಝುಮ್ಕಿ,  ಕುತ್ಗಿಗೆ ಮೆಟ್ಲ್ ಮೆಟ್ಲಾಗಿ ನಾಕೈದ್ ಸರ! ಮತ್ತೆ ಆ ಚೋಟುದ್ದ ಜಡಿಗೆ ಮಾರುದ್ದಾ ಚೌಲಿ ಜಡೆ ಹಾಕ್ಯಂಡು, ಜಡೆ ತುಂಬಾ ಎಂತೋ ಬಂಗಾರದ ನಮ್ನಿದೇ ಹೂ ಸಿಕ್ಸ್ಕoಡಿತ್ತಪಾ. ಅದೂ ಅಲ್ದೆ ತಲೆ ತುಂಬಾ ಮಲ್ಗೆ ಹೂ. ಯಮ್ಮನೆ ಅಣ್ಣಯ್ಯ ಅದ್ರ ಹೊತ್ಗಂಡು ಮಂಟಪಕ್ಕೆ ಕರ್ಕಂಡು ಹೋಪಕಾರೆ ಎಂಗಂತೂ ದುಃಖ್ ಬಂದ್ ಇಟ್ಟೋತು. ಆದ್ರೂ ತಡ್ಕಂಡಿ. ಮಾಲೆ ಹಾಕಿ, ಧಾರೆ ಎರೆದು, ಮಾಂಗಲ್ಯ ಕಟ್ಟಿ, ಸಪ್ತಪದಿ ತುಳಿದು ಆದ್ಮೇಲೆ, ಇಬ್ರೂ ಒಟ್ಟಿಗೇ ನಿಂತ್ಗoಡಿದ್ ನೋಡಿ ಒಂಥರಾ ಖುಷಿನೂ ಆತು ಜೊತೆಗೆ ಏನೋ ಕಳವಳ. ಇಷ್ಟ್ ದಿನ ಇಲ್ಲಿ ಯಮ್ಮನೆಲ್ಲಿ ಶಣ್ ಕೂಸ್ ಹಾಂಗೆ ಓಡಾಡ್ಕ್ಯಂಡು ಇತ್ತು. ಇನ್ನು ಗಂಡನ ಮನಿಗೆ ಹೋಗಿ ಹ್ಯಾಂಗ್ ಮಾಡ್ಕ್ಯತ್ತನ ಹೇಳಿ. ಏನೂ ಇರ್ಲಿ  ಮಳೆನೂ ತ್ರಾಸ್ ಕೊಟ್ಟಿದ್ದಿಲ್ಲೆ. ದೇವ್ರಿಗೆ ಕರ್ಕ್ಲಿ ಮಾಡಿ ಕೊಡ್ತಿ, ಮಳೆ ಬರ್ದೇ ಇರ್ಲಿ ಹೇಳಿ ಹೇಳ್ಕ್ಯoದಿಡ್ಡಿ. ಎಲ್ಲರೂ ಕುಶಾಲ್ ಮಾಡ್ತಾ ಇದ್ದಿದ್ದ, ತಂಗಿ  ಸಣ್ಕಿದ್ದಾಗ ಅಕ್ಕಿ ತಿಂಜು ಕಾಣ್ತು ಮದ್ವಿಗೆ ಮಳೆ ಹೇಳಿ.

ಮದ್ವೆ ದಿನ ಅಡ್ಗೆ ಚೊಲೋ ಆಗಿತ್ತು ಹೇಳಿ ಎಲ್ಲರೂ ಹೇಳ್ದ. ಮಾನ್ಕಾಯಿ ಬಜ್ಜಿ, ಅಪ್ಪೇಹುಳಿ ಯಂತೂ ಏ ವನ್ ಆಗಿತ್ತು ಅಂದ. ಚೊಲೋ ಜೀರ್ಗೆ ಮಿಡಿ ಸೊನೆ ಹಿಡ್ದಿಟ್ಟಿದ್ದು ಇತ್ತು, ಅದನ್ನೇ ನಾಕ್ ಹನಿ ಹಾಕಿದಿದ್ಯ ಅಪ್ಪೇಹುಳಿ ಮತ್ ಮಾನ್ಕಾಯಿ ಬಜ್ಜಿಗೆ 😊 ಹಾಂಗೇಳಿ ಕೇಸ್ರಿ ಭಾತೂ ಭಾರೀ ಚೊಲೋನೇ ಆಗಿತ್ತು. ಮತ್ತೆ ಕೆಸಿನ ಸೊಪ್ಪಿನ ಕರ್ಕ್ಲಿಯಂತೂ ಎರಡನೇ ಪಂಕ್ತಿಗೇ ಖಾಲಿ 😜. ಕೊನೆ ಪಂಕ್ತಿಯಲ್ ಕೂತವರಿಗೆ ರುಚಿ ನೋಡಲೂ ಸಿಕ್ಕಿದ್ದಿಲ್ಲೆ😊.

 ಮದ್ವೆ ಹೊತ್ತಿಗೆ ಯಾರೂ ಜನರೇ ಇದ್ದಿದ್ವಿಲ್ಲೆ ಹನ್ನೆರಡೂವರೆ ಆಗ್ತಿದ್ದಾoಗೇ ನೆಂಟ್ರು ಬಪ್ಲೆ ಶುರು ಮಾಡ್ದ. ಮತ್ತೆ ಎರಡ್ ಘಂಟೆ ಆಗ್ತಿದ್ದ ಹಾಂಗೇ ಮದ್ವೆ ಮನೆ ಖಾಲಿ. ಎರಡು ತಿಂಗ್ಳಿನ್ದ ತಯಾರಿ ನಡ್ಸಿ ಎರಡು ತಾಸ್ ನಲ್ಲಿ ಯಮ್ಮನೆ ತಂಗಿ ಮದ್ವೆ  ಮುಗ್ದು ಹೋತು.

ಮರ್ದಿನ ಸಟ್ಮುಡಿ (ಗೃಹಪ್ರವೇಶ) ಯಂಗತೂ ರಾತ್ರಿಡೀ ನಿದ್ರೆನೇ ಬಂಜಿಲ್ಲೆ. ತಂಗಿ ನಾಳೆ ನಮ್ಮನೆ ಬಿಟ್ಟು ಗಂಡನ ಮನೆಗೆ ಹೊಗ್ತಲಾ ಹೇಳ ಯೋಚ್ನೆನೆಯಾ. ಬೆಳಿಗ್ಗೆ ಹೊರಡಕಾದ್ರಂತೂ ದುಃಖ ತಡ್ಯಲೇ ಆಜಿಲ್ಲೆ. ಕ್ವಾಣಿಗ್ ಹೋಗಿ ಸುಮ್ನೆ ಅತ್ಗ ಬಂದಿ. ಇಲ್ದೇ ಇದ್ರೆ ತoಗಿನೂ ಅಳ್ತು ಹೇಳಿ. ಅಂತೂ ಅಳ್ಯನ್ ಮನಿಗೆ ಬಂದ್ಯ. ಅಲ್ಲಿ  ಯಂಗ್ಳ್ ನೆಲ್ಲಾ ಇದ್ರಗೊಂಡು ಚೊಲೋ ಆದರ ಆತಿಥ್ಯ ಮಾಡಿ, ತಂಗಿನ ಅಳಿಯನ್ನ ಬೀಗ್ರು ಕೈ ಹಿಡ್ಕೊಂಡು ಕರ್ಕಂಡ್ ಹೋಗಿ ಕುರ್ಚಿ ಮೇಲೆ ಕೂಡ್ರ್ಸಿ  ಸ್ವಾಗತ ಮಾಡಿ, ಗೃಹಪ್ರವೇಶಕ್ಕೆ ಕರ್ಕಂಡು ಹೋದ್ರು. ಹೊಸ್ತಿಲು ಪೂಜೆ ಮಾಡಿ, ತಂಗಿ ಬಲ್ಗಾಲಿಟ್ಟು ಮನೆ ಪ್ರವೇಶ ಮಾಡಿ ಬಲಗಾಲಲ್ಲಿ ಸಿದ್ದೆ ಒದ್ದು, ಇಬ್ರೂ ದೇವರ ಮುಂದೆ ಹೋಗಿ ದೇವ್ರಿಗೆ ನಮಸ್ಕಾರ ಮಾಡಿ, ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದ ತಗಂಡೂ ಆತು. ಈಗ ಹೆಣ್ ಒಪ್ಪಿಸ ಕಾರ್ಯಕ್ರಮ. ಪುರೋಹಿತ್ರು ಕನ್ಯಾ ಸಮರ್ಪಣೆ ಮಂತ್ರ ಮತ್ ವಿಷ್ಣು ಲಕ್ಷ್ಮಿ ಕಥೆ ಹೇಳಿ ತಂಗಿ ಕೈಯನ್ನ ಅಳಿಯನ ಕೈ ಮೇಲೆ ಇಟ್ಟು ಯಂಗ ಇಬ್ರೂ (ಆನು ಇವ್ರು) ಯಮ್ಮನೆ ಮಗಳ ನಿಂಗಕ್ಕೆ ಒಪ್ಪಿಸ್ತಾ ಇದ್ಯ, ನಿಂಗವೂ  ಇವಳನ್ನಾ  ನಿಮ್ಮನೆ ಮಗಳ  ಹಾಂಗೆಯಾ ನೋಡ್ಕ್ಯಳಿ ಹೇಳಿ, ಹೇಳ್ತಾ ಇದ್ದಂಗೆ ಎನ್ನ ಕುರುಳು ಕಿತ್ ಹಾಕ್ದ ಹಾಂಗೆ ಅನುಭವ ಆತು. ತಂಗಿ ಬಿಕ್ಕಿ ಬಿಕ್ಕಿ ಅಳಲೆ ಶುರು  ಮಾಡಿದ್ದೇ ತಡ  ಯನ್ಗೂ ಕಣ್ಣಲ್ಲಿ ಬಳ ಬಳ ನೀರು ಹರ್ಯಲೆ ಶುರು ಆತು. ಅಂತೂ ಕಷ್ಟಪಟ್ಟು ಸಮಾಧಾನ  ಮಾಡ್ಕ್ಯಂಡಿ. ಆವಾಗ ಯನ್ನ ಮದ್ವೆ ದಿನದ ನೆನಪಾತು. ಆದ್ರೆ ಇವತ್ತು ಯನ್ನ ಜಾಗದಲ್ಲಿ ಯಮ್ಮನೆ ತಂಗಿ ಇತ್ತು, ಯನ್ನ ಅಮ್ಮ ಅಪ್ಪನ ಜಾಗದಲ್ಲಿ ಯಂಗ ಇದ್ಯ. ಅಳಿಯ ಮಗ್ಳು ಒಳ್ಳೇ ರೀತಿಯಲ್ಲಿ ಬಾಳಿ ಹೇಳಿ ಆಶಿರ್ವಾದ.

 ಇದನ್ನೆಲ್ಲಾ ನೆನಪು ಮಾಡಿಕ್ಯಂಡು ಅರಿವಿಲ್ದೇ ಕೆನ್ನೆ ಮೇಲಿಂದ ಇಳಿತಾ ಇದ್ದ ಕಣ್ಣೀರ್  ವರ್ಸ್ಕ್ಯಂಡಿ. ಹೆಣ್ಣು ಹೆತ್ತ ಎಲ್ಲಾ ಅಮ್ಮ ಅಪ್ಪಂದಿರ ಕಥೆ ಹಿಂಗೆಯಾ, ಪ್ರೀತಿಯಿಂದ ಹೆತ್ತು ಹೊತ್ತು, ಸಾಕಿ ಸಲಹಿ, ಕಡಿಗೆ ಒಂದು ದಿನ ಗಂಡನ ಮನೆಗೆ ಮಗಳನ್ನ ಕಳ್ಸದೇಯಾ ಹೇಳಿ ಎನ್ನಷ್ಟಕ್ಕೆ ಆನು ಸಮಾಧಾನ ಮಾಡ್ಕ್ಯಂಡಿ. ಅಯ್ಯೋ ದೇವ್ರೇ! ತಂಗಿ ನೆನಪು ಮಾಡ್ಕ್ಯೋತ ಹೊತ್ತು ಹೋಗಿದ್ದೇ ಗೊತ್ತಾಜಿಲ್ಲೆ. ಮನೆ ತುಂಬಾ ಸಾಮಾನು ಹರಡಿಕ್ಯoಡು ಇದ್ದು. ಮಧ್ಯಾನ್ಹದ ಅಡಿಗೆ ಬೇರೆ ಮಾಡಿ ಅಜಿಲ್ಲೆ. ಇವು ತ್ವಾಟಕ್ಕೆ ಹೋಜ. ಮದ್ವೆ ಗಡ್ಬಡೆಲ್ಲಿ ತ್ವಾಟದ ಬದಿಗೆ ಹೋಪ್ಲೇ ಅಜಿಲ್ಲೆ ಅಡ್ಕೆ ರಾಶಿ ಬಿದ್ದಿದ್ದು ಹೆಕ್ಯಬತ್ತಿ ಹೇಳಿಕ್ಕೆ ಹೋಜ. ಆನೂ ಇನ್ನು ಒಳ ಬದಿಗೆ ಹೋಗ್ತಿ.

 

 

 

 

 

 

ಮಮತಾ ಹೆಗಡೆ

 

4 thoughts on “Marriage-Ceremony”

  1. ಸುಂದರವಾಗಿ ಮೂಡಿಬಂದಿದೆ. ಇನ್ನೂ ಹೆಚ್ಚಿನ ನಿಮ್ಮ ಬರಹಗಳು ಮೂಡಿ ಬರಲಿ. 👏👏🙏👌

Leave a Reply

Your email address will not be published. Required fields are marked *